Poem

ಮೌನ

ಮೌನವೇ ಹಾಗೆ,
ಭಾವದ ತೀವ್ರತೆ ಹೆಚ್ಚಾದಂತೆ ಭಾಷೆಗೆ ನಿಲುಕದ
ಅನುಭಾವಕ್ಕೆ ಸಾಧನವಾಗಿ
ಹಲವು ಪದಾರ್ಥಗಳಿಗೆ
ಅನಂತಾನಂತ ನೀರವ ದಿಶೆಯಾಗಿ
ಭಾಷೆಗೆ ಮೊದಲು
ಮೌನವೇ ಭಾವಕ್ಕೆ ಆಲಿಂಗನ
ಕಾನನದ ಜೀವಿ
ಗಂಭೀರ ಮೌನಿ ಅದರೊಳಗೆ
ಬದುಕಿನ ಮರ್ಮವಿಹುದೊ

ಸೀತೆಯ ಪರಿತ್ಯಾಗ
ರಾಮನ ಕಡುಮೌನ
ಅರಿತವರು ಅರಿದಿಹರು ಆ ದಿವ್ಯ ಮೌನ
ಅಚಲ ನಂಬಿಕೆಯಲ್ಲಿ
ಬುದ್ಧ, ಮಹಾವೀರರು
ಮೌನತಪ ಗೈದಿಹರು ಜಗದ ಸಂಕರಕೆ
ಮೌನದಲಿ ಶಾಂತಿಯಿದೆ
ಮೌನದಲಿ ಕ್ರಾಂತಿಯಿದೆ
ಮಮಕಾರ ನಾಶವಿದೆ
ಜೀವನೋತ್ಸಾಹವಿದೆ

ದ್ರೌಪದಿಯ ವಸ್ತ್ರಾಪಹರಣ
ಪಾಂಡವರ ಕಲಿಮೌನ
ಧರ್ಮ ಅಧರ್ಮದ ಭೀಕರತೆ
ಮೌನ ಕ್ರೌರ್ಯ, ಹಗೆತನಕ್ಕಲ್ಲ
ಅಂತರಂಗದ ದರ್ಶನಕೆ
ಚಿತ್ತನಿರೋದಕೆ,
ಆತ್ಮ ಸಾಕ್ಷಾತ್ಕಾರಕೆ
ದಿವ್ಯ ಬೆಳಕಿನ ದಾರಿಗೆ
ಮೌನ ಮೌನ ಮೌನ

- ಬಸವರಾಜ ಹೊನಗೌಡರ

ಬಸವರಾಜ ಹೊನಗೌಡರ

ಬಸವರಾಜ ಹೊನಗೌಡರ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದವರು. ವೃತ್ತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರು. ಪ್ರವೃತ್ತಿಯಿಂದ ಅತ್ಯುತ್ತಮ ಓದುಗರು, ಬರಹಗಾರರು. ತಮ್ಮ ಕಚೇರಿಯ ಒತ್ತಡದ ಕೆಲಸ ಕಾರ್ಯಗಳ ಮಧ್ಯೆಯೂ ಸಮಯವನ್ನು ಹೊಂದಿಸಿಕೊಂಡು ಓದುವುದನ್ನು ತಮ್ಮ ಮುಖ್ಯ ಹವ್ಯಾಸವನ್ನಾಗಿ ಮಾಡಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕಾವ್ಯ, ಕಾದಂಬರಿಗಳ ಓದುವ ಗೀಳನ್ನು ಬೆಳೆಸಿಕೊಂಡ ಇವರು, ಹಿಂದುಳಿದ ವರ್ಗಗಳ ಮಕ್ಕಳ ವಸತಿ ನಿಲಯದಲ್ಲಿನ ಮಕ್ಕಳೊಂದಿಗೆ ಸದಾ ಬೆರೆಯುತ್ತ ತಮ್ಮ ಜ್ಞಾನ ಸಂಪಾಧನೆಯ ಸಂಪತ್ತನ್ನು ಮಕ್ಕಳಿಗೆ ಧಾರೆ ಎರೆಯುತ್ತ ಅವರ ದೈಹಿಕ, ಭೌದ್ಧಿಕ," ಸಾಮಾಜಿಕ, ಸಂವೇಧನಾತ್ಮಕ ವಿಕಾಸಕ್ಕೆ ಹಗಲಿರುಳು ಶ್ರಮಿಸುತ್ತಿರುವವರು.

ಕೃತಿಗಳು: " ಮಡಿಲು" ಕಥಾಸಂಕಲನ

More About Author