Poem

ನನ್ನ ಉಸ್ತಾದ್

ಕನ್ನಡ ಸಾಹಿತ್ಯಲೋಕದ ಯುವ ತಲೆಮಾರಿನ ವಿಶಿಷ್ಟ ಬರಹಗಾರ, ಕತೆಗಾರ ಶಶೀ ತರೀಕೆರೆ. ಕತಾ ರಚನೆ ಮಾತ್ರವಲ್ಲದೆ ಕವಿತೆ, ಸಿನಿಮಾ ಕ್ಷೇತ್ರದಲ್ಲೂ ತೊಡಗಿಕೊಂಡವರು. ಅವರ ‘ಡುಮಿಂಗ’ ಹಸ್ತ ಪ್ರತಿಗೆ 2019ನೇ ಸಾಲಿನ ‘ಛಂದ ಪುಸ್ತಕ’ ಬಹುಮಾನ ಸಂದಿದ್ದು ಟೊಟೊ ಪ್ರಶಸ್ತಿ ಪುರಸ್ಕೃತರು. ಅವರ ‘ನನ್ನ ಉಸ್ತಾದ್’ ಕವಿತೆ ನಿಮ್ಮ ಓದಿಗೆ.

ನನ್ನ ಕಣ್ಣನು ಈಗ ಎಲ್ಲಿಯೋ
ಬೀಳಿಸಿಕೊಂಡಿರುವೆ
ಎಂದು
ಎಲ್ಲರೆದುರು ಸುಳ್ಳೇ ಹೇಳುತ್ತೇನೆ
ನಿನಗೆ ಸುಖಾಸುಮ್ಮನೆ ಕೊಟ್ಟೆನೆಂದು
ಹೇಳುವುದಿಲ್ಲ ಉಸ್ತಾದ್

ನನ್ನನು ನೀನು ಕತ್ತಲೆಯ ಸುರಂಗದಲ್ಲಿ
ಕೂಡಿಡು
ಮಹಾ ಮರವನ್ನು ಹತ್ತಿಸಿ ಮರೆತು ಬಿಡು
ಚಾಕು ತೋರಿಸಿ
ಅನ್ನ ಗಿಟ್ಟಿಸಿಕೊಳ್ಳುವ ಸೋಮಾರಿಗೆ
ಮಾರಿಬಿಡು

ಈ ಕಣ್ಣಿನ ಜರೂರತ್ತು
ನನಗಿಂತ ನಿನಗೆ ಹೆಚ್ಚಿದೆ ಉಸ್ತಾದ್
ಒಳಗಣ್ಣು ಎಂಬುದು
ನನಗೆ ಇದೆಯೋ ಇಲ್ಲವೋ
ಗುಜರಿ ಲೋಕದ ಕನ್ನಡಿ ಹೇಳಲಿ

ನೀ ಹೋಗು ಉಸ್ತಾದ್
ಕಿನಾರೆಯಲ್ಲಿ ಹೂತಿಟ್ಟ ಬಾಲ್ಯವನ್ನು
ನೋಡಿ ಅಳುತ್ತಾ ನಿಲ್ಲು
ಬಗೆಬಗೆಯ ತರಕಾರಿ, ವಿಷ ಜಂತು ಮೂಲಗಳ,
ಬಾಹ್ಯಾಕಾಶದಲ್ಲಿ ಅರಳಬಲ್ಲ ಹೂವುಗಳ
ಕೆದಕಿಕೊಂಡು
ಚೌಕಾಶಿ ಅನ್ವೇಷಣೆ ನಡೆಸಿ
ನಿನ್ನ ಕಣ್ಣಿಗೊಂದು ಚಷ್ಮಾ ಪೋಣಿಸಿಕೋ

ಮುಖೇಶ್ ಅಂಬಾನಿ
ಗೋಲ್ ಗಪ್ಪಾ ಹೇಗೆ ತಿನ್ನುವುದು
ಎಂದು ನಿನ್ನ ಕೇಳಿದರೆ
ಅವನ ಮೂಗಿಗೆ
ಗುದ್ದದೇ ಹೇಳಿ ಕೊಡು ಉಸ್ತಾದ್
ಆತನಿಗೆ ಐಸ್ ಕ್ಯಾಂಡಿ ಚೀಪಲು
ಬಿಕನಾಸಿ ಕಡ್ಡಿ ಎಷ್ಟು ಮುಖ್ಯ ಎಂದು ತಿಳಿ ಹೇಳು

ನೀ ಏನಾದರೂ ಕೊಲೆಗಡುಕನಿಗೆ ಮಾರಿದರೆ
ಎಂದಾದರೂ ಒಂದು
ದಿನ ಹೀಗೆ ಬಂದು ಹೋಗು ಉಸ್ತಾದ್
ಮಹಾ ಮರದಲ್ಲಿ ಹತ್ತಿಸಿದರೆ
ನೀ ನನ್ನ ತಿರುಗಿಯೂ ನೋಡಬೇಡ
ನಾನು ಆ ಮರದಿಂದ ಇಳಿಯುವುದಿಲ್ಲ
ಒಳಗಣ್ಣಿಗೆ ಮರ ಮರವಲ್ಲ

ಚಿತ್ರ : ಎಸ್. ವಿಷ್ಣುಕುಮಾರ್‌

ಶಶಿ ತರೀಕೆರೆ

ಯುವ ಬರಹಗಾರ ಶಶಿ  ಅವರು ಜನಿಸಿದ್ದು 1990 ಜನವರಿ 7ರಂದು. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶಶಿ ಪ್ರಸ್ತುತ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವಿತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. 

ಇವರ  ‘ಡುಮಿಂಗ’ ಕಥಾ ಸಂಕಲನ 2019 ರ ಸಾಲಿನ ಛಂದ ಪ್ರಶಸ್ತಿ ಒಲಿದು ಬಂದಿದೆ. ಟೊಟೊ ಫಂಡ್ಸ್‌ ದಿ ಆರ್ಟ್ (ಟಿ.ಎಫ್.ಎ) ಕೊಡಮಾಡುವ 2020ನೇ ಸಾಲಿನ ಟೊಟೊ ಪ್ರಶಸ್ತಿಗೆ ಭಾಜನರಾಗಿದ್ದಾರೆ.

More About Author