Poem

ಮಾತು ಬಲ್ಲವನ ಮಗ ಮೂಕ ನಾನು.....

ಕನ್ನಡದ ಭರವಸೆಯ ಕತೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರದವರು. ಅವರ ಮೊದಲ ಕವನ ಸಂಕಲನ ‘ಬಯಲು’. ಅವರ ‘ಹಿಂಡೆಕುಳ್ಳು’ ಕತೆಗೆ ಸಂಗಾತದ ಎರಡನೇ ಬಹುಮಾನ ಲಭಿಸಿದ್ದು ಅವರ ‘ಮಾತು ಬಲ್ಲವನ ಮಗ ಮೂಕ ನಾನು’ ಕವಿತೆ ಇಲ್ಲಿದೆ.

ಮಾತು ಬಲ್ಲವನ ಮಗ ಮೂಕ ನಾನು
ಹಾಗಂತಾ ಹುಟ್ಟು ಮೂಕನಲ್ಲ..
ನನ್ನ ನಾಲಿಗೆಯನ್ನು ಹೊಲಿದುಕೊಂಡಿದ್ದೇನೆ..

ಕರುಳ ಕಿತ್ತುವ ಹಾಗೆ
ನನ್ನ ಮೂಕವೇದನೆ ಹೇಳುವುದಿಲ್ಲ
ಏಕೆಂದರೆ ನೀವು ಕೂಡ ಹುಟ್ಟು ಮೂಕರಲ್ಲ ನನ್ನ ಹಾಗೆ,

ಅಪ್ಪ ಮಾತುಬಲ್ಲವ, ಪಾಲು ಕೊಡದೇ,
ಕಣ್ಣಿಗೆ ಕಾಣುವ ಬಯಲೆಲ್ಲಾ
ನಿನ್ನದೇ ಎಂದು ಆಧ್ಯಾತ್ಮ ಹೇಳುತ್ತಾನೆ,

ಹಸಿವಾಗಿದೆ, ಅಪ್ಪನಿಗೆ ಕಿಂಕರ
ನಾದದಿಂದ ಜೈ ಜೈ ಅನ್ನಲೇ,,,
ಹೊಲಿಗೆಯನು ಬಿಚ್ಚಿಕೊಂಡು

ನನ್ನ ಅಪ್ಪನನ್ನು ನಾನೇ ಸನ್ನೆಯಿಂದ ಬೈದರೂ,
ಊಟ ಕೇಳಿದರೂ, ಜನ ಕೇಸು ದಾಖಲಿಸುತ್ತಾರೆ,
ಮತ್ತೆ ಹೊಲಿಗೆ ಅಳುಕಿ ನೋವು ಕೊಡುತ್ತವೆ..

ಸಿಕ್ಕಿದ್ದು ತಿಂದರೂ ನೋವಿಲ್ಲ ಕರುಣೆಯಿಲ್ಲ
ಆತನಿಗೆ, ಅದಕ್ಕೊಂದು ವೇದಾಂತ ಹೇಳುತ್ತಾನೆ..

ಅಪ್ಪನಿಗೆ ಮಕ್ಕಳ ಚಿಂತೆಯಿಲ್ಲ
ಆತ್ಮರತಿಗೊಳಗಾಗಿ ತನ್ನದೇ ಸೆಲ್ಫಿ,
ಮುಂದೆ ಬಾಯ್ತೆರೆದ ನಿಂತ ನಮ್ಮನ್ನು ನೋಡುವುದೇ ಇಲ್ಲಾ.

ಅಪ್ಪನಿಗೆ ನಾನೆಂದರೆ ಸಿಟ್ಟು ಕಾರಣ,
ಅಪ್ಪ ಕಲಿಸಿದ ಪ್ರೀತಿ, ಪ್ರೇಮ, ಭಕುತಿ,
ನನಗೆ ನಕಲಿ ಎನಿಸಿಬಿಟ್ಟಿವೆ....

ಅಪ್ಪನೆಂದರೆ- ಮಾತುಬಲ್ಲವ
ನಾನೆಂದರೆ-ಹುಟ್ಟು ಮೂಕನಲ್ಲ

ಚಿತ್ರ : ವೀರಪ್ಪ ತಾಳದವರ

ಅಮರೇಶ ಗಿಣಿವಾರ

ಸ್ಪಂದನೀಯ ಕಥೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ 1989 ಜೂನ್ 01 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ "ಬಯಲು" 2009 ರಲ್ಲಿ ಪ್ರಕಟಣೆ ಕಂಡಿದ್ದು ಮೊಟ್ಟಮೊದಲ ರಾಜ್ಯ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ "ಹಿಂಡೆಕುಳ್ಳು" ಕಥೆಗೆ ಸಂಗಾತ ಬಹುಮಾನಗಳು ಲಭಿಸಿದೆ.   ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ಶಿಕ್ಷಣ ಪದವಿ ಪಡೆದಿದ್ದಾರೆ. 2008ರಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ ನೇಮಕಗೊಂಡು ಪ್ರಸ್ತುತ ತುರುವಿಹಾಳ ಅಂಚೆ ಕಛೇರಿಯಲಿ ಉಪ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮ್ತತಿತರ ಕತೆ ಮತ್ತು ಕವನ ವಿಮರ್ಶೆ, ಪ್ರಬಂಧ, ಲೇಖನಗಳು ರಾಯಚೂರಿನ ಆಕಾಶವಾಣಿಯಲ್ಲಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ರಾಯಚೂರು ವಾಣಿ, ಸುದ್ದಿಮೂಲ, ರಾಯಚೂರ ಸುದ್ದಿಬಿಂಬ, ಅವಧಿ ಇ-ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ.

More About Author