Poem

ಮಾಡಿದರೆ ಮಾಡಬೇಕು ಅಂಥ ಯುದ್ಧ!

ಮಾಡಿದರೆ ಮಾಡಬೇಕು ಅಂಥ ಯುದ್ಧ
ಭರತ ಮತ್ತು ಬಾಹುಬಲಿಗಳಂಥ ಯುದ್ಧ

ಕೈಯಲ್ಲಿ ಆಯುಧ ಹಿಡಿಯಲಿಲ್ಲ
ಮೈಯಲ್ಲಿ ಕವಚ ತೊಡಲಿಲ್ಲ
ಬಿರುದು ಬಾವಲಿಗಳು ಹೊಗಳಲಿಲ್ಲ
ವೀರ ಪ್ರತಿಜ್ಞೆಗಳ ಉಗುಳಲಿಲ್ಲ

ಒಂದು ಹನಿ ನೆತ್ತರು ಚೆಲ್ಲಲಿಲ್ಲ
ಬಡವರ ಮಕ್ಕಳ ಕೊಲ್ಲಲಿಲ್ಲ
ಆಳರಸರ ರುಂಡ ಚೆಂಡಾಡಲಿಲ್ಲ
ಕುದುರೆ ಆನೆಗಳ ಮುಂಡಾಡಲಿಲ್ಲ

ವೀರರು ಕಲ್ಲುಗಳ ಸೇರಲಿಲ್ಲ
ಮಾಸತಿಗಳು ಬೆಂಕಿಗೆ ಹಾರಲಿಲ್ಲ
ಜೋಳದ ಪಾಳಿಯ ನುಡಿಯಲಿಲ್ಲ
ಲೆಂಕರ ತಲೆಗಳು ಸಿಡಿಯಲಿಲ್ಲ

ಮಡದಿಯರ ತಾಳಿ ಹರಿಯಲಿಲ್ಲ
ಹೆತ್ತ ಕರುಳಗಳ ಕತ್ತರಿಸಲಿಲ್ಲ
ಅನಾಥ ಮಕ್ಕಳ ಒಕ್ಕಲಿಲ್ಲ
ಬಂಧು ಬಾಂಧವರು ಬಿಕ್ಕಲಿಲ್ಲ

ಹೆಣದ ರಾಶಿಗಳ ಒಟ್ಟಲಿಲ್ಲ
ರಕ್ತ ಕೊಳೆತು ಮಡುಗಟ್ಟಲಿಲ್ಲ
ಬಿಡಿಬಿಡಿ ಅಂಗಾಂಗ ಮಿಡುಕಲಿಲ್ಲ
ವಿಕಲಾಂಗ ಜೀವಗಳು ನಡುಕಲಿಲ್ಲ

ಮಾರಿಗೆ ಔತಣವಾಗಲಿಲ್ಲ
ಹದ್ದುಗಳು ತಿಂದು ತೇಗಲಿಲ್ಲ
ನರರು ರಾಕ್ಷಸರಾಗಲಿಲ್ಲ
ಎದೆಬಗೆದು ನೆತ್ತರ ಹೀರಲಿಲ್ಲ

ಆಯುಧ ಬಿಸುಟಿ ಭಟರು ಪ್ರೇಕ್ಷಕರಾಗಿ
ರಾಜರೇ ಎದುರು ಬದುರಾದಂಥ ಯುದ್ಧ
ಆಳರಸ ಮಾಂಡಲಿಕ ದಂಡನಾಯಕರಾದಿ
ಬಾಯ್ದೆರೆದು ಕಣ್ಬಿಟ್ಟು ಕೂತಂಥ ಯುದ್ಧ

ಊರೂರ ಜಾತ್ರೆಗಳ ಕಣಗಳಲ್ಲಿ
ನಡೆವ ಕುಸ್ತಿಯಾಟದಂಥ ಯುದ್ಧ
ಕೆರೆಬಾವಿ ಹೊಳೆ ಹಳ್ಳ ಕಾಲುವೆಗಳಲ್ಲಿ
ನೀರಾಟವಾಡಿ ನಲಿವಂಥ ಯುದ್ಧ

ಯಾರೇ ಬೀಳಲಿ ಯಾರೇ ಏಳಲಿ
ಚಪ್ಪಾಳೆ ತಟ್ಟಿ ನಗುವಂಥ ಯುದ್ಧ
ಯಾರೇ ಗೆಲ್ಲಲಿ ಯಾರೇ ಸೋಲಲಿ
ಯಾರಿಗೂ ಸಾವು ತರದಂಥ ಯುದ್ಧ

ಸೋತವನು ಚಕ್ರವರ್ತಿಯಾದಂಥ ಯುದ್ಧ
ಗೆದ್ದವನು ಗೊಮ್ಮಟನಾದಂಥ ಯುದ್ಧ
ಕೊಲುವ ಆಜ್ಞೆಯ ಹೊತ್ತ ಚಕ್ರರತ್ನ
ಜಿನನ ಪಾದಕೆ ಎರಗಿದಂಥ ಯುದ್ಧ

- ಎಂ.ಡಿ. ಒಕ್ಕುಂದ

ಒಕ್ಕುಂದ ಎಂ.ಡಿ.

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ. 


 

More About Author