Poem

ನಾಲ್ಕು ಪದ್ಯಗಳು

ನೆಲಮೂಲದ ನೋವುಗಳಿಗೆ ದನಿಯಾಗುವ ಕವಿ ಹಂದಲಗೆರೆ ಗಿರೀಶ್ ಅವರ ನಾಲ್ಕು ಕವಿತೆಗಳಿವು. ಸತ್ಯವೆಂಬುದು ಸೂರ್ಯನಷ್ಟೇ ಪ್ರಖರವಾದದ್ದು ಅದನ್ನು ಬಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುವ ‘ಸತ್ಯ ಸೂರ್ಯ’, ಹುಟ್ಟಿದ ಊರು, ಬೆಳದ ಮಣ್ಣಿನ ಸತ್ವದೊಂದಿಗೆ ಕರುಳಿಗಿಳಿವ ‘ಬೇರು’, ಪುರುಷ ಅಹಂಕಾರದ ವಿರುದ್ಧ ನಿಂತು ತಣ್ಣಗೆ ಹೆಣ್ಣಿನ ಬದುಕನ್ನು ಚಿತ್ರಿಸುವ ‘ಮಾಯೆಯ ಅಂಕುಶ’ ಮತ್ತು 'ಎದೆಯ ಕಣ್ಣಿಲ್ಲದವರ ಮೆಚ್ಚಿಸುವುದುದೆಂತು' ಖಾಲಿಯಾಗದ ಗಡಿಗೆಯ ತುಂಬುವುದಾದರೂ ಹೇಗೆ'? ಎನ್ನುತ್ತಲೇ ನೋವಿಗೆ ಮಿಡಿವ, ಕ್ರೌರ್ಯವನ್ನು ವಿರೋಧಿಸುವ ‘ಬಯಲ ಜೋಗಿ’ ಕವಿತೆಗಳು ಇಲ್ಲಿವೆ.  (ಕಲಾಕೃತಿಗಳು- ಚಂದ್ರು ಕನಸು) 

'ಬೇರು'

ಇಲ್ಲೇ
ನಾನು ವಾಸಿಸುತ್ತಿರುವುದು
ಈ ಮಹಾನಗರದ ಗಲ್ಲಿ ಮಹಡಿಗಳಲ್ಲಿ
ನನ್ನಾತ್ಮದ ಬೇರು ಇಳಿದಿರುವುದು
ಅಲ್ಲೇ
ತಲೆಮಾರುಗಳು ನೇಗಿಲುಸವೆಸಿದ
ನಮ್ಮ ಹೊಲದಲ್ಲಿ
ಎರೆಹುಳುಗಳೊಡನೆ
ಸರಸವಾಡುತ್ತಾ

ತೊಟ್ಟಿಕ್ಕುವ ಜಿಪುಣ ನಲ್ಲಿ
ಬಕೇಟು ನೀರಲ್ಲೇ ಜಳಕ
ಮನಸ್ಸು ಜಿಗಿಯುವುದು ಮಾತ್ರ
ಊರಿನ ಕೆರೆಗೆ
ಪಾದಗಳಿಗೆ ಮೀನು
ಮುತ್ತಿಡುವ ಪುಳಕಕ್ಕೇ

ಎಲ್ಲವೂ ಬಿಕರಿಗಿರುವ
ಈ ನಗರದ ಸಾಲು ಸಾಲು
ಅನ್ನದಂಗಡಿ ಅಂಗಳದಲ್ಲಿ
ಗಂಗಳತುಂಬಾ ಉಂಡರೂ
ಹಸಿವಿಂಗುವುದು ಮಾತ್ರ
ಕಿತ್ತಾಡಿತಿಂದ ಹಿಟ್ಟಿನಮಡಕೆ ಸೀಕು,
ಗುಡ್ಡೇಬಾಡಿನ ಕೌಸು
ಸುಟ್ಟುತಿಂದ ಕಾಚಕ್ಕಿ ಅವರೆ ಸೊಗಡು,
ಅವ್ವನ ಬೆರಳಗುರುತಿನ ರೊಟ್ಟಿಗೇ

ಉತ್ತಿ ಬಿತ್ತಿ ಬೆಳೆವಾಗ
ಉಸಿರಿಗಂಟಿದ ಮಣ್ಣಿನ ಘಮ
ಮೈಗಂಟಿದ ಸಗಣಿ ಗಂಜಲದ ಕಮಟು
ಈ ನಗರದ ಯಾವ ಅತ್ತರು ಪೂಸಿಕೊಂಡರೂ
ಮಾಸುತ್ತಿಲ್ಲ


ಸಮಯಸೋರುವ
ಟ್ರಾಫಿಕ್ ಸಿಗ್ನಲ್ ಧಾವಂತದಲ್ಲಿ
ಭರವಸೆ ಹೊತ್ತುತರುವ
ಮಳೆಮೋಡಗಳೆಡೆಗೆ ಕಣ್ಣಾಯಿಸುತ್ತೇನೆ
ರಾತ್ರಿ ಝಗಮಗಿಸುವ ಬೀದಿ ದೀಪಗಳ ನಡುವೆ
ಕಳೆದುಹೋಗುವ ಬಾಲ್ಯದ ಚಂದಿರನ ಇಣುಕುತ್ತೇನೆ
ಎದೆಕೊರೆವ ರೈತರ ಆತ್ಮಹತ್ಯೆ
ಸುದ್ದಿಗೆ ಸ್ಥಬ್ಧನಾಗಿ ಕದವಿಕ್ಕಿ ಮಲಗುತ್ತೇನೆ

ನೇಗಿಲಗೆರೆ ಹೊಲ ಗದ್ದೆನಾಟಿ
ಸುಗ್ಗಿಯ ಕನಸು ಇರುಳಜೀಕುತ್ತವೆ
ಮುಂಜಾನೆ
ಊರನೆನಪು ತುಂಬಿಕೊಂಡಿರುವ
ಕುಂಡದಲ್ಲಿ ಹಿಡಿ ಧಾನ್ಯ ಚೆಲ್ಲಿ
ಬೀಜಬಿರಿವ ಸದ್ದಿಗೆ ಹಗೂರಾಗುತ್ತೇನೆ


ಇಲ್ಲೇ
ನಾನು ವಾಸಿಸುತ್ತಿರುವುದು
ಈ ಮಹಾನಗರದ ಗಲ್ಲಿಮಹಡಿಗಳಲ್ಲಿ
ಬೇರು ಮಾತ್ರ  ಅಲ್ಲೇ..

ಚಿತ್ರ ಕೃಪೆ: ಚಂದ್ರು ಕನಸು

ಆಡಿಯೋ
ವಿಡಿಯೋ

'ಮಾಯೆಯ ಅಂಕುಶ'

ಇದೊಂದು ಸಾಧುಪ್ರಾಣಿ
ತೋಳ್ಬಲ ಕಮ್ಮಿ
ಸರಪಳಿಯ ಹಂಗಿಲ್ಲ
ಮಾಯೆಯ ಅಂಕುಶ ಸಾಕು

ಅರಿಶಿನ ದಾರ ಬಿಗಿದರೂ ಸಾಕು
ಆಜೀವಪರ್ಯಂತ
ಸೇವೆಗೆ ಸಿದ್ಧ

ಹಗಲಿಗೆ ಮನೆವಾರ್ತೆ ನೋಡಿಕೊಳ್ಳುತ್ತದೆ
ಇರುಳಿಗೆ
ಚಳಿಕಾಯಿಸುವ ಕುಲುಮೆ

ಹೊಗಳಿಕೆಗೆ ತೋಳಲ್ಲಿ ಕರಗುವ ಬೆಣ್ಣೆ
ಕನಸುಗಳ  ಹೊರುತ್ತದೆ ಹೆರುತ್ತದೆ
ಕೋತಾಪಗಳಿಗೆ ಮಂಡಿಯೊಳಗೆ ಅತ್ತು
ಹಗುರಾಗುಬಿಡುತ್ತದೆ
ಹೆಚ್ಚೆಂದರೆ ನಾಲ್ಕು ಮಾತು

ನೀವು
ಬುರ್ಖಾವನ್ನೇ ಹೊದಿಸಿ
ಬಿಕಿನಿಯನ್ನೇ ತೊಡಿಸಿ
ಹೇಳಿದಂತೆ ಕೇಳುತ್ತದೆ
ಬಾಳುತ್ತದೆ
ಏಕೆಂದರೆ
' ಹೆಣ್ಣು'

 ಅತೀ ಹೆಚ್ಚು ಪಳಗಿಸಲ್ಪಟ್ಟ ಪ್ರಾಣಿ !

ಆಡಿಯೋ
ವಿಡಿಯೋ

'ಸತ್ಯ ಸೂರ್ಯ'

ಅವರು
ನಮ್ಮನ್ನು ಜೀವಸಹಿತ
ಹೂತುಬಿಟ್ಟರು
ಗೊತ್ತಿರಲಿಲ್ಲಾ ಅವರಿಗೆ ನಾವು
ತೇವಕಾಯ್ದು
ಮೊಳಕೆಯೊಡೆಯುವ ರಾಗಿ
ಕಾಳುಗಳೆಂದು

ಅವರು
ನಮ್ಮನ್ನು ಮಡಿ ಬಟ್ಟೆಯೊಳಗೆ
ಕೂಡಿ ಗಂಟಿಕ್ಕಿದರು
ಗೊತ್ತಿರಲಿಲ್ಲಾ ಅವರಿಗೆ ನಾವು
ಸುಡುವ  ಕೆಂಡಗಳೆಂದು

ಅವರು
ನಮ್ಮನ್ನು ಸುಡು ಮರಳುಗಾಡಿಗೆ
ದೂಡಿದರು
ಗೊತ್ತಿರಲಿಲ್ಲಾ ಅವರಿಗೆ ನಾವು
ಇಬ್ಬನಿ ಕುಡಿದು ಹೂ ಅರಳಿಸುವ
ಖರ್ಜೂರ ಪಾಪಾಸು ಕಳ್ಳಿಗಳೆಂದು

ಅವರು 

ನಮ್ಮ ಕನಸ ರೆಕ್ಕೆಮುರಿದು
ಜೀವಂತ ಸುಟ್ಟರು
ಗೊತ್ತಿರಲಿಲ್ಲಾ ಅವರಿಗೆ ನಾವು
ಮುಂಗಾರಿಗೆ ಮತ್ತೆ ತಲೆಎತ್ತಿ
ಹಬ್ಬುವ ಗರಿಕೆ ಎಂದು

ಅವರು ನಮ್ಮ ಸುತ್ತಲೂ ಗೋಡೆ ಕಟ್ಟಿದರು
ಗೊತ್ತಿರಲಿಲ್ಲಾ ಅವರಿಗೆ ನಾವು
ಬಿರುಕಿನ್ನಲ್ಲೇ ಚಿಗುರಿ
ಗೋಡೆ ಉರುಳಿಸುವ ಅರಳಿ ಆಲವೆಂದು

ಅವರು
ನಮ್ಮನ್ನು ದೇವರು ಮಾಯೆ ಹೆಸರಲ್ಲಿ
ಹೂಗಳಂತೆ ಹೊಸಕಿಹಾಕಿದರು
ಗೊತ್ತಿರಲಿಲ್ಲ ಅವರಿಗೆ ನಾವು
ನೆಲಸಾರ ಹೀರಿ ಮತ್ತೆ ಸಂಭವಿಸುವ ಚೈತ್ರವೆಂದು

ಅವರು
ನಮ್ಮನ್ನು ತುಳಿಯುತ್ತಾ
ಗದ್ದುಗೆ ಎಡೆಗೆ ಸಾಗಿದರು
ಗೊತ್ತಿರಲಿಲ್ಲಾ ಅವರಿಗೆ ನಾವು
ನಡೆದಷ್ಟೂ ಮುಗಿಯದ ಹಾದಿ ಎಂದು

ಅವರು

ನಮ್ಮಬಣ್ಣನಗು ಕಣ್ಣೀರಿಗೂ
ಕತೆ ಕಟ್ಟಿ ಇತಿಹಾಸ ಬರೆದರು
ಗೊತ್ತಿರಲಿಲ್ಲಾ ಅವರಿಗೆ ನಾವೇ
ಇತಿಹಾಸ ಸೃಷ್ಟಿಸುವವರೆಂದು

ಅವರು
ನಮಗೆ ದಕ್ಕದಂತೆ ಬೆಳಕ
ಮುಚ್ಚಿಟ್ಟುಕೊಂಡರು
ಗೊತ್ತಿರಲಿಲ್ಲಾ ಅವರಿಗೆ  ಸತ್ಯ

ಸೂರ್ಯನ ಹಾಗೆಂದು

ಆಡಿಯೋ
ವಿಡಿಯೋ

'ಜೋಗಿ'

ಮಣ್ಣು ಮುಗಿಲು ಅನ್ನ
ರೈತರ ಬದುಕು ಬವಣೆಗಳ ಬರೆದೆ
ಕೇಳಿದರು ನೀವು ಗೌಡ್ರೇ

ಬುದ್ಧ ಅಂಬೇಡ್ಕರ್
ಖೈರ್ಲಾಂಜಿ ಕಂಬಾಲಪಲ್ಲಿ
ಕ್ರೌರ್ಯ ಕಥನ ಬರೆದೆ,
ನೀನು ದಲಿತನೇ ಎಂದು ದೂರ ನಿಂತರು

ಗಾಂಧಿಯ ಸಾವ ಸಂಭ್ರಮಿಸಿ
ಗೋಡ್ಸೆಗೆ ಗುಡಿಕಟ್ಟ ಹೊರಟಿರುವ
ದೇಶ ಭಕ್ತರ ಚಡ್ಡಿಯ ಬಣ್ಣ ಬರೆದೆ
ಭ್ರೂಣಬಗೆದಿದ್ದ  ತ್ರಿಶೂಲ ತೋರಿಸಿ
ಕೇಳಿದರು ನೀನು ಲೆಫ್ಟಿಸ್ಟಾ ದೇಶಬಿಟ್ಟು ತೊಲಗು

ಮೆಕ್ಕಾ ಮದೀನಾಕ್ಕೆ
ನೆತ್ತರ ಹೊಳೆ ಹರಿಸುತ್ತಿರುವ
ಜಿಹಾದಿಗಳ ಹಿಂಸೆಯನ್ನು
ಬುರ್ಖಾದೊಳಗಿನ ಕತ್ತಲೆಯನ್ನು ಖಂಡಿಸಿದೆ
ಗಡ್ಡ ನೀವಿಕೊಂಡು
ಕೇಳಿದರು ನೀನು ಚಡ್ಡಿಯಾ
ನನ್ನ ತಲೆಗೆ ಹತ್ತು ಲಕ್ಷ ಬೆಲೆ ಕಟ್ಟಿದರು

ಬಡತನ ಹಸಿವು
ಕೂಲಿ ಕಾರ್ಮಿಕರ ಬೆವರು
ಧಣಿಗಳ ದರ್ಪ
ಕೂಲಿ ಕದ್ದ ಕುಲದ ಬಗ್ಗೆ ಬರೆದೆ
ಗುಡುಗಿದರು ನೀನು ಕಮ್ಯುನಿಸ್ಟಾ

ಎಲ್ಲೆಡೆ ಲಭ್ಯವಿದ್ದ ದೇವರ
ಗುಡಿಯೊಳಗೆ ಬಚ್ಚಿಟ್ಟು
ಕಾಳಸಂತೆಯಲಿ ಮಾರುವ ದಂಧೆಯ ಬರೆದೆ
ನಾಸ್ತಿಕನಾ?ನಾಶವಾಗಿಹೋಗು ಎಂದು
ಹಿಡಿಶಾಪ ಹಾಕಿದರು

ರಕ್ತ ಕ್ರಾಂತಿಯ ಖಂಡಿಸಿ
ಸತ್ಯ ಅಹಿಂಸೆ ಶಾಂತಿ ಚಳುವಳಿಯ
ಮೌಲ್ಯವ ಬರೆದೆ
ನಕ್ಕರು ನೀನು ಗಾಂಧಿಯೋ

ಭಾರತದ ಸಂಸ್ಕೃತಿ,
ಧ್ಯಾನ ಯೋಗ ದರ್ಶನ ಕುರಿತು ಬರೆದೆ
ಹೆಗಲ ಮೇಲೆ ಕೈ ಹಾಕಿ ಏನನ್ನೋ ತಡಕುತ್ತಾ
ಕೇಳಿದರು ಓ ! ನೀವು ನಮ್ಮೋರಾ

ಧರ್ಮ ಸೂತಕವಾಗಿ
ದೇವರು ಸರಕಾಗಿ
ಜಾತಿ ಅಸ್ತ್ರ ,ವಿವಸ್ತ್ರವಾಗಿ
ಗಾಂಧಿ ನಗೆಪಾಟಲಾಗಿ
ಬುದ್ಧ ಕೇವಲ ಸಂಕೇತವಾಗಿರುವ
ಸತ್ಯೋತ್ತರ ದುರಿತಕಾಲದಲ್ಲಿ
ಸುಮ್ಮನಿರುವುದು ಸುಮ್ಮಾನ

ದಡಕೆ ಸಿಗದ ನದಿಯಂತೆ
ಹಲವು ಬಣ ಬಣ್ಣ ಚೌಕಟ್ಟುಗಳ ದಾಟಿ
ಮೂರನೇ ದಡ ಅರಸಿ ಹೊರಟ ಬಯಲ ಜೋಗಿ
ಎದೆಯ ಕಣ್ಣಿಲ್ಲದವರ ಮೆಚ್ಚಿಸುವುದುದೆಂತು
ಖಾಲಿಯಾಗದ ಗಡಿಗೆಯ ತುಂಬುವುದಾದರೂ ಹೇಗೆ?

ಆಡಿಯೋ
ವಿಡಿಯೋ

ಹಂದಲಗೆರೆ ಗಿರೀಶ್

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ  ಬದುಕು ಕಟ್ಟಿಕೊಂಡಿದ್ದಾರೆ. 

ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ' ಬಯಲ ಜೋಗಿ ' ಏಕಾಂಗಿಯಾಗಿ ಹೊರಡು ಕವಿತೆಯನ್ನು  ದೃಶ್ಯರೂಪಕ್ಕೆ ಅಳವಡಿಸಿದ್ದು ರಾಜ್ಯಾದ್ಯಂತ ಜನಮನ್ನಣೆಗಳಿಸಿದೆ.

More About Author