Poem

ಕ್ಷಣವೆಂಬ ಮುತ್ತುಗಳ ಪೋಣಿಸಿರುವೆ!

ಕಲ್ಪನೆಯ ದಾರಿಗೆ, ಕೂಡಿಟ್ಟ ಸ್ವಪ್ನಗಳು,
ಕಂಕಣವ ಕಟ್ಟಿ, ಕನಸ ಧಾರೆಯೆರೆದು,
ಮುತ್ತಿನ ತೋರಣದಿ ಅಂತರಂಗವ ಸಜ್ಜುಗೊಳಿಸಿ,
ಅಂತರ್ಗಾಮಿಯೆಡೆ ತಂದೆನ್ನ ನಿಲ್ಲಿಸಿವೆ.

ಕಾಯುವ ಮುನ್ನ ತಲುಪುವ ಗುರಿಯಂತೆ,
ಯೋಚನೆಗಳಿಗೂ ಮುನ್ನ ಗತಿಸುವ ಘಟನೆಯಂತೆ,
ಅಸ್ಪಷ್ಟತೆಯಲ್ಲಿನ ಸ್ಪಷ್ಟತೆಯ ದರ್ಶಿಸಿ,
ಆರಂಭದಲ್ಲಿಯೇ ಅಂತ್ಯಗಾಲದ ರಾಗವ ಹಾಡಿದೆ.

ಉತ್ತರಿಸಿದಷ್ಟೂ ಸಿಗುವ ಪ್ರಶ್ನೆಗಳಂತೆ,
ಅರಳಿದಷ್ಟೂ ಚಾಚುವ ಗಗನದಂತೆ,
ಕಂಡಷ್ಟೂ ಕಾಣದ ಸಾಗರದಾಳದಂತೆ,
ವ್ಯೂಹದ ಚಕ್ರದೆಡೆ ತಲುಪಿಸಿವೆ.

ಉಸಿರು ಮೆಲ್ಲನೆ ಮಾತಾಡಿದಾಗ,
ಮಾತಿನ ಸಾಲುಗಳು ಮೂಕವಾದಾಗ,
ಶಬ್ದವೂ ವಿವರಿಸದ ಭಾವಾಂತರಂಗವ,
ಸಂವೇದನೆಗಳು ತಿಳಿಸಿದಂತಾಗಿದೆ.

ತಮವ ತೊಡೆದ ಹೊನಲಂತೆ,
ಹರಿವ ಮುನ್ನ ಓದಿಬಿಡಲೇ ನಾ?
ಬಾಳೆಂಬ ರಂಗಮಂದಿರದೊಳು,
ನಟನಾಗಿ ರಚಿಸಿದ ಪುಸ್ತಕದ ಹಾಳೆಗಳ.
ಓ ಬದುಕೇ, ಎನಗೆಂದು ನೀ ಕಾದಿರಲು,
ಬರುತಲಿರುವೆ ಓಡಿ, ತುಸು ದೂರದಲ್ಲಿಯೇ ಇರುವೆ,
ನೀನೇ ಕಟ್ಟಿ ಬೀಳಿಸುತಿರುವ,
ನೆನಪಿನಂಗಳದ ನಾಯಕನ ಕಥೆಯ ಓದುತ ನಿಂತಿರುವೆ.

ಜಗದೊಳು ಆಡಿಸುವ ಆಟಗಾರ ನೀನು,
ನಿನ್ನ ಕೈಯೊಳು ಬಂಧಿಯಾದ ಸೂತ್ರದ ಬೊಂಬೆ ನಾನು,
ಬಂದಿರುವುದು ಬರಿಗೈಲಿ ಅಲ್ಲವೇ?
ನಿನ್ನೆಡೆಗೆ ಧಾವಿಸುತಿರುವುದು ಬರಿಗೈಲಲ್ಲವೇ?

ಗರಡಿಮನೆಗೆ ಗುರುವು ನೀನಾಗು,
ಹುರಿಗೊಂಡ ಯುದ್ಧಪಟುವು ನಾನಾಗುವೆ?
ಭ್ರಮೆಯೆಂಬ ಸತ್ಯದಲ್ಲೇ ನಾ ಬದುಕಿದರೂ,
ಕ್ಷಣವೆಂಬ ಮುತ್ತುಗಳ ಪೋಣಿಸಿರುವೆ!

ಸೋಮೇಶ್ವರ ಆರ್ ಗುರುಮಠ

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author