Story

ಕೆಂಡ ನುಂಗಿದ ಬೆಳದಿಂಗಳು

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ. ಪ್ರಸ್ತುತ ಅವರ ‘ಕೆಂಡ ನುಂಗಿದ ಬೆಳದಿಂಗಳು’ ಕತೆ ನಿಮ್ಮ ಓದಿಗಾಗಿ...

ಹೆಣಕ್ಕೆ ಹೊದಿಸಿದ ಬಿಳಿ ಬಟ್ಟೆಯಂತೆ ಬೆಳದಿಂಗಳು ಚೆಲ್ಲಿತ್ತು. ಬಿಳಿ ಮೋಡ ಕತ್ತರಿಸಿ ಬಿದ್ದಂತೆ ವಾತವರಣ ಬೆಳ್ಳಗೆ ಹೊಳೆಯುತಿತ್ತು. ಕಣ್ಣು ಹಾಯಿಸಿದಂತೆ ತುಳುಕುವ ಗಿಡಗಳು ಕಪ್ಪಾಗಿ ಪ್ರೇತಗಳಂತೆ ನೆಲಕ್ಕೆ ಚಿತ್ತಾರ ಬರೆದಿದ್ದವು. ನರಿಗಳು ಕಿವಿ ತೂತಾಗುವಂತೆ ಊಳಿಡುತ್ತಿದ್ದವು. ಕಪ್ಪೆಗಳು ಗಂಟಲು ಹರಿಯುವಂತೆ ಕರ‍್ರ್.....ಕರ‍್ರ್..... ಎಂದು ಒದರುತ್ತಿದ್ದವು. ಬಾವಲಿಗಳು ತಲೆ ಮೇಲೆ ಕಪ್ಪು ಬಟ್ಟೆ ಹೊದ್ದಂತೆ ಓಡಾಡುತ್ತಿದ್ದವು. ಗೂಬೆಗಳು ಗುಕ್... ಗುಕ್... ಎಂದು ನನ್ನನ್ನು ಕರೆಯುತ್ತಿದ್ದವು. ಅವುಗಳ ಹೊಳೆವ ಕಣ್ಣುಗುಡ್ಡೆಗಳು ನನ್ನನ್ನು ಇರಿಯುತ್ತಿದ್ದವು. ದಿಟ್ಟಿಸಿ ನೋಡಿ ಭಯಗೊಂಡು ಉಸಿರು ಬಿಗಿ ಹಿಡಿದು ಬೇರೆ ಕಡೆ ಕಣ್ಣು ಹೊರಳಿಸಿದೆ. ಕಣ್ಣು ಮುಳುಗುವರೆಗೆ ಬಯಲೋ ಬಯಲು. ಬೋಳಾಗಿ ನಿಂತ ಮೆಣಸಿನ ಗಿಡಗಳು, ಹತ್ತಿಗಿಡಗಳು, ತೊಗರಿ ಗಿಡಗಳು, ಕತ್ತರಿಸಿದ ಬತ್ತದ ಗದ್ದೆಗಳು ಬೆಳದಿಂಗಳಲ್ಲಿ ನಿಚ್ಚಳವಾಗಿ ಕಾಣುತ್ತಿದ್ದವು. ಯಾವ ಬೆಳೆಯು ಇಲ್ಲದ್ದರಿಂದ ಹೊಲಗಳೆಲ್ಲಾ ರಕ್ತ ಹೀರಿದ ಅಸ್ತಿಪಂಜರದಂತೆ ಕಾಣುತ್ತಿದ್ದವು. ಮೈಯೆಲ್ಲಾ ಕಣ್ಣು ಮಾಡಿಕೊಂಡು ಸುತ್ತ ಮುತ್ತ ನೋಡುತ್ತಾ ನಡೆಯುತ್ತಿದ್ದೆ. ನಡೆದಂತೆ ನನ್ನ ನೆರಳು ನನ್ನನ್ನು ನುಂಗುತ್ತಿದೆ ಅನಿಸುತಿತ್ತು. ಅಷ್ಟು ತಂಪಾದ ಬೆಳದಿಂಗಳು ಉಕ್ಕಿ ಹರಿಯುತ್ತಿದ್ದರೂ ಮನಸ್ಸು ಬೆಂಕಿ ಹೊತ್ತಿ ಉರಿಯುತ್ತಿತ್ತು.

ಬಸ್ಸೇನೋ ಇಳಿದು ಒಬ್ಬನೆ ಹೋದರಾಯಿತೆಂದು ಬಂದೆ. ಮುಂದೆ ಹೋದಂತೆ ಭಯವಾಗುತ್ತಿತ್ತು. ಪ್ರತಿಯೊಂದು ವಸ್ತುವು ನನ್ನನ್ನು ಅಣಿಕಿಸುತ್ತಿರುವಂತೆ ಕಾಣುತ್ತಿದ್ದವು. ಹಿಂದೆ ಯಾರೋ ಓಡಿ ಬಂದಂತಾಯಿತು. `ಅಯ್ಯೋ.....’ ಎಂದು ಹಿಂದುರಿಗಿ ನೋಡಿದೆ. ಯಾರು ಇರಲಿಲ್ಲ. ಇದೇನಪ್ಪ ಗುಡಿಸಲು ಇನ್ನೆಷ್ಟೂ ದೂರವಿದೆ ಎಂದು ಕಣ್ಣು ಬಿಟ್ಟು ಗುಡಿಸಲು ಕಡೆ ನೋಡಿದೆ. ಗಿಡಗಳ ಮರೆಯಲ್ಲಿ ಸರಿಯಾಗಿ ಕಣುತ್ತಿರಲಿಲ್ಲ. ಹೇಗೋ ತಲುಪಲೆಬೇಕಲ್ಲಾ ಎಂದು ಉಸಿರು ಬಿಗಿ ಹಿಡಿದು ಮುನ್ನಡೆದೆ. ಸ್ವಲ್ಪ ಮುಂದೋಗಿರಬೇಕು ಕಾಲಲ್ಲಿ ಏನೋ ತರಿಚಿದಂತಾಯಿತು. ಮಿಟ್ಟಿ ಬಿದ್ದು ನೋಡಿದರೆ ದೊಡ್ಡ ಮುಂಗಿಸಿ. ಕಪ್ಪಗೆ ಮೈಯೆಲ್ಲಾ ಕೂದಲು ನಿಮಿರಿಸಿಕೊಂಡು ನನ್ನ ಕಡೆ ನೋಡುತಿತ್ತು. ಮೂತಿಗೆ ರಕ್ತ ಮೆತ್ತಿತ್ತು. ಏನೂ ತಿಂದಿತ್ತೋ ..... ನನ್ನ ಕಡೆನೆ ಓಡಿ ಬಂತು. ನಾನು ಹೆದರಿ ಓಡಿದೆ. ಮುಂಗುಸಿಗಳು ಹಾವಿನ ಜೊತೆ ಯುದ್ಧ ಮಾಡುತ್ತವೆ ಎಂದು ಕೇಳಿದ್ದೆ. ಅವು ಹಾವಿನ ಜೊತೆ ಸೆಣಸಾಡಿದಾಗ ಕೋಪಗೊಂಡು ಯಾರು ಕಾಣುತ್ತಾರೆ ಅವರಿಗೆ ಕಡಿಯುತ್ತವೆ ಎಂದು ಅಜ್ಜಿ ಹೇಳುತ್ತಿದ್ದರು. ಅದು ನೆನಪಾಗಿ ಜಲ ಜಲ ಬೆವತೆ. ಜೋರಾಗಿ ಕೂಗಬೇಕೆನ್ನಿಸಿತು. ಧ್ವನಿ ಬರಲಿಲ್ಲ. ಮೈಯೆಲ್ಲಾ ಹಿಡಿ ಮಾಡಿಕೊಂಡು ಹಿಂದು ಮುಂದು ನೋಡದೆ ತಲೆ ತಗ್ಗಿಸಿ ನೆಲ ನೋಡುತ್ತಾ ನಡೆದೆ.

ನನ್ನ ಹಿಂದೆನೆ ನೂರಾರು ಮುಂಗುಸಿಗಳು, ಹಾವುಗಳು ಓಡೋಡಿ ಬಂದಂತೆ ಅನಿಸುತ್ತಿತ್ತು. ಪರಸ್ಪರ ವೈರಿಗಳಾದ ಹಾವು ಮುಂಗುಸಿಗಳು ಒಂದಾಗಿ ನನ್ನನ್ನು ಬೆನ್ನಟ್ಟಿದಂತೆ ಕಾಣುತಿತ್ತು. ಮತ್ತಷ್ಟೂ ಭಯಗೊಂಡು ಅಂತ ತಣ್ಣನೆಯ ಬೆಳದಿಂಗಳಲ್ಲಿ ಬಿರು ಬಿಸಿಲಿಗೆ ಬೆವತಂತೆ ಬೆವತು ಹೋದೆ.

ಅಮ್ಮ ಎರಡು ತಿಂಗಳಿಂದೆ ಕರೆ ಮಾಡಿದಾಗ `ಈಗಂತೂ ಬೆಳೆದ ಯಾವ ಬೆಳೆಗಳಿಗೆ ಬೆಲೆಯಿಲ್ಲ. ಉಳ್ಳಾಗಡ್ಡಿ, ಟೊಮೆಟೊ, ಬದನೆ, ಆಲೂಗಡ್ಡೆ ಬೆಳಕೊಂಡು ಕುಂತೀವಿ. ಕೇಳೋರು ಗತಿಯಿಲ್ಲ. ಏನು ಮಾಡಬೆಕೋ ತಿಳಿದಾಂಗ ಆಗ್ಯಾದ. ಅದ್ರಾಗ ಈ ಮುಂಗಿಸಿ, ಹೆಗ್ಗಣ ಕಾಟ ಬಾಳ ಆಗ್ಯಾದ. ಹಗಲತ್ತೇ ಮನೆ ಮುಂದ ಬಂದು ಕೂಡುತಾವ. ಮಕ್ಕಳನ್ನ ಹೊರಗ ಬುಡದಕ ಅಂಜಿಕಿ ಬರುತದ. ಊರು ಮಂದಿ ಮನೆ ಕಟಿಗಂಡರ, ನಿಮಪ್ಪೊಂದು ಮನೆ ಕಟ್ಟಸಲಿಲ್ಲ. ಊರು ಹೊರಗ ಮಂದಿಲ್ಲದ ಜಾಗಕ್ಕ ಈ ಸುಡುಗಾಡು ಗುಡಿಸ್ಯಾಲ್ಯಾಗ ತಂದು ಹಾಕ್ಯಾನ.’ ಎಂದು ಹೇಳಿದ್ದಳು.

ಯಾವ ಕಡೆ ನೊಡಿದರೂ ನೀರವ ಮೌನ. ಮೊದಲೆ ತಮ್ಮನಿಗೆ ಹೇಳಿದ್ದರೆ ಬಂದು ಕರೆದುಕೊಂಡು ಹೋಗುತ್ತಿದ್ದ. ಈ ಹೊತ್ತಲ್ಲಿ ಅವನಿಗ್ಯಾಕೆ ತೊಂದರೆ ಎಂದು, ಇದೊಂದು ಅನುಭವ ಆಗಲಿ. ಊರಿಗೆ ಬರಲಾರದ ಎಂಟು ವರ್ಷ ಮೇಲಾಯಿತು. ಊರು, ಬೆಳದಿಂಗಳು, ಗಿಡ-ಮರ, ತಂಗಾಳಿ, ಮಣ್ಣಿನ ವಾಸನೆ ಬಯಲಿನ ಏಕಾಂತ ಸವಿಯೋಣ ಎಂದು ಒಬ್ಬನೆ ಹೊರಟಿದ್ದೆ. ಆದರೆ ಈ ರೀತಿ ಭಯ ಸುತ್ತಿಕೊಳ್ಳುತ್ತದೆ ಎಂದು ಅನಿಸಿರಿಲಿಲ್ಲ. ನನಗೇನು ಇದು ಅಪರಿಚಿತವಲ್ಲ. ಬಾಲ್ಯವನ್ನೆಲ್ಲಾ ಈ ನೆಲದಲ್ಲಿಯೆ ಕಳೆದದ್ದು. ಇಲ್ಲೇ ಓಡಾಡಿದ್ದು. ಎಷ್ಟೋ ರಾತ್ರಿಗಳು ತಿರುಗಾಡಿದ್ದು. ಬೆಳದಿಂಗಳಿರುವಾಗ ಹೊಲದಲ್ಲಿ ಹತ್ತಿ ಬಿಡಿಸಿ, ತೊಗರಿ ಜೋಳ, ಗೋದಿ ಕೊಯಿದಿದ್ದೆವು. ಅಪ್ಪ ಹಂತಿ ಕಟ್ಟಿ ಹಾಡು ಹಾಡುತಿದ್ದ. ಅಮ್ಮ ಬುತ್ತಿ ತರುತ್ತಿದ್ದಳು. ಎಲ್ಲಾರು ಸೇರಿ ಊಟ ಮಾಡುತ್ತಿದ್ದೆವು. ಅಣ್ಣ ತಮ್ಮ ಅಪ್ಪನೊಂದಿಗೆ ಜೊತೆಗೂಡಿ ಹಂತಿ ಹಿಂದೆ ತಿರುಗುತ್ತಿದ್ದರು. ನಾನು ಮಾತ್ರ ನೋಡುತ್ತಾ ಇರುತ್ತಿದ್ದೆ. ನನಗೂ ಆಶೆ ಇದ್ದರೂ ಕಣದಲ್ಲಿ ಕಾಲಿಡಲು ಬಿಡುತ್ತಿರಲಿಲ್ಲ. ನಾನು ಇಂಜಿನಿಯರ್ ಓದುತ್ತಿದ್ದರಿಂದ ವಿಶೇಷ ಮರ್ಯಾದೆ ಕೊಟ್ಟು, ಅಲ್ಲೆ ಹಾಸಿಗಿ ಹಾಸಿ ಮಲಗಿಸುತ್ತಿದ್ದರು. ಬೆಂಗಳೂರಿನಲ್ಲಿ ಕಂಪನಿಗೆ ಕೆಲಸಕ್ಕೆ ಸೇರಿದ ಮೇಲೆ ಊರಿಗೆ ಬರುವುದು ಕಡಿಮೆ ಮಾಡಿದೆ. ಅಪ್ಪನಿಗೆ ವಯಸ್ಸಾಗಿದ್ದರಿಂದ ಎತ್ತುಗಳು ಇಲ್ಲವಾಗಿದ್ದವು. ಹಂತಿ ಪದಗಳು ಮೂಲೆ ಸೇರಿದ್ದವು. ಬೆಳದಿಂಗಳಲ್ಲಿ ಕೆಲಸ ಮಾಡುವವರು ಇಲ್ಲವಾಗಿದ್ದರು. ಯಂತ್ರಗಳು ಕಾಲಟ್ಟು ಬೆಳದಿಂಗಳಿಗಿಂತ ಪ್ರಖರ ಬೆಳಕಿರುವ ಬಲ್ಬುಗಳು ಬಂದಿದ್ದವು.

ಅಣ್ಣ ತಮ್ಮ ವ್ಯವಸಾಯಕ್ಕೆ ಇಳಿದ ಮೇಲೆ ಅಪ್ಪ ಮಾಡುತ್ತಿದ್ದ ಯಾವ ಕೃಷಿ ಪದ್ದತಿಯು ಇರಲಿಲ್ಲ. ಇಬ್ಬರೂ ಸೇರಿ ಇರುವ ನಾಲ್ಕೆತ್ತನ್ನು ಮಾರಿದ್ದರು. ಟ್ಯಾಕ್ಸಿ ತಂದಿದ್ದರು. ಹೊಲಗಳನ್ನು ದೊಡ್ಡ ದೊಡ್ಡ ಮಡಿಗಳನ್ನಾಗಿ ಮಾಡಿದ್ದರು. ಹೊಲದಲ್ಲಿ ಸಾವಿರ ಅಡಿ ಆಳದ ಬೋರನ್ನು ಹಾಕಿಸಿದ್ದರು. ಹನಿ ನೀರಾವರಿ ಎಂದು ಹೊಲದ ತುಂಬಾ ಪೈಪುಗಳನ್ನು ಹಾಕಿಸಿದ್ದರು. ಅವು ಹಾವುಗಳು ಹರಿದಾಡದಂತೆ ಕಾಣುತ್ತಿದ್ದವು. ಯಾವಾಗ ನೋಡಿದರೂ ಬೆಳೆಗಳಿಗೆ ಬೆಲೆ ಇಲ್ಲ. ಬೆಳೆದದ್ದೆಲ್ಲಾ ಖರ್ಚಿಗೆ ಆಗುವದಿಲ್ಲ ಎಂದು ಹೇಳುತ್ತಿದ್ದರು. ಇದರಿಂದ ನಾನು ಊರಿಗೆ ಬರುವದನ್ನೇ ಬಿಟ್ಟಿದ್ದೆ. ಬೆಂಗಳೂರಿನಲ್ಲಿದ್ದಾಗ ವರ್ಷಕೊಮ್ಮೆಯಾದರೂ ಬರುತ್ತಿದ್ದೆ. ಅಮೇರಿಕಾಕ್ಕೆ ಹೋಗಿ ಎಂಟು ವರ್ಷ ಆಯಿತು. ಇವತ್ತೇ ಊರಿಗೆ ಬರುತ್ತಿದ್ದೇನೆ. ಅಮ್ಮ ಅನೇಕ ಸಾರಿ ಕರೆ ಮಾಡಿ `ನೀನಾದರೂ ಅರಾಮ ಇರು. ನಮ್ಮ ಹಣೆಬರಹ ಇಷ್ಟೇ’ ಎನ್ನುತ್ತಿದ್ದಳು.

ಧೈರ್ಯ ಮಾಡಿ ಮತ್ತೊಮ್ಮೆ ತಿರಿಗಿ ನೋಡಿದೆ. ಉದ್ದಕ್ಕೆ ರಸ್ತೆ ಕಾಣುತ್ತಿತ್ತು. ಇಷ್ಟೊಂದು ನಡೆದೆನೆ ಎಂದು ಆಶ್ಚರ್ಯವಾಯಿತು. ಮುಂದೆ ಕಣ್ಣೆತ್ತಿ ನೋಡಿದೆ. ಬೆಳದಿಂಗಳ ಬೆಳಕಲ್ಲಿ ಗುಡಿಸಲು ಕಾಣುತ್ತಿತ್ತು. ದೀಪ ಹಚ್ಚಿದಂತೆ ಕಾಣಲಿಲ್ಲ. ಗುಡಿಸಲು ಮುಂದಿದ್ದ ಬೇವಿನ ಮರ, ಹುಣಸೆ ಮರದ ನೆರಳು ನಿಚ್ಚಳವಾಗಿ ಕಾಣುತ್ತಿತ್ತು. ನಿಧಾನಕ್ಕೆ ಗಾಳಿ ಬೀಸುತ್ತಿದ್ದರಿಂದ ಮರಗಳು ಓಲಾಡಿ ಪ್ರೇತಗಳು ಓಡಾಡಡಿದಂತೆ ಕಾಣುತಿತ್ತು. ಕೊಂಬೆಗಳ ಮದ್ಯೆ ಬೆಳಕಿನ ಕೋಲುಗಳು ಮೂಡಿದ್ದವು. ಆ ಬೆಳಕಿನ ಕೋಲುಗಳು ಮಿಂಚಿನಂತೆ ಹೊಳೆಯುತ್ತಿದ್ದವು. ಆ ಮರಗಳ ನೆರಳು ಕತ್ತಲಾಗಿ ಕೊಂಬೆಯ ಮಧ್ಯದಿಂದ ಬಿದ್ದ ಬೆಳಕು ಬೆಳಕಾಗಿ ಕತ್ತಲು ಬೆಳಕಿನ ಆಟ ನಡೆದಂತೆ ಕಾಣುತ್ತಿತ್ತು. ಬೆಳಕನ್ನು ಕತ್ತಲು ಕತ್ತಲನ್ನೂ ಬೆಳಕೂ ಹಿಡಿದಂತೆ ಅನಿಸುತ್ತಿತ್ತು.

ಕೊಟ್ಟಿಗೆಯಲ್ಲಿ ಎಮ್ಮೆ ಆಕಳುಗಳು ಮೇವು ತಿನ್ನುವ, ಸೀನುವ ಸದ್ದು ಕೇಳುತ್ತಿತ್ತು. ಗುಡಿಸಲು ಸಮೀಪಿಸಿದಂತೆ ಭಯ ಕಡಿಮೆಯಾಯಿತು. ಬಿಗಿ ಹಿಡಿದ ಉಸಿರು ಬಿಟ್ಟು ಸ್ವಲ್ಪ ಸುಧಾರಿಸಿಕೊಂಡೆ. ಅಪ್ಪ ನೆಟ್ಟ ಐದಾರು ಮಾವಿನ ಮರಗಳು ಹಾಗೆ ಇದ್ದವು. ಅವು ಚಿಗುರೊಡೆದು ನಳನಳಿಸುತ್ತಿದ್ದವು. ಆ ತಂಗಾಳಿಯಲ್ಲಿ ಮಾವಿನ ಮರದಿಂದ ಬಂದ ಗಾಳಿ ಗಮ್ಮೆಂದು ಮೂಗಿಗೆ ಬಡೆದು ಸ್ವಲ್ಪ ಹಿತವೆನಿಸಿತು. ಅಲ್ಲಿ ಒಂದು ಕಲ್ಲು ಕಂಡಿತು. ಅಮ್ಮನನ್ನು ಕಾಣುವುದಕ್ಕಿಂತ

ಮುಂಚೆ ಸ್ವಲ್ಪ ಮಾನಸಿಕ ಸಿದ್ದತೆ ಬೇಕೆಂದು ಕಲ್ಲಿನ ಮೇಲೆ ಕಳಿತೆ. ಬೆಳದಿಂಗಳು ರವ ರವ ಉರಿದಂತೆ ಕಂಡಿತು. ಬೆಳದಿಂಗಳು ಸುಳಿ ಸುಳಿಯಾಗಿ ಬೆಳ್ಳಗೆ ಕಣ್ಣು ಮುಂದೆ ನಿಂತಿತು.`ಯಾಕೋ ಊರಿಗೆ ಬಂದಿ. ಅಲ್ಲೇ ಅಮೇರಿಕಾದಲ್ಲಿ ಹಾಯಾಗಿ ಇರಬಾರದೆ. ಇಲ್ಲಿಯ ಗೋಳು ನಿನಗ್ಯಾಕೆ. ಇವರು ಹೇಗಾದರೂ ಇರಲಿ. ಅವರನ್ನು ನೋಡಿಯಾದರೂ ನೀನೇನು ಮಾಡುವಿ. ಅಲ್ಲಿ ವೀಕೆಂಡ್ ಪಾರ್ಟಿ ಮಾಡಿಕೊಂಡು ಕುಡಿದು ತಿಂದು ಭೋಗಿಸಿ ಮಜವಾಗಿ ಇರಬಾರದೆ. ಹೊಗು ಹೋಗು.....’ ಎಂದಾತಾಯಿತು. ಕಣ್ಣು ಬಿಟ್ಟು ದಿಟ್ಟಿಸಿ ನೋಡಿದೆ. ಮಲ್ಲಿಗೆ ಹೂವಿನ ತೋಟಕ್ಕೆ ಬೆಂಕಿ ಬಿದ್ದಂತೆ ಬೆಳದಿಂಗಳು ಕಪ್ಪಾದಂತೆ ಕಂಡಿತು.

ಇನ್ನೂ ವಾಸ್ತವವನ್ನು ಎದುರಿಸಲೇಬೇಕು ಎಂದು ಎದ್ದು ನಿಲ್ಲಬೇಕೆನ್ನುವಷ್ಟರಲ್ಲಿ ಊರು ಕಡೆಯಿಂದ ಬೆಳದಿಂಗಳನ್ನು ಸೀಳಿಕೊಂಡು ಕರುಳಿರಿವ ಅಳುವೊಂದು ತೂರಿಕೊಂಡು ಬಂದು ಕಿವಿ ತುಂಬಿತು.`ಅಯ್ಯೋ... ಮಗನೇ... ಯಾಕಪ್ಪಾ ಹೀಂಗಾ ಮಾಡಿದಿ... ನಮ್ಮನ್ನು ಬಿಟ್ಟು ಹೋದೆಲ್ಲೋ... ಈ ಔಷಧಿಗಳು ಸುಡುಲಿ... ಯಾರೋ ಮಾಡ್ಯಾರಪ್ಪೋ... ಇವನ್ನ ದೇವರೇ...ಈ ಔಷಧಿಗಳು ಹುಳುಗಳನ್ನು ಸಾಯಿಸೋ ಬದಲು ಮನುಷ್ಯರನ್ನಾ ಸಾಯಿಸ್ತಾವಲ್ಲೊ... ಶಿವನೇ...’ ಎಂಬ ಅಳು ಹೃದಯವನ್ನು ಹಿಂಡಿತು.

ಸರ ಸರ ಗುಡಿಸಲ ಕಡೆ ಬಂದೆ. ಗುಡಿಸಲು ಮುಂದೆ ರಾಶಿ ರಾಶಿಯಾಗಿ ಈರುಳ್ಳಿ, ಟಮಟೆ, ಆಲುಗಡ್ಡೆ ಬಿದ್ದಿದ್ದವು. ಎಷ್ಟು ದಿವಸ ಆಗಿತ್ತೋ ರಾಶಿ ಹಾಕಿ ಕೊಳೆತು ದುರ್ನಾತ ಬರುತ್ತಿತ್ತು. ಆ ದುರ್ನಾತಕ್ಕೆ ಹೊಟ್ಟೆ ತೊಳಿಸಿದಂತಾಗಿ ವಾಂತಿ ಒತ್ತಿಕೊಂಡು ಬಂದಿತು. ಹೊಟ್ಟೆಯಲ್ಲಿ ಏನು ಇಲ್ಲದ್ದರಿಂದ ಸಂಕಟವಾಯಿತು. ಟಮಟೆಹಣ್ಣು ಕೆಂಪಗೆ ಮಾಂಸದ ತುಣಿಕಿನಂತೆ ಕಾಣುತ್ತಿದ್ದವು. ಕೊಳೆತು ಹೊಟ್ಟೆ ಹೊಡೆದು ರಸ ರಕ್ತದಂತೆ ಹರಿಯುತ್ತಿತ್ತು. ನೋಡಲು ಹೇಸಿಕೆಯೆನಿಸಿತು. ಇವನ್ನು ಮನೆ ಮುಂದೆ ಹಾಕಿಕೊಂಡು ಹೇಗೆ ಜೀವಿಸುವರೋ ಅನಿಸಿತು. ಆಲುಗಡ್ಡೆ ಈರುಳ್ಳಿಗಳು ತಲೆ ಸೀಳಿ ಮೆದಳು ಹೊರ ಬಂದಂತೆ ಕಾಣುತ್ತಿದ್ದವು.

ಅಪ್ಪ ತಮ್ಮ ಹೊರಗೆ ಮಲಗಿದ್ದರು. ಅಪ್ಪ ತಲೆ ಪಕ್ಕದಲ್ಲಿ ಬಸವಣ್ಣನ ವಚನಗಳ ಪುಸ್ತಕ ಇಟ್ಟುಕೊಂಡಿದ್ದ. ಆತನಿಗೆ ಆ ಪುಸ್ತಕ ತಲೆ ಪಕ್ಕ ಇದ್ದರೆ ನಿದ್ದೆ ಬರುತ್ತಿತ್ತು. ಬೆಳ್ಳಗೆ ಹೊಳೆಯುತ್ತಿದ್ದ ಅಪ್ಪನ ಮುಖ ಕಪ್ಪಿಟ್ಟಿತ್ತು. ಊರಲ್ಲಿ ಎಷ್ಟೊ ಜನರ ದುಃಖ ದುಮ್ಮಾನಗಳಿಗೆ ಕೊರಳಾಗಿದ್ದವ ಇಂದು ತನ್ನ ದುಃಖಕ್ಕೆ ಯಾರಿಲ್ಲದೆ ಮುಖ ಸುಟ್ಟ ಕೊರಡಿನಂತಾಗಿತ್ತು. ಯಾವ ವಚನಗಳು ಆತನ ವ್ಯಥೆಯನ್ನು ಸಮಧಾನ ಮಾಡಿರಲಿಕ್ಕಿಲ್ಲ. ತಮ್ಮನ ಮುಖ ಬಾಡಿ ಕಣ್ಣೆಲ್ಲಾ ಬತ್ತಿ ಹೋಗಿದ್ದವು. ತೊಯ್ದ ಗುಬ್ಬಿ ಮರಿಯಂತೆ ಕೈಕಾಲು ಮುದಿರಿಕೊಂಡು ಮಲಗಿದ್ದ. ಅಮ್ಮ ಕಾಣಲಿಲ್ಲ. ಎದೆ ಒಡೆದುಕೊಳ್ಳುತ್ತಿತ್ತು. ಇವರನ್ನು ಹಗಲೊತ್ತು ಎದುರಿಸುವದು ಆಗುವದಿಲ್ಲವೆಂದು ರಾತ್ರಿ ಬಂದಿದ್ದೆ.

ಅಣ್ಣನ ಹಾಸಿಗೆ ದಿಂಬು ಮೂಲೆಯಲ್ಲಿ ಕಳೆಬರದಂತೆ ಬಿದ್ದಿದ್ದವು. ಅವನ ಬಟ್ಟೆಗಳನ್ನು ಹುಣಸೆ ಮರಕ್ಕೆ ಒಣ ಹಾಕಿದ್ದರು. ಅವನ ಚೆಪ್ಪಲಿ ಅನಾಥವಾಗಿ ನನ್ನನ್ನು ನೋಡುತ್ತಿದ್ದವು. ನನಗಿಂತಲೂ ಅವನ ಕಾಲು ಮೂರು ಇಂಚು ದೊಡ್ಡವು. ಎಲ್ಲಿಯಾದರೂ ಇವು ಅಣ್ಣನ ಚೆಪ್ಪಲಿ ಎಂದು ಗುರುತು ಸಿಗುತ್ತಿದ್ದವು. ಅವನು ಮಲಗುತ್ತಿದ್ದ ಜಾಗದಿಂದ ಮೈ ವಾಸನೆ ನನ್ನನ್ನು ಅಪ್ಪಕೊಂಡಿತು. `ಅಯ್ಯೋ... ಅಣ್ಣಾ... ಹಿಗೇಕೆ ಮಾಡಿದೆ...’ ಎಂದು ಚೀರಬೆಕೆನಿಸಿತು. ಗಂಟಲು ಬಿಗಿಯಾಗಿ ಉಸಿರು ಹೊರ ಬರಲಿಲ್ಲ. ಅವನ ಇಡೀ ಆಕಾರ ಕಣ್ಣ ಮುಂದೆ ಬಂದು ಕಣ್ಣೀರು ಧಾರಕಾರವಾಗಿ ಹರಿದವು.

ಅಮ್ಮ ಒಳಗೆ ಮಲಗಿರಬೇಕೆಂದು ಬೇವಿನ ಮರದ ಕಟ್ಟಿಗೆ ಸುಮ್ಮನೆ ಕುಳಿತೆ. ಸುತ್ತಲು ನೋಡಿದೆ. ಎಲ್ಲೆಲ್ಲೂ ಬೆಳೆಗಳಿಗೆ ಔಷಧಿ ಹೊಡೆದು ಬಿಸಾಕಿದ ಡಬ್ಬಿಗಳು. ಪ್ರತಿ ಡಬ್ಬಿಯ ಮೇಲೆ ತಲೆಬುರುಡೆಯ ಚಿತ್ರ ಇತ್ತು. ಆ ಚಿತ್ರಗಳು ನನಗಾಗಿ ಕಾಯುತ್ತಿರುವಂತೆ ಎದ್ದು ಬಂದವು. `ಓ ನೀನು ಬಂದೆಯಾ ಹೊಸ ಜೀವ. ಬಾ ಬಾ... ನಮ್ಮನ್ನು ಕುಡಿ ನಮ್ಮಂತಾಗು. ಎಲ್ಲರನ್ನೂ ನಮ್ಮಂತೆ ಡಿಂಬಗಳನ್ನಾಗಿ ಮಾಡುವುದೇ ನಮ್ಮ ಗುರಿ.. ಆ....’ ಎಂದು ನನ್ನನ್ನು ನುಂಗಲು ಬರುತ್ತಿವೆ ಅನಿಸಿ ಅಲ್ಲಿಂದ ಎದ್ದು ಬಂದೆ.

ರಸಾಯಿನಿಕ ಔಷಧಿ ಸಿಂಪಡಿಸುವ ಗನ್ ಟ್ಯಾಂಕುಗಳನ್ನು ಹುಣಸೆಗಿಡದ ಕೆಳಗೆ ಸಾಲಾಗಿ ಜೋಡಿಸಿದ್ದರು. ಅದರಿಂದ ವಿಷ ಉಕ್ಕಿ ಹರಿದು ಬಂದಂತೆ ಭಾಸವಾಯಿತು. ವಿಷದ ನೆರಳು ಮನದ ಮುಂದೆ ಕುಣಿದು ಕುಪ್ಪಳಿಸಿತು. ನೋಡು ನೋಡುತ್ತಾ ಕಣ್ಣಿಗೆ ಕತ್ತಲು ಆವರಿಸಿತು. ಯಾರನ್ನಾದರು ಎಬ್ಬಿಸಬೇಕೆಂದು ಕಣ್ಣು ತೆರೆದೆ.

ಮೋಡದಿಂದ ಇಳಿದ ಬೆಳದಿಂಗಳಂತೆ ಅಮ್ಮ ಗಿಡ-ಗಂಟೆಯನ್ನೆಲ್ಲಾ ಒಗ್ಗೂಡಿಸಿ ಆಕಾಶದೆತ್ತರ ತೊಟ್ಟಿಲು ಮಾಡಿ ನನ್ನನ್ನು ಅಪ್ಪಿಕೊಂಡು ಮಗನೇ... ಮಗನೆ... ಸುಖವಾಗಿರಲು ಎಲ್ಲೋಗಿದ್ದೋ...ಬಾರೋ ನಿನ್ನನ್ನು ತೂಗುತ್ತೇನೆ. ಹಾಡುತ್ತೇನೆ. ನಲಿಸುತ್ತೇನೆ. ಸುಖ ನಿದ್ರೆಗೆ ಒಯ್ಯುತ್ತೇನೆಂದು ಅನಾಮತ್ತಾಗಿ ಎತ್ತಿಕೊಂಡು ತೊಟ್ಟಿಲಲ್ಲಿ ಮಲಗಿಸಿದಳು. ಆಕಾಶದೆತ್ತರಕ್ಕೆ ತೂಗಿದಳು. ನೋಡೋ...ನಿಮ್ಮಣ್ಣನನ್ನೂ ಹೀಗೆ ತೂಗಲಿಲ್ಲ...ತೂಗಲಿಲ್ಲ... ಎಂದು ಅಳಲು ಆರಂಭಿಸಿದಳು. ಆಕೆಯ ಕಣ್ಣೀರು ಕಡಲಾಗಿ ಹರಿದು ತೊಟ್ಟಿಲು ಮುಳಿಗಿ ತೇಲಿ ಹೋಗುತ್ತಿತ್ತು. `ಅಮ್ಮಾ... ನೀನು ಕಣ್ಣೀರುಗರೆಯದು ನಿಲ್ಲಿಸಮ್ಮ. ನಾನು ಕೊಚ್ಚಿಕೊಂಡು ಹೋಗ್ತೀನಿ...’ ಎಂದು ಚಿಟ್ಟನೆ ಚೀರಿದೆ.

ಅಪ್ಪ ತಮ್ಮ `ಯಾರದು ಯಾರದು’ ಎಂದು ಗಡಬಡಾಸಿ ಎದ್ದು ನನ್ನನ್ನು ನೋಡಿದರು. ಕ್ಷಣ ನಾನು ಹೌದು ಅಲ್ಲೋ ಎಂದು ನಂಬದಾದರು. ಎಂಟು ವರ್ಷಗಳ ಮೇಲೆ ನೋಡಿದ್ದು. `ಏ ನಿನ್ನ ಹೇಳಿ ಬರಬೇಕೋ ಬ್ಯಾಡ. ಒಮ್ಮೆಲೆ ಹೀಂಗ ಬಂದು ಕುಂತರಾ... ನಡಿ ನಡಿ ಮುಖ ತೊಳಕ ನಡಿ. ಅವನ ಹಣೆ ಬರಹದಲ್ಲಿ ಅಷ್ಟೇ ಬರದಿತ್ತು. ಏನು ಮಾಡೋದು’ ಎಂದು ಅಪ್ಪ ಮುಖಕ್ಕೆ ಅಂಗವಸ್ತç ಇಟ್ಟುಕೊಂಡು ಅಳಲು ಸುರುವು ಮಾಡಿದರು. ಅಪ್ಪ ಹೀಗೆ ಅತ್ತದ್ದು ನಾನು ನೋಡಿದ್ದು ಮೊದಲು. ಹೆತ್ತ ಕರುಳು ಏನು ಮಾಡಿತೂ... ಹೇಗೆ ಸಮಧಾನಿಸುವುದು. ಸುಮ್ಮನೆ ಮೂಕನಂತೆ ಕುಳಿತೆ. ತಮ್ಮ ನನ್ನನ್ನು ತಬ್ಬಿಕೊಂಡು ` ಅಣ್ಣಾ.....’ ಎಂದು ಕಣ್ಣೀರಿನಿಂದ ಎದೆ ತೋಯಿಸಿದ. ಗುಡಿಸಲು ಒಳಗಿದ್ದ ಅತ್ತಿಗೆ ಹೊರಗ ಬಂದು ನನ್ನನ್ನು ನೋಡುತ್ತಾ ಸುಮ್ಮನೆ ನಿಂತಳು. ಅತ್ತೂ ಅತ್ತೂ ಕಣ್ಣಲ್ಲಿ ನೀರು ಬತ್ತಿ ಬಿಳಿಪೇರಿದ್ದವು. ಮುಖದಲ್ಲಿ ಬೆಳ್ಳಗೆ ಕಣ್ಣೊಂದೆ ಕಾಣುತ್ತಿದ್ದವು. ರ‍್ರಗೆ ಕಣ್ಣುಗುಡ್ಡೆಗಳು ನಿಸ್ತೇಜವಾಗಿ ನಿತ್ರಾಣಗೊಂಡಿದ್ದವು. ದುಃಖ ಒತ್ತಿ ಹಿಡಿದಿದ್ದರಿಂದ ಗಂಟಲ ನರಗಳು ಉಬ್ಬಿರುವುದು ಕಾಣುತಿತ್ತು. ಜೋರಾಗಿ ಅಳಬೇಕೆಂದರೂ ಧ್ವನಿ ಬರುತ್ತಿರಲಿಲ್ಲ. ಧ್ವನಿ ಉಸಿರನ್ನೇ ಕಳೆದುಕೊಂಡಿತ್ತು. ನಾನು ಕೈ ಮುಗಿದು ಸುಮ್ಮನೆ ತಲೆ ತಗ್ಗಿಸಿ ಕುಳತೆ.

ಅಮ್ಮ ಕಾಣುತ್ತಿರಲಿಲ್ಲ ಎಲ್ಲಿಯಂತ ನೋಡುತ್ತಿದ್ದೆ. `ನಿಮಮ್ಮ ಎಷ್ಟು ಹೇಳಿದರಾ ಕೇಳವಲ್ಲುಲಪಾ...ಅಲ್ಲೇ ಸಮಾಧಿತಕ ಹೋಗಿ ಕುಂತುಬುಡ್ತಾಳ.’ ಎಂದು ಅಪ್ಪ ಸಮಾಧಿ ಕಡೆ ಕೈ ತೋರಿಸಿದ. ಗುಡಿಸಿಲಿಂದ ಸ್ವಲ್ಪ ದೂರದಲ್ಲಿ ಬಿಲ್ವಪತ್ರೆ ಗಿಡ ಇತ್ತು. ಅಲ್ಲಿ ಅಜ್ಜಿಯ ಸಮಾಧಿಯಿತ್ತು. ಅಲ್ಲೇ ಅಣ್ಣನನ್ನು ಸಮಾಧಿ ಮಾಡಿದ್ದರು. ನನಗೆ ಆ ಕಡೆ ನೋಡಲು ಭಯವಾಯಿತು.

`ಹೋಗಪ್ಪಾ ಹೋಗು. ನಿಮಮ್ಮನ ನೋಡು. ಎರಡು ದಿನದಿಂದ ಊಟಿಲ್ಲ ನಿದ್ದಿಲ್ಲ. ಎಷ್ಟೂ ಸಮಧಾನ ಮಾಡಿದರೂ ಸುಮ್ಮನಾಗವಲ್ಲಳು. ಅತ್ತೂ ಅತ್ತೂ ಕಣ್ಣೂ ಕತ್ತರಿಸಿ ಬೀಳಂಗ ಆಗ್ಯಾವ. ಬಂದದ್ದೂ ಅನುಭವಿಸಬೇಕು’ ಎಂದು ನನ್ನ ಕೈ ಹಿಡಕಂಡು `ಬೆಳದ ಮಗ ಕಣ್ಣೆದುರಿಗೆ ಹೀಂಗಾದನಲ್ಲಾ. ನೆನಿಸಿಗಂಡರ ಹೊಟ್ವ್ಯಾಗಾ ಬೆಂಕಿ ಬಿದ್ದಾಂಗ ಆತದ. ಇದೆಲ್ಲಾ ನೋಡಾಕ ದೇವರು ನಮ್ಮನ್ನು ಉಳಿಸ್ಯಾನಪ್ಪಾ....’ ಎಂದು ಇನ್ನಷ್ಟೂ ಕೈಯನ್ನು ಒತ್ತಿ ಹಿಡಿದರು. ಅಪ್ಪನ ಕಣ್ಣೀರು ನನ್ನ ಅಂಗೈಯನ್ನು ತೋಯಿಸುತ್ತಿತ್ತು.

ಊರು ಕಡೆಯಿಂದ ಆಕ್ರಂದನ ತುಂಬಿದ ಅಳುವ ಧ್ವನಿ ಗಾಳಿಯಲ್ಲಿ ಅಲೆ ಅಲೆಯಾಗಿ ಕರುಳಿರಿವಂತೆ ಬರುತಿತ್ತು. `ಅಂಜಿನಪ್ಪ ಹೋದ್ನಂತಪ್ಪಾ. ಹತ್ತಿಗೆ ಹೊಡಿಯೋ ಔಷಧ ಪೂರಾ ಒಂದು ಬಾಟಲಿ ಕುಡಿದನಂತ. ಹೋದ ಸಾರಿ ಹತ್ತಿ ಬೆಳೆಪೂರಾ ಲಾಸ್ ಆಗಿತ್ತು. ಶೆಟ್ಟಿ ಹತ್ತಿರ ಒಂದು ಹತ್ತು ಲಕ್ಷö್ಯ ಸಾಲ ಇತ್ತು. ಈ ವರ್ಷ ಹತ್ತಿ ಬೀಜ ಊರಿದ. ಮಳೆ ಕೈ ಕೊಟ್ಟತು. ಬೀಜ ಮೊಳಿಕೆನೆ ಹೊಡಿಲಿಲ್ಲ. ಇನ್ನೂ ನನ್ನ ಸಾಲ ತೀರಸದಿಲ್ಲ ನೀನು ಹೊಲ ಬರೆದು ಕೊಡೆಂದು ಶೆಟ್ಟಿ ದಿನಾ ಮನಿಗೆ ಆಳುಗಳನ್ನ ಕಳಿಸುತ್ತಿದ್ದನಂತ. ಅದಕ್ಕ ಇನ್ನಾ ಸಾಲ ತೀರಸಾಕ ಆಗಾದಿಲ್ಲಂದು ವಿಷ ಕುಡುದ್ನಂತ’ ಎಂದು ತಮ್ಮ ಹೇಳಿದ. `ಈ ವರ್ಷದಾಗ ಐದು ಜನಾಯ್ತು ಸಾಯಾಕ. ಎಲ್ಲಾರು ಹೊಲಕ್ಕ ಹೊಡ್ಯಾಕ ತಂದ ವಿಷೌಷಧ ಕುಡಿದೇ ಸತ್ತರು.’ ಎಂದು ತಮ್ಮ ಎಮ್ಮೆಗಳಿಗೆ ಮೇವು ಹಾಕಲು ಹೋದ.

ರಾತ್ರಿ ಎರಡು ಗಂಟೆಯಾಗಿರಬೇಕು ಚೆಂದ್ರ ಕೆಳಗೆ ಇಳಿಯುತ್ತಿದ್ದ. ಪೂರ್ಣ ಬೆಳದಿಂಗಳು ಇದ್ದುದರಿಂದ ಬೆಳಕು ಇತ್ತು. ಅಮ್ಮನ ಮುಖವೂ ಬೆಳದಿಂಗಳಂತೆ ಪೂರ್ಣ ದುಂಡು ಮುಖ. ಹೊಳೆಯುವ ಕಣ್ಣುಗಳು. ಎಲ್ಲವನ್ನು ಸಂತೈಯಿಸುವ ಮುಖಭಾವ. ಏನು ಬಂದರೂ ನುಂಗಿಕೊಂಡು ಸಂಸಾರವನ್ನು ಸಂಭಾಳಿಸಿದ ಮಹಾಮಾತೆ. ಅಣ್ಣನು ಅಮ್ಮನಂತೆ. ಅಮ್ಮನಿಗೆ ತುಂಬಾ ಪ್ರೀತಿಯ ಮಗ. ನಮ್ಮನ್ನು ಎಷ್ಟೇ ಪ್ರೀತಿ ಮಾಡಿದರೂ ಮೊದಲ ಆದ್ಯತೆ ಅಣ್ಣನಿಗೆ. ಅಣ್ಣ ಸದಾ ಅಮ್ಮನ ಜೊತೆಗೆ ಇರಬೇಕು. ಅಮ್ಮನಿಗೆ ಅವನನ್ನು ಬಿಟ್ಟಿರಲು ಆಗುತ್ತಿರಲಿಲ್ಲ. ಈಗೆಷ್ಟೂ ತಾಪ ಪಡುವಳೋ ದೇವಾ......ಹೇಗೆ ಸಂತೈಯಿಸುವದು ಕಾಲು ಮೇಲೇಳುತ್ತಲೇ ಇಲ್ಲ. ಬಾಯಿ ಒಣಗಿ ನೀರು ಕುಡಿಯಬೇಕೆನಿಸಿತು. ಗುಡಿಸಲು ಒಳಗೋಗಿ ಗಡಿಗಿಯಲ್ಲಿದ್ದ ನೀರು ತುಂಬಿಕೊಂಡು ನೀರು ಬಾಯಿಗಿಟ್ಟೆ. ವಿಷ ತಗುಲಿದಂತಾಯಿತು. ಮದಲಿನ ರುಚಿ ನೀರಿಗೆ ಇರಲಿಲ್ಲ. ಎಂಟು ವರ್ಷದಲ್ಲಿ ನೀರಿನ ರುಚಿ ಬದಲಾಗಿತ್ತು. ಹೊರಗೆ ಬಂದೆ. ನಾನು ಮುಖ ಕಿವಿಚಿಕಂಡದ್ದನ್ನು ನೋಡಿದ ಅಪ್ಪ `ಇಲ್ಲಪ್ಪಾ ಈಗ ಮೊದಲಿನಂಗ ನೀರಿಲ್ಲ. ಎಲ್ಲಾ ಕೆಟ್ಟು ಹೋಗ್ಯಾವ. ಕುಡುದರ ನಂಜು ಕುಡುದಂಗ ಆತದ. ಏನು ಮಾಡಬೇಕು. ನೀರೆ ಹೀಂಗಾದರ ಏನು ಕುಡಿಬೇಕಪ. ನಮಗಂತು ರೂಢಿ ಆಗ್ಯಾದ. ಅಮ್ಮನ ಮಾತಾಡಸು ನಡಿ’ ಎಂದ ಅಪ್ಪನ ಕಾಲುಗಳು ಸ್ವಲ್ಪ ಸೊಟ್ಟ ಆಗಿದ್ದವು. ಕಾಲು ಅಗಲಿಸಿ ನಡೆಯುತ್ತಿದ್ದ. ಹೆಜ್ಜೆ ಕಿತ್ತಿಡಲು ಕಷ್ಟ ಪಡುತ್ತಿದ್ದ. ಮುಖ ಮುಚ್ಚಿಕೊಂಡು ದುಃಖಿಸುತ್ತಿದ್ದ ಅತ್ತಿಗೆಯ ನೆರಳು ಕಣುತ್ತಿತ್ತು.

ಗುಡಿಸಲು ಪಕ್ಕ ಇನ್ನೊಂದು ಸಣ್ಣ ಗುಡಿಸಲು ಕಟ್ಟಿದ್ದರು. ಮೊದಲು ಅಲ್ಲಿ ಸಣ್ಣ ಹೂವಿನ ತೋಟವಿತ್ತು. ಕನಕಾಂಬರಿ, ಮಲ್ಲಿಗಿ, ಚಂಡೆ, ದಾಸವಾಳ, ಕಣಗಲೆÀ ಹೂಗಳು ಅರಳಿರುತ್ತಿದ್ದವು. ಅಪ್ಪ ಅವೆ ಹೂಗಳಿಂದ ದೇವರಿಗೆ ಪೂಜೆ ಮಾಡುತ್ತಿದ್ದ. ಆ ಸಣ್ಣ ಗುಡಿಸಲು ಕಡೆ ನೋಡಿದೆ. `ಅದನ್ನೇನು ನೋಡುತ್ತೆಪಾ. ಅದ್ರಾಗ ಹೊಲಕ್ಕ ಹೊಡಿಯೋ ಔಷಧಿ ತುಂಬಿಟ್ಟಾರ. ಈ ಔಷಧಿ ಇಲ್ಲಿ ತುಂಬಿಡುಬ್ಯಾಡರೋ ಎಲ್ಲಾö್ಯರ ಸುಡುಗಡದಾಗ ಇಡರಿ. ಅದರ ವಾಸನಿ ನನಗ ಆಗದಿಲ್ಲಂದೆ. ಅಯ್ಯೋ ಅವು ಸಾವಿರಾರು ರುಪಾಯಿ ಬಾಳವು. ನಮ್ಮ ಕಣ್ಣು ಎದುರಿಗೆ ಇರಬೇಕು. ಯಾರನ ತಗಂಡ ಹೋತರಂದು. ಆ ಹೂವಿನ ತೋಟ ಕೆಡಿಸಿ ಈ ಗುಡುಸಲು ಕಟ್ಟಿದರು. ಅದ್ರಾಗ ಹತ್ತಿ, ಮೆಣಸಿಕಾಯಿ, ತೊಗರಿ, ತರಕಾರಿ ಎಲ್ಲಾ ಬೆಳೆಗಳಿಗೆ ಹೊಡಿಯೋ ಔಷಧಿ ತುಂಬಿಟ್ಟಾರ. ಅದೊಂದು ವಿಷದ ಕೊಠಡಿ ಆಗ್ಯಾದ. ಈ ಸುಡುಗಾಡು ವಿಷ ಹಾಕಲಾರದ ಯಾವ ಬೆಳೆನು ಬೆಳೋದಿಲ್ಲ. ಈ ಔಷಧಿ ಮಾರೋ ಚೆನ್ನಪ್ಪ ಊರಾಗೊಂದು, ರಾಯಚೂರಗೊಂದು ಕೋಟಿ ರೂಪಾಯಿ ಮನೆ ಕಟ್ವ್ಯಾನ. ಆತನ ಈಗ ಊರಿಗೆ ಧನವಂತ. ನಮ್ಮದು ಆತನತ್ರ ಬೇಕಾದಷ್ಟೂ ಸಾಲ ಐತಿ. ಈ ವಿಷ ಕೊಂಡುಕೊಳ್ಳಾಕ ಸಾಲ ಮಾಡೀವಿ’ ನಿಧಾನಕ್ಕೆ ಹೆಜ್ಜೆ ಕಿತ್ತಿಟ್ಟು ಮುಂದಕ್ಕೆ ನಡೆದ. ನಾನು ಆತನ ನೆರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟೆ.

ಅಮ್ಮ ಬಿಲ್ವಪತ್ರೆ ಮರದ ಕೆಳಗಿದ್ದ ಅಣ್ಣನ ಸಮಾಧಿ ಮೇಲೆ ಮಲಗಿದ್ದಳು. ಸುಟ್ಟ ಕಟ್ಟಿಗೆಯಂತಾಗಿದ್ದಳು. ಕಣ್ಣಲ್ಲಿ ಜೀವ ಹಿಡಿದಂತೆ ಇದ್ದಳು. ಕಣ್ಣಲ್ಲಿ ಪಿಚ್ಚು ತುಂಬಿತ್ತು. ಕೈ ಕಾಲು ಸೆಟೆದುಕೊಂಡಿದ್ದವು. ಒಣ ಬೋಕಿಯಂತೆ ಮಲಗಿದ್ದಳು. ಬೆಳದಿಂಗಳಂತ ಅಮ್ಮ ಎಂಟು ವರ್ಷಗಳಲ್ಲಿ ಬಿರುಕು ಬಿಟ್ಟ ನೆಲದಂತಾಗಿದ್ದಳು. ನನ್ನಿಂದ ನೋಡಲಾಗಲಿಲ್ಲ. ಕರುಳು ಕಿತ್ತಿ ಬಂದಂತಾಯಿತು. ರಕ್ತ ಬತ್ತಿದ ದೇಹದಂತಾದೆ. ಒಮ್ಮಲೇ ದುಃಖ ಒತ್ತರಿಸಿಕೊಂಡು ಬಂತು. `ಅಮ್ಮಾ...’ ಎಂದು ಬಾಚಿ ತಬ್ಬಿಕೊಂಡೆ. ಮಾತಾಡಲು ಉಸಿರಿಲ್ಲದಂತಾಗಿದ್ದ ಅಮ್ಮ ಪಿಳಿ ಪಿಳಿ ಕಣ್ಣುಬಿಟ್ಟು ನೋಡಿದಳು. ನನ್ನ ನೋಡಿದ್ದೆ ಜೀವ ಸಂಚಾರವಾದಂತೆ ನನಗಾಗಿ ಕಾದು ಕುಳಿತವಳಂತೆ `ಅಯ್ಯೋ... ಮಗನೆ ಬಂದೆಪ್ಪಾ... ನೋಡೋ ನಿಮ್ಮಣ್ಣನ ... ಕಣ್ಣು ಮುಂದನೆ ಹೆಣಾಗಿಬಿಟ್ಟನಪ್ಪೋ. ನೋಡೋ ಈ ಬಾಟಲಿ... ಯಾ ದೇಶದ್ದೋ... ಯಾರ ಮಾಡ್ಯಾರೋ... ಇಷ್ಟು ಗಟ ಗಟ ನೀರು ಕುಡುದಂಗ ಕುಡುದು ಕಣ್ಣು ಮುಚ್ಚಿದನಪ್ಪೋ... ಇಂತ ಕಾರ್ಕೋಟ ವಿಷ ಹೆಂಗ ಕುಡುದನನಪ್ಪೋ... ಅಷ್ಟೇನೂ ತಾಪ ಆಗಿತ್ತೋ ಶಿವನೇ...ಕತ್ತೆ ದುಡುದಂಗ ದುಡಿತ್ತಿದ್ದನಪ್ಪಾ... ಭೂಮಿತಾಯಿ ಕಣ್ಣು ತೆರದು ಬೇಕಾದಷ್ಟೂ ಕೊಟ್ಟುಲಪ್ಪೋ... ಇಲ್ಲೇ ರಾಶಿ ರಾಶಿ ಬಿದ್ದಾವ ನೋಡಪ್ಪೋ... ನಮ್ಮ ಬೆಳೆ ವಿಷವುಂಡಾವಂತೇಳಿ ಯಾರು ತಗವಲ್ಲರಂತಪ್ಪೋ... ಹಿಂಗಾದರ ಹೆಂಗಪ್ಪೋ...’ ಎಂದು ನಿತ್ರಾಣಾಗಿ ನೆಲಕ್ಕ ಬಿದ್ದಳು. ` ಅಮ್ಮಾ ಅಳುಬ್ಯಾಡಮ್ಮೋ ನಾನು ಬಂದೀನಿ’ ಎಂದು ತೊಡೆ ಮೆಲೆ ಮಲಗಿಸಿಕೊಂಡೆ. `ಸ್ವಲ್ಪ ನೀರು ಕುಡೆಮ್ಮೋ’ ಎಂದು ಮುಖದ ಮೇಲೆ ನೀರು ಹಾಕಿದೆ. ನೀರು ಬಿದ್ದದಕ್ಕೆ ಸ್ವಲ್ಪ ಅರೆಗಣ್ಣು ಬಿಟ್ಟಳು. ನಾಲ್ಕು ಗುಟುಕು ನೀರು ಕುಡಿದಳು. ಅಪ್ಪ ಅಮ್ಮನ ಕಾಲುಗಳನ್ನು ತೊಡೆ ಮೇಲೆ ಇಟ್ಟುಕೊಂಡು ತಿಕ್ಕಿದ. ಊಟ ನೀರು ನಿದ್ದೆ ಇಲ್ಲದೆ ಹೊಟ್ಟೆ ಬೆನ್ನಿಗತ್ತಿತ್ತು. ` ಅಯ್ಯೋ...ಮಗನೇ ಎಂತ ಗತಿ ಬಂತಪ್ಪಾ...ಇದೆಲ್ಲಾ ನೋಡಾಕ

ನಾವು ಇರುಬೇಕನಪಾ... ದೇವರೇ ನಮ್ಮ ಜೀವ ತೆಗಿಬಾರದೇ...’ ಎಂದು ಅಳುವ ಶಕ್ತಿ ಇಲ್ಲದೆ ಕೋತಿ ಮರಿಯಂತೆ ನನ್ನನ್ನು ಅಪ್ಪಿಕೊಂಡಳು. ಅಪ್ಪ ಅಲ್ಲೇ ಕಲ್ಲಿನ ಮೆಲೆ ಕುಂತುಗಂಡ. ಬೆಳದಿಂಗಳು ನಿಧಾನಕ್ಕೆ ಸರಿಯುತ್ತಿತ್ತು. ಚುಕ್ಕೆಗಳು ಮಿಣಿಮಿಣಿ ಮಿಣುಕುತ್ತಿದ್ದವು. ಒಂದೊಂದು ಮೋಡದಿಂದ ಉದುರಿ ಬೀಳುತ್ತಿದ್ದವು. ಗಿಡಗಳು ಉಸಿರುಗಟ್ಟಿದಂತೆ ನೀಂತಿದ್ದವು. ಅತ್ತಿಗೆ ತಮ್ಮ ಬೆಂಕಿಯಲ್ಲಿ ಬಿದ್ದಂತೆ ಚಡಪಡಿಸುತ್ತಿದ್ದರು. ಮೂಕರೋದನ ಮಳೆಗರೆಯುತ್ತಿತ್ತು. ವಾತವರಣ ರವಗುಡುತ್ತಿತ್ತು.

ಅಪ್ಪ ಮೆಲ್ಲನೆ ಮಾತು ತೆಗೆದ. `ನೀನು ದೂರಿದ್ದಿ ಅಂತ ನಿನಗ ಏನು ಹೇಳಲಿಲ್ಲಪಾ. ನಮ್ಮ ತಿಪ್ಪಲ ನಮಗಂತ ಸುಮ್ಮನಿದ್ದಿವಿ. ಮೂರು ನಾಕು ವರ್ಷದಿಂದ ಸರಿಗಿ ಮಳೆಯಿಲ್ಲ ಬೆಳೆಯಿಲ್ಲ. ಈ ಐದು ಎಕರೆ ಹೊಲದಾಗ ದುಡಿಬೇಕು ಜೀವನ ಸಾಗಿಸಬೇಕು. ಎಲ್ಲಾರು ದುಡುದಿವಿ. ದುಡುದುದ್ದೆಲ್ಲಾ ಮಣ್ಣಾಯಿತು. ಈ ಸುಡುಗಾಡು ಮೆಣಸಿಕಾಯಿ, ಆಲೂಗಡ್ಡೆ, ಹತ್ತಿ, ಉಳ್ಳಾಗಡ್ಡಿ, ತೊಗರಿ ಬೆಳ್ಯಾಕ ಸುರುವು ಮಾಡಿದ ಮ್ಯಾಲ ನಮ್ಮ ಜೀವನ ಮೂರಾ ಬಟ್ಟೆ ಆಯಿತು. ಅವುಕ್ಕ ಗಿಡ ಮುಳುಗಷ್ಟೂ ಔಷಧಿ ಹೊಡಿಬೇಕು. ಇಲ್ಲಂದ್ರ ಬೆಳಿ ಬರೋದಿಲ್ಲ. ಆ ಔಷಧಿ ತುಟ್ಟಿ ಅಂದ್ರ ತುಟ್ಟಿ. ಎಲ್ಲಾ ಸಾಲ ಮಾಡಿಯೆ ತರಬೇಕು. ನಿಮ್ಮಣ್ಣನೇ ಎಲ್ಲಾ ಮಾಡುತ್ತಿದ್ದ. ಸಾಲ ಬಡ್ಡಿ ಬೆಳೀತು. ನಮಗೂ ಗೊತ್ತಾಲಿಲ್ಲ. ಚೆನ್ನಪ್ಪ ಸಾಹುಕಾರ ಮನಿಗೆ ಬಂದು ನನಗ ಹತ್ತು ಲಕ್ಷ ಸಾಲ ಬರಬೇಕು. ಹೊಲನ ಬರದು ಕೊಡ್ರಿ ಇಲ್ಲ ಸಾಲನ ಕೊಡ್ರಿ’ ಎಂದಾಗ ಇಷ್ಟೂ ಸಾಲ ಆಗ್ಯಾದ ಅಂತ ಗೊತ್ತಾದದ್ದು. ಆಯಿತು ಬೆಳೆ ಬಂದು ಮ್ಯಾಲೆ ತೀರುಸ್ತೀವಿ ಅಂದಿವಿ. ನೀನೆ ನೋಡುತ್ತಿದ್ದಿ. ಮನಮನಿ ಆಲೂಗಡ್ಡೆ ಈರುಳ್ಳಿ, ಟಮಟೆ ಬೆಳದೀವಿ. ಅವುಕ್ಕ ಬೆಲೆ ಇಲ್ಲ. ಯಾರು ಕೇಳೋರು ದಿಕ್ಕಿಲ್ಲ. ಕಣ್ನೆದುರಿಗೆ ಕೊಳತು ಹೋಗಾಕತ್ತಿದವು. ಇವು ನೋಡಿ ನಿಮ್ಮಣ್ಣ ಕಂಗಲಾದ. ಚೆನ್ನಪ್ಪ ದಿನಾ ಬಂದು `ಹೊಲ ಬರೆದು ಕೊಡ್ರಿ. ಇನ್ನಾ ನಿಮ್ಮಿಂದ ಸಾಲ ತೀರುಸಾಕ ಆಗಾದಿಲ್ಲ’ ಎಂದು ಪಿಡಿಸಿದ. ಇದರಿಂದ ಮಂದಿಗಿ ಮುಖ ನಿಮ್ಮಣ್ಣ ತೋರಿಸಲಾರದಂಗಾತು. ಮನ್ಯಾಗ ಮಂಕು ಕವಿದ ಕುಂತ. `ಅಪ್ಪ ಅಮ್ಮ ದುಡದು ಗಳಿಸಿದ ಹೊಲ ಮಾರೋ ಪರಸ್ಥಿತಿ ಬಂತಲ್ಲಾ’ ಎಂದು ಮರುಗೇ ಮರುಗಿದ. ಏನನಿಸಿತೋ ಮನ್ನೇ ಮುಂಜಾನೆ ಹತ್ತಿಗೆ ಹೊಡಿಯೋ ಔಷಧಿನ್ನ ಕುಡುದುಬುಟ್ನಪ್ಪಾ. ಊರಾಗ ಒಬ್ಬರಿಂದ ಒಬ್ಬರು ಹೀಂಗ ಸಾಯಕತ್ಯ್ರಾರ ಏನು ಮಾಡದಪ್ಪಾ...’ ಎಂದು ಆಕಾಶದ ಕಡೆ ನೋಡುತ್ತಾ ಕುಳಿತರು. ಅಮ್ಮ ನನ್ನನ್ನು ಮತ್ತಷ್ಟೂ ಬಿಗಿಯಾಗಿ ಅಪ್ಪಿಕೊಂಡಳು.

ಜೋಬಲ್ಲಿದ್ದ ಮೊಬೈಲ್ ರಿಂಗಾಯಿತು. ಅಮೇರಿಕಾ ಬಿಟ್ಟಾಗಿನಿಂದಲೂ ಹೆಂಡತಿಗೆ ಕರೆ ಮಾಡಿರಲಿಲ್ಲ. `ಏನ್ರಿ ವಿಲೇಜ್ ಹೆಂಗಾದ. ಅಪ್ಪ ಅಮ್ಮ ಬಾಳ ಹೈರಾಣಾಗಿರಬೇಕು. ಏನು ಮಾಡೋದು ನಾನು ಹೊರಡಬೇಕಂದರ ಆಫೀಸ್ ಕೆಲಸ. ಇಬ್ಬರು ರಜೆ ಹಾಕಿದರ ಕಷ್ಟಲಾ. ನಾನರ ಬಂದು ಏನು ಮಾಡುತಿದ್ದೆ. ಇವತ್ತು ಬ್ರೋಕರ್ ಬಂದಿದ್ದ. ಆ ಮನೆಯನ್ನ ಹತ್ತು ಕೋಟಿಗಿಂತಲೂ ಕಡಿಮೆ ಮಾಡದಿಲ್ಲಂತಾನ. ನನಗಂತೂ ಆ ಮನೆ ಬಾಳ ಇಷ್ಟ ಆಗ್ಯಾದ. ಇನ್ನೊಂದೆರಡು ವರ್ಷ ದುಡುದುರಾ ಸಾಲ ಮುಟ್ಟುತದಾ. ಆಮ್ಯಾಲ ಮಕ್ಕಳ ಮಾಡಿಕಂಡು ಇಲ್ಲೆ ಆರಾಮ ಇದ್ದರಾಯಿತು. ಹೇಗೋ ಗ್ರೀನ್ ಕಾರ್ಡ ಸಿಗುತ್ತಾ. ಅದಕ್ಕ ಎರಡು ಕೋಟಿ ಅಡ್ವಾನ್ಸ ಕೊಟ್ಟೆ. ನೀವು ಬಂದು ಮ್ಯಾಲ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳೋಣ.’ ಎಂದು ಹೆಂಡತಿ ಉಸಿರು ಬುಡದಂತೆ ಮಾತಾಡಿದಳು. ನಾನು ಮತ್ತಷ್ಟೂ ಅಮ್ಮನ್ನೂ ಅಪ್ಪಿಕೊಂಡು ಹೆಣದಂತೆ ಕುಂತುಕೊಂಡೆ.

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಈ ತನಕ ಪ್ರಕಟಿಸಿದ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ 2019ನೇ ಸಾಲಿನ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಸಂದಿದೆ.

More About Author