Poem

ನನ್ನೂರು

ನನ್ನೂರು ಹೊನ್ನೂರು
ಅದು ನನ್ನ ಹೆಮ್ಮೆ,
ನಡು,ನಡುವೆ ಕೊಳಚೆಯಲಿ
ಈಜಾಡೋ ಎಮ್ಮೆ.

ಸಣ್ಣ ಅಂಗಡಿಯಲ್ಲೂ
ದೊಡ್ಡ ವ್ಯಾಪಾರ,
ಇಲ್ಲಿಹುದು ಸಣ್ಣವರ
ದೊಡ್ಡ ಸರ್ಕಾರ.

ಸಣ್ಣವರ ಬಾಯಲ್ಲೂ
ದೊಡ್ಡ,ದೊಡ್ಡ ಮಾತು,
ದೋಸೆಯಾ ಜೊತೆಗಿಲ್ಲಿ
ಕಾವಲಿಯೆ ತೂತು.

ಇಲ್ಲುಂಟು ಸಹಬಾಳ್ವೆ
ಹತ್ತೆಂಟು ಜಾತಿ,
ಆದರೂ ಎಲ್ಲರಲು
ಕೆಲವೊಮ್ಮೆ ಕೋತಿ.

ಹೇಗಿರಲಿ,ಎಂತಿರಲಿ
ನನಗಿದೇ ಸ್ವರ್ಗ,
ನನ್ನ ಜೊತೆ ಕೊನೆವರೆಗು
ಇಲ್ಲಿಯ ನಿಸರ್ಗ.

ಸುಬ್ರಹ್ಮಣ್ಯ ಹೆಗಡೆ ಅಬ್ಳಿ.

ಹೊನ್ನಾವರ ತಾಲೂಕಿನ ಮುಗ್ವಾ ಮೂಲದವರು ಸುಬ್ರಹ್ಮಣ್ಯ ಹೆಗಡೆ ಅಬ್ಳಿ.ಅಬ್ಳಿ ಎನ್ನುವದು ಅವರ ಕುಟುಂಬದ ಹೆಸರು. ಕೃಷಿಯನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಇವರು ಕಲೆ,ಸಾಹಿತ್ಯ.ಓದು,ಬರವಣಿಗೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅಂತರ್ಜಾಲ ಪತ್ರಿಕೆ ಗಳಲ್ಲಿ ಕಥೆ,ಕವನಗಳು ಬಹಳಷ್ಟು ಪ್ರಕಟವಾಗಿವೆ. ಕೃತಿ: 'ಗುಂದ' ಪ್ರಕಟವಾಗಿರುವ ಕಾದಂಬರಿ.

More About Author