Poem

ನನ್ನ ಮೌನದ ಹಿಂದೆ 

ಸಾವಿರಾರು ಕನಸುಗಳಿವೆ.
ಕೇಳುವರಾರು ಅವುಗಳನು?
ಹೇಳುವರಾರು ನನ್ನ ಪ್ರಶ್ನೆಗೆ ಉತ್ತರವ ?
ಇಷ್ಟಕ್ಕೂ ನಾನಾರು?

ಹೇಳುವೆನು ಕೇಳಿರಿ ನಾನಾರೆಂದು.....

ಬೆಳಕಗಭ೯ದ ಬಸಿರಿನಿಂದುದಯಿಸಿದ ಪ್ರತಿ ಉಸಿರಿನ ಪ್ರೀತಿ ನಾನು, ಮಮತೆನಾನು.
ಬೆಳಕಾಗಿ ಹುಟ್ಟಿ ಭಾವದಲಿ
ಕರಗುವವಳು .
ಆರದ ಬೆಳಕು ನಾನು, ತೀರದ ತೈಲನಾನು.
ದೇಶ -ಕಾಲಗಳ ಎಲ್ಲೆ ಮೀರಿದ ಬದುಕಿನ ಚೇತನಳು ನಾನು.
ಅರಿತವನ ಅಂತರಂಗದಲಿ ಅನಂತ ಬಿಂಬಳು ನಾನು.

ಇಂತಹ ನಾನು ಈಗೀಗ
ನನ್ನ ಪರಿಚಯಿಸಿಕೊಳ್ಳುವ ಧಾಟಿಯ ಬದಲಿಸಿಕೊಂಡಿರುವೆ.
ಈಗ ಹೇಳಿಕೊಳ್ಳುವೆ
ನಿನ್ನ ಸ್ವಾಥ೯ದ ಬಲೆಯಲಿ ಬಂಧಿಯಾದ ಜೀವಿಮಾತ್ರವೇ ಎಂದು .
ನಿನ್ನ ಪರಿಭಾಷೆಯಲ್ಲಿ ವಸ್ತುಮಾತ್ರವೆಂದು.

ಚರಿತ್ರೆಯುದ್ದಕ್ಕೂ ನೀನು ರಚಿಸಿದ ಸೂತ್ರಕ್ಕೆ ಪಾತ್ರವಾದೆ ,
ಚಿತ್ರವಾದೆ, ಕತೆಯಾದೆ, ಕಾವ್ಯವಾದೆ, ಕೊನೆಗೆ ಕಲ್ಲಾದೆ.

ಅಲ್ಲಿಗೂ ಮುಗಿಯಲಿಲ್ಲ ನಿನ್ನ ಹೊಗಳಿಕೆಯ ಮಾತುಗಳು
ಪರಾಶಕ್ತಿ ಎಂದೆ ನೀನು .
ಗೋಡೆ ಮಂಟಪಗಳ ಮಧ್ಯೆ ಅಲುಗಾಡದ ಛಾಯೆಯಾದೆ ನಾನು.

‌ಭೂಮಿ ತೂಕಕೆ ಸಮ ಎಂದೆ
ಅಲ್ಲಿಗೆ ಊರಮುಂದಿನ ಹೆಬ್ಬಾಗಿಲಿನಲಿ ಅಧ೯ಂಬಧ೯
ಹುದುಗಿದ್ದ ಮಾಸ್ತಿಗಲ್ಲು ನಾನು.
ಹಾದಿಮೇಲಿನ ದೀಪ
ಅತ್ತ ಬೆಳಗಲೂ ಇಲ್ಲ
ಇತ್ತ ಆರಲೂ ಇಲ್ಲ.

ಕ್ಷಮಯಾಧರಿತ್ರಿ ಎಂದೆ ನೀನು.
ನಿನ್ನ ತಪ್ಪನ್ನೆಲ್ಲ ಮಾನ್ಯಮಾಡಲು ಹವಣಿಸುತ;
ನಿನ್ನ ತಪ್ಪುಗಳ ಸರಮಾಲೆ ಮಾಡಿ ನನ್ನ ಕೊರಳಿಗೆ ಹಾಕಿದೆ .
ನಾನೇ ತಪ್ಪಿತಸ್ಥಳೆಂಬಂತೆ .

ಇನ್ನು ಅನ್ನದಿರು ನನ್ನ ಕ್ಷಮಯಾಧರಿತ್ರಿ ಎಂದು
ನಾನಿನ್ನು ಕ್ಷಮಿಸಲಾರೆ .

ಧಮ೯ದೇವತೆ ಎಂದೆ
ನನ್ನ ಕಣ್ ಕಟ್ಟಿ ,ಕೈಬಿಟ್ಟೆ.
ಭಾರತದ ಗಾಂಧಾರಿಯಂತೆ
ಧಮ೯ಸಭೆಯಲಿ ಏನು ನಡೆದರೂ ಕಾಣದಿರುವಹಾಗೆ ಕುರುಡಾಗಿಸಿದೆ .
ಸಭೆಯೊಳಗೆ ನನ್ನ ಮಾನಹೋದರೂ ಅದು ಧಮ೯ಸಭೆ....!

ದ್ಯೂತ ದಾಳದ ಆಟಕೆ ಪಣವಾದೆ.
ನಿನ್ನ ಪಾರಮ್ಯದ ದಾರಿಯಲಿ ತೃಣವಾದೆ.

ನನ್ನುಡಿಗೆಯ ನೇಯ್ಗೆಯಲೂ
ನಿನ್ನ ಸ್ವಾಥ೯ದ ದಾರ.
ಸಾಲದೆಂಬಂತೆ ಧಮ೯ಸೂತ್ರದ ಚಿತ್ತಾರ .
ಅದು ಕೆಂಪು, ಇದು ನೀಲಿ ,ಅದು ಹಸಿರು, ಇದು ಬಿಳುಪು -ಹೀಗೆ ಬಟ್ಟೆಗೊಂದೊಂದು ಬಣ್ಣ .
ಬಣ್ಣಕ್ಕೊಂದೊಂದು ಮತ ಧರ್ಮದ ಕಣ್ಣು.

ಮೈ ನನ್ನದಾದರೂ ಮನಸ್ಸು ನಿನ್ನದಾಗಿತ್ತು .
ಬೇಕಾದಾಗ ಮುಚ್ಚಿದೆ ,ಬೇಡವಾದಾಗ ಬಿಚ್ಚಿದೆ .
ಮಸಣದ ಗೋರಿಯಮೇಲೆ ಹೂವದು ನಗುತಲೇ ಇತ್ತು
ಎಲ್ಲ ಹಂಗು ತೊರೆದು .

ನಿನ್ನ ವಾದ -ಪ್ರತಿವಾದದ ಗದ್ದ ಲದಲಿ ಧಮ೯ಕಾರಣದ ಅಮಲು, ರಾಜಕಾರಣದ ತೆವಲು.
ನನ್ನ ಬಟ್ಟೆಯ ಚರಿತ್ರೆ ಬಿಚ್ಚಿಕೊಳ್ಳುತ್ತಲೇ ಇತ್ತು.
ಕಾಮದಹನದ ಬೂದಿ ಬಣ್ಣದೋಕುಳಿಯಾಗಿ
ರಂಗುರಂಗಿನ ರೂಪವ ಪಡೆಯುತಲೇ ಇತ್ತು .
ಅಲ್ಲಿಗೆ ಅಥ೯ವಾಗಿತ್ತು ನಿನ್ನ ಹುಡುಕಾಟದ ವಸ್ತು ಯಾವುದೆಂದು.

ಇನ್ನು ಮಾತನಾಡಲಾರೆ ನಾನು
ಮೌನವೇ ಉತ್ತರ.
ನನ್ನೆದೆಯ ಸುಧೆಗೆ ಒಳಗಣ್ಣಿನ ನುಡಿಯು.
ನೀಡಬೇಕಿಲ್ಲ ಸಾಕ್ಷ ಅದು ಅಂತರಂಗದ ಗುಡಿಯು.

- ವೆಂಕಟೇಶ ಪಾಟೀಲ

ವಿಡಿಯೋ
ವಿಡಿಯೋ

ವೆಂಕಟೇಶ ಪಾಟೀಲ

ವೆಂಕಟೇಶ ಪಾಟೀಲ ಅವರು ಕಾವ್ಯ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು.

More About Author