Poem

ಖುಷಿಯೊಂದು ಕಳೆದಿದೆ

ಎಲ್ಲಿಯೋ ಕಳೆದಿದೆ ನಮ್ಮಯ ಖುಷಿ
ಇನ್ನೆಷ್ಟು ಸಮಯ ಮಂಜೂರಾತಿಗೆ?
ಇಲ್ಲಿಯೇ ಕಾದಿದೆ ನಮ್ಮೊಳಗೆ ನೋವು
ಮರುಕಳಿಸಿ ಮತ್ತೊಂದು ಹಾಜರಾತಿಗೆ.

ಬದುಕೇ ಮುಲಾಮಿಗೆ ಮಾಯದ ಗಾಯ
ಮಾರು ಹೋಗಬೇಕೇ ಜಾಹಿರಾತಿಗೆ?
ಸಂತೆಯಲೂ ಸಿಗಬಹುದೇ ನೆಮ್ಮದಿಯೂ
ಯಾರಿಗೂ ಖಾತರಿ ಇಲ್ಲ ಮಾಹಿತಿಗೆ.

ಈ ಖಾಸಗಿ ಸಂಧಾನ ನೋವಿನೊಂದಿಗೆ
ಎಷ್ಟು ದೂರದ ಕಾಣಿಕೆ ಜೊತೆ ಜೊತೆಗೆ.?
ಬೇಸಿಗೆಯ ಛಾವಣಿ ಕಾದೆದೆಯ ಹಂಚಿಗೆ
ಹನಿಯೊಂದು ತಾಗದು, ಯಾರ ಸಂಚಿಗೆ?

ಕಳೆದದ್ದು ಅಂತರಂಗ ಬಹಿರಂಗದ ಪತ್ರಿಕೆ
ನಿಮಗೇಲ್ಲೋ ಎದುರಾದರೆ ತಿಳಿಸುವಿರ?
ಈಗಷ್ಟೇ ನಿಂತಿರುವೆ ನಿಲುವುಗನ್ನಡಿ ಎದುರು
ಇಲ್ಲಿರದ ಆ ಖುಷಿಯೊಂದು ಕಳುಸುವಿರ?

ಧನ್ಯವಾದಗಳೊಂದಿಗೆ
ರವಿ ಶಿವರಾಯಗೊಳ

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author