Poem

ನಡೀತಿದೆ ಬಿಸಿನೆಸ್

"ಪ್ರೀತಿಯೆನ್ನುವುದು ಕಥೆಯೋ?
ಕವಿತೆಯೋ?"
ತನ್ನ ಪುಸ್ತಕದಂಗಡಿಯಲಿ
ಒರೆಸುತ ಪುಟಗಳಿಗಂಟಿದ ಧೂಳ ಬರಿಗೈಯಲಿ
ಕೇಳುವಾಗವನು ಅವಳ ಪುರುಸೊತ್ತಿನಲಿ,
ಕಾತುರವೇನಿಲ್ಲ ಅವನ ಕಣ್ಣಲಿ!

"ಯಾವುದಾದರೂ ವ್ಯತ್ಯಾಸವೇನಿಲ್ಲ,
ಎರಡರಲ್ಲೂ ಯಾರಿಗೂ ಪ್ರೀತಿಯಿಲ್ಲ!"
ಅವಳ ಬೆರಳ ಸಂದಿಯ ನಿಗಿ ನಿಗಿ ಸಿಗರೇಟ್
ಉರಿದುಳಿದ ತುಂಡುಗಳಲ್ಲಿ
ಹುದುಗಿಸಿ ತಲೆ ಅಸು ನೀಗುತ್ತದೆ.

ಮೂಲೆಯಲ್ಲಿದ್ದ ಕಸದ ಡಬ್ಬಿಗೆ
ಕುಳಿತಲ್ಲಿಂದಲೇಗುರಿಯಿಟ್ಟ ಪರಿಗೆ
ಅವಳ ಕೈಲಿದ್ದ ತುಟಿ ಬಿಗಿದ ಪೇಪರು ಕಪ್ಪಿಗೆ
ಇನ್ನೂ ಕೊನೆ ಗುಟುಕಿನ ಸವಿ ಸಣ್ಣಗೆ

ಅವನು ಬೆಪ್ಪಾಗಿ ನೋಡುತ್ತಾನೆ
ಸಿನಿಕತೆ, ಬೈದುಕೊಳ್ಳುತ್ತಾನೆ.
ತನ್ನೊಬ್ಬಳೇ ಗಿರಾಕಿ,
ಅವಳೂ ಲೇಖಕಿ!

"ನಾನೂ, ನೀನೂ
ಗುಡ್ಡೆ ಮಾಡಿದ ತರಗೆಲೆಗಳಂತೆ
ಬಿಡಿ ಬಿಡಿ ಪದಗಳು.
ಎಂದೂ, ಏನನ್ನೂ ಓದದವರಷ್ಟೇ
ನಮ್ಮನ್ನು ಜೋಡಿಸಬಹುದು.

ಪ್ರೀತಿ
ಮೌನಿಯಾದ ಹೃದಯದ ಹಾಡಿಗೆ
ಶ್ರೋತೃವನ್ನು ಹುಡುಕುವುದು, ಇಲ್ಲವೇ
ಶ್ರೋತೃವಾಗುವುದು."

ಅವಳ ಮಾತಿಗೆ ಅವನು ಮುಗುಳು ನಕ್ಕನೆಂದರೆ
ಮತ್ತೊಂದು ಕಪ್ ಚಹಾ ಬಂತು ಎಂತಲೇ.

ಅವಳು ಮಾತು ಬದಲಿಸುತ್ತಾಳೆ
"ಹೇಗೆ ನಡೀತಿದೆ ಬಿಸಿನೆಸ್?"

"ಹೂಂ ನಡೀತಿದೆ ಬಿಸಿನೆಸ್"
ಅವಳು ನಕ್ಕು
ಮತ್ತೊಂದು ಸಿಗರೇಟಿಗೆ ಉಸಿರು ಕೊಡುತ್ತಾಳೆ.

-ಪೂರ್ಣಿಮಾ ಮಾಳಗಿಮನಿ

 

ಪೂರ್ಣಿಮಾ ಮಾಳಗಿಮನಿ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಸ್.ಜೆ.ಎಂ.ಐ.ಟಿ. ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವೀಧರೆ. 

'ಎನಿ ವನ್ ಬಟ್ ದಿ ಸ್ಪೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ (2017) ಸಂಕಲನ ಪ್ರಕಟಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ತಾಂತ್ರಿಕ ಹಾಗೂ ಸಾಹಿತ್ಯಕ  ವಿಷಯ ಕುರಿತ ಲೇಖನಗಳು ಪ್ರಕಟವಾಗಿವೆ. ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಜಂಟಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕೃತಿಗಳು: Anyone but the Spouse- ಇಂಗ್ಲಿಷಿನಲ್ಲಿ ಬರೆದ ಸಣ್ಣ ಕಥೆಗಳ ಸಂಕಲನ, ಇಜಯಾ (ಕಾದಂಬರಿ).

More About Author