Story

ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರ ಪ್ರೀತ್ಯರ್ಥ ಒಂದು 

ಹೇಳಿಕೆ: ಒಂದು

ಕೆಲವೊಮ್ಮೆ ನನಗೆ ನಾನೇ ವೈರಿಯಾಗಿದ್ದೇನೆ ಎಂದನಿಸುತ್ತಿದೆ. ಇಲ್ಲವಾದರೆ ನಾನೇಕೆ ಅವಳಿಗೆ ಇಷ್ಟೊಂದು ದುಂಬಾಲು ಬೀಳಬೇಕಿತ್ತು? ಅವಳನ್ನು ಹುಡುಕಿಕೊಂಡು ಊರೂರು ಅಲೆಯಬೇಕಿತ್ತು ? ಇಷ್ಟಕ್ಕೂ ಅವಳಾದರೂ ಯಾರು? She is nobody. ತನ್ನ ವಯೋ ಸಹಜ ಉತ್ಕರ್ಷದಲ್ಲಿ ಸುಮ್ಮನೆ ನನ್ನನ್ನು ಆವರಿಸಿಕೊಂಡಳು.

ಇಲ್ಲ ಇಲ್ಲ ಅದನ್ನು ನಾನು ಹಾಗೆಂದು ಕರೆಯಬಾರದು. ಅದು ವಯೋಧರ್ಮ ಅನ್ನಬಾರದು. ಪ್ರೀತಿಗೂ ವಯಸ್ಸಿಗೂ ಕಟ್ಟು ಹಾಕಬಾರದು. ಅವುಗಳನ್ನು ನೇಯಲೂ ಬಾರದು. ಜರಿ ಇಳಿಬಿಟ್ಟಂತೆ ಬಿಟ್ಟುಬಿಡಬೇಕು. ಅದರ ಪಾಡಿಗೆ ಪ್ರೀತಿ ಅದರ ಪಾಡಿಗೆ ವಯಸ್ಸು ತೊನೆದಾಡುತ್ತಾ ಇರಬೇಕು. ನಾನು ಈ ತೊನೆದಾಟವನ್ನು ನೋಡುತ್ತಾ ಇದ್ದೇನೆ, ಕಣ್ಣಿಗೆ ಕಾಣದಿದ್ದರೂ ಹೃದಯ ಕಾಣುತ್ತಿದೆ. ವಯಸ್ಸು ಹುಯ್ಯಲಿಡುತ್ತಿದೆ. ಪ್ರೀತಿ ಬಿರಬಿರನೆ ನಡೆದುಹೋಗುತ್ತಿದೆ.

ಹೃದಯದ ಬಿಲದ್ವಾರದಲ್ಲಿ ಜಾಗಟೆ ಬಡಿದಂತೆ ಝೇಂಕಾರ.

ಅವಳ ಪ್ರೀತಿಗೆ ಬಹುಶಃ ಸುಮ್ಮನೆ ಒಂದು ಕುತೂಹಲ ಮಾತ್ರಾ ಇತ್ತಾ? ಗಂಡಸಿನ ಸ್ಪರ್ಶದ ಕಾತರ. ಅಷ್ಟೇ? ಅದಕ್ಕೆ ನನ್ನನ್ನು ಬಳಸಿದಳು? ಮೊದ ಮೊದಲಿಗೆ ನಾನು ಇದನ್ನು ಪ್ರೀತಿ ಎಂದೇ ನಂಬಿದೆ?

ನನ್ನದು ತಪ್ಪು ಇರಬಹುದೇನೋ? ಇದೇ ಪ್ರೀತಿ ಇದುವೇ ಪ್ರೇಮ ಎಂದು ನಂಬಿದ್ದೆ. ಅವಳಿಗಾಗಿ ನನ್ನನ್ನೂ ನನ್ನೊಳಗನ್ನೂ ಮಾರಿ ಬಿಟ್ಟೆ ?

ಬಹಳ ಕಾಲ ನನಗೆ ಇದೇನಿದು ಎಂದು ಗೊತ್ತೇ ಇರಲಿಲ್ಲ . ಅವಳ ನೆನಪೇ ದಂಗು ಬಡಿಸುತ್ತಿತ್ತು. ಅವಳ ಧ್ವನಿಗೆ ಮೈ ರೋಮ ನಿಮಿರುತ್ತಿತ್ತು . ಒಂದು ಹಾಡಾಹಗಲಲ್ಲಿ ನಾನೂ ಅವಳು ಪ್ರೇಮಿಸಿದೆವು.ಬಹಳ ಹೊತ್ತು ಮುದ್ದಾಡಿದೆವು.ಕೊನೆಯಲ್ಲಿ ನಾನು ಅವಳು ಪರಸ್ಪರ ಬೋಳಾದೆವು. ಒಂದು ನಿರ್ಣಾಯಕ ಪ್ರಸಂಗ ಅದು ಉಫ್. ಕಳಚಿಕೊಂಡು ಸುಲಿದುಕೊಂಡು ಶೂನ್ಯಕ್ಕೆ ಸೇರುವ ಕ್ಷಣ ಶೂನ್ಯವೇ ಆಗುವ ಹೊತ್ತು. ನಾನು ಮೊದಲ ಬಾರಿಗೆ ಕಳಚಿ ಬಿದ್ದಿದ್ದೆ. ಅವಳು ಅವಳಿಗೆ ಅರಿವಿಲ್ಲದ ಹಾಗೆ ಸುರುಳಿ ಸುರುಟಿದ್ದಳು.She curled up, unaware of her.

ಹೀಗೇ ಹಲವಾರು ಬಾರಿ ನಡೆದುಹೋಯ್ತು. ಯಾರನ್ನು ಯಾರು ತೃಪ್ತಿ ಪಡಿಸುತ್ತಿದ್ದಾರೆ, ಯಾರು ಯಾರಿಗಾಗಿ ಇದ್ದಾರೆ ಒಂದೂ ಗೊತ್ತಾಗುತ್ತಿರಲಿಲ್ಲ. ನಡೆಯುವುದು ಬಹಳವಿತ್ತು. ಪ್ರತಿಯೊಂದು ನಡೆದುಹೋಗುತ್ತಿತ್ತು.

ಇಲ್ಲ ಇಲ್ಲ ನನ್ನಲ್ಲಿ ಇನ್ನು ಆಳವೆಂಬುದಿಲ್ಲ. ಆಳದಾಳಕ್ಕೆ ನೀನು ತಲುಪಿಯಾಯಿತು ಎಂದವಳು ಹೇಳಿದಾಗ ನನಗೆ ಇನ್ನೂ ಏನೋ ಒಂದು ಶೋಧನೆ ಬಾಕಿಯೇ ಇದೆ ಎಂದನಿಸುತ್ತಿತ್ತು.

ನಾನೀಗ ಹೇಳುತ್ತಿರುವುದು ಅರ್ಧ ಸತ್ಯವೂ ಅರ್ಧ ಸುಳ್ಳೂ ಆಗಿದೆ. ಸತ್ಯ ಯಾವುದೆಂದರೆ ನಾನವಳನ್ನು ಪ್ರೀತಿಸಿದ್ದು. ಸುಳ್ಳು ಯಾವುದೆಂದರೆ ಅವಳು.

ಪ್ರೀತಿಸುವುದರ ಉದ್ದೇಶ ಏನು ಎಂದು ಒಂದು ನಿಜ ಮುಂಜಾನೆ ನನಗೆ ನಾನು ಕೇಳಿಕೊಂಡೆ. ಒಳಗೊಳ್ಳುವುದು ಎಂದು ಯಾರೋ ಹೊರಗಿನಿಂದ ಹೇಳಿದ ಹಾಗಾಯ್ತು. ಯಾವುದು ಯಾವುದನ್ನೇ ಒಳಗೊಂಡಾಗ ಅದು ಒಂದಾಗಿ ಬಿಡುತ್ತದೆ. ಒಂದು ಆಗುವುದು. ಎರಡು ಒಂದಾದ ಮೇಲೆ ಎರಡು ಅಂತ ಹುಡುಕಿದರೂ ಸಿಗುವುದಿಲ್ಲ. ಒಂದರಲ್ಲಿ ಎರಡನ್ನು ಹುಡುಕುವುದು ವ್ಯರ್ಥ. ಎರಡರಲ್ಲಿ ಒಂದನ್ನು ಹುಡುಕುವುದು ಕಷ್ಟ.

ನಾನು ಅವಳು ಪ್ರತಿ ಬಾರಿ ಎರಡಾಗಿದ್ದಾಗಲೆಲ್ಲಾ ಒಂದಾಗಲು ಹಂಬಲಿಸುತ್ತಿದ್ದೆವು. ಅನುಕ್ಷಣವೂ. ಆದರೆ ಯಾವತ್ತೂ ಒಂದಾದಾಗ ಎರಡಾಗಲು ಬಯಸಲಿಲ್ಲ. ಅದನ್ನು ಕಾಲವೇ ಮಾಡಿಬಿಡುತ್ತಿತ್ತು.

ಹಾಗೊಮ್ಮೆ ನಾನೂ ಅವಳೂ ಮಿಲನಗೊಂಡಾಗ ಅವಳು ಕೇಳಿಯೇಬಿಟ್ಟಳು, ಈಗ ಹೇಳು ನೀನ್ಯಾರು ?ನಾನ್ಯಾರು?

ನನಗೆ ಝುಂ ಎಂದನಿಸಿತು. ಛಳ್ ಅಂತ ನೆತ್ತಿ ಹರಿಯಿತು. ನನಗಂತೂ ಶಿಖರಕ್ಕೆ ಕೆಲವೇ ಪಾದಗಳು ಬಾಕಿ ಇದ್ದವು. ಅವಳಿನ್ನೂ ಹದಕ್ಕೆ ಬರುತ್ತಿದ್ದಿರಬೇಕು.

ನಾನು ಹೌಹಾರಿದೆ. ಹಾರಿ ಬಿದ್ದೆ.

ಅವಳು ನಕ್ಕಳು.

ಎಷ್ಟು ಮಾದಕವಾಗಿತ್ತು ನಗು ಎಂದರೆ ನನ್ನ ಮೂಗನ್ನು ಹಿಡಿದು ನೆಟಿಕೆ ತೆಗೆಯುವಂತೆ ಮುರಿದಳು.

ಅವಳನ್ನು ಇಡೀ ನೋಡಿದೆ.

ಮೈ ಮರೆತಾಗಲಷ್ಟೇ ಇದರ ಅನುಭವ ಆಗುತ್ತದೆ. ಮೈ ಮುರಿದಾಗ ಅಲ್ಲ ಎಂದಳು.

ನಾನು ಬಟ್ಟೆ ಹುಡುಕಲು ತಡಕಾಡಿದೆ. ಒಂದೊಂದಾಗಿ ಹುಡುಕಿ ಕೊಟ್ಟಳು. ಉಟ್ಟುಕೊಂಡೆ.

ಈಗ ನೀನು ನನಗೆ ಬಹಳ ಕೃತಕವಾಗಿ ಕಾಣುತ್ತಿರುವೆ ಎಂದಳು.

ನಕ್ಕೆ.

ನನ್ನನ್ನೊಮ್ಮೆ ನೋಡು ಎಂದಳು.

ಮಂದ ಬೆಳಕಲ್ಲಿ ದಿಟ್ಟಿ ಹಾಯಿಸಿದೆ. ಕಣ್ಣಲ್ಲಿ ತಡಕಾಡಬೇಡ, ನೋಡು ನೋಡು ಎಂದಳು. ಟಕ್ ಅಂತ ಶಬ್ದ ಕೇಳಿಸಿತು,ಜೊತೆಯಲ್ಲಿ ಬೆಳ್ಳಂಬೆಳಕು.

ನಾನೀಗ ಸಹಜವಾಗಿ ನಿನಗೆ ಕಾಣುತ್ತಿದ್ದೇನಾ ಎಂದು ಕೇಳಿದಳು.

ನಾನು ಎದ್ದು ನಿಂತಿದ್ದೆ. ಬಹುಶಃ ಅವಳಿಂದ ಮೂರಡಿ ದೂರದಲ್ಲಿ ಇದ್ದೆ. ಅವಳು ದೂರದಲ್ಲಿ ಎಲ್ಲೋ ಪಾತಾಳದಲ್ಲಿದ್ದಂತೆ ಕಾಣುತ್ತಿತ್ತು.

ನನ್ನ ಹೊಕ್ಕುಳದೊಳಗೆ ನೋಡಬೇಡ. ಅದರ ಬಂಧ ನಿನ್ನದಲ್ಲ. ನಿನಗೆ ಸಂಬಂಧಿಸಿದ್ದೂ ಅಲ್ಲ ಎಂದಳು.

ಬೆವರುತ್ತಿದ್ದೇನೆ ಎಂದನಿಸಿತು. ಸೆಖೆ ಆಗುತ್ತಿದೆಯಾ? ಎಸಿ ಹೆಚ್ಚಿಸಲೇ ಎಂದು ರಿಮೋಟ್ ಗಾಗಿ ತಡಕಾಡಿದಳು. ಸಿಗಲಿಲ್ಲ. ಕವುಚಿಕೊಂಡಳು. ರಿಮೋಟ್ ಸಿಕ್ಕಿತು. ಹಾಗೇ ಬಟನ್ ಒತ್ತುತ್ತಾ ತಂಪು ಹೆಚ್ಚಿಸಿದಳು.

ನನಗೂ ನಿನಗೂ ಸಂಬಂಧಿಸಿದ್ದು ಕವುಚಿದ ಮೇಲೆ ಯಾವುದೂ ಇಲ್ಲ. ಹೃದಯ ಕೂಡಾ. ಅಂಗಾತವಾಗಿದ್ದರೆ ಉಂಟು, ಎಲ್ಲವೂ ಉಂಟು ಅಷ್ಟೇ ಎಂದಳು.

ದಿಂಬಿಗೆ ಕೆನ್ನೆಯೂರಿ ಮುಲುಗುಟ್ಟಿದಳು.

ಅವಳನ್ನೇ ನೋಡುತ್ತಾ ಕುರ್ಚಿಗೊರಗಿ ಕುಳಿತೆ. ಮೇಜಿನ ಮೇಲಿಟ್ಟಿದ್ದ ಕುಪ್ಪಿಗ್ಲಾಸಿನಲ್ಲಿ ಅವಳ ಎಂಜಲು ಕಾಲು ಭಾಗದಷ್ಟಿತ್ತು. ಅವಳ ಇಷ್ಟದ ಸ್ಕಾಚು. ನೀರು ಬೆರೆಸಿಕೊಂಡು ಬಹಳ ಹೊತ್ತಾಗಿತ್ತು. ಎತ್ತಿ ಸುರುವಿಕೊಂಡೆ.

ಅಷ್ಟೇ ಈಗ ಎಂದಳು.

ಟಕ್ ಅಂತ ಶಬ್ದ.

ಬೆಳಕು ಮರೆಯಾಯಿತು.

ನನ್ನದು ಮಾದಕಪ್ರೇಮ. ನಿನ್ನದು ತಣ್ಣಗಿನ ನೀರು. ಮುಕ್ಕಾಲು ತಲುಪುವಾಗ ನನ್ನ ಅಮಲು ಮುಗಿದಿತ್ತು.ಆಮೇಲೆ ಆಗುವುದು ಯಾವುದಾದರೂ ಸೆಡೇಶನ್ ಪಿಲ್ಸು ತಿಂದರೂ ಆಗುತ್ತದೆ. ಅಲ್ಲಿಗೆ ನಾನು ತಲುಪುವುದಿಲ್ಲ ಎಂದಳು.

ಎಡಗೈಯನ್ನು ಕುರ್ಚಿ ಹಿಡಿಯಲ್ಲಿಟ್ಟು ಬೆರಳುಗಳನ್ನು ಹಣೆ ಮೇಲೆ ತಡವುತ್ತಾ ಕಣ್ಮುಚ್ಚಿಕೊಂಡೆ.

ಮೊದಲ ಬಾರಿ ನಾನೂ ನೀನು ಆ್ಯಪಲ್ ಮಿಲ್ಕ್ ಶೇಕ್ ಅರ್ಧರ್ಧ ಕುಡಿದು ಆಚೀಚೆ ಮಾಡಿಕೊಂಡಿದ್ದೆವು ಅಲ್ಲಾ?ಎಂದು ನಕ್ಕಳು.

ನಶೆಯಲ್ಲಿ ಮಾತನಾಡುತ್ತಿದ್ದಾಳೆ ಎಂದು ನಾನು ಸುಮ್ಮನಿದ್ದೆ. ಒರಗಿದವನು ಅಲ್ಲೇ ದೀರ್ಘ ನಿದ್ದೆಗೆ ಬಿದ್ದಿದ್ದೆ.

ಮರುದಿನ ಬಂತಾ ಅಥವಾ ಈ ದಿನವೇ ಮುಂದುವರಿಯುತ್ತಿದೆಯಾ ಗೊತ್ತಾಗಲಿಲ್ಲ. ಕಣ್ತೆರೆದರೆ ಅವಳಿಲ್ಲ. ಅವಳಲ್ಲಿದ್ದಳು ಎಂಬುದಕ್ಕೆ ಕುರುಹೂ ಇರಲಿಲ್ಲ. ದಡಬಡಿಸಿದೆ. ಆಚೀಚೆ ನೋಡಿದೆ. ಅವಳ ಕೈಚೀಲ ಹಾಸಿಗೆಯ ಸೆರೆಯಲ್ಲಿ ಸಿಲುಕಿತ್ತು.

ಎಳೆದೆ. ತೆರೆದೇ ಇದ್ದ ಚೀಲದಲ್ಲಿ ಒಂದು ಪುಟ್ಟ ಪುಸ್ತಕವಿತ್ತು. ಬಿಡಿಸಿದೆ. ಖಾಲಿ ಹಾಳೆಗಳು. ನಡುನಡುವೆ ಏನೇನೋ ಗೀಚಿದ ಗೆರೆಗಳು. ಬ್ಯಾಗನ್ನು ಪುಸ್ತಕವನ್ನೂ ಎಸೆದೆ. ಫೋನ್ ಎತ್ತಿದೆ. ಅವಳಿಗೆ ಕರೆ ಮಾಡಿದೆ. ಎಂಗೇಜ್ ಬರುತ್ತಿತ್ತು. ಧೈರ್ಯ ಬಂತು.

ಇಂದಲ್ಲದಿದ್ದರೆ ನಾಳೆ ಮಾತಿಗೆ ಸಿಗುತ್ತಾಳೆ ಅಂದುಕೊಂಡೆ.

ಈಗ ನಾನು ಒಂಟಿಯಲ್ಲ. ಏಕಾಂಗಿ ಎಂದೆನಿಸುವುದೂ ಇಲ್ಲ. ಅವಳಿಲ್ಲದ ದಿನಗಳು ದುಬಾರಿಯಾಗುತ್ತಿಲ್ಲ. ಎಲ್ಲವೂ ಹಿತವೆನಿಸುತ್ತಿದೆ ಎಂದನಿಸಲು ಶುರುವಾಯಿತು.ಏನೋ ನೆನಪಾದಂತಾಗಿ ಠಣ್ಣನೆ ಎದ್ದು ಎಸೆದ ಚೀಲವನ್ನು ಎತ್ತಿಕೊಂಡೆ. ಚೀಲದ ಇನ್ಯಾವುದೋ ಸಂದನ್ನು ಹುಡುಕಿದೆ.

ಬಂಗಾರಿನ ಒಂದು ಪುಟ್ಟ ಸರ.

ಅವಳ ಕೊರಳಲ್ಲಿತ್ತಾ?

ಇತ್ತು.

ಒಂದೇ ಒಂದು ಸರ.

ಹಾಗಾದರೆ ಅವಳ ಕೊರಳೀಗ ಬೋಳು ಬೋಳು.

ಕಚಗುಳಿ ಇಟ್ಟ ಹಾಗಾಯಿತು.

ಮತ್ತೊಮ್ಮೆ ಅವಳಿಗೆ ಕರೆ ಮಾಡಿದೆ. ಈ ಬಾರಿಯೂ ಅದು ಎಂಗೇಜು.


******


ಹೇಳಿಕೆ: ಎರಡು


ಇವನನ್ನೂ ನಾನು ಪ್ರೀತಿಸಿದೆನಾ?

ಗೊತ್ತಿಲ್ಲ.

ನನಗೆ ಇವನಲ್ಲಿ ಪ್ರೀತಿ ಹುಟ್ಟುವ ಹೊತ್ತಿಗೆ ನಾನು ತುಂಬಿಕೊಂಡಾಗಿತ್ತು.

ಎಂತಹ ತುಂಬು ಅದು ಅನ್ತೀರಿ! ಆಗಷ್ಟೇ ಬಾಯಲ್ಲಿ ಕರಗುತ್ತಾ ಕಟ್ಟಕಡೆಗೆ ಉಳಿದ ಚಾಕಲೇಟಿನ ಸಣ್ಣ ತುಣುಕಿನಂತೆ. ಬಿಡಲಾರೆ ಬಿಡಬಾರದು. ಬಿಟ್ಟರೆ ಮತ್ತೆ ಇಲ್ಲ. ಮುಗಿಯಿತು. ಇಟ್ಟುಕೊಂಡರೆ ? ಕರಗಿಯೇ ಬಿಡುತ್ತದೆ. ಕರಗಿ ಮುಗಿದೇ ಹೋಗುತ್ತದೆ. ಆ ಸ್ವಾದದ ಸುಖದಲ್ಲೂ ಶೋಚನೀಯ ಸ್ಥಿತಿ.ಅನುಭವಿಸಿದ ಸುಖವೂ ಅನಿರ್ವಚನೀಯವಾಗುವ ಬದಲು ಅತೃಪ್ತವಾಗುವ ಹಾಗೇ.

ಮೊದಲಾಗಿ ಕೈಗಳನ್ನು ಬಾಚಿ ಹಿಡಿದದ್ದು ನಾನೇ. ನಾನೇ ನಾನೇ. ಬಾ ಎಂದು ಕರೆದವಳನ್ನು ಅವನೇ ಬಾಚಿಕೊಂಡ. ಅವನ ಆಸರೆಯಲ್ಲಿ ಸಿಕ್ಕಿದ್ದು ದೇಹಸುಖವಲ್ಲ ಅದು ಹಿತವಾದ ಒಂದು ಗಟ್ಟಿಗತನ ಎಂದು ಕಂಡುಕೊಂಡೆ. ಅವನ ಮನಸ್ಸಿನ ಮಾಲೆಯೊಳಗೆ ನನ್ನನ್ನು ಪೋಣಿಸಿದ್ದ ಅವನು. ಕಳಚಿಕೊಳ್ಳದಂತೆ ದಾರದ ಸುತ್ತಲೂ ಗಂಟು ಹಾಕಿದ್ದ. ಮಾಲೆಯೂ ಬಾಡಲೇ ಬೇಕಲ್ಲ. ನನಗೆ ಗೊತ್ತಿತ್ತು ಇದು. ಬಾಡಿಯೇ ಬಾಡುತ್ತದೆ ಅಂತ. ಬಾಡಿತು. ಯಾವುದು ಬಾಡಿದ್ದು ಎಂದು ಕೇಳಿದೆ. ಮಾಲೆಯಾ? ಮಾಲೆಯಲ್ಲಿ ಪೋಣಿಸಿದ ಹೂವಾ?

ಹೂವು ಬಾಡಿದರೆ ಮಾಲೆ ಬಾಡಿತು ಎಂದಲ್ಲವಾ? ನಾನು ಹೂವು. ಅವನ ಮಾಲೆಯಲ್ಲಿ ನಾನೇಕೆ ಬಾಡಿದೆ ಎಂದು ಕೇಳಿಕೊಂಡೆ. ನಾನು ಬಾಡಿದ್ದು ಸಹಜವಾ? ಅವನಿಗೆ ನನ್ನನ್ನು ಬಾಡದಂತೆ ಕಾಪಿಡಲು ಗೊತ್ತಿಲ್ಲವಾ?

ಅದೊಂದು ದಿನ ನಾನೂ ಅವನು ಹೊರಟೇ ಬಿಟ್ಟೆವು. ತುಂಬಾ ದೂರ ಹೋಗುವುದು ಅಂತ ತೀರ್ಮಾನಿಸಿದ್ದೆವು. ಮರಳಿ ಹೊರಟಲ್ಲಿಗೆ ಬರಲುಂಟೋ ಎಂದು ಕೇಳಿದೆ. ನಾವು ಹೊರಟದ್ದು ಆಗಿದೆ. ವಾಪಾಸ್ಸು ಬಾರದೇ ಇದ್ದರೆ ಅಷ್ಟೇ ಹೋಯ್ತು ಬಿಡೆ ಎಂದ.

ಹೌದು ಎಂದು ಬಿಟ್ಟೆ.

ನಾನು ವಾಪಾಸ್ಸು ಬರಬಾರದು ಎಂದುಕೊಂಡಿರಲಿಲ್ಲ. ಆದರೆ ಅವನಿಗಾಗಿ ನಾನು ಅವನ ಸುದೀರ್ಘ ಹಾದಿಯ ಪಯಣದಲ್ಲಿ ಸೇರಿಕೊಂಡೆ. ಎಷ್ಟು ಚಂದದ ಪ್ರಯಾಣ ಅದು. ಗೊತ್ತುಗುರಿ ಇಲ್ಲದ ಓಟ.

ಇಬ್ಬರೂ ಮೈ ಮರೆತು ಪ್ರಯಾಣಿಸಿದೆವು. ಅವನ ಗುರಿ ದೊಡ್ಡದಿತ್ತು. ಉದ್ದಕ್ಕೆ ಚಾಚಿತ್ತು. ಮುಗಿಯದ ಹಾದಿಯಾಗಿತ್ತು. ನನಗೆ ಏನೂ ಅಡ್ಡಿ ಇರಲಿಲ್ಲ. ಸುಖಪ್ರಯಾಣದಲ್ಲಿ ನಾನು ಅವನ ಮೈಗೆ ಮೈ ಬಿಗಿದಿದ್ದೆ.

ಗುರಿ ಸೇರಿತು ಎಂದಾಗ ಮೈ ಕೊಡಹಿಕೊಂಡೆ. ಮತ್ತಿಳಿದಿತ್ತು. ನವಿರಾಗಿ ಅವನಿಗೆ ಹೇಳಿದೆ, ಮರಳಿ ನನ್ನನ್ನು ಮನೆ ಸೇರಿಸು.

ಅವನು ನಕ್ಕ.

ನಾನೂ ನಕ್ಕೆ.

ಈಗ ನಾನು ಮರಳಿ ಬಂದಿದ್ದೇನೆ. ಅವನು ?

ಅವನಿಗಾಗಿಯೇ ಆ ಸರ ಬಿಟ್ಟು ಬಂದಿದ್ದೇನೆ. ನನ್ನ ನೆನಪಿಗೆ ಅವನ ಬಳಿ ನನ್ನ ಕೊರಳ ಹಾರವಿರಲಿ. ಅವನ ನೆನಪಿಗೆ ನನ್ನ ಬೋಳು ಕೊರಳಿರಲಿ.

***

ಕೀರ್ತಿವಂತ ಸುಮನಾಸಾಚಾರ್ಯ ಶತಸಿದ್ಧಿಯವರ ಉಪಸಂಹಾರ

ಇದು ಇವರಿಬ್ಬರ ಕಥೆ. ಈ ಕಥೆಯನ್ನು ಇವರಿಬ್ಬರೂ ಇವರಿವರ ಶೈಲಿಯಲ್ಲಿ ಹೇಳಿದ ಮೇಲೆ ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರು ಹೂ ನಗೆ ಬೀರಿದರು. ಇಬ್ಬರೂ ದೂರವಾದ ಮೇಲೆ ಇಬ್ಬರನ್ನೂ ಹತ್ತಿರ ಮಾಡಲು ಕೀರ್ತಿವಂತ ಸುಮನಾಸಾಚಾರ್ಯ ಶತಸಿದ್ಧಿಯವರು ನಿರ್ಧರಿಸಿದ್ದರು. ಅದಕ್ಕಾಗಿ ಇಬ್ಬರಲ್ಲೂ ಹೇಳಿಕೆಗಳನ್ನು ಕೇಳಿ ದಾಖಲಿಸಿಕೊಂಡಿದ್ದರು.

ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರು ಅಸಾಮಾನ್ಯರು. ಅವರು ಇಂತಹ ಅನೇಕಾನೇಕ ವಿಸ್ಮೃತಿಗಳನ್ನು ಪರಿಹರಿಸಿದ್ದರು. ಆದರೆ ಈ ಇಬ್ಬರ ವಿಚಾರದಲ್ಲಿ ಸುಲಭದ ಪರಿಹಾರವೇನೂ ಅವರಿಗೆ ಕಾಣಿಸಲಿಲ್ಲ. ಅವಳು ಅವನೂ ಕೂಡಿದಾಗ ನೀನ್ಯಾರು ನಾನ್ಯಾರು ಎಂದು ಅವಳು ಕೇಳಿದ ಪ್ರಶ್ನೆಗೆ ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರ ಬಳಿ ಉತ್ತರವೇ ಇರಲಿಲ್ಲ.

ಪ್ರೇಮ ಎಂದರೆ ಪ್ರೇಮವೇ ಅಲ್ಲ,

ಕಾಮವೂ ಪ್ರೇಮದಷ್ಟೇ ಅಲ್ಲ.

ಪ್ರೇಮವೂ ಕಾಮವೂ ಪರಿಪೂರ್ಣ ಎನ್ನುವ ಸ್ಥಿತಿಯಲ್ಲಿ ನಿಲುಗಡೆಯಾಗುವುದೂ ಇಲ್ಲ. ಒಂದು ಬಿದ್ದರೆ ಮತ್ತೊಂದಕ್ಕೆ ಅರ್ಥವೂ ಇಲ್ಲ ಸಂತೃಪ್ತಿಯೂ ಇರುವುದಿಲ್ಲ. ಹಂಬಲದ ತಕ್ಕಡಿಯಲ್ಲಿ ಪ್ರೇಮ ಮತ್ತು ಕಾಮ ಸರಿ ಸಮವಾದ ಒಂದು ಉದಾಹರಣೆಯಾದರೂ ಸಿಗಬಹುದಾ ಎಂದು ತನಗೆ ತಾನೇ ಕೇಳುತ್ತಾ ಕೀರ್ತಿವಂತ ಸುಮನಸಾಚಾರ್ಯ ಶತಸಿದ್ಧಿಯವರು ಕುಳಿತಲ್ಲಿಂದ ಎದ್ದು ಹೋದರು.

ಅವರು ಎಲ್ಲಿಗೆ ಹೋಗಿದ್ದಾರೋ ಏನೋ?

(ಕಥೆಯ ಉಳಿದ ಭಾಗ ಈ ಕಥೆಯನ್ನು ಓದಿದ ಎಲ್ಲರೊಳಗೆ ಪ್ರೇಮವಾಗಿಯೂ ಕಾಮವಾಗಿಯೂ ಸಶೇಷವಾಗಿರುವುದು)

ಗೋಪಾಲಕೃಷ್ಣ ಕುಂಟಿನಿ

ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು  “ವೃತ್ತಾಂತ ಶ್ರವಣವು”,  “ಆಮೇಲೆ ಇವನು”, ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’, “ವಿಲೇಜ್ ವರ್ಲ್ಡು ಮತ್ತು 24 ಕತೆಗಳು”, “ಮಾರಾಪು”ಎಂಬ ಕತೆಗಳ ಸಂಕಲನ ಮತ್ತು “ಈ ಚಳಿಗಾಲದಲ್ಲಿ ಅವಳು ಸಿಕ್ಕಿ” ಎಂಬ ಕವನ ಸಂಕಲನ  ಪ್ರಕಟಿಸಿದ್ದಾರೆ. “ಪುರುಷಾವತಾರ” ಅವರ ಕಾದಂಬರಿ. “ವಂಡರ್ ವೈ ಎನ್ ಕೆ” ಮತ್ತು “ಮಳೆಯಲ್ಲಿ ನೆನೆದ ಕತೆಗಳು” ಅವರ ಸಂಪಾದಿತ ಕೃತಿಗಳು. 

ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್‌ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ಕತೆಗಳ ರಚನೆ-ಚರ್ಚೆಗೆ ಅನುವು ಮಾಡಿಕೊಟ್ಟಿದೆ.

More About Author