Poem

ಕ್ಷಮಿಸಿಬಿಡು

ಬುದ್ಧ
ಅದೆಷ್ಟು ನೀನು
ಅರ್ಥವಾಗಿರುವೆ ಇಲ್ಲಿ
ಹೀಗೆಂದರೆ
ನನ್ನೊಂದಿಗೆ ವಾದಕ್ಕೆ
ಇಳಿಯುವವರು ಇದ್ದಾರೆ...

ಚಿತ್ರಿಸುತ್ತಿದ್ದಾರೆ ನಿನ್ನ
ನಗು ಮರೆತು
ಬಣ್ಣಗಳನ್ನ ಅಲಂಕರಿಸಿ
ಬರೆಯುತ್ತಿದ್ದಾರೆ
ನಿನ್ನ ಮೌನ ಮರೆತು
ಉಪಮೆಗಳನ್ನ ತುಂಬಿಸಿ.

ಏಕಾಏಕಿ ಎದ್ದು
ಹೋದ ಬಗೆಯ ಬಗ್ಗೆ
ಒಂದಿಷ್ಟು ಪ್ರಶ್ನೆಗಳು
ಎಸೆಯುವವರಿಗೆ
ನೀನು ಏನನ್ನ ಪಡೆಯಲು
ಹೊರಟ್ಟಿದ್ದೆ ಎನ್ನುವುದೂ
ಇಂದಿಗೂ ತಿಳಿದಿಲ್ಲ‌ ನೋಡು.

ಕತ್ತಲಲ್ಲಿ ಸಿಕ್ಕಿದ್ದನ್ನ
ಬೆಳಕಿನಲ್ಲಿ ಕಳೆದುಕೊಂಡು
ಹುಡುಕುವವರಿಗೆ
ನಿನ್ನ ನೆರಳು ಕಾಣಲು
ಹೇಗೆ ಸಾಧ್ಯ .

ನೀನೇ ಹೇಳು...?

ಅನುಮತಿ ಇಲ್ಲದೆ
ನಿನ್ನ
ಹೆಸರು ಬಳಸಿದ್ದಕ್ಕೆ
ಕ್ಷಮಿಸಿಬಿಡು ನನ್ನನ್ನು.

-ಗುರು ಹಿರೇಮಠ

ಗುರು ಹಿರೇಮಠ

ಕವಿ ಗುರು ಹಿರೇಮಠ ಅವರು ಕಾವ್ಯರಚನೆಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಪ್ರಸ್ತುತ ಕಾವ್ಯ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author