Poem

ನೀಲಿ ಟಾರ್ಪಲ್

ಮಳೆಗಾಲದಲ್ಲಿ ಕಾಯುವ ಚಳಿಯಿಂದ ರಕ್ಷಿಸುವ
ಬಿಸಿಲ ಧಗೆಯಿಂದ ಕಾಪಾಡುವ
ಕೊನೆಗೆ ನಮ್ಮ ಉಸಿರು ನಿಂತರೂ ಮೈಗೆ ಸುತ್ತುವುದು
ನೀಲಿ ಟಾರ್ಪಲ್ ರಕ್ಷಾಕವಚದಿಂದ ನಮಗೆ ಹೇಳೋರು ಕೇಳೋರು ಇಲ್ಲ ಎಂದು ತಿಳಿಯಬೇಡಿ
ಸದಾಕಾಲ ನಮ್ಮ ಜೊತೆ ಸಾಗುವುದು ನೀಲಿ ಟಾರ್ಪಲ್
ನಾವು ಕಪ್ಪು ಜನರಲ್ಲ, ನೀಲಿ ಜನರು

ಕೃಷ್ಣನು ನೀಲಿ, ದೇವರೆಂದಿರಿ
ರಾಮನೂ ನೀಲಿ, ಮಹಾನುಭಾವ ಎಂದಿರಿ
ನಮ್ಮನ್ನ್ಯಾಕೆ ದೂರವಿಟ್ಟಿರಿ?
ಊಟಕ್ಕಾಗಿ ಬಟ್ಟೆಗಾಗಿ ದೂರದ ಕೃಷ್ಣೆಯ ಗರ್ಭದಿಂದ ಬಂದವರು ನಾವು
ನಮಗೆ ನೆಲೆ ಇಲ್ಲದಿದ್ದರೂ ನಿಮಗೆ ಕಾಂಕ್ರಿಟಿನ ಮಹಲ್ ಕಟ್ಟುವವರು
ಬೆಳಗ್ಗೆದ್ದರೆ ಸಿಮೆಂಟು, ಸುಟ್ಟ ಕಂಬಿ, ಮರಳಿನ ಸುವಾಸನೆ ಶುಭ ಹಾರೈಸುತ್ತದೆ
ಮುಸ್ಸಂಜೆಗೆ ಪೆಟ್ರೋಲ್, ಸೀಮೆ ಎಣ್ಣೆಯ ಬೀಳ್ಕೊಡುಗೆ
ನಾವು ಕಪ್ಪು ಜನರಲ್ಲ, ನೀಲಿ ಜನರು

ಜಾತಿ, ಧರ್ಮ, ಹಣ, ಅಧಿಕಾರ ಇದ್ದವರು ಸಮಾಜಕ್ಕೆ ಉತ್ತಮರು!?
ಅಕ್ಷರ ಕಲಿತವರೇ ಸರ್ವೋತ್ತಮರು?!
ಇವೆಲ್ಲದರಿಂದ ದೂರಲ್ಪಟ್ಟು ನಾವು
ನೀಲಿ ಜನರು
ಅಸ್ತಿತ್ವಕ್ಕೆ ಹೋರಾಡುವವರು

ಕೂಸು ಹೊತ್ತು ಹೆತ್ತು ಭೂಮಿಗೆ ಸಮರ್ಪಿಸುವುದಷ್ಟೆ ನಮ್ಮ ಹೊಣೆ
ನಂತರ ಫುಟ್‌ಪಾತ್, ಮರಳಿನ ದಿನ್ನೆ, ಜಲ್ಲಿ ಲೋಡು, ಮರಕ್ಕೆ ಜೋತು ಹಾಕಿದ ತವರು ಮನೆಯವರು ಕೊಟ್ಟ ಬಣ್ಣ ಸವೆದ ಮಸೀರೆಯೇ
ನಮ್ಮ ಮಕ್ಕಳಿಗೆ ಮಡಿಲು
ನಾವು ಕಪ್ಪು ಜನರಲ್ಲ ಸ್ವಾಮಿ, ನೀಲಿ ಜನರು
ನೀಲಿ ಟಾರ್ಪಾಲನ್ನೇ ಹೊದ್ದು ಸುತ್ತಿಕೊಂಡವರು

ಪುನೀತ ವಾಣಿ

ಪುನೀತ್ ವಾಣಿ

ಪುವಾ ಎಂಬ ಕಾವ್ಯನಾಮದ ಪುನೀತ್ ವಾಣಿ ಮೂಲತಃ ಬೆಂಗಳೂರಿನವರು. ಸಾಹಿತ್ಯ, ರಂಗಭೂಮಿ, ಜಾನಪದ ಕಲೆಗಳು, ಸಿನೆಮಾ ಹಾಗೂ ಸಮಕಾಲೀನ ವಿದ್ಯಾಮಾನಗಳ ಬಗ್ಗೆ ಅತ್ಯಂತ ಆಸಕ್ತಿವುಳ್ಳ ಇವರು ಉತ್ತಮ ಚರ್ಚಾಪಟುವೂ ಕೂಡಾ ಹೌದು. ವೀರಗಾಸೆ ಜಾನಪದ ಕಲಾಪ್ರಕಾರದಲ್ಲಿ ಕಲಾ ಪ್ರದರ್ಶನ ನೀಡುವ ಇವರು ಹಲವು ನಾಟಕಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಕಲೆಗೆ ತೆರೆದುಕೊಂಡಿರುವ ಪುನೀತ್ ಅವರು ಫೀನಿಕ್ಸ್ ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿರುತ್ತಾರೆ. ಪುನೀತ್ ಅವರು ತನ್ನ ತಾಯಿಯ ಹೆಸರಾದ ವಾಣಿ ಯನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಅಭಿವ್ಯಕ್ತಿ ಮಾಡುತ್ತಾರೆ. ಹಾಗೂ ಕಾಲೇಜು ರಂಗಭೂಮಿಯಲ್ಲಿ ಮೂರು ವರ್ಷಗಳ ಕಾಲ ಸಕ್ರಿಯವಾಗಿ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ಕೋರ್ಸ್ ಅನ್ನು ರಂಗಚಿರಂತನದಿಂದ ಪೂರೈಸಿರುತ್ತಾರೆ. 

More About Author