Poem

ಮೂಕ ಹಕ್ಕಿಗಳು

ಹಕ್ಕಿಗಳು ಕುಂತಾವ ನೋಡಿರಾ
ಒಂದು ಪುಟ್ಟ ಸೂರಿನಡಿ
ಬಣ್ಣಹೊದಿಕೆಯ ಆನಿಸಿ

ಬಿರುಕು ಮುರುಕಿನ ನಡುವೆ
ಅಳಿದುಳಿದ ಬಣ್ಣ ಹಾಸುಗಳು ತೂಗ್ಯಾವ
ಈ ಹಕ್ಕಿಗಳ ಕನಸಲೂ
ಬದುಕಿನ ಬಣ್ಣಗಳು ಕೂಡ್ಯಾವೇ?!

ತವಕದಿ ದಿಟ್ಟಿಸುತ
ಕೊಂಚ ನಿಶ್ಚಲ ಭಾವ
ಅಡಗಿಹುದು ಇಲ್ಲಿ
ಏನಿದೇನು ಪರಿ...!

ಅಪ್ಪನಿಲ್ಲ ಅವ್ವನಿಲ್ಲ
ಉದರ ತುಂಬಿಸಲು ಎತ್ತ ಹೋಗಿಹರು
ಇಹುದೇ ಪರಪಂಚ ಮಜಲುಗಳು ನಿತ್ಯವೂ

ಕಾದಿಹವು ಮರಿ ಹಕ್ಕಿಗಳು ಕಾತರದಿ
ಒಂದು ಮಾಯೆಗೆ, ಬತ್ತದ ಕನಸಾ ಹೊತ್ತು
ಕೌತುಕದಿ ಬಟ್ಟಲ ಕಂಗಳರಳಿಸಿ
-ಜಾತಕ ಪಕ್ಷಿಯಂತೆ

ಕಣ್ಣುಗಳು ಕತೆ ಹೇಳುತಿವೆ
ಮಾತು ಮರೆತು ಮೌನ ಅಪ್ಪಿ
ಆಸೆಕಂಗಳು ಹೊಳೆಯುತಿವೆ

ತುತ್ತು ಕೂಳಿಗೆ ಎದುರು ನೋಡುತಲೇ
ಬಯಕೆ ಕಂಗಳು ಬತ್ತಿವೆ
’ನನಗೆ ನೀನು ನಿನಗೆ ನಾನು
ಹಸಿವೆ ಇಂಗಿದರೇನ ಅಲ್ಲವೇ’

ಈ ಬಣ್ಣದ ಹೊದಿಕೆ ಸಾಕಲ್ಲವೇ
ಸದ್ಯಕೆ ನಮ್ಮ ಭಾವನೆಯ
ಬೆಚ್ಚನಿಡಲು, ಎನುತಿದೆ
ಈ ಕಂದಮ್ಮಗಳ ಉಸಿರು

--ಧಾರಿಣಿ ಮಾಯಾ

 

ಧಾರಿಣಿ ಮಾಯಾ

ಧಾರಿಣಿ ಮಾಯಾ ಅವರು ಮೈಸೂರಿನ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದು, ಓದು- ಬರಹದಲ್ಲಿ ಆಸಕ್ತಿ, ಬರವಣಿಗೆಯನ್ನು ಪ್ರಾರಂಭಿಸಿ ಹವ್ಯಾಸಿ ಬರಹಗಾರ್ತಿಯಾಗಿ, ಸಾಹಿತ್ಯ ಕಣಜವು ಕಥೆ, ಕವನ, ಲೇಖನ ಹಾಗೂ ಲಲಿತ ಪ್ರಬಂಧಗಳ ಪ್ರಕಾರಗಳನ್ನು ಒಳಗೊಂಡಿದೆ. ಬಹುತೇಕ ಬರಹಗಳು ಭೂಮಿಕಾ, ಸುಧಾ, ತರಂಗ, ವಿಶ್ವವಾಣಿ, ವಿಜಯ ಕರ್ನಾಟಕ, ಮಂಗಳ, ಕರ್ಮವೀರ, ಹಾಗೂ ವಿನಯವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ನೇಯ್ದೆನುಡಿ' ಎಂಬ ಮಾಸಿಕ ಪತ್ರಿಕೆಯಲ್ಲಿ ಇವರ ಅಂಕಣ ಬರಹಗಳು ಕಳೆದ ಮೂರು ವರ್ಷಗಳಿಂದ ಸತತವಾಗಿ ಮೂಡಿ ಬರುತ್ತಿವೆ. ಚಿತ್ರಕಲೆ, ವಾಲ್ ಪೇಂಟಿಂಗ್, ಅಡುಗೆ, ಸ್ಟ್ರೀಟ್ ಫೋಟೋಗ್ರಾಫಿ ಹವ್ಯಾಸವಾಗಿದ್ದು ಚಿಕ್ಕಂದಿನಿಂದಲೂ ನೃತ್ಯ, ನಾಟಕ ಇವರ ನೆಚ್ಚಿನ ರಂಗಗಳು, ಕೌಂಟುಬಿಕ ಆಧಾರಿತ “ಮನೋರಮೆಯರ ತಲ್ಲಣಗಳು” ಎಂಬ ನಾಟಕವನ್ನು (ಮ್ಯೂಸಿಕಲ್ ಡ್ರಾಮಾ) ರಚಿಸಿ, ನಿರ್ದೇಶಿಸಿ ನಟಿಸಿದ್ದಾರೆ.

ಕೃತಿ: ಮೌನದ ಚಿಪ್ಪಿನೊಳಗೆ

More About Author