Poem

ಮನಮೋಹನ ಶ್ವಾನ ಸಿಂಬ

ಧರಿಸಿದವರ್ಯಾರು
ನಿನಗೀ ಶ್ವೇತ ವಸ್ತ್ರವ
ಮನಸ್ಸು ಹೃದಯಗಳಂತೆ
ಪರಿಶುದ್ಧ ಮೋಹಕ ತನುವ

ನಿನಗ್ಯಾರೂ ನೀಡರು
ಬೆಚ್ಚನೆಯ ಹಾಸೊದಿಕೆ
ಅಚ್ಚನೆಯ ತೊಗಲಿರಲು
ಋತುಮಾನಗಳಿಗೂ ದಿಗಿಲು

ತಾರೆಗಳ ಮೀರಿಸುವ
ಹೊಳಪು ಕಂಗಳು ನಿನವು
ಕಿಂಚಿತ್ತೂ ಕಲ್ಮಶವಿರದ
ಕದ್ದಿoಗಳ ನಾಚಿಸುವ ನಿಲುವು

ಚೋಟು ಬಾಲವನೆ
ಚಾಟಿಯಂತೆ ಬೀಸುತಲಿ
ಮೋಟು ಪಾದಗಳಲಿ
ಪುಟ್ಟೆಜ್ಜೆಗಳ ಹಾಕುತಿರುವೆ

ಮನವ ಸೂರೆಗೊಂಡ
ಮುದ್ದು ಮೂತಿಯ
ಮೋಹಕ ಚೆಲುವಿನ
ಅಂದದ ಶ್ವಾನ ಮರಿ ನೀ

ಸಿಂಬ ಹೆಸರಿನ ಹುಂಬ ನೀನು
ಚಂಗನ್ಹೆಗರಿ ಕದ್ದು ಓಡುವೆ
ಅಶ್ವದಂತೆ ವೇಗ ಹೊಂದಿಹೆ
ವಿಶ್ವವೆಲ್ಲಾ ಮೆಚ್ಚೋ ಗೆಳೆಯನು

ಬಯಸದವರ್ಯಾರಿಹರು ನಿನ್ನ
ಪ್ರೀತಿಸುವ ಹೃದಯ
ನಿನಗಿಂತ ಬೇರಿಲ್ಲ
ಅನ್ನವಿಟ್ಟ ದಣಿಯ
ಬೆನ್ನು ಬಿಡದೇ ಕಾಯ್ವ.

ಮಾಲಾ ಚೆಲುವನಹಳ್ಳಿ

ವಿಡಿಯೋ
ವಿಡಿಯೋ

ಮಾಲಾ ಚೆಲುವನಹಳ್ಳಿ

ಕವಯಿತ್ರಿ ಆಗಿರುವ ಮಾಲಾ ಚೆಲುವನಹಳ್ಳಿ ಅವರು ಗಜಲ್‌ ಸಂಕಲನಗಳ ಮೇಲೆ ಅಪಾರ ಒಲವು ಹೊಂದಿರುವವರು. ಅನೇಕ ಪತ್ರಿಕೆ ಸೇರಿದಂತೆ ಜಾಲತಾಣಗಳಲ್ಲಿ ಅವರ ಕವನ,ಅಂಕಣಗಳು ಪ್ರಕಟವಾಗಿದೆ.

More About Author