Poem

ಮೈ ಮರವು

ಇಳಿ ಸಂಜೆ
ಆ ಮರ
ಕೈಗಳನ್ನು ಚಂದಿರನತ್ತ ಒಡ್ಡಿ
ಬಿಳಿ ಆಕಾಶದ ಕ್ಯಾನ್ವಾಸಲ್ಲಿ
ಬಿಡಿಸಿಟ್ಟ ಕಪ್ಪು ಚಿತ್ರದಂತೆ
ಅಲುಗಾಡದೆ ನಿಂತು ಬಿಟ್ಟಿದೆ
ಬಹುಶ: ಗಾಳಿಯು ಬೀಸಣಿಕೆಯನ್ನು

ಮರೆತು ನಿಂತಿರಬೇಕು
ಉಸಿರಾಡಲು ಮರೆತ
ಅಥವಾ ಪ್ರಾಣಾಯಾಮ
ಕಪಾಲ ಬಾತಿಯಲ್ಲಿ ನಿರತವಾದ
ಯೋಗಿಯಂತೆ ಉಸಿರನ್ನು
ಚೆಂಡು ಮಾಡಿಕೊಂಡಿರಬಹುದು

ಸೂಯ೯ ಮುಳುಗುವ ಮೊದಲು
ಇದೇ ಮರ ಹಸಿರು ಹಸಿರಾಗಿ
ಬಳ್ಳಿಗಳು ಬಳಸಿರುವ ತೋಳುಗಳ ನಡುವೆ ಕಿಚಿಕಿಚಿ
ಕಚಗುಳಿಗೆ ಉಕ್ಕಿದ ನಗುವಲ್ಲಿ ಹೊಟ್ಟೆ ಹಿಡಿದುಕೊಂಡು
ಗಟ್ಟಿಯಾಗಿ ನಿಲ್ಲಲಾಗದೆ ವಾಲಾಡುತ್ತಿತ್ತು

ನನ್ನ ಕೆಂಪಗಿನ ಹೃದಯ
ಆ ಮರಕ್ಕೇ ಅಂಟಿಕೊಂಡು ಚಿಗುರು ಕೆಂಪಾಗಿ ಹಸಿರು ಎಲೆಯಾಗಿಯೇ ಬಿಟ್ಟಿತ್ತು
ಅರೆ! ಇಷ್ಟು ಎಲೆಗಳು ಮರಕ್ಕೆ ಯಾಕಾದರೂ ಬೇಕೋ?ಹೇಗೆ ಹುಡುಕಲಿ ನನ್ನ ಒಂದೇ ಒಂದು ಹೃದಯವನ್ನು?
ನಾನೇ ಒಂದು ಮರವಾಗಿದ್ದೇನೆ
ಮೈಮರೆವು...
ಮೈ ಮರವಾದ ಹಾಗೆ
ಮರೆವು ನಾನಾದ ಹಾಗೆ

ನೋಡ ನೋಡ
ಮೋಡಗಳ ನೀಲಿ ತಟ್ಟೆಗಳಲ್ಲಿ ಕೆಂಪು ಬಣ್ಣವನ್ನು ತುಂಬಿದ ಕಾಣದ
ಬೆರಳುಗಳು ಹಸಿರು ಮರಗಳಿಗೆ
ಬಳಿ ಬಳಿದು ಕಪ್ಪಾಗಿಸಿದ್ದೇ
ಒಂದು ಸೋಜಿಗ !
ಆ ಕಪ್ಪಲ್ಲಿ

ನನ್ನ ಹೃದಯವೂ ಬೆರೆತು ಹೋಗಿದೆ ಈಗ
ಚಂದಿರ ಮರದ ಕೈಯಲ್ಲಿದ್ದಾನೆ
ನಾನೀಗ ಒಂದು ಕಪ್ಪು ಚಿತ್ರ
ಆ ಮರಕ್ಕೆ
ಅಥವಾ ನನ್ನದೇ ನೆರಳು
ಆ ಮರ

ನಾಳೆ
ನೇಸರ ಮತ್ತೆ ಮೂಡಬಹುದು
ನನ್ನನ್ನೇ ಮರೆತು ಎಲೆಯಾಗಿರುವ ನನ್ನ ಹೃದಯ
ಬೆಳಕಲ್ಲಿ
ಮತ್ತೆ ನನ್ನತ್ತ ಬರಬಹುದು
ಹೃದಯವೇ ಆಗಬಹುದು

ಹೌದು...
ಹೃದಯ ಮತ್ತು ಎಲೆಗಳ
ವ್ಯತ್ಯಾಸವೇನು?
ಆ ಮರವನ್ನೇ ಕೇಳಬೇಕು
ಅಥವಾ ಕಾಣದ ಆ ಬೆರಳುಗಳನ್ನು

ಕಾತ್ಯಾಯಿನಿ ಕುಂಜಿಬೆಟ್ಟು

 

ವಿಡಿಯೋ
ವಿಡಿಯೋ

ಕಾತ್ಯಾಯಿನಿ ಕುಂಜಿಬೆಟ್ಟು

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. 

ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’,  ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ಗ್ರಂಥ ಬಹುಮಾನ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ 'ಬಸವರಾಜ ಕಟ್ಟಿಮನಿ ಪ್ರಶಸ್ತಿ', 'ಮೂರು ನಾಟಕಗಳು' ಕೃತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 'ಅರಳು' ಪ್ರಶಸ್ತಿ; ನಿದ್ರಾನಗರಿ ಮಕ್ಕಳ ನಾಟಕಕ್ಕೆ ಉಡುಪಿ ರಥಬೀದಿ ಗೆಳೆಯರು “ಕೆದ್ಲಾಯ ಸ್ಮಾರಕ ಪ್ರಶಸ್ತಿ'....

ಪಳಕಳ ಸೀತಾರಾಮ ಭಟ್ಟರ ಸಮಗ್ರ ಕೃತಿಗಳ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ; ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 'ಗುಳಿಯಪ್ಪ' ಮಕ್ಕಳ ನಾಟಕಕ್ಕೆ ಪ್ರಥಮ ಬಹುಮಾನ (2016), 'ಪಗಡೆಹಾಸು' ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿಯ ಬಹುಮಾನ (2017) ಹಾಗೂ ರಾಜ್ಯ ಯುವ ಬರಹಗಾರರ ಒಕ್ಕೂಟದ ಒಂದನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷೆ (2018)ಯಾಗಿದ್ದರು. 

More About Author