Story

ಮೌನಿಯೊಡಲ ದನಿ

ಇದೊಂದು ಮೋಹಕ ಮಾಯಾ ಜಗತ್ತು! ಇಲ್ಲಿ ಬದುಕಿಗಿಂತ ಬದುಕಿನ ಸುತ್ತ ತಳುಕು ಬಿದ್ದ ಭ್ರಮೆಗಳದೇ ಭಯಂಕರ ವೈಭವ. ಇಲ್ಲಿ ಗೋಚರಿಸುವುದೆಲ್ಲ ವಾಸ್ತವವೋ, ಕಲ್ಪನೆಯೋ, ಕನಸೋ, ಕನವರಿಕೆಯೋ ತಿಳಿಯುವ ಹೊತ್ತಿಗೆ ಬದುಕೇ ಮುಗಿದಿರುತ್ತದೆ! ಆದರೂ ಇದರ ಮಡಿಲಿಗೆ ಬಿದ್ದು ಬದುಕಿಗಾಗಿ ಹವಣಿಸುವ ಹಂಬಲ! ಓಡುವವರು ಓಡುತ್ತಲೇ ಇರುತ್ತಾರೆ. ನಡೆಯುವವರು ನಡೆಯುತ್ತಾರೆ. ಬೀಳುವವರು ಬೀಳುತ್ತಾರೆ. ಏಳುವವರು ಏಳುತ್ತಾರೆ. ತುಳಿಯುವವರು ತುಳಿಯುತ್ತಲೇ ಇರುತ್ತಾರೆ. ಹೀಗೆ ಬದುಕು ಅರಸಿ ಇಲ್ಲಿಗೆ ಬಂದು ಅಳಿದವರೆಷ್ಟೋ, ಉಳಿದವರೆಷ್ಟೊ. ಆದರೂ ಮನದ ಮಾಯೆಗೆ ಮತ್ತೆ ಮತ್ತೆ ಇದನ್ನೆ ಅಪ್ಪಿಕೊಳ್ಳುವ ಬಯಕೆ!

ದಟ್ಟ ಕಾಡಿನಂತಹ ಪರಿಸರದಲ್ಲಿ ಮನೋಹರ ಮೌನಿಯಾಗಿ ಹೆಜ್ಜೆ ಹಾಕುತ್ತಿರುವಾಗ ಅಂತರಂಗದಲ್ಲಿ ಇಂತಹ ತಾರ್ಕಿಕ ಪ್ರಜ್ಞೆಯೊಂದು ಜಾಗೃತವಾಯಿತು. ಅವನು ಹಾಗಿರುವುದನ್ನು ಬಹಳ ಹೊತ್ತಿನಿಂದ ಗಮನಿಸಿದ್ದ ಹೆಂಡತಿ ಸುಮಾ `ಯಾಕ್ರಿ ಏನೂ ಮಾತಾಡವಲ್ರಲ್ಲ. ಇದ್ದಕ್ಕಿದ್ದಂಗ ಮೌನಿಯಾಗಿಬಿಡ್ತೀರಿ. ಏನಾತು ನಿಮಗ?' ಎಂದು ಕೇಳಿದಳು. `ಯೇ ಹಂಗೇನಿಲ್ಲಾ. ನಾನು ಯಾವ ಸಂದರ್ಭದಾಗ ಹೆಚ್ಚು ಮಾತಾಡ್ತಿನಿ ಹೇಳು. ನಿನಗ ಗೊತ್ತೈತಲ್ಲ. ವರ್ಷಕ್ಕೋ ಆರು ತಿಳಗಳಿಗೋ ಒಮ್ಮೆ ಹಿಂಗ ಬೆಂಗಳೂರಿಗೆ ಬಂದಾಗೆಲ್ಲಾ ಈ ಪಾರ್ಕ್‍ಗೆ ಬಂದ್ರ ಏನೋ ಒಂಥಾರಾ ಮನಸಿಗೆ ಸಮಾಧಾನ ಆದಂಗಕ್ಕತಿ. ಮಾತಿಗಿಂತ ಮೌನವಾಗಿದ್ರ ಮನಸು ತಣ್ಣಗಿರತೈತಿ' ಅಂದ. ಅದನ್ನು ಕೇಳಿಸಿಕೊಡ ಜೊತೆಗಿದ್ದ ಹದಿನೈದು ವರ್ಷದ ಮಗ ತೇಜಸ್ವಿ `ಅಪ್ಪಾ ಈಗ ನಿಮ್ಮ ಮನಸು ತಣ್ಣಗಾತಿಲ್ಲ. ಹಂಗಾದ್ರ ನಮಗ ಐಸ್‍ಕ್ರಿಂ ಕೊಡಸ್ರಿ ನಮ್ಮ ಹೊಟ್ಟಿನೂ ತಣ್ಣಗಾಗತೈತಿ' ಎಂದು ತಮಾಶೆ ಮಾಡಿ ನಕ್ಕ.

`ಹೌದ್ ನೋಡ್ರಿ ಐಸ್ ಕ್ರೀಂ ತಿನ್ನಲಾರದ ಭಾಳ ದಿನಾ ಆತು' ಎಂದಳು ಸುಮಾ. ಆ ಹೊತ್ತಿಗೆ ಅವರು ಕಬ್ಬನ್ ಉದ್ಯಾನದ ದಟ್ಟ ಮರಗಳ ನಡುವಿನ ಹೂ ತೋಟದ ಬಳಿಯ ಆಸನವೊಂದರ ಬಳಿ ಬಂದಿದ್ದರು. ಸಂಜೆ ಐದು ಗಂಟೆಯ ಸಮಯ. ಇಬ್ಬರೂ ಆ ಆಸದಲ್ಲಿ ಕುಳಿತರು. ಮನೋಹರ ಮಗನಿಗೆ ಹಣ ತಗೆದು ಕೊಟ್ಟ. ತೇಜಸ್ವಿ ಹತ್ತಿರದ ಮಳಿಗೆಯೊಂದಕ್ಕೆ ಐಸ್‍ಕ್ರೀಂ ತರಲು ಹೊರಟ. ಅವನು ಹಾಗೆ ಹೋಗುತ್ತಿರುವುದನ್ನೇ ಗಮನಿಸಿದ ಸುಮಾ `ನೋಡ್ರಿ ಮಗಾ ಹದಿನೈದು ವರ್ಷಕ್ಕ ಹೆಂಗ ನಿಮ್ಮ ಎತ್ತರಕ್ಕ ಬೆಳದಬಿಟ್ಟಾ. ಅವನ್ನ ನೋಡಿದ್ರ ನನಗ ಆಶ್ಚರ್ಯ ಅಕ್ಕತಿ. ನನಗ ಇಷ್ಟು ದೊಡ್ಡ ಮಗಾ ಅದಾನಾ ಅಂತ!.. ನೋಡ್ರಿ ದಿನಾ ಹೋಗಿದ್ದ ಗೊತ್ತಾಗಲಿಲ್ಲ. ನಮ್ಮ ಲಗ್ನಾ ಆಗಿ ಹದಿನೇಳು ವರ್ಷ ಕಳದು ಹೋದ್ವು' ಎಂದಳು. 

`ಹೌದು. ವರ್ಷ ಅನ್ನೋವು ತಿಂಗಳು ಕಳದಂಗ ಕಳದು ಹೋದ್ವು. ಹೆಂಗೆಂಗೊ ಇದ್ದ ನಮ್ಮ ಬದುಕು ಹಿಂಗಾತು. ನನಗ ಲಗೂ ಲಗ್ನಾ ಮಾಡಿದ್ದು ಒಂದು ರೀತಿ ಛೊಲೊನ ಆತು ಅನಸತೈತಿ. ಇಲ್ಲದಿದ್ರ ಈ ವಯಸ್ಸಿಗೆ ನನಗ ಇಷ್ಟು ದೊಡ್ಡ ಮಗಾ ಇರತಿದ್ದನೇನು?' `ನನಗಾದ್ರೂ ಏನು ಲಗ್ನಾದಾಗ ಇಪ್ಪತ್ತೊಂದು ವರ್ಷ ಅಷ್ಟ. ನಿಮಗ ಇಪ್ಪತ್ತೈದು. ಖರೆ ಹೇಳಬೇಕಂದ್ರ ನಮಗ ಸರಿಯಾದ ಟೈಮಿಗೆ ಮದುವಿ ಆಗೈತಿ. ಆದ್ರ ಆ ವಯಸ್ಸಿನ್ಯಾಗ ಇಬ್ರಿಗೂ ಸ್ವಲ್ಪ ಬುದ್ಧಿ ಕಡಮಿ ಇತ್ತು' ಎಂದು ನಸು ನಕ್ಕಳು ಸುಮಾ. `ಅದ ಕಾರಣಕ್ಕ ಅಲ್ಲೇನು ನಾನು ನಿನ್ನ ಮದುವಿ ಮಾಡಿಕೊಳ್ಳಾಕ ಒಪ್ಪಿಕೊಂಡಿದ್ದು' ಎಂದು ಮನೋಹರ ತಮಾಶೆ ಮಾಡಿ ನಕ್ಕ. 

`ಯಾರು ನಿಮಗ ಅಷ್ಟು ದೂರದಿಂದಾ ನನ್ನ ಹುಡಿಕ್ಕೊಂಡು ಬಾ ಅಂದಿದ್ದು' ಎಂದು ಅವಳೂ ನಕ್ಕಳು. ಆ ಹೊತ್ತಿಗೆ ತೇಜಸ್ವಿ ಎರಡು ಕೋನ್ ಐಸ್‍ಕ್ರೀಂನೊಂದಿಗೆ ಬಂದು, ಒಂದನ್ನು ಸುಮಾಳಿಗೆ ಕೊಟ್ಟ. ಆ ಹೊತ್ತಿಗಾಗಲೇ ಮೆಲ್ಲಗೇ ಕರಗತೊಡಗಿದ್ದ ಕ್ರೀಂ ಗಮನಿಸಿದ ಮನೋಹರ `ಲಗೂ ಲಗೂ ತಿನ್ರಿ. ಇಲ್ಲದಿದ್ರ ಕ್ರೀಂ ಕರಗಿ ಸೋರತೈತಿ' ಎಂದ. ಇಬ್ಬರೂ `ಹೂಂ' ಎಂದು ತಿನ್ನತೊಡಗಿದರು.

ಕ್ಷಣ ಕ್ಷಣಕ್ಕೂ ಕರಗಿ ದ್ರವವಾಗುತ್ತಿದ್ದ ಐಸ್‍ಕ್ರೀಂ ಗಮನಿಸಿದ ಮನೋಹರನಿಗೆ, `ಅದರಂತೆಯೇ ಕರಗುವ ಆಯುಷ್ಯ ಒಂದು ದಿನ ಮುಗಿದು ಹೋಗುತ್ತದೆ' ಅನಿಸಿಬಿಟ್ಟಿತು. 'ಬದುಕು ಇಷ್ಟು ಸುಂದರವಾಗಿರುವಾಗ ಸಾವಿನ ಯೋಚನೆ ಯಾಕೆ' ಎಂದುಕೊಂಡು ಮತ್ತೂ ಮೌನಿಯಾದ. ಖುಷಿಯಿಂದ ಐಸ್‍ಕ್ರೀಂ ತಿನ್ನುತ್ತಿದ್ದ ಮಗನ ಮುಖವನ್ನೇ ನೋಡಬೇಕೆನಿಸಿತು. ಹಾಗೆ ನೋಡುತ್ತಲೇ ಇರುವಾಗ ಅಂತರಂಗದಲ್ಲಿ ಗತ ಬದುಕಿನ ದಿನಗಳು ಸಾಗದ ಅಲೆಗಳಂತೆ ಉಕ್ಕಿ ಉಕ್ಕಿ ಸ್ಮøತಿಯಲ್ಲಿ ಜಾಗೃತಗೊಳ್ಳತೊಡಗಿದವು. `ಸುಮಾ, ಹನ್ಯಾಡು ವರ್ಷದ ಹಿಂದ ನಾವಿಬ್ರೂ ಇದ ಜಾಗಾದಾಗ ಕುಂತು, ಈ ಊರಾಗ ಇರಬೇಕೊ ಅಥವಾ ನಮ್ಮೂರಿಗೆ ವಾಪಸ್ ಹೋಗಬೇಕೊ ಅನ್ನೋದು ತಿಳೀದಂಗಾಗಿ ಅದರ ಬಗ್ಗೆ ಮಾತಾಡಿಕೊಂಡಿದ್ವಿ. ಅದು ನೆನಪೈತೆಲ್ಲಾ ನಿನಗ' ಎಂದು ಕೇಳಿದ.

`ನೆನಪೈತ್ರಿ. ಅದು ನಮ್ಮ ಜೀವನದ ಪ್ರಶ್ನೆಯಾಗಿತ್ತು. ಅದನ ಹೆಂಗ ಮರ್ಯಾಕಾದೀತು?' ಎಂದಳು ಸುಮಾ. ಅದನ್ನು ಕೇಳಿಸಿಕೊಂಡ ತೇಜಸ್ವಿ `ಅಪ್ಪಾ ಹನ್ಯಾಡು ವರ್ಷ ಅಂದ್ರ ಆವಾಗ ನಾನೂ ಇದ್ದಿರಬೇಕಲ್ಲಾ?' ಎಂದು ಕೇಳಿದ. `ಹೂನಪಾ ಇದ್ದಿ. ಅವಾಗ ನಿನಗ ಎರಡೂವರಿ ವರ್ಷ. ಹಂಗ ದಪ್ಪ ಕುಂಬಳಕಾಯಿ ಇದ್ದಂಗಿದ್ದಿ. ಎಲ್ಲೆ ಹೋದ್ರೂ ನಿನ್ನ ಬಗಲಾಗ ಹೊತಗೊಂಡ ಹೋಗಬೇಕಾಕ್ಕಿತ್ತು. ನಿನ್ನ ಹೊರೊದ್ರಾಗ ನನಗಾರ ಸಾಕು ಸಾಕಾಕ್ಕಿತ್ತು. ಈಗ ನೋಡು ಆಟಿದ್ದಾಂವ ಇಷ್ಟುದ್ದ ಬೆಳದೀದಿ, ನಿಮ್ಮಪ್ಪನಂಗ' ಎಂದಳು ಸುಮಾ.

`ಹೂನವ್ವಾ ಮತ್ತ ನಾನು ನಮ್ಮಪ್ಪನ ಮಗಾನ' ಎಂದು ನಕ್ಕ ತೇಜಸ್ವಿ. `ನಮ್ಮ ಬದುಕು ನೆಲೆಗೆ ಹಚ್ಚಾಕ ನಾನು ಎಷ್ಟು ಹೋರಾಟ ಮಾಡಿದ್ನೋ ಅದಕ್ಕಿಂತ ಹೆಚ್ಚಾಗಿ ಅಕಿ ನಿನ್ನ ನೋಡಿಕೊಳ್ಳಾಕ ಹೋರಾಟ ಮಾಡ್ಯಾಳ. ಆ ದಿನಗಳೊಳಗ ಅಕಿ ಕಷ್ಟಾ ಪಟ್ಟಿದ್ದು ನೆನಪಿಸಿಕೊಂಡ್ರ ನನ್ನ ಶ್ರಮಾ ಏನೂ ಅಲ್ಲಾ ಅನಸತೈತಿ' ಎಂದು ಮನೋಹರ ಮುಖ ಕೆಳಗೆ ಹಾಕಿದ. `ನಾನು ಕೂಸಿನ್ನ ನೋಡಿಕೊಂಡು ಮನ್ಯಾಗ ಇರತಿದ್ದೆ ರ್ರೀ.. ಆದ್ರ ನೀವು, ಆ ದಿನಗಳೊಳಗ ಈ ಅಪರಿಚಿತ ಊರಿಗೆ ಬಂದು, ಗುರ್ತು-ಪರಿಚಯ ಇಲ್ಲದವರ ಕಡೆ ಹೋಗಿ, ಮಳಿ ಬಿಸಲು ನೋಡದ ಬೆಳಗಿನಿಂದ ರಾತ್ರಿ ತನಕ ದುಡದು ಬರತಿದ್ರಿ. ನಿಮ್ಮ ಆ ಮೌನ ಹೋರಾಟದ ಮುಂದ ನಂದೇನೂ ದೊಡ್ಡ ಕೆಲಸ ಅಲ್ಲ ಬಿಡ್ರಿ' ಎಂದಳು. 

ಇಬ್ಬರ ಮಾತುಗಳನ್ನು ಆಲಿಸುತ್ತಿದ್ದ ತೇಜಸ್ವಿ ಐಸ್‍ಕ್ರೀಮಿನ ಕೊನೆಯ ಭಾಗವನ್ನು ತಿನ್ನದೇ ಗಂಭೀರವಾಗಿ ಯೋಚಿಸಿ, `ಅಪ್ಪಾ ನೀವ್ಯಾಕ ಅವಾಗ ಹುಬ್ಬಳ್ಯಾಗ ಇರದ ಬೆಂಗಳೂರಿಗೆ ಬಂದ್ರಿ? ಊರು ಬಿಟ್ಟು ಬರೋ ಅವಶ್ಯಕತೆ ಏನಿತ್ತು?' ಎಂದು ಕೇಳಿದ. `ಅದೊಂದು ದೊಡ್ಡ ಕತಿ ಬಿಡಪಾ. ಈಗ ಅದನ್ನೆಲ್ಲಾ ನೆನಪು ಮಾಡಿಕೊಂಡ್ರ ಕೈ ನಡುಗಿ ಕಣ್ಣಾಗ ನೀರು ಬರತಾವು' ಎಂದ ಮನೋಹರ. `ನೋಡು ತೇಜು, ಈಗ ನಿಮ್ಮಪ್ಪಾ ನಿನನಗ ಏನೂ ಕಡಮಿ ಆಗದಂಗ ನೋಡಿಕೊತಾರ. ಆದ್ರ ಅವ್ರು ನಿನ್ನ ವಯಸ್ಸಿನವ್ರಿದ್ದಾಗ ಅವ್ರಿಗೆ ಛೋಲೊದೊಂದು ಅಂಗಿ-ಚೆಡ್ಡಿ, ಒಂದೊತ್ತು ಊಟಾನೂ ಸರಿಯಾಗಿ ಸಿಗತಿದ್ದಿಲ್ಲಂತ. ಆವಾಗವಾಗ ನನ್ನ ಮುಂದ ಹೇಳಿಕೊತಿರತಾರ' ಎಂದಳು ಸುಮಾ. `ಅಪ್ಪಾ ನೀವು ಅವಾಗ ಬೆಂಗಳೂರಿಗೆ ಯಾಕ ಬರಬೇಕಾತು?' ಎಂದು ತೇಜಸ್ವಿ ಮತ್ತೆ ಕೇಳಿದ. `ದುಡಮಿ ಸಲುವಾಗಿ ಬರಬೇಕಾತಪಾ. ಅವಾಗ ನನಗ ಕೆಲಸಾ ಇರಲಿಲ್ಲಾ. 

ಏನೇನೊ ಹೋರಾಟ ಮಾಡಿ ಶಿಕ್ಷಣಾ ಕಲಿತಿದ್ದೆ. ಆದ್ರ ಕಾಲೇಜು ಮುಗಿಸಿ ಹೊರಗ ಬಂದಮ್ಯಾಲೆ ಗೊತ್ತಾತು ಈ ಸಮಾಜದೊಳಗ ಶಿಕ್ಷಣಕ್ಕಲ್ಲ ರೊಕ್ಕಕ್ಕ ಮಾತ್ರ ಬೆಲೆ ಐತಿ ಅನ್ನೋದು. ಹಂಗೋ ಹಿಂಗೋ ಕೈ ಕಸುಬು ಮಾಡಿಕೊಂಡು ದಿನಾ ಕಳಿಯೋ ಹೊತ್ತಿನ್ಯಾಗ ಮನಿ ಮಂದಿ ನನಗ ಲಗ್ನಾ ಮಾಡಿಬಿಟ್ರು. ಅದು ಸರಿನೋ ತಪ್ಪೋ ಅನ್ನೋದನ್ನ ತಿಳಕೊಳ್ಳೊವಷ್ಟೂ ವಿವೇಚನೆ ಇಲ್ಲದ ನಾನೂ ಒಪ್ಪಿದೆ. ಮುಂದ ಎರಡು ವರ್ಷಕ್ಕ ನೀನು ಹುಟ್ಟೀದಿ. ಹೆರಿಗೆ, ಹಾಸ್ಪಿಟಲ್ ಖರ್ಚು, ಬಾಣಂತನಾ ಅದು ಇದು ಅಂತ ಆ ಕಾಲದಾಗ ಹದಿನೈದು ಸಾವಿರ ರೂಪಾಯಿ ಸಾಲ ಆಗಿತ್ತು. 

ತಿಂಗಳ ರೇಷನ್ ಖರ್ಚಿಗೆ ರೊಕ್ಕಾ ಹೊಂದಸಾಕ ಆಗದ ಮತ್ತೊಬ್ಬರ ಕಡಿಂದ ಅನಿಸಿಕೊಬೇಕಾಕ್ಕಿತ್ತು. ಅಂಥಾ ಸಂದರ್ಭದಾಗ ಈ ಹದಿನೈದು ಸಾವಿರ ರೂಪಾಯಿ ಸಾಲಾನೂ ನನಗ ಭಾಳ ದೊಡ್ಡ ಹೊರಿ ಆಗಿತ್ತು. ಆದ್ರ ನಿನ್ನ ನಗು, ಅವ್ವನ ಸಂಭ್ರಮ ನೋಡ್ತಿದ್ರ ನನಗ ಭಾಳ ಖುಷಿ ಅಕ್ಕಿತ್ತು. ನಿಮ್ಮ ಖುಷಿ ಮುಂದ ಆ ಸಾಲಯೇನು ದೊಡ್ಡದಲ್ಲ ಅನಸತಿತ್ತು. ಹೆಂಗೋ ಆರು ತಿಂಗಳು ಕಳದ್ವು. ಆದ್ರ ನಮಗೂ ಇನ್ನೊಬ್ರ ಎಷ್ಟು ದಿನಾ ಅಂತ ಊಟಾ ಹಾಕತಾರ. ಹಂಗ ಹಾಕಿದವ್ರು ಹಂಗಸತಿದ್ರು. `ಇಷ್ಟು ದಿನಾ ನಿನಗ ಊಟಾ ಹಾಕಿದ್ದೂ ಅಲ್ದ ಈಗ ನಿನ್ನ ಹೆಂಡ್ತಿ ಮಕ್ಕಳಿಗೂ ಹಾಕಬೇಕಾಗೇತಿ' ಅಂತ ಚುಚ್ಚತಿದ್ರು.

ಕೆಲಸಾ ಅಂತ ಹುಡಿಕಿಕೊಂಡು ಹೋದ್ರ ಕೆಲಸಾ ಕೊಟ್ಟೋರು ಎರಡು-ಎರಡೂವರಿ ಸಾವಿರಕ್ಕ ದನಕ್ಕ ದುಡಿಸಿಕೊಂಡಂಗ ದುಡಿಸಿಕೊಳ್ಳೊರು. ಅಷ್ಟು ರೊಕ್ಕಾ ಯಾವುದಕ್ಕೂ ಸಾಲತಿರಲಿಲ್ಲ. ಆ ಹೊತ್ತಿನ್ಯಾಗ ನಾನು ನನ್ನ ಸ್ವಂತ ಕಾಲಮ್ಯಾಲೆ ನಿಂತು, ಸಾಲಾ ತೀರಸಬೇಕಾಗಿತ್ತು. ನಮ್ಮೆಲ್ಲಾರ ಹೊಟ್ಟಿ ತುಂಬಸಬೇಕಾಗಿತ್ತು. ಹಂಗಾಗಿ ದುಡಮಿ ಸಲುವಾಗಿ ಹುಬ್ಬಳ್ಳಿ ಬಿಟ್ಟು ಬೆಂಗಳೂರು ಸೇರೊ ನಿರ್ಧಾರ ಮಾಡಿದೆ. ಧೈರ್ಯ ಮಾಡಿ ಆರು ತಿಂಗಳ ಕೂಸಾಗಿದ್ದ ನಿನ್ನ ಕರಕೊಂಡು ಬಂದು ಬೆಂಗಳೂರು ಸೇರಿದ್ವಿ. ಒಂದಿಷ್ಟು ದಿನಾ ನಿಮ್ಮನ್ನ ಯಾರದೋ ಮನ್ಯಾಗ ಇರಿಸಿ ಕೆಲಸಾ ಹುಡುಕಿದೆ. ಐದು ಸಾವಿರ ಪಗಾರಕ್ಕ ಹೆಂಗೊ ಕೆಲಸಾ ಸಿಕ್ತು. ಆದ್ರ ಈ ಊರಿನ ಟ್ರಾಫಿಕ್ ಸಮಸ್ಯೆ ಅನ್ನೋ ಚಕ್ರವ್ಯೂಹದಾಗ ಸಿಕ್ಕು ಬೆಳಗ್ಗೆ ಮನಿಯಿಂದ ಕೆಲಸದ ಜಾಗ ಸೇರೋದು, ರಾತ್ರಿ ಅಲ್ಲಿಂದ ಮತ್ತ ಮನಿ ಸೇರೋದ ದೊಡ್ಡ ಸರ್ಕಸ್ ಆಗಿಬಿಡತಿತ್ತು. ಅರ್ಧಾ ಬದುಕು ಸಿಟಿ ಬಸ್‍ನ್ಯಾಗ ಕಳದು ಹೋಗತೈತೇನೊ ಅನಿಸಿಬಿಡತಿತ್ತು. ಅವ್ವಾ ನಿನ್ನ ನೋಡಿಕೊಳ್ಳೊದ್ರಾಗ ದಿನಾ ಕಳಿಬೇಕಾಕಾಕ್ಕಿತ್ತು.

ಹೆಂಗೋ ದಿನಾ ಹೋದ್ವು. ಬೆಂಗಳೂರಾಗ ನಮ್ಮದು ಅಂತ ಬಾಡಗಿ ಮನಿ ಮಾಡಿಕೊಂಡ್ವಿ. ದಿನಾ ಕಳುದ್ವು. ತಿಂಗಳು ಕಳದ್ವು. ಹಂಗ ಎರಡು ವರ್ಷ ಕಳದಿದ್ದು ಗೊತ್ತ ಆಗಲಿಲ್ಲ. ಆರು ತಿಂಗಳದವನಿದ್ದ ನಿನ್ನ ಎರಡೂವರಿ ವರ್ಷ ಬೆಳಸೋದ್ರಾಗ ಅವ್ವ ಕರಗಿ ಹೋಗಿದ್ಲು. ನಾನು ಕೆಲಸಾ-ಮನಿ ಅಂತ ಸುತ್ತಿ ಸುತ್ತಿ ಬೆಂಗಳೂರಿನ ರಸ್ತೆಯೊಳಗ ಕಳದು ಹೋಗಿದ್ದೆ. ನಂದು ಅನ್ನೋದು ಒಂದು ಬಾಡಗಿ ನೆರಳು, ಎರಡು ಹೊತ್ತು ಊಟಾ ಕಂಡುಕೊಡು, ಊರಾಗ ಮಾಡಿದ್ದ ಸಾಲಾ ತೀರಸೊ ಹೊತ್ತಿಗೆ ನಮಗ ಬದುಕಿನ ಬಗ್ಗೆ ನಿರಾಶೆ ಹುಟ್ಟಿಬಿಟ್ಟಿತ್ತು. ಬದುಕು ಅಂದ್ರ ಇಷ್ಟನಾ ಅನ್ನೋ ಜಿಗುಪ್ಸೆ ಮೂಡಿತ್ತು. ಅದೂ ಅಲ್ಲದ ನನ್ನೊಳಗ ಹುಟ್ಟಿ ಬೆಳೆದ ಊರಿನ ಸೆಳೆತಾ ಶುರುವಾಗಿತ್ತು. ನಿಮ್ಮನ್ನೆಲ್ಲಾ ಕರಕೊಂಡು ಮನಿ ಮಂದಿನ್ನ ಭೆಟ್ಟಿ ಆಗಾಕ ಹುಬ್ಬಳ್ಳಿಗೆ ಹೋದಾಗಲೆಲ್ಲಾ ಮತ್ತ ಬೆಂಗಳೂರಿಗೆ ವಾಪಸ್ ಬರಾಕ ಯಾಕೊ ಮನಸು ಒಪ್ಪತಿರಲಿಲ್ಲ. ಹುಬ್ಬಳ್ಯಾಗ ಬದಕಾಕ ದಾರಿ ಇಲ್ಲಾ ಅನಿಸಿದ್ರೂ ಹೆಂಗೊ ಬದುಕಿಬಿಡಬಹುದು, ಆದ್ರ ಬೆಂಗಳೂರಿನ್ಯಾಗ ನಾನು ಎಲ್ಲೋ ಕಳದು ಹೋಗಿಬಿಡತಿನೇನೊ ಅನಸಾಕ ಶುರುವಾಗಿಬಿಟ್ಟಿತ್ತು. ಖರೆ ಹೇಳಬೇಕಂದ್ರ ಬದುಕು ಅಂದ್ರ ಏನು ಅಂತ ಪ್ರಶ್ನೆ ಹುಟ್ಟಿದ್ದು ಅವಾಗಲೆ. ಯಾಕಂದ್ರ ಆ ಹೊತ್ತಿಗಾಗಲೇ ಬದುಕು ಅನ್ನೋದು ನನಗ ಭಾಳ ಪಾಠಾ ಕಲಿಸಿತ್ತು. ಹಂಗಾಗಿ ನನ್ನನ್ನ ನಾನ ಕಳಕೊಂಡು ಪಗಾರದ ಸಲುವಾಗಿ ಬೆಂಗಳೂರಿನ್ಯಾಗ ಬದಕೋಕಿಂತ, ನಾನು ನನ್ನೊಳಗ ಇದ್ದು ಹಸದ ಹೊಟ್ಟಿಲೆಯಾದ್ರೂ ನಿಮ್ಮಕೂಡ ನನ್ನೂರಿನ್ಯಾಗ ಬದಕೋದು ಛೋಲೊ ಅಂತ ನಿರ್ಧಾರ ಮಾಡಿದೆ. ಅವ್ವಗೂ ಇದ ಬೇಕಾಗಿತ್ತು. ಕೈಯಾಗ ಒಂದುಷ್ಟು ರೊಕ್ಕಾನೂ ಉಳದಿದ್ವು.

ಒಂದಿನಾ ನಾವಿಬ್ರೂ ಹಿಂಗ ಇದ ಜಾಗಾಕ್ಕ ಬಂದಿದ್ವಿ. ಇಲ್ಲೇ ಕುಂತು ಗಂಟೆಗಟ್ಟಲೆ ಮಾತಾಡಿಕೊಂಡು `ಇನ್ನ ಬೆಂಗಳೂರು ಸಾಕು' ಅಂತ ಗಟ್ಟಿ ನಿರ್ಧಾರ ಮಾಡಿದ್ವಿ. ಮನಿ ಸಾಮಾನು ಎಲ್ಲಾ ಹೆಂಗ ಗಂಟುಮೂಟೆ ಕಟಿಗೊಂಡು ಪ್ಯಾಸೆಂಜರ್ ರೈಲಿನ್ಯಾಗ ಹೊತಗೊಂಡು ಬಂದಿದ್ವೊ ಅದ ಗಂಟುಮೂಟೆ ಕೂಡ ವಾಪಸ್ ಊರು ಸೇರಿದ್ವಿ. ನಾ ಹುಟ್ಟಿ ಬೆಳೆದ ನೆಲದ ಮ್ಯಾಲೇ ನಿಂತು ನಾನಿನ್ನೂ ಜೀವನದಾಗ ಮುಂದ ಬರಬೇಕು ಅನ್ನೋ ಹಠಾ ನನ್ನೊಳಗ ಚಿಗುರೊಡದಿತ್ತು. ಅದಕ್ಕಾಗಿ ಆ ವಯಸ್ಸಿನ್ಯಾಗೂ ಹೆಂಗಾದ್ರೂ ಮಾಡಿ ಉನ್ನತ ಶಿಕ್ಷಣ ಓದಬೇಕು ಅನ್ನೋ ತುಡಿತ ಹೆಚ್ಚಾಗಿತ್ತು. ಅದರ ಪ್ರಯತ್ನನೂ ನಿರಂತರ ಇದ್ದಿದ್ದರಿಂದ ಒಂದು ಸಂದರ್ಭದಾಗ ಅದಕೂ ಕಾಲ ಕೂಡಿ ಬಂತು. ಆದ್ರ ಫೀಸ್ ಕಟ್ಟಾಕ ರೊಕ್ಕಾ ಇರಲಿಲ್ಲಾ. ಒಂದಿನಾ ಇವಳ ಕಿವ್ಯಾಗಿನ ಬೆಂಡೋಲಿ ಅಡಾ ಇಟ್ಟು ಮೂರು ಸಾವಿರ ರೂಪಾಯಿ ತಂದು ಕಡೆಗೂ ಫೀಸ್ ಕಟ್ಟಿದೆ. ಖರೆ ಹೇಳಬೇಕಂದ್ರ ಆ ಓದು ನನ್ನ ಬದುಕಿನ ದಿಕ್ಕ ಬದಲಿಸಿಬಿಟ್ತು. ಇದರ ನಡುವ ಕೆಲಸಕ್ಕ ಸೇರಿದ್ರೂ ಹಠಾ ಬಿಡದ ಓದಿ ಪರೀಕ್ಷೆ ಬರದೆ. ಪಿಯುಸಿ ಓದಿದಾವ ಹಂಗ ಒಮ್ಮೆಗೆ ಮಾಸ್ಟರ್ ಡಿಗ್ರಿ ಪಾಸ್ ಆದೆ. 

ನನ್ನ ಕೆಲಸದ ಅನುಭವದ ಕೂಡ ಆ ಸರ್ಟಿಫಿಕೇಟು ನನ್ನ ಸ್ಥಾನಮಾನ ಹೆಚ್ಚಿಸ್ತು. ಮುಂದ ಸ್ವಲ್ಪ ದಿನದಾಗ ನನ್ನೂರೊಳಗ ನನಗ ದೊಡ್ಡ ಸಂಸ್ಥೆಯೊಳಗ ಕೆಲಸಾ ಸಿಕ್ತು. ಶ್ರದ್ಧೆಯಿಂದ ಕೆಲಸಾ ಮಾಡಿದ್ದಕ್ಕ ವರ್ಷ-ವರ್ಷಕ್ಕೂ ನನ್ನ ಪಗಾರ ಹೆಚ್ಚಿಗೊಂತನ ಹೋತು. ಯಾರ ಕೈ ಕೆಳಗ ಕೆಲಸ ಕಲಿತಿದ್ದೆನೊ ಅವ್ರ ನನ್ನತ್ರ ಕೇಳಿ ಕೆಲಸ ಮಾಡೋ ಹಂಗಾತು. ಅನ್ನಾ ಆಶ್ರಯಕ್ಕ ಯಾರು ನನ್ನ ಹಂಗಿಸಿದ್ರೋ ಅವ್ರ ನನ್ನ ಕಡೆ ಕೇಳಿ ಇಸಕೊಳ್ಳೊ ಹಂಗಾತು. ಇವತ್ತ ನಾನು ಇನ್ನೊಬ್ಬರಿಗೆ ಕೈ ಎತ್ತಿ ಕೊಡುವಷ್ಟು ಬೆಳದೀನಿ. ಆದ್ರ ನನಗ ನನ್ನ ಹೆಂಡ್ತಿ-ಮಗಾನ ನನ್ನ ಪ್ರಪಂಚ ಅಂತ ಅನಕೊಳ್ಳೊ ನನ್ನ ಮನಸು ಮಾತ್ರ ಯಾವತ್ತಿಗೂ ಬದಲಾಗಲೇ ಇಲ್ಲಾ.

ಇಷ್ಟೆಲ್ಲಾ ಮಾಡಿದ್ದು ಎಲ್ಲರ ಮುಂದ ನಾನು ಮೆರಿಬೇಕು ಅನ್ನೋ ಉದ್ದೇಶದಿಂದ ಅಲ್ಲಾ ಮಗಾ. ಎಲ್ಲರಹಂಗ ನಾನೂ ನನ್ನ ಕಾಲ ಮ್ಯಾಲೆ ನಿಂತು ಬದುಕಬೇಕು ಅನ್ನೋ ಹಠದಿಂದಾ. ಇವತ್ತ ನಿನ್ನ ಕೈ ಹಿಡದು ಹೇಳ್ತಿನಿ. ಇದು ನನಗ ಬಡತನ ಕಲಿಸಿದ ಪಾಠ. ಅನುಭವಗಳು ಕಲಿಸಿದ ಪಾಠಾ. ಅದು ಯಾವ ವಿಶ್ವವಿದ್ಯಾಲಯದಾಗೂ ಸಿಗದ ಪಾಠ. ಅದಕ್ಕ ನಾ ಹೇಳ್ತಿನಿ. ಬಡತನ ಅನ್ನೋದು ದೌರ್ಬಲ್ಯ ಅಲ್ಲಾ. ಪ್ರೇರಕ ಶಕ್ತಿ. ಜಗತ್ತಿನ್ಯಾಗ ಯಾರೂ ಕೆಟ್ಟವರಲ್ಲಾ, ಶತ್ರುಗಳಲ್ಲಾ. ಎಲ್ಲಾರೂ ನಮಗ ಒಂದೊಂದು ರೀತಿ ಅನುಭವ ಕಟ್ಟಿ ಕೊಡ್ತಾರ. ಒಂದು ನೆರಳಿನ್ಯಾಗ ಇದ್ದು, ಎರಡು ಹೊತ್ತು ಉಣ್ಣೊವಾಗ ನಾವು ಅವ್ರನ್ನೆಲ್ಲಾ ಸ್ಮರಿಸಬೇಕು.

ತೇಜು, ನಾನು ನಿನಗ ಹೇಳೊ ಬದುಕಿನ ಪಾಠ ಇದ. ನಮ್ಮ ಕಷ್ಟಕ್ಕ ನಾವ ಹೊಣೆ. ಅದಕ್ಕ ಬೇರೆ ಯಾರನ್ನೂ ದೂರಬಾರದು. ಜೀವನ ಪ್ರೀತಿ, ಕೆಲಸದ ಮ್ಯಾಲೆ ಶ್ರದ್ಧೆ, ನಿರಂತರ ಪರಿಶ್ರಮ ಅನ್ನೋದು ನಮ್ಮಲ್ಲಿದ್ರ ಒಂದು ದಿನಾ ಜಗತ್ತು ನಮ್ಮ ಮುಂದ ತಲಿ ಬಾಗಿ ನಿಲ್ಲತೈತಿ' ಹೀಗೆ ಹೇಳುತ್ತ ಮನೋಹರ ಭಾವುಕನಾಗಿದ್ದ. ತೇಜಸ್ವಿ ಗಂಭೀರವಾಗಿ ಐಸ್‍ಕ್ರೀಮಿನ ಕಡೆಯ ತುತ್ತನ್ನು ತಿನ್ನದೇ ಕೈಯಲ್ಲೇ ಹಿಡಿದು ಅಪ್ಪನ ಮಾತುಗಳನ್ನು ಆಲಿಸುತ್ತಿದ್ದ. ಕಳೆದ ದಿನಗಳು ಕಣ್ಣೆದುರು ಬಂದು ಸುಮಾಳ ಕಣ್ಣುಗಳು ಒದ್ದೆಯಾಗಿದ್ದವು.

`ತೇಜು ಇದನ್ನೆಲ್ಲಾ ನಿನಗ ಹೇಳಬಾರದು ಅನಕೊಂಡಿದ್ವಿ. ಆದ್ರ ನಾವೇನು ಅನ್ನೋದು ನಿನಗ ಗೊತ್ತಾಗಬೇಕಾದ್ರ ಇದು ನಿನಗ ತಿಳಿಲೇ ಬೇಕಾಗಿತ್ತು. ನಾನು ನಿನಗ ಜನ್ಮಾ ಕೊಟ್ಟೆ ಅನ್ನೋದೊಂದು ಬಿಟ್ರ ನಿನಗ ತಂದಿ-ತಾಯಿ ಎಲ್ಲಾ ಅವ್ರ. ಹಂಗಾಗಿ ನಾನು ನಿನಗ ಕೇಳಿಕೊಳ್ಳೊದು ಒಂದ. ಮುಂದ ನೀನು ದೊಡ್ಡವನಾಗಿ ದೊಡ್ಡ ಮನಷಾ ಆಗತಿಯೋ ಇಲ್ವೋ ಗೊತ್ತಿಲ್ಲಾ. ಆದ್ರ ವಯಸ್ಸು ಕಳದು ಅವ್ರು ಆಧಾರಕ್ಕ ಕೋಲು ಹಿಡದು ನಡಿಯೋ ದಿಗಳೊಳಗ ನೀನು ಯಾವತ್ತೂ ಅವ್ರ ಮನಸು ನೋಯ್ಸಬ್ಯಾಡಾ ಪುಟ್ಟಾ. ಯಾಕಂದ್ರ ಅವ್ರು ನಿನಗ ಅಪ್ಪಾ ಮಾತ್ರ ಅಲ್ಲಾ. ಅವ್ವನ್ನ ಕಳಕೊಂಡಿರೊ ನನಗ ಅವ್ವಾ ಆಗಿದ್ದೋರು. ಅವ್ವ ಸತ್ತು ಹದಿನಾಕು ವರ್ಷ ಕಳದ್ರೂ ನನಗ ತವ್ರು ಮನಿ ನೆನಪಾಗದಂಗ ನೋಡಿಕೊಂಡಾರ. ಹಂಗಾಗಿ ನೀನು ಯಾವತ್ತೂ ಅವ್ರ ಕಣ್ಣಾಗ ನೀರು ತರಸಬಾರದು ಪುಟ್ಟಾ' ಎಂದು ಸುಮಾ ತೇಜಸ್ವಿಗೆ ತಲೆ ನೇವರಿಸಿ ಹೇಳಿದಳು.

`ಏನಪಾ ಇವ್ರು ಎಂಜಾಯ್ ಮಾಡಾಕಂತ ಪಾರ್ಕ್‍ಗೆ ಕರಕೊಂಡು ಬಂದು ಹಳೇ ಕತಿನೆಲ್ಲಾ ಬಿಚಗೊಂಡು ಕುಂತ್ರಲ್ಲಾ ಅಂತ ನಿನಗ ಬೇಜಾರಾಗಬಹುದು. ಆದ್ರ ಈ ಜಾಗಾಕ ಬಂದಾಗೆಲ್ಲಾ ನೆನಪುಗಳು ಉಕ್ಕಿ ಬರತಾವು. ಹೊಟ್ಟಿ ತುಂಬಿದಮ್ಯಾಲೆ ಹಸಿವಿನ ಸಂಕಟ ಮರಿಬಾರದು ಅಂತ ಆ ದಿನಗಳನ್ನ ನೆನಪು ಮಾಡಿಕೊಳ್ಳೂದು ಅಷ್ಟ. ಬದುಕು ಅನ್ನೋದು ಯಾವತ್ತೂ ಸ್ಥಿರವಾದದ್ದಲ್ಲ. ಬಂದಿದ್ದನ್ನೆಲ್ಲಾ ಎದುರಿಸೋದಕ್ಕ ಸಿದ್ಧವಾಗಿರಬೇಕು. ನಿನ್ನಿಂದ ನಾ ಬಯಸೋದೇನಂದ್ರ, ನಮ್ಮ ಇಳಿ ವಯಸ್ಸಿನ್ಯಾಗ ನೀನು ನೂರ ರೂಪಾಯಿ ದುಡುದು, ನಮಗ ಒಂದ ಹೊತ್ತು ಊಟಾ ಹಾಕಿದ್ರೂ ಸಾಕು. ನಾವಿರೋತನಕ ನೀನು ಮಾತ್ರ ನಮ್ಮ ಕಣ್ಣಮುಂದ ಇರಬೇಕು. ನಾವು ಬೆಳೆಸಿದ ಗಿಡಾ ನಮ್ಮ ಕಣ್ಣ ಮುಂದ ಹೂಬಿಡೋ ಹಂಗ. ಎಲ್ಲಾ ಅಪ್ಪಾ-ಅವ್ವಾನೂ ಬಯಸೋದು ಇದನ್ನ. ಕಡೆಗಾಲಕ್ಕ ಮಗಾ-ಮಗಳು ನೆರಳಾಗಬೇಕು ಅನ್ನೋದು. ಉದ್ಯೋಗಾ, ರೊಕ್ಕಾ, ಅಧಿಕಾರ, ದೊಡ್ಡಸ್ತಿಕೆ ಹಿಂದ ಬಿದ್ದು ಹುಟ್ಟಿದೂರು-ದೇಶ ಬಿಟ್ಟು ಹೋಗೋದ್ರಾಗ ಯಾವ ಸಾರ್ಥಕತೆನೂ ಇಲ್ಲಾ' ಎಂದು ಮನೋಹರ ಒಡಲ ದನಿಯಿಂದ ನುಡಿದ.

`ಅಪ್ಪಾ ನನಗ ನೀವ ರೋಲ್ ಮಾಡಲ್. ನಾನಿರೋ ಊರಾಗ ಇದ್ದು ನಿಮಗಿಂತಾ ದೊಡ್ಡ ಸಾಧನೆ ಮಾಡ್ತಿನಿ. ಅದರ ಬಗ್ಗೆ ಯೋಚನೆ ಬ್ಯಾಡಾ' ಎಂದು ತೇಜಸ್ವಿ ಒದ್ದೆ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಮಂದಹಾಸದಿಂದ ಹೇಳಿದ. ಅವನ ಮುಖ ನೋಡಿ ಮನೋಹರ, ಸುಮಾ ಮಂದಹಾಸ ಬೀರಿದರು. ಸಂಜೆ ಮಬ್ಬು ಕತ್ತಲೆಗೆ ಹೊರಳುತ್ತಿದ್ದಂತೆ ಆ ಉದ್ಯಾನದಲ್ಲಿ ಛಳಿ ಹೆಚ್ಚಾಗತೊಡಗಿತು. ಬೆಂಗಳೂರಿನ ದೊಡ್ಡ ದೊಡ್ಡ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುಕಿದವು.

ಆಡಿಯೋ

ಕುಮಾರ ಬೇಂದ್ರೆ

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ.

ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ.

ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ಮನಸೆಂಬ ಮಾಯಾವಿ (೨೦೧೭) ಕಥಾ ಸಂಕಲನವಾಗಿದೆ.  ತಲ್ಲಣ (೨೦೧೬), ನೆಲೆ (೨೦೧೧) ಜೋಗವ್ವ (೨೦೦೭) ಇವರ ಕಾದಂಬರಿಗಳಾಗಿವೆ. ಋಣ (೨೦೧೬). ಅಸ್ತಿತ್ವ (೨೦೧೮) ನಾಟಕಗಳನ್ನು ರಚಿಸಿದ್ದು, ಬಯಲು ಬೆರಗು (೨೦೧೭) ಕಾಲಯಾನ (೨೦೦೫) ತುಮುಲ (೨೦೦೦) ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸಂತೆಗೆ ಬಂದವರು (೨೦೦೨) ಎಂಬ ನೀಳ್ಗತೆಯನ್ನೂ ರಚಿಸಿದ್ದಾರೆ.

ಇವರಿಗೆ ಸಂದ ಪುರಸ್ಕಾರ: 2006ರಲ್ಲಿ ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಅಕ್ಕ ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ನಡೆದ ಕಾದಂಬರಿ ಸ್ಪರ್ಧೆಯಲ್ಲಿ ದೊರಕಿತು. ಇವರ ’ಜೋಗವ್ವ' ಕಾದಂಬರಿಗೆ ಪುರಸ್ಕಾರ ದೊರಕಿದೆ. “ನಿರ್ವಾಣ' ಕಥಾ ಸಂಕಲನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ವಾಸುದೇವಾ ಚಾರ್ಯ ದತ್ತಿ' ಪ್ರಶಸ್ತಿ, 'ಋಣ' ನಾಟಕಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನಿಂದ 'ಕಾಕೋಳು ಸರೋಜಮ್ಮ ದತ್ತಿ' ಹಾಗೂ 'ಮನಸೆಂಬ ಮಾಯಾವಿ' ಆಯ್ದ ಕತೆಗಳ ಸಂಕಲನಕ್ಕೆ 'ಜಿ.ಎನ್. ಹೇಮರಾಜ ದತ್ತಿ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ಕಥಾ ಬಹುಮಾನ, ಮುಂಬಯಿಯ ಕನ್ನಡ ಮಾಸಿಕ “ಮೊಗವೀರ' ಆಯೋಜಿಸಿದ್ದ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ. 'ಉತ್ಥಾನ' ಮಾಸಿಕದ ಸಂಕ್ರಾಂತಿ ಕಥಾಸ್ಪರ್ಧೆಯಲ್ಲಿ ಬಹುಮಾನ, 'ಸಂಯುಕ್ತ ಕರ್ನಾಟಕ'ದ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಬಹುಮಾನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಾಜ್ಯೋತ್ಸವದ ಶ್ರೇಷ್ಠ ಕಾವ್ಯ ಪುರಸ್ಕಾರ ಇವರಿಗೆ ಸಂದಿದೆ.

 

More About Author