Poem

ನೆನಪು ಹಾರುವುದೆಂದರೆ....

ನೆನಪು ಹಾರುವುದು ಎಂದರೆ
ಮರೆತು ಬಿಡುವುದಷ್ಟೆ ಅಲ್ಲ;
ಕಳೆದುಕೊಳ್ಳುವುದು ಕೂಡ!

ಕೆಲವೊಮ್ಮೆ ವಸ್ತು, ಒಡವೆ, ಹಣ
ಇಟ್ಟಲ್ಲೆ ಮರೆತು, ಅಥವಾ ಇರುವ ಕ್ಷಣ
ಇರದ ಜಾಗ್ರತೆಯ ಪರಿಣಾಮಕ್ಕೆ
ಪರಿತಪಿಸುವ ಪ್ರಾಣ
ಹಾರಿದ ನೆನಪನ್ನೆ ಹಾಳೆಂದು ಶಪಿಸುವುದು!

ನೆನಪು ಹಾರದಿದ್ದರೆ
ಉಳಿಯುವುದೇ ಎಲ್ಲ?
ಹಾರಿದ ನೆನಪೇ ಉಳಿಸುವುದು..
ನಮ್ಮನು ಅದೆಷ್ಟೋ ಸಲ!

ಕೈಕೊಟ್ಟ ಪ್ರೀತಿ,
ಕಾಲ್ಕಿತ್ತ ಸ್ನೇಹ ಮಾಡಿದ ಖತಿ;
ಘಾತವನೆಲ್ಲ ಮರೆತು, ಅಂಥವರನ್ನು,
ಅವರ ಹೆಸರನ್ನೂ ಮರೆತೂ
ಹಾಯಾಗಿರುತ್ತೇವಲ್ಲ! ಇದೇ ಧೃತಿ!

ನೆನಪು ಹಾರುವುದೆಂದರೆ,
ಮರೆತು ಬಿಡುವುದಷ್ಟೆ ಅಲ್ಲ
ಕಳೆದುಕೊಳ್ಳುವುದು ಕೂಡ,
ನಮ್ಮ ದುರ್ಬಲತೆಯ ನಾವೇ ಕಂಡು
ಹೊಸಹಾದಿಯ ಹುಡುಕಿಕೊಂಡು
ಮುನ್ನಡೆಯುವ ಸಂಕಲ್ಪ ಬಲ ಕೂಡ!

ನೆನಪು ಹಾರದೇ ಉಳಿದಿದ್ದೆಲ್ಲ
ನಮ್ಮದೇ ಆದರೂ
ಅದನು ಪುನರನುಭವಿಸದಿದ್ದರೆ
ನಾವೇ ಬೆದರು!

ಉಳಿಯಲಿ ಬಿಡಿ
ರವಷ್ಟು
ತಿಳಿದಷ್ಟು...
ಬೆಳೆಯುವುದೆ ಅದು?
ಅಹುದಹುದು...
ಬೆಳೆಯಬಹುದು!
ಒಂದೊಮ್ಮೆ ಅಂಥ ನೆನಪು
ಬೆಚ್ಚನೆ ನೆನಪು, ಹಿತವಾದ ನೆನಪು, ತಂಪಾದ ನೆನಪು ಕೋಶಗಟ್ಟಿ ಬೀಜವಾದರೆ,
ಎದೆಯ ಮೃತ್ತಿಕೆಯಲ್ಲಿ ಕಾವಿಗೆ ಬಿದ್ದರೆ,
ವರ್ತಮಾನದ ತೇವದಲಿ ಮಿಂದು ಮೀಯ್ದರೆ,

ಮೊಳೆಯಬಹುದು...
ಮೊಳೆತು, ಕೊನರಿ
ಕಂಗೊಳಿಸಬಹುದೊಂದು ಸಂಬಂಧ.

ಅದಕ್ಕೆ ಮರೆಯದೇ ನೀರೆರೆದಿರಾದರೆ
ಸಸಿ..ಚಿವುಟಿದರೆ ಕಸಿವಿಸಿ!
ಮತ್ತೆ ಹರಿಟೊಂಗೆ ಚಾಚಿ ಮರ!
ಹಾಗೇ ಉಳಿದರೆ ಹೆಮ್ಮರ!

ನೆರಳು ಹಾಸುವುದೂ
ಫಲವನೂ ಉಣಿಸುವುದೂ
ಪ್ರೀತಿ, ಸ್ನೇಹ..
ಸಂಬಂಧಗಳೆಲ್ಲ ಮಾಗುವುದೂ ಹೀಗೇ

ನೆನಪು ಹಾರುವುದೆಂದರೆ
ಮರೆತು ಬಿಡುವುದಷ್ಟೆ ಅಲ್ಲ;
ಕಳೆದುಕೊಳ್ಳುವುದು ಕೂಡ!
ಕಳೆದು ಹೋದ ನಿರ್ವಾತದಲ್ಲೆ
ಮತ್ತೆ ಆವಿಗಟ್ಟಿ ಸಮಯದ ಸಂಗಡ
ಹೊಸಸೃಷ್ಟಿಗೆ ತುಡಿವ ಮೋಡ!

- ಚಂಸು ಪಾಟೀಲ

ವಿಡಿಯೋ
ವಿಡಿಯೋ

ಚಂಸು ಪಾಟೀಲ

ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974))  ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು.

ಕೃಷಿ ಸಮಸ್ಗೆ ಕುರಿತು ಬರೆದ ಕೃತಿ-ಬೇಸಾಯದ ಕತಿ. ಈ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಸಿಂಪಿ ಲಿಂಗಣ್ಣ ದತ್ತಿ ಪ್ರಶಸ್ತಿ ಲಭಿಸಿದೆ. ಗೆಳೆಯನಿಗೆ (1995), ಕೆಂಪುಕಂಗಳ ಹಕ್ಕಿ ಮತ್ತದರ ಹಾಡು (2004), ಅದಕ್ಕೇ ಇರಬೇಕು (2009) -ಇವರ ಕವನ ಸಂಕಲನಗಳು. ಸದ್ಯ ಗ್ರಾಮದಲ್ಲೇ ಕೃಷಿಕರಾಗಿದ್ದು,ರೈತಾಪಿ ಜಗತ್ತಿನ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡಿದ್ದಾರೆ.  

More About Author