Poem

ನನ್ನ ಕನ್ನಡ ಕವಿತೆ

ಹೃದಯದಿ ತಳೆದು, ಮನಸಲರಳಿ
ಎದೆಯ ತುಂಬ ಮೂಡಿ ಬಂದು
ಆನಂದಬಾಷ್ಪವ ಕೆನ್ನೆಗಿಳಿಸಿ
ದೇಹವ ಪುಳಕಗೊಳಿಸಿ
ವಿಶ್ವವೆಲ್ಲಾ ತೋರುತಿದೆ
ನನ್ನ ಕನ್ನಡ

ಆಗುತ್ತಿದೆ
ಆತ್ಮವಿಶ್ವಾಸದ, ಆತ್ಮಸಂತೋಷದ, ಆತ್ಮೋನ್ನತಿಯ
ಆತ್ಮತೃಪ್ತಿಯ, ಆತ್ಮಸಂಗಮದ ಪಯಣ
ಮೇಲೆಕೇರಿ ಮುಟ್ಟುತಿದೆ
ಗಡಿಗಳಾಚೆ ಮೂಡುತಿದೆ
ಜಲಪಾತ ತೆರದಿ ಧುಮ್ಮಿಕ್ಕಿ
ಮುಗುಳ್ನಗೆಯಿಂದ ಮುನ್ನುಗ್ಗುತ್ತಿದೆ
ನನ್ನ ಕನ್ನಡ

ಕೀಳಿರಿಮೆಯ ಗೋಡೆ ಹೊಡೆದು
ಕಾಲದ ವೇಗದಲಿ
ತನ್ನ ಶ್ರೇಷ್ಠತೆಯ ಮೆರೆದು
ಹಲವು ಭಾಷೆಗಳ ಜೊತೆಗೂಡಿ
ಸರ್ವ ಜನಾಂಗದ ತೋಟದಲಿ
ಸರ್ವರ ಹರಸುತಿದೆ
ನನ್ನ ಕನ್ನಡ

ಇದುವೇ ಗತಿ, ಇದುವೇ ಮತಿ
ರಕುತದ ಕಣಕಣದಲಿ, ನರನಾಡಿಗಳಲಿ
ಜನ್ಮ ಜನ್ಮಗಳಲಿ ಜೊತೆಗೂಡಿ
ಆತ್ಮಗಳಿಗೆ ಆತ್ಮವಾಗಿ
ಮುಂದಿನ ಪೀಳಿಗೆಗೆ ದಾಟುತಿದೆ
ನನ್ನ ಕನ್ನಡ
ಪಸರಿಸಲಿ ಜಗದ ತುಂಬಾ
ಕನ್ನಡದ ಸೌಹಾರ್ದ ಬಿಂಬ
ವರ್ಧಿಸಲಿ ಶಕ್ತಿ ತುಂಬಿ
ಎದೆಯಲಿ ಒಲವ ಬೀರಿ
ನನ್ನ ಕನ್ನಡ

ವಿಡಿಯೋ
ವಿಡಿಯೋ

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author