Story

ಮಳೆಯ ನೆರಳು

ಮಳೆ. ಸುರಿತಾನೇ ಇದೆ. ತನ್ನ ಲಯದ ಗತಿಯಲ್ಲಿ. ಒಮ್ಮೊಮ್ಮೆ ತನ್ನ ಲಯದ ಗತಿಯ ಆಚೆಯಲ್ಲಿ ಅಂತರಿಕ್ಷವನೇ ಅಳೆಯಲು ಹೊರಟಂತಿರುವ ಮರದ ಎಲೆಗಳು ಅಲ್ಲಿಯೇ ಮಳೆಗೆ ಮುತ್ತಿಕ್ಕಿ ಬೇರ ಪುಳಕಗೊಳಿಸುತ್ತಿವೆ. ಪರ್ವತಗಳೂ ತಾವೇನು ಕಮ್ಮಿ ಇಲ್ಲವೆಂಬಂತೆ ತಮ್ಮ ಡೊಂಕಿನ ಮೈಯ ಮೇಲೆಲ್ಲಾ ಸುರಿವ ಮಳೆಯ ಹರಿಸುತಿವೆ ನದಿಗೆ ಜಲಪಾತಕೆ ಸಾಗರಕೆ. ಮೀನ ನಾಚಿಸುವಂತೆ ಅಂತರಿಕ್ಷದ ಮಳೆ ನದಿಯಲಿ ಪಕ್ಷಿಗಳು ಈಜುತಿವೆ. ಮಳೆ ಗುಳ್ಳೆಗಳು ಕ್ಷಣ ಕಂಡು ಒಡೆದುಹೋಗುತ್ತಿವೆ. ಗಾಳಿಯೂ ಕೂಡಿ ಮಳೆಯ ಜೊತೆ ನೃತ್ಯದ ಲಾಸ್ಯ. ಮಳೆಯ ಲಯ. ಲಯದ ಮಳೆ. ಕೊನೆಯಿಲ್ಲದ ತಿರುವುಗಳ ಪಡೆಯುತ್ತಾ ರಾಗಗಳ ಹೊಮ್ಮಿಸುತ್ತಾ ಪಟ ಪಟ. ಮಳೆಯ ಲಯ.

ಲಯ. ಮಳೆ. ಧೋ. ನಗರದ ವಾಹನಗಳು ಕಾಗದ ದೋಣಿಗಳಂತೆ ತೇಲುತಿವೆ. ನೆಲದ ಮೇಲಷ್ಟೇ ವೇಗದಲಿ ಚಲಿಸುತಿದ್ದ ಅವು ಅಂತರಿಕ್ಷದಲಿ. ತೇಲುತಿವೆ. ಬಾವಿಯನೇ ಕಂಡರಿಯದ ಮಹಡಿ ಮಹಲುಗಳ ಕೋಣೆಗಳೊಳಗೆ ನೀರ ತುಳುಕು. ಮಳೆಯ ವಿಲಕ್ಷಣ ಲಾಸ್ಯ. ಭಿಕ್ಷುಕರ ಅನಾಥರ ಚಪ್ಪಲಿಗಳು ತೇಲುತಿವೆ ಅಲ್ಲಿ. ಜೊತೆಗೆ ಲೋಕದ ಮತ್ತಿತರರವೂ. ನರಲೋಕದ ನರರ ಚಪ್ಪಲಿಗಳು ಮತ್ರ್ಯದ ನೆಲವ ಸವೆಸಿದ್ದ ಅವು ಸ್ವರ್ಗವ ತಾಗುತಿವೆ ತೇಲುತ ಮೇಲೆ. ಕೊಡೆ ಬಿರುಗಾಳಿಗೆ ಸಿಲುಕಿ ದಿಕ್ಕು ತಪ್ಪಿ ಅಲೆಯುತ್ತಿರುವ ಹಡಗು. ಕಪ್ಪು ಹಡಗು. ಹೊಡೆದು ಡಿಕ್ಕಿ ವಿದ್ಯುತ್ ಕಂಬಕೆ ಕಾಣುತಿದೆ ಆಗಿ ದೇವಸ್ಥಾನದ ಕಳಸ. ಮಳೆ. ಮತ್ರ್ಯದಲಿ ಅಲೌಕಿಕ ದರ್ಶನ. ಅಂತರಿಕ್ಷದಲಿ ಹರಿವ ನೀರ ಉಗುರಂಚಿನಷ್ಟು ಕೆಳಗೆ ಪುಟ್ಟ ಬೆರಳುಗಳು. ಹೂವ ಹಿಡಿದಂತೆ ಮಡಿಚಿಕೊಂಡಂತಿರುವ ಎಳೆಯ ಬೆರಳುಗಳು ಆ ಹೂಬೆರಳುಗಳು ಅದೃಶ್ಯ ಮಳೆಯ ಲಯಕೆ. ಅದರ ಗತಿಗೆ.

ಮಳೆಯ ಲಯಕೆ ಭಾಷೆಗೂ ನಿಲುಕದ ಮಾತುಗಳು. ಮಾತುಗಳಲ್ಲ ಆಕ್ರಂದನಗಳು. ರೋಧನಗಳು. ಕೇವಲ ಸದ್ದಷ್ಟೇ ಕೇಳುತಿದೆ. ಮಳೆಯ ಲಯದಲಿ ಅದರ ಗತಿಯಲಿ ಮಾತುಗಳೂ ಜೀವಗಳೂ ಲೌಕಿಕ ಪದಾರ್ಥಗಳೂ ಹೋಗುತಿವೆ ಕೊಚ್ಚಿ. ಅಣೆಕಟ್ಟುಗಳೂ ಮಂದಿರ ಮಿನಾರುಗಳೂ ಗಗನ ಚುಂಬಿ ಕಟ್ಟಡಗಳೂ ನೆಲವೇ ಆಗಿರುವ ಗುಡಿಸಲುಗಳೂ ಬಯಲುಗಳೂ ಆಲಯಗಳೂ ಬಯಲಾಗುತಿವೆ ಮಳೆಯ ಲಯಕೆ.

ಶಾಲೆಗೆ ಹೋದ ಪುಟ್ಟಿ ಅವಳ ಕರೆದು ಕೊಂಡು ಬರಲು ಹೋದ ಸನ್ಮತಿ ಅವರೂ ಲಯ ಮಳೆಯ ಲಯದಲಿ. ಮಳೆಯ ಲಯ ಆವರಿಸಿಕೊಳ್ಳುತಿದೆ ಸಿಕ್ಕ ಜಾಗದಲ್ಲೆಲ್ಲಾ. ಮಳೆಯ ಲಯ. ಲಯ ಮಳೆಯ ಲಯ. ಲಯವಾದ ಮಳೆಯ ಲಯ ಅವನ ಮನದೊಳಗೆ. ಒಬ್ಬನೇ ಕೂತಿಹನೇ ತುಂಬಿ ತುಳುಕುತ್ತಿಲ್ಲವೆ ಪ್ರವಾಹ. ಅವನೊಳಗೆ. ಸುರಿಯುತ್ತಿದೆ ಧೋ ಮಳೆ. ಮಳೆಯ ಲಯ.

ಒಳಗೆ ಅದು. ಮಳೆಯ ಲಯ. ಕೂತಿಹನು ನೋಡುತ್ತ ಆಕಾಶ. ತುಂಬಿ ತುಳುಕುತ್ತಿದೆ ಚೈತನ್ಯ ರೆಂಬೆಕೊಂಬೆಗಳಲ್ಲಿ ಟಿಸಿಲೊಡೆದು. ಅವನ ಮೈ ಮನಗಳು ನರನಾಡಿಗಳು ರೋಮಾಂಚನ. ಕೋಗಿಲೆ ಇವನಿಗಾಗಿಯೇ ಎಂಬಂತೆ ಕೂಗುತ್ತಿದೆ ಹಾಡುತ್ತಾ. ನೋಡುತಿಹ ಅದ. ಅದರ ಗುರುತಿಲ್ಲ. ಆದರೆ ಅದರ ರಾಗ ಸುತ್ತ. ಅದರ ರಾಗದ ಆಲಾಪನೆಯ ಅಲೆಗಳು. ಅವನ ಕಿವಿಯ ದಡಕೆ ಬಡಿದು ಹೋಗುತಿವೆ. ಅವನು ಕೂತಿರುವ ಕಲ್ಲ ಸಂದುಗೊಂದುಗಳಲ್ಲಿ ಕಪ್ಪು ಮಿಶ್ರಿತ ಹಸಿರ ಒಣಗಿದ ಪಾಚಿ. ಕಣ್ಣು ಹಾಯಿಸಿದಷ್ಟು ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು ಮುಂದೆ. ಒಂದು ಫರ್ಲಾಂಗ್ ದೂರವಷ್ಟೇ ಇರುವ ಅಡಿಕೆ, ಎಲೆ ಹಾಗು ತೆಂಗಿನ ತೋಟಗಳು. ಅವುಗಳಿಂದ ಹೊಮ್ಮಿ ಬರುತ್ತಿರುವ ಕಮ್ಮನೆಯ ವಾಸನೆ. ದೂರದ ಬೆಟ್ಟದ ತುದಿಯಲ್ಲಿ ಕಾಣುತ್ತಿರುವ ವಿದ್ಯುತ್ ತಯಾರಿಸುವ ಗಾಳಿರಾಟೆಗಳು. ಅವು ದೂರದಿಂದ ಪುಟ್ಟ ಮಕ್ಕಳು ಕೈಯಲ್ಲಿ ಗಾಳಿಗೆ ಹಿಡಿದು ತಿರುಗಿಸಿಕೊಂಡು ಆಡುವ ಗಿರಿಗಿಟ್ಟಲೆಗಳ ಥರ ಕಾಣುತ್ತಿವೆ. ಹಸಿರ ಹೊದ್ದಿರುವ ನೆಲವ ಸೀಳಿಕೊಂಡು ಹಾವಿನ ಥರ ಬಳುಕಿಕೊಂಡು ಹಾದು ಹೋಗಿರುವ ಕಪ್ಪು ಟಾರ್ ರಸ್ತೆ. ಆಗೊಮ್ಮೆ ಈಗೊಮ್ಮೆ ವಾಹನಗಳು ಗುಯ್ಯ್ ಗುಟ್ಟುತ್ತಾ ಶಬ್ದ ಮಾಡಿಕೊಂಡು ಸಾಗುತ್ತಿವೆ. ಈ ಶಬ್ದದ ಪರಿವಿಲ್ಲದೆ ತದೇಕ ಚಿತ್ತದಿಂದ ಇರುವೆಗಳ ಸಾಲು ನೋಡುತ್ತಿದ್ದಾನೆ. ಇರುವೆಗಳ ಸಾಲು ಮರೆವಣಿಗೆ. ಮೆರವಣಿಗೆ..

ಮಳೆ ಸುರಿಯತ್ತಿರುವ ಮಳೆ ಕೊನೆಯೇ ಇಲ್ಲವೆಂಬಂತೆ. ಮತ್ತೆ ಮಳೆ. ಕೆಸರು. ಮದುವೆ ಮಂಟಪ. ಗಲಾಟೆ. ಗುಜು ಗುಜು ಗದ್ದಲ.

... ಅದೇನೋ ಮಂತ್ರ ಮಾಂಗಲ್ಯ ಅಂತೆ. ಜೋಯಿಸರು, ಐಯ್ಯನೋರು, ಶಾಸ್ತ್ರಿಗಳು ಇವರ್ಯಾರು ಇರೋದಿಲ್ಲವಂತೆ. ಅದ್ಯಾರೋ ಸಾಹಿತಿಗಳು, ಹೋರಾಟಗಾರರು, ರೈತಸಂಘದವರು ಬರುತ್ತಾರಂತೆ. ಅದೆಂತದೋ ಪುಸ್ತಕ ತರ್ತಾರಂತೆ. ಅದನ್ನು ಎಲ್ಲರ ಎದುರಿಗೆ ಓದುತ್ತಾರಂತೆ. ಆಮೇಲೆ ಅದರಾಗೆ ಇರುವುದನ್ನು ಗಂಡು ಹೆಣ್ಣು ಜೋರಾಗಿ ಓದಿ ಹೇಳಬೇಕಂತೆ. ಅಲ್ಲಿಗೆ ಮದುವೆ ಮುಗಿತಂತೆ. ಊಟನೂ ಅಂತ ಜೋರೇನು ಇರಲ್ವಂತೆ. ಚಿತ್ರನ್ನ ಗಿತ್ರನ್ನ ಮಾಡ್ತರಂತೆ. ಏ ಖರ್ಚು ಹಂಗಾದರೆ ತುಂಬಾ ಕಡಿಮೆ. ಹೌದೌದು ತುಂಬಾ ಕಮ್ಮಿ. ಸಾಲ ಮಾಡುವುದು ತಪ್ಪುತ್ತೆ ಅಲಾ. ಮಳೆ. ಹಾಳಾದ್ ಮಳೆ. ಒಂದು ವಾರದಿಂದ ಪಿರಿ ಪಿರಿ. ಸೈಕ್ಲೊನ್ ಅಂತೆ. ಸರಿ ಸರಿ . ಈ ದೇಶದಲ್ಲಿ ಯಾವಾಗಲೂ ಸೈಕ್ಲೋನೆ. ಇವೊತ್ತು ಒಂದು ದಿನವಾದ್ರೂ ನಿಲ್ಲಬಾರದಿತ್ತೇ ಹಡಬೆಗುಟ್ಟಿದ್ದು. ನೋಡ್ರ ನಿಮ್ಮ. ಕರಿಮೋಡಗಳು ಹೆಂಗೆ ಬರ್ತಿದ್ದಾವೆ. ಆನೆ ಬಂದಂಗೆ ಬರ್ತಿದ್ದಾವೆ. ಇನ್ನೇನು ಮತ್ತೆ!? ಶಾಸ್ತ್ರ ಸಂಪ್ರದಾಯ ಮುರಿದರೆ. ಅಮಾ ಅಮಾ ಹೊಟ್ಟೆ ಹಸಿತಿದೆ. ಇನ್ನೂ ಯಾವಾಗ ಊಟ. ಏ ಅದ್ಕೆ ಹೇಳಿದ್ದು ಅಜ್ಜಿ ತಾವ ಸುಮ್ನೆ ಬಿದ್ದಿರು ಅಂತ. ಎಲ್ಲಿಗೋದ್ರು ಹನುಮಂತುನ ಬಾಲ್ದಂಗೆ ತಿಗದಿಂದೆ ಯಾವಾಗ್ಲು. ಅಲ್ರೊ ಬ್ಯಾಂಡ್ ಸೆಟ್ ಇಲ್ಲ, ಮ್ಯಾಳ ಇಲ್ಲ. ಮೂಗು ಮದುವೆ ಆತಪ್ಪ. ಅದರ ಬದಲು ಸೋಬಾನೆ ಪದವಂತೆ ಕಣ್ಲಾ. ರೀ ಮಿಸ್ಟರ್ ಬ್ಯಾಂಡ್ ಸೆಟ್ ಗೀಂಡ್ ಸೆಟ್ ಎಲ್ಲ ವೆಸ್ಟರ್ನ್. ಸೋಬಾನೆ ಪದ ಸಾಕಾಗಲ್ವಾ. ಎಂಥ ಅರ್ಥ ಇದೆ ಆ ಹಾಡುಗಳಲ್ಲಿ. ಸೋಬಾನೆ ಪದಗಳೇ ಮಂಗಳ ವಾದ್ಯ ಕಣ್ರಿ. ಸಂಸ್ಕೃತಿ, ಸಂಪ್ರದಾಯ ಉಳಿಸುವುದು ಅಂದರೆ ಇದೆ ಕಣ್ರಿ. ಇವನ್ಯಾವನೋ ಮಾರಾಯ ದೊಡ್ಡ ಭಾಷಣನೇ ಬಿಗಿತಾನೆ. ಓ ಅದೇ ಕಣೋ ಮುಖ್ಯಮಂತ್ರಿ ಮನೆ ಮುಂದೆ ಒಲೆ ಗುಂಡು ಹಾಕಿ ಹೋಳಿಗೆ ಸೀಕರಣೆ ಮಾಡಿ ಉಂಡಿರಲಿಲ್ಲವೆ ತೊಗರೆಬೇಳೆಗೆ ರೇಟ್ ಕಡಿಮೆಯಾದಾಗ ವಿರೋಧಿಸಿ. ಅವನೆನಾ ಈಯಪ್ಪ. ಸರ್ ಯುನಿವರ್ಸಿಟಿ ಪ್ರೊಫೆಸರ್ ಹುದ್ದೆಗೆ ರಾಜಿನಾಮೆ ಕೊಟ್ರಂತೆ. ಕೊಟ್ಟು ಏನ್ಮಾಡ್ತಾರೆ ಈಗ. ಅದೆ ಕಾಣ್ತಿಲ್ವೆ ಮದುವೆ ಮಾಡಿಸೋದು. ಅಣ್ಣೋಯ್ ನಮ್ಮ್ ಗೌಡ್ರು ಚಿಕ್ಕಮಗ ಹೊಲೆಯರ ಸುಮಿತ್ರನ ಲವ್ ಮಾಡ್ತಾ ಮದುವೆಯಾಗುವುದಕ್ಕೆ ಒದ್ದಾಡುತ್ತಿದ್ದಾನೆ. ಇವರಿಗೆ ಹೇಳಿ ಮಾಡಿಸು ಮತ್ತೆ. ಹಿಂಗೆ ಹಿಡಿದರೆ ನಮ್ಮ ಭತ್ತ ಕೊಳ್ತು ಹೋಗಾದೆ. ಇವನವ್ವನ್ ಏನ್ ಹೊಡಿತಿದೆ ನೋಡು. ಬಟ್ಟೆಯೆಲ್ಲಾ ಒದ್ದೆಯಾಗಿ ಮುದ್ದೆ ಆಗೋದ್ವು...

ಇರುವೆ ಸಾಲು ತನ್ನ ಪಾಡಿಗೆ ತಾನು ಬೆಳಿತಾನೆ ಇದೆ. ದೂರದಲ್ಲಿ ಬಸ್ಸು ಚಿಕ್ಕ ಚುಕ್ಕಿ ಥರ ತೋರುತ್ತಾ ಇತ್ತ ಬರುತ್ತಿದೆ. ಇವನು ಇರುವೆ ಸಾಲು ನೋಡ್ತಾ ಕೂತಿದ್ದಾನೆ. ನೋಡುತ್ತ ಇರುವೆ ಸಾಲ. ಇರುವೆ ಸಾಲು. ಮರೆವಣಿಗೆ. ಸಾಗ್ತಾನೆ ಇದೆ ಸುಮ್ಮನೆ. ತಮ್ಮ ಪಾಡಿಗೆ ತಾವು ಇರುವೆಗಳು ಮಾತಾಡಿಕೊಳ್ಳುತ್ತಾ. ಇವನು ಮೌನದಿಂದ ಅದನ್ನೇ ದಿಟ್ಟಿಸುತ್ತಾ. ಮಳೆ. ತನ್ನ ರಭಸವನ್ನು ಕಡಿಮೆಮಾಡಿಕೊಂಡು ನಿಧಾನವಾಗುತ್ತಿದೆ. ತುಂತುರು. ಜಿನಿ. ಜಿನಿ. ಮೋಡಗಳೆಲ್ಲಾ ಕರಗಿ ಆಕಾಶ ಬೆಳ್ಳಗೆ ಆಗ್ತಾ ಇದೆ. ಮದುವೆ ಮಂಟಪ. ಮಳೆ ಮಂಟಪ. ನೆಂಟರು, ಊರಿನವರು, ಆಮಂತ್ರಿತರು, ಗಣ್ಯರು, ಪ್ರಗತಿಪರ ಚಿಂತಕರು, ಸಾಹಿತಿಗಳು. ಹಂಚಿನ ತೊಟ್ಟಿಮನೆ. ಹಜಾರ. ವಿಶಾಲ ಅಂಗಳ. ಅಂಗಳದ ಬಲ ಬದಿಯಲ್ಲಿ ಮಾವಿನ ಮರ. ನುಗ್ಗೆ ಮರ. ಎಡ ಬದಿಯಲ್ಲಿ ಚಿಕ್ಕ ಕೈ ತೋಟ. ತೋಟದ ತುಂಬ ಹೂವಿನ ಕುಂಡಗಳು. ಆಂಥೋರಿಯಮ್ ಹೂವುಗಳಂತೂ ಲಿಂಗ ಯೋನಿಗಳ ಸಮಾಗಮವನ್ನು ಪ್ರತಿನಿಧಿಸುವಂತೆ ವಿಲಕ್ಷಣ ಸೌಂದರ್ಯದ ಸೊಬಗಿನಿಂದ ಬೀಗುತ್ತಿವೆ. ಬಿಳಿ ದಾಸವಾಳ ನಳನಳಿಸಿ ನಗುತ್ತಿವೆ. ಇನ್ನೂ ಇತರೆ ಜಾತಿಯ ಪುಟ್ಟ ಪುಟ್ಟ ಹೂವುಗಳು ಮದುವೆಮನೆಗೆ ಮೆರಗನ್ನು ಹೆಚ್ಚಿಸುತ್ತಿವೆ. ಕೈ ತೋಟದ ಪಕ್ಕವೇ ಇರುವ ದೇವಗಣಗಿಲೆ ಮರ ತನ್ನ ಹೂವ ಪರಿಮಳದಿಂದ ನೆರೆದಿರುವವರ ನಾಸಿಕಗಳ ಖುಷಿಗೊಳಿಸುತ್ತಿದೆ. ಆದರೆ ಅಲ್ಲಿ ನೆರೆದಿರುವವರು ಯಾರು ಈ ಮರ ಗಿಡ ಹೂವುಗಳ ಬಗ್ಗೆ ಪರಿವಿಲ್ಲದಂತೆ ತಮ್ಮ ಪಾಡಿಗೆ ತಾವು. ಹಸಿ ಮರದ ರೆಂಬೆ ಕೊಂಬೆಗಳಿಂದ ಕಟ್ಟಲ್ಪಟ್ಟಿರುವ ಮದುವೆ ಮಂಟಪ ವಿಶಾಲ ಅಂಗಳದ ಮಧ್ಯದಲ್ಲಿ. ಮಳೆ ಇದ್ದುದರಿಂದ ಪೆಂಡಲ್ ಹಾಕಲಾಗಿದೆ. ಇದು ಇಲ್ಲದಿದ್ದರೆ ಮದುವೆ ಮಂಟಪಕ್ಕೊಂದು ಸಹಜ ಸೌಂದರ್ಯ ಬರುತ್ತಿತ್ತೇನೋ. ಮಂಟಪದ ನಾಲ್ಕೂ ಮೂಲೆಗೆ ಗೊನೆ ಇರುವ ಬಾಳೆ ಗಿಡಗಳನ್ನು ತಂದು ಕಟ್ಟಲಾಗಿದೆ. ಮಂತ್ರ ಮಾಂಗಲ್ಯ ಮಾಡಿಸಲು ಬಂದಿದ್ದವರಲ್ಲೊಬ್ಬ ‘ನಾಲ್ಕು ಗೊನೆಗಳನ್ನು ವೇಸ್ಟ್ ಮಾಡಿದ್ದೀರಲ್ರೀ’ ಎಂದು ಗೊಣಗಿದ್ದುದು ಅಲ್ಲಿದ್ದ ಯಾರಿಗೂ ಕೇಳಿಸಿದಹಾಗೆ ಕಾಣಲಿಲ್ಲ. ಹಜಾರದ ಮೇಲೆ ಇರುವ ತೇಗದ ಕಂಬದ ಬಳಿ ಅರವತ್ತು-ಎಪ್ಪತ್ತು ವಯಸ್ಸಿನ ಒಂದು ಹೆಂಗಸರ ಗುಂಪು ಸೋಬಾನೆ ಪದಗಳ ಹಾಡುತ್ತಿದೆ. ಅಲ್ಲಿ ನೆರೆದಿರುವವರ ಗುಜುಗುಜು ಸದ್ದೂ ಸಹ ಅವರ ಹಾಡಿನ ಲಯಕ್ಕೆ ಸಿಕ್ಕು ಕರಗುತ್ತಿದೆ. ಇವರ ಸೋಬಾನೆ ಪದಗಳಲಿ ಲಯ ನಾದದ ನದಿಯಾಗಿ ಹರಿಯುತ್ತಿದೆ.

ಮಳೆ ಸಂಪೂರ್ಣ ನಿಲ್ಲುವಂತಿದೆ. ಆಗ ಅಲ್ಲಿಗೆ ಎರಡು ಬೂದು ಬಣ್ಣದ ಇನ್ನೋವ ಕಾರುಗಳು ಬಂದು ನಿಂತವು. ಅವು ಬಂದ ವೇಗ ಅವುಗಳೊಳಗಿಂದ ಇಳಿದುಬಂದವರಲ್ಲಿ ವ್ಯಕ್ತವಾಗುತ್ತಿದೆ. ಇಳಿದವರಲ್ಲಿ ಒಬ್ಬ, ಸುಮಾರು ನಲವತ್ತೆಂಟು ವರ್ಷದ ವ್ಯಕ್ತಿ ಸಿಟ್ಟು ಮತ್ತು ರೋಷದಿಂದ, ಎಲ್ಲಿದ್ದಾನ್ರಿ ಅವ್ನ್ ಗಾಂಧೀ? ನನ್ನ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಬಂದು ಬಲವಂತದಿಂದ ಮದುವೆಯಾಗ್ತಿದ್ದಾನೆ. ನಾಚಿಕೆ ಆಗೊಲ್ವ ಅವನಿಗೆ. ಯುನಿವರ್ಸಿಟಿಯಲ್ಲಿ ಲಕ್ಚರರ್ ಆಗಿದ್ದಾನೆ. ಮಕ್ಕಳಿಗೆ ಇದುನ್ನೆನಾ ಕಲಿಸೋದು?’ ಎಂದು ಜೋರಾಗಿ ಕಿರುಚುತ್ತ ಮಂಟಪದ ಕಡೆ ಧಾವಿಸಿದ. ಅಷ್ಟೊತ್ತಿಗೆ ಅಲ್ಲಿಯೇ ಇದ್ದ ಜೀನ್ಸ್ ಪ್ಯಾಂಟ್, ಖಾದಿ ಜುಬ್ಬ ಹಾಕಿಕೊಂಡಿದ್ದವರೊಬ್ಬರು ತಡೆದು, ‘ರೀ ಮೈಂಡ್ ಯುವರ್ ಲಾಂಗ್ವೇಜ್. ನೋಡುವುದಕ್ಕೆ ಎಜುಕೇಟೆಡ್ ಥರ ಕಾಣ್ತಾ ಇದೀರ. ಇಲ್ಲಿ ನಡೆಯಬಾರದ್ದೇನು ನಡೆಯುತ್ತಿಲ್ಲ. ನಿಮ್ಮ ಮಗಳಿಗೆ ಇಪ್ಪತ್ತನಾಲ್ಕು ವರ್ಷ. ನೆನಪಿರಲಿ. ಇದು ಅವಳೇ ಇಷ್ಪಪಟ್ಟು ಆಗುತ್ತಿರುವ ಮದುವೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗ ಮದುವೆ ಆಗುವುದರಲ್ಲಿ ತಪ್ಪೇನಿದೆ?’ ಎಂದರು. ಅಷ್ಟು ಹೊತ್ತಿಗೆ ಸನ್ಮತಿಯ ತಾಯಿ ಅಳುತ್ತಾ, ‘ಇಂಥಾ ಮಕ್ಕಳಿದ್ದರೆ ಸಾರ್ಥಕ. ನಮ್ಮ ಮನೆತನದ ಗೌರವಕ್ಕೆ ಮಸಿಬಳಿದಲ್ಲೇ. ನಾಚಿಕೆ ಆಗೊಲ್ವೆ. ಮನೆ ಬಿಟ್ಟು ಓಡಿಬಂದು ಹೀಗೆ ದಿಕ್ಕುದೆಸೆ ಇಲ್ಲದವರ ಥರ ಮದುವೆ ಆಗುವುದಕ್ಕೆ?’ ಎಂದಳು.

ಮಂತ್ರಮಾಂಗಲ್ಯ ಮಾಡಿಸಲು ಬಂದಿದ್ದ ಗಣ್ಯರಲ್ಲೊಬ್ಬರು ಸನ್ಮತಿಯ ತಂದೆ ಮತ್ತು ತಾಯಿಯನ್ನು ಸಮಾಧಾನ ಪಡಿಸಲು ಮುಂದೆ ಬಂದರು. ಆದರೆ ಅವರ ಮಾತುಗಳಿಂದ ಸಮಾಧಾನಗೊಳ್ಳದ ಅವರು ಸನ್ಮತಿಯನ್ನು ಕೈ ಹಿಡಿದು ಎಳೆಯಲು ಮಂಟಪದ ಕಡೆ ಧಾವಿಸಿದರು. ಸನ್ಮತಿ ಕಬೀರನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಅವನ ಭುಜಕ್ಕೆ ಹೊರಗಿದಳು. ಮಳೆ ಪೂರ್ತಿ ನಿಂತು ಸೂರ್ಯ ನಿಧಾನ ಕಾಣ್ತಾ ಇದ್ದ. ದೂರದಲ್ಲಿ ಕಾಮನಬಿಲ್ಲು ಮೂಡಿತ್ತು. ಅಲ್ಲಿ ನೆರೆದಿದ್ದ ಕೆಲವರು ಮುಂದೆ ಧಾವಿಸಿ ಅವರಿಬ್ಬರನ್ನು ತಡೆದರು. ಸನ್ಮತಿ ತನ್ನ ಕಣ್ಣಂಚಲ್ಲಿ ಹೊರಳಾಡುತ್ತಿದ್ದ ಕಣ್ಣ ಹನಿಯ ಬಿಂದುಗಳನ್ನು ಒರೆಸಿಕೊಳ್ಳುತ್ತಾ ಏನೋ ಮಾತಾಡಲು ಮುಂದಾದಳು. ಕಬೀರನ ತಂದೆ ‘ಈಗ ಏನೂ ಮಾತಾಡಬೇಡ ಸುಮ್ಮನಿರು. ಸ್ವಲ್ಪಹೊತ್ತು. ಎಲ್ಲ ಸರಿಹೋಗುತ್ತೆ’ ಅಂದರು.

ಸನ್ಮತಿಯ ತಂದೆ, ‘ನನ್ನ ಹತ್ತಿರ ಹೇಳಿದ್ದರೆ ನಿಮ್ಮನ್ನೆಲ್ಲಾ ಕರೆಸಿ, ನನ್ನ ಫ್ರೆಂಡ್ಸ್ ಸಮ್ಮುಖದಲ್ಲಿ ತುಂಬಾ ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಡುತ್ತಿದ್ದೆ’ ಎಂದು ಇಷ್ಟುಹೊತ್ತಿನ ತನಕ ರೋಷದಿಂದ ಕುದಿಯುತ್ತಿದ್ದವನು ತಣ್ಣಗಾಗಿ ಉಲ್ಟ ಮಾತಾಡತೊಡಗಿದನು. ಸನ್ಮತಿ ತನ್ನ ಮನಸ್ಸಿನೊಳಗೆ ತುಂಬಿ ತುಳುಕುತ್ತಿದ್ದ ಮಾತುಗಳನ್ನು ಅದುಮಿಟ್ಟು ಕೊಳ್ಳಲಾರದೆ, ‘ಎಲ್ಲ ಸುಳ್ಳು. ಅಮ್ಮಂಗೆ ಹೇಳಿದ್ದೆನಲ್ಲ. ಅವರು ಒಪ್ಪಲಿಲ್ಲ. ನಿಮಗೂ ಗೊತ್ತಿತ್ತು. ನೀವೇ ಕೇಳಬಹುದಿತ್ತಲ್ಲ. ಈಗ ನಿಮ್ಮ ನಾಟಕ ನನಗೆ ಗೊತ್ತಿಲ್ಲವಾ? ನಿಮ್ಮ ಜಾತಿ, ಧರ್ಮ, ಅಂತಸ್ತು, ಹಣ ಯಾವುದು ಬೇಡ. ನನಗೆ ನನ್ನ ಬದುಕು ಬೇಕು. ನನ್ನ ಬದುಕನ್ನು ನನ್ನ ಕನಸುಗಳನ್ನು ಕಸಿದುಕೊಳ್ಳಬೇಡಿ. ನಿಮಗೆ ನಾನು ಮಗಳಾಗಿದ್ದರೂ ನಾನು ನಿಮ್ಮ ಸ್ವತ್ತಲ್ಲ. ಈಗಲೂ ನಿಮಗೆ ಮಮತೆ ಇದ್ದರೆ ನಮ್ಮಿಬ್ಬರಿಗೆ ಆಶೀರ್ವಾದ ಮಾಡಿ’ ಎಂದು, ಕಬೀರನನ್ನು ಕರೆದುಕೊಂಡು ತನ್ನ ಅಪ್ಪ ಅಮ್ಮರ ಕಾಲುಗಳಿಗೆ ನಮಸ್ಕರಿಸಲು ಹೋದಳು. ಆದರೆ, ಅವರು ದೂರ ಸರಿದು ನಿಂತರು. ಮದುವೆಗೆ ನೆರೆದಿದ್ದ ಊರವರಲ್ಲೊಬ್ಬರು, ‘ಸುಶಿಕ್ಷತರ ಥರ ಕಾಣ್ತಾ ಇದೀರ. ಒಪ್ಪಿಕೊಳ್ಳಿ. ಆಶೀರ್ವಾದಮಾಡಿ. ಇಬ್ಬರು ಇಷ್ಟಪಟ್ಟು ಮದುವೆ ಆಗ್ತಾ ಇದ್ದಾರೆ. ಬ್ರಹ್ಮನೇ ನಿರ್ಧರಿಸಿದ್ದಾನೆ ಇವರ ಮದುವೆನ. ಅಷ್ಟಕ್ಕು ಇವ್ರು ಚಿಕ್ಕ ಮಕ್ಕಳಾ. ಇಬ್ಬರಿಗೂ ತಮ್ಮ ಬದುಕನ್ನು ಕಟ್ಟಿಕೊಳ್ಳುವಷ್ಟು ಸಾಮರ್ಥ್ಯ ಇದೆ. ನಮ್ಮ ಕಬೀರನಿಗೂ ಕೈ ತುಂಬಾ ಸಂಬಳ. ಮೇಲಾಗಿ ಒಳ್ಳೆ ಕುಟುಂಬ’ ಎಂದರು. ನೆರೆದಿದ್ದ ಜನ ಸಂದಣಿಯ ಸಂದಿಯಿಂದ ಒಬ್ಬ ವ್ಯಕ್ತಿ ಪಾನ ಮತ್ತನಾಗಿ ತೂರಾಡುತ್ತ , ‘ರೀ ಮಿಸ್ಟರ್ ನಮ್ಮ ಕಬೀರ ಯುನಿವರ್ಸಿಟಿ ಲಕ್ಚರ್. ನೀ ಯಾವನೋ ಅವನ ಮದುವೆ ತಡೆಯುವುದಕ್ಕೆ’ ಎಂದು ಅಲ್ಲೆ ಕೆಸರಲ್ಲಿ ಬಿದ್ದ. ಅಲ್ಲಿದ್ದ ಕೆಲವರು ಅವನನ್ನು ಎತ್ತಿಕೊಂಡು ಬೇರೆಕಡೆ ಮಲಗಿಸಿದರು. ‘ಸರ್, ಮೇಡಮ್ ವಿಶ್ ಮಾಡಿ ಅವರಿಗೆ. ಏನು ಆಗುವುದಿಲ್ಲ. ತುಂಬಾ ಚೆನ್ನಾಗಿಯೇ ಬದುಕುತ್ತಾರೆ’, ಎಂದರು ಮದುವೆಯ ಆಮಂತ್ರಿತರಲ್ಲೊಬ್ಬರು. ಇಷ್ಟು ಹೊತ್ತಿನ ತನಕ ಮೌನದಿಂದಿದ್ದ ಗುಂಪಿನಿಂದ ಒಂದು ಧ್ವನಿ, ‘ಇವರೇನು ಭಾಷಣ ಮಾಡುವುದಕ್ಕೆ ಬಂದಿದ್ದಾರಲ್ಲಪ್ಪ. ಸುಮ್ಮನೆ ಮದುವೆ ಮಾಡಿ ಮುಗಿಸುವುದ ಬಿಟ್ಟು.’ ಎಂದಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಧ್ವನಿ, ‘ಏ ಗೂಬೆ, ಸುಮ್ಮನೆ ನಿಂತುಕೋ. ಅದು ಏನು ಬಾಯಿಗೆ ಬಂದಂಗೆ ಒದರುತ್ತಿಯ.’ ಎಂದಿತು. ಅದಕ್ಕೆ ಮತ್ತೊಂದು ಧ್ವನಿ, ‘ಬಾಯಿಗೆ ಬಂದಂಗೆ ಒದರುತ್ತಿರುವವರು ಅವನಲ್ಲ ಕಣ್ಲ, ಅವರು. ಅವರು ಒದರುತ್ತಿರುವವರು.’ ಎಂದಿತು. ಮತ್ತೆ ಮೌನ. ಮಳೆನಿಂತರೂ ಮರದ ಹನಿ ಬಿಡದು ಎಂಬಂತೆ ಅಲ್ಲೊಂದು ಇಲ್ಲೊಂದು ಹನಿ ಪಟ್ ಪಟ್ ಅಂಥ ಪೆಂಡಲ್‍ನಿಂದ. ಕಬೀರನ ಅಪ್ಪ ಅಮ್ಮ ಏನೋ ಮಾತಾಡಲು ಪ್ರಯತ್ನ ಪಟ್ಟರೂ ಅವರ ಮಾತುಗಳೆಲ್ಲಾ ಗಂಟಲ ಆಚೆಯೇ ಸಿಕ್ಕಿ ಹಾಕಿಕೊಂಡು ಒಳೊಳಗೇ ಒಂಥರ ಸಂಕಟ ಪಡುವಂತಿದ್ದರು.

ಕಬೀರ ಮೌನ ಮುರಿದು ಮಾತಾಡಲು ಬಾಯಿ ತೆರೆಯುತ್ತಾ ಕೈಯನ್ನು ಮುಂದೆ ಮಾಡಿದ. ಅವನ ಮಾತಿಗೂ ಮುನ್ನ ಸನ್ಮತಿಯ ತಾಯಿ, ‘ನೀನೇನು ಹೇಳಬೇಡ. ನೀನೊಬ್ಬ ಮೋಸಗಾರ. ನನ್ನ ಮಗಳ ತಲೆ ಕೆಡಿಸಿ ಹಾಳು ಮಾಡಿದ್ದೀಯಾ. ಲಕ್ಚರ್ ಅಂತೆ ಲಕ್ಚರ್.’ ಅಂದಳು. ‘ಮಗಳಿಗೆ ನೋಡಿದರೆ ಎಂಥಾ ಒಳ್ಳೆಯ ಹೆಸರಿಟ್ಟಿದ್ದೀರಾ. ನೀವ್ಯಾಕೆ ಹಿಂಗೆ ಕ್ರೂರವಾಗಿ ವರ್ತಿಸುತ್ತಿದ್ದೀರಾ?’ ಎಂದು ಅಲ್ಲಿ ನೆರೆದಿದ್ದವರಲ್ಲೊಬ್ಬರು ಅಂದರು. ಅದಕ್ಕೆ ಪ್ರತಿಯಾಗಿ ಎಂಬಂತೆ ಮತ್ತೊಂದು ಧ್ವನಿ ಹೆಸರಿಗೂ ಗುಣಕ್ಕೂ ಎಂಥ ಸಂಬಂಧ. ನೀ ಒಳ್ಳೆ ಹೇಳ್ದೆ. ಅಷ್ಟಕ್ಕೂ ಆ ಹೆಸರು ಮಗಳಿಗೆ ಇಟ್ಟಿರುವುದು ತಾನೆ. ಈ ಹೆಂಗಸ ಹೆಸರೇನಲ್ವಲ್ಲಾ.’ ಎಂದಿತು. ಸೋಬಾನೆ ಪದಗಳ ಹಾಡುತ್ತಿದ್ದವರಲ್ಲೊಬ್ಬ ಹೆಂಗಸು, ‘ನೀನು ಒಂದು ಹೆಣ್ಣು ಹೆಂಗಸು. ನಿನ್ನ ಮಗಳು ಮಾಡಿರುವ ತಪ್ಪು ಆದರೂ ಏನು. ಅಷ್ಟಕ್ಕೂ ಈ ಬದುಕೇನು ಶಾಶ್ವತನಾ ತಾಯಿ. ಹೋಗಿ ಎರಡು ಅಕ್ಕಿ ಕಾಳು ಹಾಕು.’ ಎಂದಿತು. ಕೊನೆಯದಾಗಿ ಗುಂಪಿನಿಂದ ಒಂದು ಧ್ವನಿ, ‘ಕೊಯ್ತ ಕೊಯ್ತ ಸಿಬ್ರು. ಎಷ್ಟು ಕೆತ್ತಿದ್ರೂ ಅಷ್ಟೆಯಾ. ನೀವು ಸುರುವಚ್ಚಿಕೊಳ್ಳಿ ಸಾ.’ ಎಂದು ಮಂತ್ರ ಮಾಂಗಲ್ಯ ಮಾಡಿಸಲು ಬಂದಿದ್ದ ಗುಂಪಿನ ಕಡೆ ಕೈ ಮಾಡುತ್ತ ಹೇಳಿತು.

‘ಈ ಕ್ಷಣದಿಂದಲೇ ನಮ್ಮ ಮಗಳು ಸತ್ತು ಹೋದಳು.’ ಎಂದು ಸನ್ಮತಿಯ ತಾಯಿ ಹೋಗಿ ಕಾರೊಳಗೆ ಕೂತಳು. ಅವಳನ್ನು ಅವಳ ಗಂಡನು ಹಿಂಬಾಲಿಸಿದ. ಬಂದ ವೇಗದಲ್ಲಿಯೇ ಕಾರುಗಳು ವಾಪಸ್ಸು.
ಮಳೆ. ಮದುವೆ…

ಕಾಲ ಬಸವನಹುಳುವಿನ ಥರ ಸರಿಯಿತು.
ಚಿಕ್ಕ ಚುಕ್ಕಿಯ ಹಾಗೆ ಕಾಣುತ್ತಿದ್ದ ಬಸ್ಸು ಬಂದು ಇವನು ಕುಳಿತಿದ್ದ ಸ್ವಲ್ಪದೂರದಲ್ಲಿ ಕೆಲವರನ್ನು ಇಳಿಸಿ ‘ಪೊಮ್ ಪೊಮ್’ ಎಂದು ಹಾರ್ನ್ ಮಾಡುತ್ತ ಹಾವಿನಂತೆ ಬಳುಕಿ ಸಾಗಿರುವ ರಸ್ತೆಯಗುಂಟ ಹಾದು ಹೋಯಿತು. ಬಸ್ಸಿನಿಂದ ಇಪ್ಪತ್ತೈದರ ಪ್ರಾಯದ ಯುವತಿ ಇವನ ಹತ್ತಿರ ಬಂದಳು. ಬಿಳಿ ಬಣ್ಣದ ನೀಲಿ ಅಂಚಿನ ಚೂಡಿಧಾರವನ್ನು ಧರಿಸಿದ್ದಳು. ಅವಳ ಬಲ ಭುಜಕ್ಕೆ ಒಂದು ಸುಂದರ ಹೂವಿನ ಚಿತ್ರಿವಿರುವ ಬ್ಯಾಗನ್ನು ನೇತುಹಾಕಿಕೊಂಡಿದ್ದಳು.

ಸುತ್ತ ತಂಗಾಳಿ. ಮರದ ಎಲೆಗಳ ಸದ್ದು. ಭತ್ತದ ತೆನೆಗಳ ಸುಯ್ಯನೆ ರಾಗ. ಇರುವೆ ಸಾಲನ್ನೇ ನೋಡುತ್ತ ಕೂತಿದ್ದವನ ಕಣ್ಣಮುಂದೆ ಎರಡು ಮುದ್ದಾದ ಪಾದಗಳು. ಹತ್ತೂ ಬೆರಳುಗಳು ನೇರಳೆ ಬಣ್ಣದ ಉಗುರುಬಣ್ಣದಿಂದ ಹೊಳೆಯುತ್ತಿದ್ದವು. ನಿಧಾನ ತಲೆ ಎತ್ತಿದ. ಅವನ ಮುಖದಲ್ಲಿ ಸಂತೋಷ. ಆಶ್ಚರ್ಯ. ‘ಅರೆ! ಝಾನ್ಸಿ!. ವಾಟ್ ಎ ಸರ್‍ಪ್ರೈಸ್! ಯಾರು ಹೇಳಿದರು ನಿನಗೆ ನಾನು ಇಲ್ಲಿ ಇರುವುದು?’ ಎಂದ. ‘ನಿಮ್ಮ ಊರಿಗೆ ಹೋಗಿದ್ದೆ. ನಿನ್ನ ನೋಡಲು ಬಂದಿದ್ದೆ. ನೀ ಇಲ್ಲಿರುವುದು ನಿಮ್ಮ ಅಪ್ಪ ಅಮ್ಮನೇ ಹೇಳಿದರು. ನಿಮ್ಮ ಅಮ್ಮ ಬೆಚ್ಚನೆಯ ಕಾಫಿ ಮಾಡಿಕೊಟ್ಟರು. ಕುಡಿದು ನಿನ್ನ ನೋಡಲು ಅವಸರದಲ್ಲೆ ಬಂದೆ.’ ಎಂದಳು. ‘ಅಪ್ಪ, ರಾಹುಲ್‍ನಿಗೆ ಹೇಳಿ ನಿನ್ನನ್ನು ಬೈಕಲ್ಲಿ ಕಳುಹಿಸಬಹುದಿತ್ತಲ್ಲ. ಇನ್ನು ಸ್ವಲ್ಪ ಹೊತ್ತು ಅಮ್ಮನ ಹತ್ತಿರ ಹರಟೆ ಹೊಡೆಯುತ್ತಿದ್ದರೆ ನಾನೆ ಬರುತ್ತಿದ್ದೆ ಅಷ್ಟೊತ್ತಿಗೆ. ಹುಚ್ಚು ಹುಡುಗಿ. ಯಾವಾಗಲೂ ಹೀಗೆ ಅವಸರ. ಅವಸರ.’ ಎಂದ

‘ಇಲ್ಲ, ಪಾಪ ಅಪ್ಪ ಇಡೀ ಊರು ಸುತ್ತಿ ಬಂದರು ರಾಹುಲ್‍ನ ಹುಡುಕಿಕೊಂಡು. ಯಾರಿಗೋ ಹಾವು ಕಚ್ಚಿತ್ತಂತೆ. ಅದಕ್ಕೆ ಅವರನ್ನು ಬೈಕಲ್ಲಿ ಆಸ್ಪತ್ರೆಗೆ ಹಾಕ್ಕೊಂಡು ಹೋಗಿದ್ದಾನಂತೆ. ಅಷ್ಟು ಹೊತ್ತಿಗೆ ಈ ಬಸ್ಸು ಬಂತು. ಅಪ್ಪನೇ ಈ ಬಸ್ಸಿಗೆ ಹತ್ತಿಸಿ, ಕೈ ಮರದ ಹತ್ತಿರ ಹೋಗಿ ಇಳಿ ಎಂದರು.’ಎಂದಳು. ಸ್ವಲ್ಪ ಹೊತ್ತು ಮೌನ. ಇಬ್ಬರು ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳುತ್ತ ಕೂತರು. ಪಕ್ಕದ ಗುಡ್ಡದ ಆಚೆ ಬದಿಯಿಂದ ನವಿಲುಗಳು ಕೂಗುವ ಸದ್ದು ಅವರ ಮೌನವನ್ನು ಆವರಿಸಿಕೊಳ್ಳತ್ತಿತ್ತು. ಅಕ್ಕ ಪಕ್ಕದ ಹೊಲಗದ್ದೆಗಳಲ್ಲಿ ಮನುಷ್ಯರ ಅಸ್ಪಷ್ಟ ಮಾತುಗಳು ಅವರ ಮೌನ ಕೊಳವನ್ನು ಕದಡುವಂತ್ತಿದ್ದವು. ‘ಕ್ಲಾಸಲ್ಲೂ ಹೀಗೆ. ನನ್ನನ್ನೇ ದಿಟ್ಟಿಸಿ ನೋಡುತ್ತಾ ಕೂರುತ್ತಿದ್ದೆ. ಅದೇ ಭಂಗಿ. ಅದೇ ನೋಟ.’ ಎಂದ.

‘ಮತ್ತೆ ಅಷ್ಟೊಂದು ತನ್ಮಯದಿಂದ ಕ್ಲಾಸ್ ಮಾಡಿದರೆ ಸುಮ್ಮನಿರುವುದಕ್ಕೇ ಆಗುತ್ತಾ. ನೀನು ಹೇಳುತ್ತಿದ್ದ ವಿಷಯಗಳು. ನಿನ್ನ ಭಾವಾಭಿನಯ. ನೀನು ಕೈ ಎತ್ತುವ ಶೈಲಿ. ಇಡೀ ಕ್ಲಾಸಲ್ಲಿ ಕೂತಿರುವವರನ್ನು ಎಷ್ಟೊಂದು ಇಂಪ್ರೆಸ್ ಮಾಡ್ತಿತ್ತು ಗೊತ್ತಾ. ಒಂದೊಂದು ಸಲ ನೆನೆಸಿಕೊಂಡರೆ ಯಾಕಾದರೂ ಸ್ಟೂಡೆಂಟ್ ಲೈಫ್ ಮುಗಿತೋ ಅನ್ನಿಸುತ್ತೆ.’ ಎಂದಳು.

ಅದಕ್ಕೆ ಮುಗುಳು ನಕ್ಕು ಸುಮ್ಮನಾದನು ಕ್ಷಣ. ನಂತರ, ‘ಝಾನ್ಸಿ ಅಗೋ ಆ ಗುಡ್ಡದ ಹತ್ತಿರ ಹೋಗೋಣ ಬಾ. ನಿನಗೊಂದು ವಿಸ್ಮಯ ತೋರಿಸುತ್ತೇನೆ.’ ಎಂದ.
‘ವಿಸ್ಮಯನಾ. ಏನಂತದೂ?’ ಎಂದು, ಅವನ ಜೊತೆ ಅವರು ಕುಳಿತಿರುವಲ್ಲಿಂದ ಸ್ವಲ್ಪವೇ ದೂರವಿರುವ ಗುಡ್ಡದ ಹತ್ತಿರ ಹೆಜ್ಜೆ ಹಾಕಿದಳು.

‘ಝಾನ್ಸಿ, ಇದೇ ಆ ವಿಸ್ಮಯ.’ ಎಂದು ಒಂದು ಗಿಡದ ತುಂಬ ನೇರಳೆ ಬಣ್ಣದ ಹೂವುಗಳನ್ನು ತೋರಿಸಿದ. ‘ಏನು ಅರ್ಥ ಆಗಲಿಲ್ಲ. ದೆ ಆರ್ ಫ್ಲವರ್ಸ್. ವಾಟ್ ಈಸ್ ಸ್ಪೆಷಲ್?’ ಎಂದಳು. ‘ಇದು ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಬೆಟ್ಟದ ಹೂವು. ಇದರ ಹೆಸರು ಕುರಿಯಿಂಜ್ಞಿ ಅಂತ.’ ಎಂದ.
‘ಹೌದ! ರಿಯಲಿ ವಂಡರ್‍ಫುಲ್’ ಎಂದಳು.
ನಿಂತು ಸುತ್ತ ಕ್ಷಣ ನೋಡಿದರು. ವಾತಾವರಣ ಖುಷಿಕೊಡುವಂತಿತ್ತು. ನಂತರ ಬಂದು ಮೊದಲು ಕುಳಿತಿದ್ದ ಕಲ್ಲ ಮೇಲೆ ಕೂತರು. ಮೌನದ ಕೊಳವನ್ನು ಜಲಚರಗಳು ಪುಳಕ್ ಪುಳಕ್ ಎಂದು ಸದ್ದು ಮಾಡುವಂತೆ ಅವರಿಬ್ಬರ ನಡುವೆ ಮಾತುಗಳು. ಅವನ ಮುಖವನ್ನೇ ನೋಡುತ್ತಾ, ‘ಕ್ರೂರಿ ಮಳೆ. ನಿನ್ನ ಬದುಕನ್ನೇ ನಾಶ ಮಾಡಿತು. ನಿನ್ನ ಕನಸನ್ನೇ ಕಸಿದು ಕೊಂಡಿತು. ಸನ್ಮತಿ, ಆ ನಿನ್ನ ಮುದ್ದು ಪುಟ್ಟಿ ಜಲಪ್ರಳಯದಲ್ಲಿ ಕೊಚ್ಚಿ ಹೋದದ್ದ ನೆನೆಸಿಕೊಂಡರೆ ಕರುಳು ಕಿವುಚಿದಂತಾಗುತ್ತೆ. ಆದರೂ ಎಲ್ಲಾ ಕಳೆದುಕೊಂಡರೂ ಎಷ್ಟು ನಿರ್ಲಿಪ್ತನಾಗಿದ್ದೀಯಲ್ಲಾ. ರಿಯಲಿ ಗ್ರೇಟ್’ ಎಂದಳು.

ಆಕಾಶ ಶುಭ್ರವಾಗಿ ಹೊಳೆಯುತ್ತಿದೆ. ಬಿಸಿಲಿದ್ದರೂ ತಂಗಾಳಿ ಅವರ ಕೆನ್ನೆಗಳ ಸವರುತ್ತಿದೆ. ‘ಎಲ್ಲಾನು ನಮ್ಮ ನಿರ್ಧಾರದಂತೆ ನಡೆಯುವಂತಿದ್ದರೆ ಈ ಬದುಕಿನ ನಿಗೂಢತೆಗೆ ಒಂದು ಅರ್ಥವೇ ಇರುತ್ತಿರಲಿಲ್ಲ,’ ಎಂದು ಮುಂದುವರೆಸಿ, ‘ಈ ಗುಡ್ಡದ ಮೇಲೆ ಬಂದು ನಿಂತರೆ ಆಕಾಶ ಕೈಗೆ ಸಿಗುತ್ತೆ ಎಂದು ನಾನು ಚಿಕ್ಕವನಿದ್ದಾಗ ಅಂದುಕೊಂಡಿದ್ದೆ. ಬೆಳೀತಾ ಬೆಳೀತಾ ನಾವೇ ಆಕಾಶದಲ್ಲಿ. ಇನ್ನೆಲ್ಲಿ ಆಕಾಶವನ್ನು ಮುಟ್ಟುವುದು. ಅಂದು ಕೊಂಡದ್ದು ಅಂದುಕೊಂಡಹಾಗೆ ಇರುವುದಿಲ್ಲ.’ ಎಂದ.

ಅವಳು ಅವನ ಮಾತಿಗೆ ಏನು ಪ್ರತಿಕ್ರಿಯಿಸದೆ ಅವನ ಕಣ್ಣುಗಳನ್ನೇ ನೋಡುತ್ತಾ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು.

ಝಾನ್ಸಿಗೂ ಕಬೀರನಿಗೂ ಹನ್ನೆರಡು ಹದಿಮೂರು ವರ್ಷಗಳ ಅಂತರ. ಸ್ನೇಹಿತರ ವಲಯದಲ್ಲಿ ಕಬೀರ್‍ಗಾಂಧಿ, ಯುನಿವರ್ಸಿಟಿಯಲ್ಲಿ ಲೆಕ್ಚರರ್ ಆಗಿದ್ದಾಗ, ಇವಳು, ಅವನ ವಿದ್ಯಾರ್ಥಿನಿ. ಇವಳಲ್ಲಿರುವ ಓದಿನ ಹಂಬಲಕ್ಕೆ, ಕುತೂಹಲಕ್ಕೆ, ವೈಚಾರಿಕ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ. ಅವಳು ತನ್ನ ವಿದ್ಯಾರ್ಥಿನಿಯಾಗಿದ್ದರೂ ತನ್ನ ಸಮಾನ ಮನಸ್ಕರನ್ನು ನೋಡುವಂತೆ ನೋಡುತ್ತಿದ್ದ. ಯುನಿವರ್ಸಿಟಿಯಲ್ಲಿದ್ದ ಎರಡು ವರ್ಷಗಳಲ್ಲಿ ಇವನಿಗಷ್ಟೆ ಅಲ್ಲದೆ ಕಬೀರನ ಹೆಂಡತಿ ಸನ್ಮತಿಗೂ ಸ್ನೇಹಿತೆಯಾಗಿದ್ದಳು. ಯುನಿವರ್ಸಿಟಿ ಬಿಟ್ಟ ನಂತರ ಅಣೆಕಟ್ಟು ಕಟ್ಟುವುದನ್ನು ವಿರೋಧಿಸಿ ನಡೆಸುತ್ತಿರುವ ಲೋಹಿಯ ಪ್ರಗತಿಪರ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಳು. ಜೊತೆಗೆ, ದಲಿತ,ಆದಿವಾಸಿ ಹಾಗೂ ಗಿರಿಜನ ಮಹಿಳೆಯರಲ್ಲಿ ಶಿಕ್ಷಣದ ಅರಿವು ಮೂಡಿಸುವ ಸಲುವಾಗಿ ಅವರ ಹಟ್ಟಿ ಹಾಡಿಗಳಿಗೆ ಹೋಗಿ ವಿದ್ಯಾಭ್ಯಾಸವನ್ನು ನೀಡಲು ತೊಡಗಿಕೊಂಡಳು. ಆದರೆ ರಾಜಕಾರಣಿ ಹಾಗು ಪೊಲೀಸ್ ಅವರು ನಕ್ಸಲೈಟ್ ಎಂದು ಹಣೆಪಟ್ಟಿ ಕಟ್ಟಿ ಸುಳ್ಳು ಸಾಕ್ಷಿಯನ್ನು ಸೃಷ್ಟಿಸಿ ಅವಳನ್ನು ಜೈಲಿಗೆ ಕಳುಹಿಸಿದ್ದರು. ಕಳೆದವಾರವಷ್ಟೆ ಬಿಡುಗಡೆಗೊಂಡು, ಕಬೀರನನ್ನು ನೋಡಿ ಮಾತಾಡಿಸಿಕೊಂಡು ಹೋಗಲು ಬಂದಿದ್ದಳು.

‘ಏನಾದರು ಮಾತಾಡು ಝಾನ್ಸಿ. ಆಗೆಲ್ಲಾ ಪಟ್‍ಪಟಾ ಅಂತ ಮಾತಾಡುತ್ತಿದ್ದೆ. ಮೌನ ನಿನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ.’ ಎಂದನು.
‘ನನಗೂ ನಿನ್ನ ಥರ ಬದುಕಬೇಕು ಅನ್ನಿಸುತ್ತೆ. ಸುಮ್ಮನೆ ನನ್ನ ಪಾಡಿಗೆ ನಾನು.’ ಎಂದಳು
‘ಇಲ್ಲಿ ಯಾರೂ ತಮ್ಮ ಪಾಡಿಗೆ ತಾವು ಬದುಕುವುದಕ್ಕೆ ಆಗುವುದಿಲ್ಲ. ಬಿಡುವುದೂ ಇಲ್ಲ. ಸುಮ್ಮನೆ ಹೇಳಬಹುದು. ಇದೊಂದು ಜಾಲ. ಎಲ್ಲದರ ನಡುವೆ ಒಂದಕ್ಕೊಂದು ಸಂಬಂಧವಿದೆ.’ ಎಂದನು.
‘ನನಗೂ ಸಂಬಂಧ ಬೇಕು.’ ಅಂದಳು.
‘ಅಂದರೆ?’ ಅಂದ.
‘ನನಗೆ ಪ್ರೀತಿ ಮಾಡಬೇಕು ಅನ್ನಿಸುತ್ತಿದೆ.’ ಅಂದಳು.
‘ಗುಡ್. ಮಾಡು. ಪ್ರೀತಿನೇ ನಿಜವಾದ ಕ್ರಾಂತಿ. ಅದರಲ್ಲೂ ಈ ಜಾತಿಯಿಂದ ಜಿಡ್ಡುಗಟ್ಟಿರುವ ಈ ದೇಶದಲ್ಲಿ ಪ್ರೀತಿಮಾಡಿ ಮದುವೆಯಾಗುವುದೆ ಒಂದು ದೊಡ್ಡ ಕ್ರಾಂತಿ. ಹೃದಯದಿಂದ ಯಾರನ್ನು ಇಷ್ಟ ಪಡುತ್ತಿಯೋ ಅವರನ್ನು ಪ್ರೀತಿಸು. ’ಎಂದ.

ಅವನು ನೋಡುತ್ತಿದ್ದ ಇರುವೆ ಸಾಲು ಎಲ್ಲಿಗೋ ಹೋಗಿ ಮಾಯವಾಗಿತ್ತು. ಇಬ್ಬರು ಎದ್ದು ಊರಿನ ಮುಖಮಾಡಿ ಗದ್ದೆಯ ಬದುವಿನ ಮೇಲೆ ನಡೆದುಕೊಂಡು ಹೋದರು. ಒಂದು ಹಿಂಡು ಹಕ್ಕಿಗಳು ಹಸಿರು ಗದ್ದೆಯಮೇಲೆ ಚಿತ್ರ ಬಿಡಿಸಿಕೊಂಡು ಹೋಗುತ್ತಿವೆಯೇನೊ ಎಂಬಂತೆ ಹಾರಿ ಹೋದವು. ಅವರು ನಡೆಯುತ್ತಾ ಹೋದರು. ಅಂಚಿನಲ್ಲಿ.

***

 

ಎಚ್‌.ಆರ್‌. ರಮೇಶ

ಹೊಸ ತಲೆಮಾರಿನ ಪ್ರತಿಭಾವಂತ ಕವಿ ಎಚ್.ಆರ್. ರಮೇಶ್ ಮೂಲತಃ ಚಿತ್ರದುರ್ಗದ ಬಳಿಯ ಹರಿಯಬ್ಬೆಯವರು. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಕೆಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಹೊಸ ತಲೆಮಾರಿನ ವಿಮರ್ಶಕರಾಗಿಯೂ ಗುರುತಿಸಿಕೊಂಡಿರುವ ಇವರು ಸಮಕಾಲೀನ ಲೇಖಕರ ಕೃತಿಗಳ ಕುರಿತು ವಿಮರ್ಶೆಗಳನ್ನು ಬರೆಯುತ್ತಾರೆ, ಕಥೆ, ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. ಮತ್ತೊಂದು ಕೃತಿ ‘ಅದರ ನಂತರ’ ಪ್ರಕಟವಾಗಿದೆ. 

More About Author