Poem

ನನ್ನದೇನು ಅಭ್ಯಂತರವಿಲ್ಲ

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಈಗಿನಂತೆಯೇ ಬಟ್ಟೆ ತೊಡು,
ಆದರೆ, ತೋಳಿಲ್ಲದ, ಮೊಣಕಾಲುಗಳು
ಕಾಣಿಸುವಂತವು ಬೇಡವಷ್ಟೇ...

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ ಹಚ್ಚು
ಆದರೆ, ಹಣೆಗೆ ಬೊಟ್ಟು ಇಡಲೇಬೇಕಷ್ಟೇ...

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಚೂಡಿದಾರ್ ನಿನಗೆ ಅಂದವಾಗಿಯೇ ಕಾಣಿಸುತ್ತದೆ.
ಆದರೆ, ನಿನ್ನ ಬಯಲಿನಂತ ಬೆನ್ನು ಕಾಣಿಸಬಾರದಷ್ಟೇ...

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ನಿನ್ನ ಮೈಮಾಟಕ್ಕೆ ಅಂಟಿದಂತೆ ಹೊಲಿಸಿರುವೆಯಲ್ಲ ಅದೇ ಅನಾರ್ಕಲಿ.
ಅದು ತೊಟ್ಟಾಗ ಮೈ ಮೇಲೆ ವೇಲ್ ಹಾಕೋದು ಮರಿಯಬೇಡಷ್ಟೇ..

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಸೀರೆ ಚೆಂದವೇ ಕಾಣಿಸುತ್ತದೆ ನಿನಗೆ,
ಆದರೆ, ರವಿಕೆಗೆ ಡೀಪ್ ಜಾಸ್ತಿ ಬೇಡವಷ್ಟೇ....

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು
ಮೊನ್ನೆ ಹಾಕೊಂಡಿದ್ದಲ್ಲ ತಿಳಿ ಗುಲಾಬಿ ಬಣ್ಣದ ಸೀರೆ ಸೂಪರ್.
ಆದರೆ, ಉಬ್ಬು ತಗ್ಗುಗಳು ಕಾಣಿಸದಂತೆ ಮೈ ತುಂಬ ಸೆರಗು ಹೊದ್ದುಕೋ ಅಷ್ಟೇ..

ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ನಿನ್ನ ಜೊತೆ ಕೆಲಸ ಮಾಡ್ತಾನಲ್ಲ `ಅವ' ತುಂಬಾ ಒಳ್ಳೆಯವನೇ.
ಆದರೆ, ತಡವಾಯಿತು ಎಂದು ಅವನ ಬೈಕ್ ಏರಿ ಬರಬೇಡವಷ್ಟೇ..

ಕಲೆ : ಮಂಗಳೂರು ಜಿ. ಕಂದನ್

ಮಂಜುಳಾ ಕಿರುಗಾವಲು

ಪತ್ರಕರ್ತೆ, ಕವಿ ಮಂಜುಳಾ ಕಿರುಗಾವಲು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಜನಿಸಿದರು. ಪ್ರಸ್ತುತ ಜನೋದಯ ಪ್ರಾದೇಶಿಕ ಸಂಜೆ ದಿನ ಪತ್ರಿಕೆಯಲ್ಲಿ ಕಾರ್ಯನಿರ್ವಹಣೆ.

ಅವರ ಹಲವಾರು ಕವಿತೆಗಳು ಕನ್ನಡ ಪತ್ರಿಕೆಗಲ್ಲಿ ಪ್ರಕಟವಾಗಿವೆ. ಪತ್ರಿಕಾ ರಂಗದಿಂದ 2020ರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

More About Author