Poem

ನೀನು ಹೋದ ಮೇಲೆ...

ನೀನು ಬಿಟ್ಟು ಹೋದ ಮೇಲೆ
ನೀನಿರದ ಘಳಿಗೆಗಳೆಲ್ಲಾ ಪ್ರಶ್ನೆಗಳಾಗಿ,
ಅರ್ಥವಿರದ ಆಕರ್ಷಕ
ಟಿಕ್-ಟಾಕ್ ಗಳಂತೆ,
ಒಬ್ಬರಿಗೊಬ್ಬರು ಅಂಟಿಕೊಂಡ
ಸ್ಟೇಟಸ್ ಗಳಾಗಿ,
ನಿಮಿಷ ಗಂಟೆ ದಿನಗಳನ್ನು
ಜಗಿದು ಸಿಗಿದು
ನುಂಗಿ ಹಾಕುತ್ತಿವೆ.

"ನಖಶಿಖಾಂತ" ಎನ್ನುವುದು ಉರಿವ ಸಿಟ್ಟು ಮಾತ್ರವಲ್ಲ, ಮಡುಗಟ್ಟಿದ ದುಃಖವೂ...
ಎಂದು ತಿಳಿಯಲು
ರ್ರಾಫಿಡಿಕ್ಸ್ ಕ್ಲಾಸಿಗೆ ಹೋಗಬೇಕಾ?
ಗೂಗಲ್ ಮ್ಯಾಪ್ ನೆಚ್ಚಿಕೊಂಡ ಯಾರೂ ಹೇಳುತ್ತಿಲ್ಲ.

ಇಷ್ಟರ ನಡುವೆ,
ಮ್ಯಾನರ್ಸ್ ಕಲಿಯದ ಕಣ್ಣೀರು
ಎಲ್ಲೆಂದರಲ್ಲಿ ಪ್ರಕಟವಾಗುತ್ತಾ
ಕೆನ್ನೆ ಸವರುತ್ತಿದೆ,
ಒರೆಸುವ ಬೆರಳು ತುಟಿಗಳಿಲ್ಲದೆ.
ಬೈದರೆ, ರಚ್ಚೆ ಹಿಡಿದು
ಕಣ್ಣಲ್ಲೇ ಕಾಡಿಗೆಯಂತೆ ಚಕ್ಕಂಬಕ್ಕಳ ಕೂರುತ್ತದೆ
ಅತ್ತದ್ದೇ ಗೊತ್ತಾಗದಂತೆ.

ನಕ್ಷತ್ರವಾದರೂ ಸ್ವಕ್ಷೇತ್ರದಲ್ಲಿರಬೇಕು
ಎನುವವರನು,
ಅಂಗುಲ ಬಿಡದೆ
ಕಾಡುವವರನು,
ಕಂಡು ಮೋಹಿಸುವ ಎದೆಗೆ
ಯಾವ ಬ್ರಾ ತೊಡಿಸಿದರೆ,
ಕಾಲರ್ ಬಿಗಿದ ನಾಯಿಯಂತೆ ಕಾಂಪೌಂಡ್ ಒಳಗೆ
ಹೇಳಿದಂತೆ ಕೇಳಿಕೊಂಡು ಬಿದ್ದಿರಬಹುದು?!

ನೋಟ, ಬೇಟ, ಕೂಟಗಳೆಲ್ಲಾ ಬೀಟ್ ಗುಟ್ಟುವ ಅಲರಾಂ ಸದ್ದಂತೆ,
ನಿನ್ನ ಹೆಸರಿಗೆ ಮಾತ್ರ
ಟೈಮ್ ಸೆಟ್ ಆಗಿದೆಯೋ ಏನೋ?
ಈಗಂತೂ ಕೆಲಸಕಾರ್ಯವಿಲ್ಲದೇ
ಆರ್ಡರ್ ಗೆ ಕಾಯುವ
ಸ್ವಿಗ್ಗಿ, ಡಂಝೊ ಏಜೆಂಟರಂತೆ ನಿಂತಲ್ಲೇ ಏಕೆ ಚಡಪಡಿಸುತ್ತಿವೆ?

"ನೀನಿಲ್ಲ" ಎನ್ನುವ
ಒಂದೇ ಸಾಲಿನ ಸುದ್ದಿಯನ್ನು
ನೂರೆಂಟು ಚಾನಲ್ಲು ಬೇರೆ ಬೇರೆ ಹೇಳಿದ ಹಾಗೆ,
ಅಧಿಕ ಪ್ರಸಂಗದಲ್ಲಿ
ಮೈ ತುಂಬಾ ಹಚ್ಚೆ ಹಾಕಿಸಿ,
ಈಗ ತೆಗೆಸಲಾಗದೇ
ಪೆಚ್ಚಾದ ರಚ್ಚೆ,
ಯಾಕೋ ಕರ್ಫ್ಯೂ ಯಶಸ್ವಿಯಾದ ನಗರದಂತಿದೆ...

- ಆರತಿ ಎಚ್ ಎನ್

ಎಚ್. ಎನ್. ಆರತಿ

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ.

ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ನೀಡುತ್ತಾರೆ. ಪ್ರವಾಸ, ನಾಟಕ ಅವರ ಮತ್ತಷ್ಟು ಆಸಕ್ತಿಯ ವಿಸ್ತಾರಗಳು. ಸಾಹಿತ್ಯ, ವೃತ್ತಿಯ ಹಾದಿಯಲ್ಲಿ ಏಳು ಕೃತಿಗಳನ್ನು ಹೊರತಂದಿದ್ದಾರೆ. ‘ಓಕುಳಿ, ಬಾ ಹೇಳಿಕಳಿಸೋಣ ಹಗಲಿಗೆ, ಸ್ಮೋಕಿಂಗ್ ಝೋನ್’ ಅವರ ಕವನ ಸಂಕಲನ. ‘ಬೆಟ್ಟದಡಿಯ ಬಿದಿರ ಹೂ’ - ಪ್ರವಾಸ ಕಥನ. ಅವರ ಹಲವಾರು ಕವನಗಳು ಇಂಗ್ಲಿಷ್, ಸ್ಲೊವೆನಿಯನ್ ಒಳಗೊಂಡಂತೆ ಇತರ 6 ಭಾಷೆಗಳಿಗೆ ಅನುವಾದಗೊಂಡಿವೆ. 

‘ಓಕುಳಿ’ ಕವನ ಸಂಕಲನಕ್ಕೆ ಲೇಖಕಿಯರ ಪರಿಷತ್ತಿನ ರಾಜ್ಯಮಟ್ಟದ ಪ್ರಶಸ್ತಿ, ‘ಬಾ ಹೇಳಿಕಳಿಸೋಣ ಹಗಲಿಗೆ’ ಕರ್ನಾಟಕ ಲೇಖಕಿಯರ ಸಂಘದ 1997ರ ‘ಅತ್ಯುತ್ತಮ ಕೃತಿ’ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ಮಾತ್ರವಲ್ಲದೆ ಆರತಿ ಅವರು ಅಂತರರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ಧರು. 

More About Author