Poem

ಮೆಸ್ಸೀ ಹೇರ್ ಡೊಂಟ್ ಕೇರ್

ಒಳ್ಳೇ ಸ್ಲೋಗನ್
ಹೇರ್ ಬಿಟ್ಟರು,
ಕೆಟ್ಟರೂ, ಕಟ್ಟಿದರೂ ...
ಬಣ್ಣಗೆಟ್ಟರೂ, ಬಣ್ಣ ಹಚ್ಚಿದರೂ,
ರಂಗು ರಂಗಾಗಿ ಹಾರಾಡಿದರೂ,
ಡೊಂಟ್ ಕೇರ್,

ಮುಖಕ್ಕೆ ಅರಿಶಿನ
ಹಣೆಗೆ ಕುಂಕುಮ,
ಮುಡಿಗೆ ಹೂವು
ಮೂಗಿಗೆ ಮೂಗುತಿ,
ಪತಿವ್ರತೆ,

ಹರಿದ ಬಟ್ಟೆ, ಹೊಲೆದ ಬಟ್ಟೆ
ಚಡ್ಡಿ, ಪ್ಯಾಂಟೂ, ಗೀಂಟೂ,
ಬಣ್ಣ ಗೆಟ್ಟ ಟಾಪ್,
ಬನಿಯನ್ ಆದ್ರೂ ಸಾಕು,
ಅವರವರ ಭಾವಕ್ಕೆ,......
ಅವರವರ ಭಕುತೀಗೆ...
ಇಷ್ಟ ಪಟ್ಟರೆ ಇರು, ಇಲ್ಲವೇ,
ಡೊಂಟ್ ಕೇರ್,

ಬಿಗಿಯುವ ದಪ್ಪತಾಳಿ
ಅವನ ಕಣ್ಣೋಟಕ್ಕೆ
ಚಲಿಸುವ ಹಾಡು.. ಪಾಡು..
‘ಪ್ರೀತಿ’ ಯ ಮಾತು ಅಂತಿರಲಿ,
ಇಷ್ಟದ ದೈವವೋ? ದೆವ್ವವೋ?
ಕುತ್ತಿಗೆಯೊಡ್ಡಿ ಕುರಿಯಾದ ಮ್ಯಾಲೆ,
ಸಮಾಜದ ಕಟ್ಟುಪಾಡು,
ಕಟ್ಟಿಕೊಂಡವರ ಹಾಡು,

ಪ್ರೀತಿಸಿಯೇ ಕೊಟ್ಟ ಉಂಗುರ
ಸ್ವೀಕಾರ? ನಕಾರ? ನಿನ್ನ ಮರ್ಜಿ,
ಬೇರೆ, ಬೇರೆ, ಬಣ್ಣದ ಸಾಕ್ಸ್
ಎರಡೂ ಪಾದಕ್ಕೆ....
ಚಪ್ಪಲಿಯೂ ಆಗಬಹುದು
ಬೇರೆ, ಬೇರೆಯೇ,
ಎಲ್ಲಾ ಒಂದೆ, ಪಾದ ರಕ್ಷಣೆ,

ವಯಸ್ಸು ಗಿಯಸ್ಸು
ಸುಮ್ಮೆ ನಂಬರ್,
ಐವತ್ತೊ..... ಅರವತ್ತೊ
ಬಾಯ್ ಫ್ರೆಂಡ್, ಗೀಯ್ ಫ್ರೆಂಡ್
ನೋ ಪ್ರಾಬ್ಲಮ್.......

ಉಪವಾಸ, ವನವಾಸ,
ದಪ್ಪನೆಯ ಗಂಟು ಕೂದಲಿಗೆ,
ದೇವ್ರು, ಗುಡಿ, ಗೋಪುರ,
ವಾನಪ್ರಸ್ಥ.....
ಹಗ್ಗಿಂಗ್.. ಕಿಸ್ಸಿಂಗ್ ಕೇಳೋರಿಲ್ಲ
ಉಂಟು, ವಿಧಿ ವಿಧಾನ,
ಟ್ರಾವೆಲಿಂಗ್, ಡೇಟಿಂಗ್
ವೆರಿ ಕಾಮನ್.....
ಮೆಸ್ಸೀ ಹೇರ್ ಡೊಂಟ್ ಕೇರ್.

ಚಿನ್ನ...... ವಜ್ರ......
ಸಮಾಜದೆದರು ಮುಖವಾಡ,
ಕ್ರೌರ್ಯವಂತೂ, ನೋ...........
ಬೇಯುವ, ನೋಯುವ,
ನಾಟಕಗಳಿಗೆ
ರಹದಾರಿ ಇಲ್ಲ.. .....
ಮೆಸ್ಸೀ ಹೇರ್ ಡೊಂಟ್ ಕೇರ್.

- ಶಾಂತಾ ಜಯಾನಂದ್

ಶಾಂತಾ ಜಯಾನಂದ್

ಕವಯತ್ರಿ ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು . ಜಿಲ್ಲೆಯ ತರೀಕೆರೆಯವರು. ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದ ಶಾಂತಾ ಜಯಾನಂದ್ ಅವರು ಸಾಹಿತ್ಯಿಕ ಚರ್ಚೆ, ಸಂಗೀತ, ಕಾವ್ಯರಚನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ. ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ  ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದಾರೆ. 

ಕೃತಿಗಳು: ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ (ಕವನ ಸಂಕಲನ)

More About Author