Poem

ನನ್ನ ಚೆಲುವೆ 

ನನ್ನ ಚೆಲುವೆ ಬಾರೆ ನನ್ನ ಚೆಲುವೆ
ನನ್ನ ಒಲವೆ ಕೇಳೆ ನನ್ನ ಒಲವೆ

ಅನುದಿನವು ನೀ ಕನಸಲಿ ಬರುವೆ
ನಿನ್ನ ನಗುವಲಿ ನನ್ನ ಕಾಡುತಲಿರುವೆ

ಎದೆಯೊಳಗೆ ನಿನ್ನದೆ ಬಡಿತ
ನಿನ್ನ ನೋಡಲು ಏನೋ ತುಡಿತ

ನಿನ್ನ ನಗುವೆ ಬದುಕಲು ಸ್ಫೂರ್ತಿ
ಖುಷಿ ತಾರೆಯ ಜೀವನ ಪೂರ್ತಿ

ಬಾ ಚೆಲುವೆ ನಿನಗೆ ನಾ ಕಾದಿರುವೆ
ನನ್ನ ಮನಸ ನೀ ಕದ್ದು ನಗುತಿರುವೆ

ಬಲು ಒಳ್ಳೆಯ ಹುಡುಗ ನಾನು
ನಿನ್ನ ಪ್ರೀತಿಯ ಒಡೆಯ ನಾನು

ನಿನ್ನ ಕಣ್ಣಲಿದೆ ಕೊಲ್ಲುವ ಸೆಳೆತ
ಹಳಿ ತಪ್ಪಿದೆ ಮನಸಿನ ಹಿಡಿತ

ನನ್ನ ಮನದ ಕೊಳದ ತುಂಬ
ಕಾಡುತಿಹುದು ನಿನ್ನದೆ ಬಿಂಬ

ನನ್ನ ಚೆಲುವೆ ನೀನು ಎಲ್ಲಿರುವೆ
ನಿನಗಾಗಿ ಈ ಹೃದಯ ತೆರೆದಿರುವೆ

ನೀ ಪುರುಸೊತ್ತಲಿ ಮೈದಳೆದ ಶಿಲ್ಪ
ನಿನ್ನುಲಿಯಲಿ ಸ್ವರ ಮೇಳದ ಕಲ್ಪ

ಗಿಳಿ ಮೂಗಿಗೆ ಮೂಗುತಿಯ ಬೆಡಗು
ರಸಗುಲ್ಲದ ಗಲ್ಲಕೆ ಚುಕ್ಕಿಯ ಮೆರುಗು

ಕಣ್ರೆಪ್ಪೆಯೆ ಚಿಟ್ಟೆ ಕರಿನೇರಳೆ ನಯನಕೆ
ನಾನಾಗಲೆ ದುಂಬಿ ನಿನ್ನಧರದ ಮಕರಂದಕೆ

ಬಾ ಚೆಲುವೆ ಮನಸ ಕೊಡು ಚೆಲುವೆ
ನನ್ನೆದೆ ಮಂದಿರದಿ ನಿನ್ನ ಪೂಜಿಸುವೆ

ಹಾಲ್ಗೆನ್ನೆಯ ಸವರುತ ಮುಂಗುರುಳಿನ ಕಚಗುಳಿ
ಕೇಶದಿ ಬೆರಳಾಡಿಸುತ ಕುಡಿನೋಟದ ಹಾವಳಿ

ಕಾಮನ ಬಿಲ್ಲಿನ ಚಿತ್ತಾರ ನಿನ್ನ ಹುಬ್ಬಲಿ
ನಿನ್ನ ಕುಡಿ ನೋಟದ ಹಾವಳಿ ನನ್ನೆದೆಯಲಿ

ನೀ ಬಳುಕಲು ಹೆಚ್ಚಿತು ನನ್ನೆದೆ ಬಡಿತ
ನಾ ಮರೆತೆ ಹೇಳಲು ಮನಸಿನ ಇಂಗಿತ

ಬಾ ಚೆಲುವೆ ನನ್ನ ಹಾಡು ಕೇಳು ಚೆಲುವೆ
ಹಾಡಲ್ಲೇ ಮನದೊಲವ ಹೇಳಿಬಿಡುವೆ

ಬಲು ಅಪರೂಪದ ಪ್ರೇಮಿಯು ನಾನು
ಪ್ರತಿ ಜನುಮಕು ಸಂಗಾತಿಯು ನೀನು

ಸಿಗಲಾರನು ನಿನಗಿಂತಹ ಹುಡುಗ
ಸಾಕುವೆನು ನೋವಾಗದ ತರಹ

ಸಮ್ಮತಿಸು ನನ್ನ ಪ್ರೀತಿಯ ಸ್ವೀಕರಿಸು
ಹಣಕಿಂತ ಪ್ರೀತಿಸೋ ಹೃದಯ ಗೌರವಿಸು

ನನ್ನ ಚೆಲುವೆ ಕೇಳೆ ನನ್ನ ಚೆಲುವೆ
ಎಂದೆಂದೂ ನಿನಗೆ ನನ್ನ ಒಲವೆ


✍️ ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author