Poem

ಮಾನಿನಿಯ ಅನವರತ ಸಂತೆ

"ಅವ್ವ ಅವ್ವ ನೋಡು ನನ್ನ ವಹಿ"
ಸ್ನಿಗ್ಧ ಮಗುವಿನ ಸುಲಲಿತ ಆಲಾಪ
ಬಿದ್ದ ನಕ್ಷತ್ರಗಳ ಹಸಿರು ತೋರಣ
ಹುಃಗುಟ್ಟಿದವಳ ನಿರ್ಭಾವುಕ ಲೋಕ ಯಾವುದೋ

ಟ್ರಾಫಿಕ್ ಬಯೋಮೆಟ್ರಿಕ್ ಗಿಜಿಗಿಜಿ ಸಂತೆ
ಶಿಕ್ಷಕಿ ಅವ್ವನದು ತೀರದ ಅನಂತ ವೇಗೋತ್ಕರ್ಷ ವೇಳೆಯಹುಡುಕಾಟ
ಕೊಲಂಬಸ್ನಜಲಮಾರ್ಗದಂತೆ
ಜೀವನ ಸುಸ್ತು ಎರಡು ಹೊತ್ತಿನ ಅಡುಗೆ

ಶಾಲೆ ಜಾಣ, ಮಧ್ಯಮ, ದಡ್ಡನ ಮಿಶ್ರ
ಆದ್ರೂ ಲಕ್ಷ್ಯ ಹದ್ದಿನ ಗುರಿಯಂತೆ ಶಿಕ್ಷಣಕ್ಕೆ
ಕಲಿಸಬೇಕು ದಡ್ಡನಿಗೂ ಹಠ ಅಲೆಗ್ಸಾಂಡರ್ ದಂಡಯಾತ್ರೆ
ಪುರಸೊತ್ತಿಲ್ಲ ನಕ್ಷತ್ರ ಮೊಗದ ಮಗನ ಸಫಲತೆಗೆ

ಬೇಡ ಕಲಿಸುವುದು ನಿರ್ಭಾಗ್ಯ ಏಕಲವ್ಯನಿಗೆ
ಪ್ರಶಂಸೆಗಳ ನಕ್ಷತ್ರಗಳ ಸಾಲಿಗೆ ಆಕೆಯ
ಒಂದು ಹೊನ್ನ ನೋಟ, ಕ್ಷಣ ಕ್ಷಣ ತಹತಹಿಸುವ
ನಾಟ್ಯಗಂಧರ್ವ ಮಗು ಆಗ, ಸಗ್ಗ ಗೆದ್ದಂತೆ

ನೊಗ ಭಾರ ಭುಜಕ್ಕೆ, ಕೆಲಸ, ಗಂಡ, ಮಕ್ಕಳು
ಸರಿದೂಗಿಸು ಹೊಲವೆಂಬ ಸಂಸಾರ-ಶಾಲೆ
ಒಲುಮೆ ಕಾರುಣ್ಯ ಹಿಮಾಲಯ ಬೆಟ್ಟ, ಉದ್ಯೋಗಸ್ಥೆ
ತಕ್ಕಡಿ ಜೀವನ ತೂಗಿಸಬೇಕು ತೂಕಡಿಸದೇ

ಮಾಲಾ.ಮ.ಅಕ್ಕಿಶೆಟ್ಟಿ.
ಬೆಳಗಾವಿ.

 

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author