Poem

ಮರವೆಂದರೆ ಬರೀ ಮರವೇ? 

ಸೂಕ್ಷ್ಮ ಮನಸ್ಸಿನ, ಕವಿಯತ್ರಿ ಕತೆಗಾರ್ತಿ ನಾಗರೇಖಾ ಗಾಂವಕರ ಮೂಲತಃ ಉತ್ತರ ಕನ್ನಡದವರು. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಬರ್ಫದ ಬೆಂಕಿ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಲಭಿಸಿದೆ. ಅವರ ‘ಮರವೆಂದರೆ ಬರೀ ಮರವೇ’ ಕವಿತೆ ನಿಮ್ಮ ಓದಿಗೆ.

 

ಮುಗಿಲೆತ್ತರ ಬೆಳೆದರೂ
ಆಳಕ್ಕೆ ಮಣ್ಣಿನೊಂದಿಗೆ
ಬೆರೆತೆ ಇದೆ ಅದರ ಬೇರು.
ಬೆಳೆದಂತೆ ಉಕ್ಕುವ ಅದರ ಕಸುವು
ಆಳಕ್ಕಿಳಿದಂತೆ ಹೆಚ್ಚುವ ದೃಢತೆ.
ಮರವೆಂದರೆ ಬರೀ ಮರವೇ

 

ಮೈತುಂಬಿ ಹಬ್ಬಿದ ರೆಂಬೆಕೊಂಬೆ
ಕುಲುಕಿಸಿ ನಗುವ ಹಚ್ಚಹಸಿರೆಲೆಗಳು
ಅದೆಷ್ಟು ಅಚಲ ಅದರ ನಿಲುವು
ಮರವೆಂದರೆ ಬರೀ ಮರವೇ?

 

ಅನಂತ ಗಾಂಭಿರ್ಯದ ನಡುವೆಯೂ
ಗಾಳಿಯೊಂದಿಗೆ ನುಲಿವ ಅದರ ಒಲವು
ಬೆಳಕಿನೊಂದಿಗೆ ಬೆಸೆದ ಗಟ್ಟಿ ಕಸುವು
ಎಲೆ ಸಂದಿನಲ್ಲಿ ಇಣುಕುವ ರವಿ ರಶ್ಮಿಯ
ಮುದ್ದು ಮಾಡಿ ಮಾತಾಡಿ
ಕನಸು ಹೊಸೆಯುವುದು
ಅರಳುಗಂಗಳ
ಹುಡುಗಿಯ ಮನದ ಬೇರಲ್ಲಿ
ಗೂಡು ಕಟ್ಟಿಸುವುದು
ಮರವೆಂದರೆ ಬರೀ ಮರವೇ?

 

ಮತ್ತೆ ಎಲೆಗಳ ಮರ್ಮರದಲಿ
ನೀಡುಸುಯ್ಯುವುದು
ಕಳೆದುಹೋದ ಕಣ್ಣೀರ ಹನಿ ಒಡಲೆಲೆಗಳ
ತುಟಿಗಂಟಿದ ಪಸೆಯಲ್ಲಿ
ನೆಲಕ್ಕಿಳಿಸಿ ಹಗುರಾಗುವುದು
ಮರವೆಂದರೆ ಬರೀ ಮರವೇ?

 

ಮರದಂತಾಗುವುದು
ಮರವೇ ಆಗುವುದು
ಸುಲಭವೇನಲ್ಲ!!
ಮಾಗಿದ ಮನಸ್ಸಿನ ಮೂಲೆಯಲ್ಲಿ
ಗಟ್ಟಿ ಬೇರೂರಿ
ಆಕಾಶದೆಡೆಗೆ ಚಿತ್ತನೆಟ್ಟು
ಬಂದಿದ್ದ ಬಂದಂತೆ ಸಹಿಸಿ, ಪ್ರೀತಿಸಿ,
ಎಲ್ಲವನ್ನು ನೆಲಕ್ಕಿಳಿಸಿ ಹಗುರಾಗುವುದು
ಮತ್ತೆ ಎಲೆಗಳ ಹಬ್ಬಿಸಿ,
ಹೂ ಬಿಟ್ಟು, ಹಣ್ಣು ನೀಡಿ
ಭೂಮಿಯೊಳಗೆ ಬೇರಿಟ್ಟು
ಸದೃಢವಾಗುವುದು

ಚಿತ್ರ : ಎಂ. ಆರ್‌. ಭಗವತಿ

ನಾಗರೇಖಾ ಗಾಂವಕರ

ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

`ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು. 

ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ, ಬರ್ಫದ ಬೆಂಕಿ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಲಭಿಸಿದೆ. ಆಕಾಶವಾಣಿ ಧಾರವಾಡ, ಕಾರವಾರಗಳಲ್ಲಿ ಚಿಂತನ ಕಾರ್ಯಕ್ರಮಗಳಲ್ಲಿ ಕತಾವಾಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಅವರದು.

ಅಲ್ಲದೆ 2018ರ ಸಂಕ್ರಮಣ ಕಾವ್ಯ ಪ್ರಶಸ್ತಿ, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ  ಕಥಾ ಬಹುಮಾನ, ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋರ್ನಿಯಾ ಕಾವ್ಯಾಂಜಲಿಯಲ್ಲಿ ತೃತೀಯ ಕಥಾ ಬಹುಮಾನ ಸಂದಿವೆ.

More About Author