
ಕವಿ ಸಂಘಮಿತ್ರೆ ನಾಗರಘಟ್ಟ ಅವರು ಬರೆದ 'ನಾನು ನಿಮ್ಮಂತಾಗಲಾರೆ' ಕವಿತೆಯ ಸಾಲುಗಳು....
ಗೊಬ್ಬರವಾಗುತ್ತೇನೆ, ಮಣ್ಣಾಗುತ್ತೇನೆ.
ನಮ್ಮ ಮನೆಯವರ ನೊಸಲಿಗೆ
ವಿಭೂತಿಯಾಗುತ್ತೇನೆ, ಬೆರಣಿಯಾಗುತ್ತೇನೆ.
ಆದರೆ ಏನೇ ಬರಲಿ, ಏನೇ ಹೋಗಲಿ,
ನಿಮ್ಮ ಬೂಟಾಟಿಕೆಯ ಸೋಗಿನ
ಈ ನಾಟಕದ ಸೂತ್ರದ ಗೊಂಬೆಯಾಗಲಾರೆ.
ಏನಾದರೂ ಆಗಲಿ,
ನಾನು ನಿಮ್ಮೊಳಗೊಬ್ಬಳಾಗಲಾರೆ.
ನನ್ನ ಆತ್ಮ ಸಾಕ್ಷಿ ಜೀವಂತ ಇರುವವರೆಗೆ,
ನೀವು ಮಾಡಿದ ಪಾಪಗಳು
ನಿಮಗೆ ಸರಿಕಾಣುತ್ತಿರುವವರೆಗೆ,
ನಿಮ್ಮ ಜೊತೆಗೆ ಸೇರಲಾರೆ,
ನಿಮ್ಮ ಸಾಲಿನಲ್ಲಿ ನಿಲ್ಲಲಾರೆ.
ಪ್ರಶಸ್ತಿ, ಗೌರವ, ಬೇಡಿಕೆಗಳ
ಭಿಕ್ಷೆ ಹಿಡಿದು ಹಲ್ಲು ಗಿಂಜಲಾರೆ.
ನನಗೆ ನೆಲೆಯಿಲ್ಲದಿರಬಹುದು,
ನಾಳೆಯಿಲ್ಲದಿರಬಹುದು.
ಆದರೆ ಇಂದಿನ ದಿನದವರೆಗೆ ನಾನು ನಿಮ್ಮೊಳಗೊಬ್ಬಳಾಗಲಾರೆ,
ನಿಮ್ಮ ಸಿಂಹಾಸನದ ಮುಂದೆ ತಲೆ ಬಾಗಲಾರೆ.
ದಲಿತರು, ಹೋರಾಟಗಾರರ ಶವದ
ಮೆಟ್ಟಿಲು ಏಣಿಯ ಮೇಲೆ ಹತ್ತಿ
ಅಧಿಕಾರ ಹಿಡಿದು ಬಂದ ದಾರಿಯನ್ನೇ
ಮರೆತ ನಿಮ್ಮ ಜೊತೆ ಸೇರಲಾರೆ.
ತರಗಲೆಯಾದರೂ ಚಿಂತೆಯಿಲ್ಲ,
ಹುಲ್ಲಾದರೂ ಪರವಾಗಿಲ್ಲ.
ಮೂಕ ಪ್ರಾಣಿಗಳಿಗೆ ಮೇವಾಗುತ್ತೇನೆ,
ಗೊಬ್ಬರವಾಗುತ್ತೇನೆ, ಆದರೆ ನಿಮ್ಮಂತಾಗಲಾರೆ.
ಸಹಸ್ರನಾಮಾವಳಿಯ ಬಿರುದು
ಬಾವಲಿಗಳ ಕುತ್ತಿಗೆಯಲ್ಲಿ ಕಟ್ಟಿಕೊಂಡು,
ಕವಿಪುಂಗವ ವಂದಿಮಾಗದಿಗರನ್ನು
ಸುತ್ತಲೂ ನಿಲ್ಲಿಸಿಕೊಂಡು,
ಪ್ರಜಾಪ್ರಭುತ್ವದ ಹೆಸರಿನಲ್ಲಿ
ನಿಮ್ಮ ಚಕ್ರಾಧಿಪತ್ಯದ ಸಾಮ್ರಾಜ್ಯದಲ್ಲಿ
ಸಂತುಷ್ಟರಾಗಿ ಕುಳಿತುಕೊಳ್ಳುವವರ
ಪಂಕ್ತಿಗೆ ನಾನು ಸೇರಲಾರೆ.
ನಿಮ್ಮ ಸ್ಮಾರ್ಟ್ ಸಿಟಿಯ
ಹಗಲು ದರೋಡೆಗೆ
ನೀವು ಒಕ್ಕಲೆಬ್ಬಿಸಿದ ನನ್ನ
ಬಂಧುಗಳ ಲೆಕ್ಕ ಗೊತ್ತೇನು?
ಶಾಲೆ ಬೇಡ, ಆಸ್ಪತ್ರೆ ಬೇಡ,
ಜನರ ಬಾಧೆ ನಿಮ್ಮದಲ್ಲ.
ನಿಮಗೆ ನಿಮ್ಮ ರಾಜವೈದ್ಯರ
ಶುಶ್ರೂಷೆ ಸಾಕು, ನಿಮ್ಮ
ರಾಜವೈದ್ಯಶಾಲೆಗಳ ಆಸರೆ ಬೇಕು.
ಸಿದ್ಧಾಂತದ ಅಮಲು ತಲೆಗೇರಿಸಿ,
ಅವರ ಮೇಲೆ ಇವರ ಛೂ ಬಿಟ್ಟು,
ಹೆಗ್ಗಣಗಳು ತಿಂದು ಕೊಬ್ಬಿ,
ಜನರ ರಕ್ತ ಹೀರಿ ಹೊಟ್ಟೆ ಉಬ್ಬಿಸುತ್ತಿದ್ದಾಗ,
ಎಚ್ಚರ, ಎಲ್ಲ ಹೆಗ್ಗಣಗಳಿಗಿಂತಲೂ
ಮೀರಿದ ಬೆಕ್ಕು,ಹಾವು, ಹೆಬ್ಬಾವು
ನಿಮ್ಮನ್ನೇ ನುಂಗಲು ಕಾಯುತ್ತಿವೆ.
ಪ್ರಕೃತಿಯ ಉದರ ಬಗೆದು
ಮಾಡಿದ ದೌರ್ಜನ್ಯಕ್ಕೆ ಲೆಕ್ಕವಿದೆಯೇನು?
ನಿಮ್ಮ ನಿರ್ಲಕ್ಷ್ಯ, ಕಳಪೆ ಮದ್ದಿಗೆ,
ಕೆಲಸಕ್ಕೆ ನಿತ್ಯ ಸಾಯುವ ನಮ್ಮ ಬಂಧುಗಳ ಲೆಕ್ಕವಿದೆಯೇನು?
ಮೋರಿಯೊಳಗಿಳಿಸಿ ಸ್ವಚ್ಛಗೊಳಿಸುವ
ಕೈಗಳಿಗೆ ನೀವು ಕೊಡುವ ಗೌರವವೆಷ್ಟು?
ನಿಮ್ಮ ಮಕ್ಕಳಿಗೆ ವಿದೇಶಿ ಶಿಕ್ಷಣ,
ಸೌಲಭ್ಯ, ಐಶಾರಾಮ ಯಾವ
ಗಣಿಯಿಂದ ತಂದಿರಿ ಇದನ್ನೆಲ್ಲ?
ಸಂವಿಧಾನ, ವ್ಯವಸ್ಥೆ, ಸ್ವಾತಂತ್ರ್ಯ
ಎಲ್ಲವೂ ನಮಗೂ ಒಂದೇ,
ನಿಮಗೂ ಒಂದೇ.
ಹಾಗಿದ್ದರೂ ನಾವು ಮತ್ತು ನಮ್ಮ
ಮಕ್ಕಳು ಬೀದಿಯಲ್ಲೇ.
ನಮ್ಮ ಬಡತನ, ನಮ್ಮ ಹಸಿವು
ನಿಮಗೆ ಚುನಾವಣಾ ಬಂಡವಾಳ,
ನಮ್ಮ ಬದುಕು ನೀವು ಅಧಿಕಾರಕ್ಕೇರುವ ಏಣಿ.
ಏನಾದರೂ ಆಗಲಿ, ನಾನು ನಿಮ್ಮಂತಾಗಲಾರೆ.
ತಂದೆ ಕೊಟ್ಟ ಸಂವಿಧಾನದ
ಮೇಲೆ ಪ್ರಮಾಣ ಮಾಡಿ,
ದಿನನಿತ್ಯ ತಂದೆಯ ಜಪನಾಮ ಪಠಿಸುತ್ತಾ,
ಮಠ ಮಂದಿರಗಳಲ್ಲಿ ಮೌಢ್ಯಗಳಿಗೆ
ಹೂಡಿಕೆ ಮಾಡುತ್ತಾ,
ಜಾತಿಗಲಭೆಗಳನ್ನು ಬೆಳೆಸುತ್ತಾ,
ಪವಿತ್ರ ಆಡಳಿತ ಸೌಧದೊಳಗೆ
ಮತದ ಗೂಬೆ ನುಗ್ಗಿಸುವ ನಿಮ್ಮನ್ನು ಸಹಿಸಲಾರೆ.
ಬಹಳ ಅದ್ಭುತ ಕವಿತೆ ಬರೆಯಬಹುದು,
ಕಥೆ ಹೇಳಬಹುದು.
ಚಿತ್ರ ಮಾಡಬಹುದು, ನಿಮ್ಮ ಮೇಲೆಯೇ
ಸಿನೆಮಾ ತೆಗೆದು ಪ್ರಶಂಸೆಯ ಶಹಬ್ಬಾಷ್
ಪಡೆಯಬಹುದು. ಆದರೆ ಈ ದುರಿತಕಾಲದಲ್ಲಿ
ನಾನು ಸುಂದರ ಗುಲಾಬಿಯ
ಮೇಲೆ ಕವಿತೆ ಬರೆಯಲಾರೆ.
ಒಂದೆಡೆ ಕೋಮು ಕ್ರಿಮಿಗಳ ರೋಷ,
ಆವೇಶ, ದೇಶದ್ರೋಹದ ವಿಷ,
ಇನ್ನೊಂದೆಡೆ ಆಯಕಟ್ಟಿನಲ್ಲಿ ಕುಳಿತು
ಒಪ್ಪೊತ್ತಿನ ಊಟ ಕಿತ್ತುಕೊಳ್ಳುವ
ರಣಹದ್ದುಗಳ ಕಾಟ.
ಅಪಾಯ ಒಂದೇ ಬದಿಯಲ್ಲಿಲ್ಲ,
ಕಣ್ಣಿಗೆ ಕಾಣುವ ಅಪಾಯ ಒಂದೆಡೆಯಾದರೆ,
"ನಾವು ನಿಮ್ಮವರೆ" ಎಂದು ಬೆಣ್ಣೆ ಸವರುತ್ತಾ
ತಂದೆಯ ಹೆಸರಿಗೆ, ಸಂವಿಧಾನದ ಪಾವಿತ್ರ್ಯಕ್ಕೆ
ಧಕ್ಕೆ ತರುತ್ತ, ನಮ್ಮ ಬಗಲಲ್ಲೇ ನಿಂತು
ನಮ್ಮ ಅರಿವಿಗೆ ಬಾರದೆ
ಬೆನ್ನಿಗಿರಿಯುವವರ ಮೋಸದ ಮಹಾ
ಕಪಟ ಇನ್ನೊಂದೆಡೆ ಇದೆ.
ಏನಾದರೂ ಆಗಲಿ,
ನಾನು ನಿಮ್ಮೊಳಗೊಬ್ಬಳಾಗಲಾರೆ.
ಬೂಟಿನ ಮೇಲೆ ಬಿದ್ದ ವಿಷವನ್ನೂ
ನೆಕ್ಕುವ ಗುಲಾಮರ ನಡುವೆ ಸೇರಲಾರೆ.
ಗೊಬ್ಬರವಾಗುತ್ತೇನೆ, ಮಣ್ಣಾಗುತ್ತೇನೆ,
ಆದರೆ ನೀವು ಕುಣಿಸಿದಕ್ಕೆ ಕುಣಿಯುವ ಕೋಲೆ ಬಸವನಾಗಲಾರೆ.
ಸಂಘಮಿತ್ರೆ ನಾಗರಘಟ್ಟ
ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.
More About Author