Poem

ನೆಲದ ದ್ಯಾನ

ಉಸಿರು ನಿಲ್ಲುವ ತನಕ ಕಾಯಕವ ಬಿಡದಾತ ನನ್ನಪ್ಪ
ಹಕ್ಕಿಯ ಹಾಗೆ ಹೆಕ್ಕಿ ತಂದು ಉಣಿಸಿದಾತ ನನ್ನಪ್ಪ

ಜೀತ ಮುಕ್ತಿ ಕೇಳಲಿಲ್ಲ ನೆಲದ ಧ್ಯಾನವ ಬಿಡಲಿಲ್ಲ
ಹಬ್ಬ ಹರಿದಿನ ಕಣ್ಮುಂದೆ ಸುಳಿದರೂ ತಿರುಗಿ ನೋಡದಾತ ನನ್ನಪ್ಪ

ತುತೂ ಬಿದ್ದ ಆಕಾಶ ನೋಡುವ ಮೈ ಅಂಗಿ ತೊಟ್ಟವ
ಹಸಿವನ್ನು ಹಾಸಿ ಹೊದ್ದು ಬದುಕು ನೂಕಿದಾತ ನನ್ನಪ್ಪ

ಬರ ನೆರೆಗಳ ನೆರಳು ತಾಕಿಸಿಕೊಂಡ ಜೀವ ಸೆಲೆ
ಕೈ ಕಾಲುಗಳ ಕಸುವು ಹಿಂಗಿದರೂ ಹಂಗಿನಲಿ ಬದುಕದಾತ ನನ್ನಪ್ಪ

ಮರುಳ ಉಳುಮೆ ಬದುಕೆಂದು ನಿತ್ಯ ಸತ್ಯದಿ ಬಾಳುವನು
ಕಷ್ಟಗಳ ಮೆಟ್ಟಿ ನಿಂತು ಬವಣೆಯ ದಾಟಿ ಬಂದಾತ ನನ್ನಪ್ಪ

- ಮರುಳಸಿದ್ದಪ್ಪ ದೊಡ್ಡಮನಿ, ಹುಲಕೋಟಿ

ಮರುಳಸಿದ್ದಪ್ಪ ದೊಡ್ಡಮನಿ

ಕವಿ ಮರುಳಸಿದ್ದಪ್ಪ ದೊಡ್ಡಮನಿಯವರು ಹುಟ್ಟಿದ್ದು ದಿನಾಂಕ 1976ರ ಜನವರಿ 1 ರಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಗಾವರಾಳದಲ್ಲಿ. 

ಗದಗ ಜಿಲ್ಲೆಯ ಹುಲಕೋಟೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿ, ಪದವಿ- ಪೂರ್ವ, ಶಿಕ್ಷಣವನ್ನು ಮುಗಿಸಿದರು.  ತಾಂತ್ರಿಕ ಶಿಕ್ಷಣ, ಮತ್ತು ಸಿ.ವಾಯ್ ಎಸ್ ಕೋರ್ಸ್ ನ್ನು ಪೂರೈಸಿಕೊಂಡು ನಂತರ ಗದಗ ಶಾಖೆಯಲ್ಲಿ ವಿಮಾ ಸಲಹೆಗಾರನಾಗಿ ಬದುಕು ರೂಪಿಸಿಕೊಳ್ಳುತ್ತಾ, ಕವನ, ಲೇಖನ, ಕಥೆಗಳನ್ನು ಬರೆಯುವ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು. 

ನಾಡಿನ ಹಲವಾರು ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಕವಿತೆ, ಲೇಖನ, ಕಥೆಗಳು ಪ್ರಕಟಗೊಂಡಿವೆ. 2010ರಲ್ಲಿ ’ಮುತ್ತಿನ ಹನಿ’ (ಹನಿಗವನ ಸಂಕಲನ) ಕೃತಿ, 2014ರಲ್ಲಿ ’ನೆಲದ ಹನಿ’ ಕಥಾ ಸಂಕಲನ ಪ್ರಕಟವಾಗಿದೆ. 

More About Author