Poem

ಮೌನತೀರ

ದಪ್ಪ ಮಳೆ ಹನಿಗಳು
ತಿರುವುಗಳಲ್ಲಿ ಮರಗಳ
ಎಡೆಯಲ್ಲಿ ಅಡಗಿದ್ದವು ..

ತೆಳು ಕಣ್ಣೀರಿನ ಪರದೆ
ಸರಿಸುತ್ತ ನೋಡಿದಳು
ಅವನು ಸಿಗರೇಟು
ಕೊಡವುತ್ತಿದ್ದ

ನಿತ್ಯಪುಷ್ಪದ ಪಕಳೆಗಳು
ಮುದುಡಿಕೊಂಡಿದ್ದವು
ಬ್ರಹ್ಮಕಮಲ ಆಗಷ್ಟೇ
ಅರಳಿತ್ತು ..

ಮುಖ ತೊಳೆದು ಮಲಗುವ
ಹುಸಿ ಸಿದ್ಧತೆ ನಡೆಸಿದಳು
ಹಸಿ ಗೋರಂಟಿ ವಾಸನೆ
ವಾಕರಿಸಿತು ..

ಟಿ.ವಿ ಸದ್ದು ದೊಡ್ಡದಾಗಿ
ತಡೆಯಲಸಾಧ್ಯವೆನಿಸಿ
ಮಾಳಿಗೆಯ ಮೆಟ್ಟಿಲು
ಹತ್ತಿದಳು

ಮಾಮೂಲಿಯಂತೆ
ಕೈಗಳು ಅಗಳಿ
ಜಡಿದವು
ಬಿಕ್ಕಳಿಸಿದಳು ....

- ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ

ಕವಯತ್ರಿ ವಿಜಯಶ್ರೀ ಹಾಲಾಡಿ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.

ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ ( ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ) ,

ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007) , ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ. 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 

 

More About Author