Poem

ಮೂಕ ಸಾಕ್ಷಿ

ಒಂದು ದ್ವಂಸ ಇನ್ನೊಂದು ವಿದ್ವಂಸ
ಒಂದು ನಾಶ ಇನ್ನೊಂದು ವಿನಾಶ
ಬಣ್ಣ ಹಸಿರೋ ಕೇಸರಿಯೋ
ಇನ್ನಾವುದೋ...
ಮುಗಿಲೆತ್ತರಕ್ಕೆ ಚಿಮ್ಮಿದ್ದು ಮಾತ್ರ
ಮನುಷ್ಯ ರಕ್ತ ದೇಹರೂಪದಲ್ಲಿ
ಕಗ್ಗೊಲೆಯಾಗಿದ್ದು ಮಾನವೀಯತೆ
ಅನಾಥವಾಗಿ ರಕ್ತದಲಿ ಬಿದ್ದು ಬಿಕ್ಕಳಿಸಿದ್ದು
ಹಣ್ಣು ಹೂವು ಪೆನ್ಸಿಲ್ಲು ಅಳತೆ ಟೇಪು
ಮತ್ತು ಅಮಾಯಕ ಸುಂದರ ಕಾಗದ
ವಿಲವಿಲ ಒದ್ದಾಡಿ ಸತ್ತಿದ್ದು
ಶ್ರಮ ಜೀವಿಯ ಬೆವರ ಹನಿಗಳು
ಬೀದಿಪಾಲಾಗಿದ್ದು ಅವಲಂಬಿತರ
ಗರೀಬ ಮನಸ್ಸುಗಳ ಕಣ್ಣೀರು
ಮಣ್ಣುಪಾಲಾದ ಅನಾಥರ ಬದುಕು
ಹೀಗೆ ಪ್ರತಿನಿತ್ಯ ಪ್ರತಿಕ್ಷಣ
ಬಡವರ ಕತ್ತು ಕೊಯ್ಯುವ
ಕಣ್ಣು ಕೀಳುವ ರೊಟ್ಟಿ ಕಸಿದು
ಧರೆಯಲ್ಲಿ ಕೈಲಾಸ ಕಟ್ಟುವ
ರಕ್ತ ಸಮುದ್ರದಾಚೆಯ ಸ್ವರ್ಗ
ಸುಖಕೆ ಹಪಹಪಿಸುವ ಧರ್ಮಾಂದರ
ಕಚ್ಚಾ ಕನಸಿನ ಸರಕನ್ನೆ ಅಫೀಮವಾಗಿಸಿ
ಸಮಾಜಕೆ ವಿಷ ಹಂಚುವ ಯಂತ್ರಗಳನು
ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು
ಕಾಯುವ ಸರ್ಪಗಾವಲು,
ಕಳ್ಳ ಪೋಲಿಸ್ ಆಟಕೆ
ಮೂಕ ಸಾಕ್ಷಿಯಾಗುವ
ಸಮತೂಕದ ಕುರುಡು ತಕ್ಕಡಿ !

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author