Poem

ಕತ್ತರಿಸಿ ಎಸೆದ ಊರು

ಎರಡು ತಾತ್ಪೂರ್ತಿಕ ಪದಗಳ ನಡುವೆ
ಒಂದು ಸಾಧಾರಣ ಸಪ್ಪೆ
ಶಬುದ ಹೊಕ್ಕು
ಬಣ್ಣದ ಜುಟ್ಟಿನ ಹಕ್ಕಿಯೊಂದನ್ನು
ವರ್ಣಿಸುತ್ತಿರುವಾಗ
ಅರಬ್ಬೀ ಸಮುದ್ರದಲ್ಲಿ
ಕಂತುತ್ತಿರುವ ಸೂರ್ಯನಿಗೆ
ತಾಜಾ ಹವೆಯಲ್ಲಿ ಇಂದು ಮಾತ್ರ
ಅನುರಣಿಸುತ್ತಿರುವ ಹಾಡು
ಯಾವ ಟೊಂಗೆಯದ್ದೆಂಬ
ಸೋಜಿಗವಾಯಿತು

ತೆಳುನೀರಲ್ಲಿ ಪೂರ್ತಿ ಗುಣಮುಖ
ಲಂಗರು ಬಿಟ್ಟ ಮಚವೆ
ಒಳಗೆ ಇಳಿಮುಖ ಕೊಳದಪ್ಪಲೆ
ಹೊಗೆಯಾಡುವ ಅನ್ನ
ಖಾರದ ಮಸಾಲೆ ರುಬ್ಬುತ್ತ
ಮಿಡುಕುವ ಮೀನು ಕತ್ತರಿಸುತ್ತ
ಕುಳಿತ ಇಬ್ಬರು ಟೊಣಪರು
ಸಾರು ಕುದಿವ ಚಂದ
ನೋಡಿಕೊಂಡೇ ಹೋಗಲು ಕಾದ
ಅಪರಿಚಿತ ಪ್ರವಾಸಿಗರಿಗೆ 'ಒಂದು ಮುದ್ದೆ
ಉಂಡು ಹೋಗಿರೋ..'
ಎಂದರಂತಲ್ಲ
ಯಾತನಾ ಶಿಬಿರದಲ್ಲಿ ಹಸಿವಿನಿಂದ
ನಿತ್ರಾಣಗೊಂಡವರಿಗೆ
ನೇಣು ಹಾಕಿ ಸುರಳೀತ ಹಲಗೆ
ಜಗ್ಗುತ್ತಿದ್ದರಂತೆ ಇವರು
ಈಗ ನೋಡಿ ಒಮ್ಮೆಲೆ ಎರಡೆರಡು ಕ್ವಿಂಟಲ್
ಮೀನು ಎಳೆಯುತ್ತಾರೆ
ಹಸಿದು ಬರದೇ ಇದ್ದವರಿಗೂ
ಇರಲಿ ಎಂದು ಅಡುಗೆ ತುಸು
ಹೆಚ್ಚೇ ಮಾಡುತ್ತಾರೆ

ಸಾವ ಲೋಕದೊಳಗೆ ಹೆಣಗಿ
ದಣಿವಾದ ಎದೆಯೊಳಗೆ ಬೆವರು
ಹನಿ ಹನಿದು ಗಿಡಹುಟ್ಟಿ
ಬಣ್ಣಬಣ್ಣದ ಹೂವು
ಪರಿಮಳದ ಪರಾಗ ಊರೆಲ್ಲ ಹರಡುವಾಗ
ಹೇಳಿಕಳಿಸಿದ ಹಾಗೆ ಬಂದ ಮತ್ತಿಬ್ಬರು
ಕಟುಕರಿಗೆ
ನಿವೃತ್ತಿಯ ನಂತರ
ಇಲ್ಲಿಯೇ ಬಂದು ಬದುಕಿ ಬಾಳಿ
ಒಲೆಹೊತ್ತಿಸಿ, ಉಕ್ಕಡಿಸಿ , ಸಟ್ಟುಗದಲ್ಲಿ ತಿರುಗಿಸಿ
ಸಾಲು ಸಾಲು ನಿರಾಶ್ರಿತರಿಗೆ
ಉಣ್ಣಿಸಿದ ಹಾಗೆಲ್ಲ ಅನ್ನಿಸಿ
ಉದ್ವೇಗವಾಯಿತು

ಉಬ್ಬಿ ಕರೆವ ಕಡಲು
ತಬ್ಬಿ ಅಳುವ ಗಂಟಲು
ಎರಡರ ಕಳ್ಳುಬಳ್ಳಿಯೂ ಒಂದೇ
ಎನ್ನುತ್ತಾರೆ ಜನ

ಕತ್ತರಿಸಿ ಎಸೆದ ಊರು ಮಾತ್ರ ಬೇರೆ
ಬೇರೆಯಂತೆ

- ರೇಣುಕಾ ರಮಾನಂದ

ರೇಣುಕಾ ರಮಾನಂದ

ರೇಣುಕಾ ರಮಾನಂದ ಅವರು ತಲೆಮಾರಿನ ಭರವಸೆಯ ಕವಯತ್ರಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಹುಟ್ಟೂರು. ತಂದೆ ಹೊನ್ನಪ್ಪ ನಾಯಕ ಮತ್ತು ತಾಯಿ ಮಾಣು.

ತವರೂರಿನ ಸರ್ಕಾರಿ ಶಾಲೆಯಲ್ಲಿ ಆರಂಭದ ಅಕ್ಷರಾಭ್ಯಾಸ, ಅಂಕೋಲಾದ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಎಚ್ ಪೂರ್ಣಗೊಳಿಸಿರುವ ರೇಣುಕಾ ಅವರು ಕನ್ನಡ ಎಂ.ಎ.ಪದವಿಧರೆ. ರೇಣುಕಾ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೀವನ ಸಂಗಾತಿ ರಮಾನಂದ ಪಿ.ನಾಯಕ್ ರವರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಮಾನಂದ ದಂಪತಿಯ ಬಾಳು ಬೆಳಗಿಸಲು ಗುಲಾಬಿಗಳಾದ ತ್ರಿಭುವನ ಮತ್ತು ಪ್ರಾರ್ಥನ ಬಂದಿದ್ದಾರೆ.

ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕಿ, ಪ್ರವೃತ್ತಿಯಲ್ಲಿ ಕವಯತ್ರಿ- ಲೇಖಕಿ. ಬದುಕಿನ ಅನುಭವ, ಮಾಗಿದ ಭಾವಗಳೇ ಕಾವ್ಯದ ವಸ್ತುಗಳು, ಏಕಾಂಗಿತನವೇ ಕಾವ್ಯಕಟ್ಟುವ ಗೋಪುರ. ಕರಾವಳಿ ಮುಂಜಾವು ಪತ್ರಿಕೆಯಲ್ಲಿ ರೇಣುಕಾ ಅವರ ಪ್ರಬಂಧ-ಲೇಖನಗಳು ಪ್ರಕಟವಾಗಿವೆ. ಕಡಲಿನ ಮೊರೆತ-ಕಡಲಿನ ಮೌನವೆರಡರ ಸಮ್ಮಿಳಿತದಂತ ಅಭಿವ್ಯಕ್ತಿಯ ರೇಣುಕಾ ಅವರು ನನ್ನಿಷ್ಟದಂತೆ ಬರೆಯುತ್ತೇನೆ, ತಿಂಗಳುಗಟ್ಟಲೆ ಮಾಗಿಸಿಯೇ ಕಾವ್ಯಕಟ್ಟುತ್ತೇನೆ ಎನ್ನುತ್ತಾರೆ.

'ಮೀನುಪೇಟೆಯ ತಿರುವು' ಚೊಚ್ಚಲ ಕವನ ಸಂಕಲನ. ರಾಜ್ಯ ಮಟ್ಟದ ಕವಿಗೋಷ್ಠಿಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವ ರೇಣುಕಾ ಅವರಿಗೆ ಸಂಕ್ರಮಣ ಕಾವ್ಯ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿವೆ.


 

More About Author