Poem

ನಿಧಾನ ಸುಡುವ ಕನಸುಗಳು

ಎಲ್ಲ ನಕ್ಷೆಗಳೂ ವಿಕೃತ ಚಿತ್ರಗಳು ಇಲ್ಲಿ
ಎಲ್ಲ ನಡೆಗಳೂ ಭೀಕರ ಭರವಸೆಗಳು
ಎಲ್ಲ ರಸ್ತೆಗಳೂ ತಿರುಗಣಿಯ ತಿರುವುಗಳು

 

ಹಸಿವು ಆಸೆಗಳು ಅರೆ ತಿಂದ ಹೊತ್ತಿಗೆ
ಹಳದಿ ಹಾಳೆಗಳಲ್ಲಿ ಒಂದು ನಾಗರಿಕತೆಯೇ ಹುಡಿ ಹಿಡಿದಿದೆ
ಗಾಜಿನರಮನೆಗಳಲ್ಲಿ ದೀಪಗಳ ಜಾಗರಣೆ
ರವಿಕಿರಣಗಳು ಸೋಕದ ಒಳಗು

 

ಊರ ತೊರೆದು ನಿಂತಿರುವ ಹಠಮಾರಿ ಗಂಡಿಗಾಗಿ
ಮಹಿಳೆ ಲಾರಿಯೊಂದರ ಇಂಜಿನ್ನಿನ ಜತೆಗೆ ವಾದಕ್ಕೆ ಇಳಿದಿದ್ದಾಳೆ
ಈಕೆಯ ಕಣ್ಣೀರು ಸೋಕಿದ ಜಾಗಗಳೆಲ್ಲ ಬರಡು ಇನ್ನು

 

ಅವಳ ಕನಸುಗಳಲ್ಲಿ ಕಡೆದು ನಿಲ್ಲಿಸಿದ ದೈತ್ಯ ಶಿಲ್ಪ
ಒದ್ದೆ ಮಣ್ಣಿನ ಮೇಲೆ ಅದರ ವಿಕಾರ ನೆರಳು
ಬೇಲಿ ಗೋಡೆಗಳಿಗೆ ಮಾತ್ರ ರಾಚಿರುವ ಬಣ್ಣ

 

ಹಳೆಯ ಕಡತಗಳೊಳಗೆ ಚೂರುಪಾರು ಮಾತುಗಳು
ಅಂದಗೆಟ್ಟಿರುವ ಈ ಶಬ್ದಗಳಲ್ಲಿಯೇ
ಕಟ್ಟಬಹುದೇ ಕನಸುಗಳನ್ನು?

 

ಸಹಜ ದಿನಚರಿಯಲ್ಲಿ ನಿಧಾನ ಸುಡುವ ಕನಸುಗಳು
ಎಲ್ಲಿಯೂ ಕಾಣುತ್ತಿಲ್ಲ ಭಗಭಗನೆ ಉರಿವ ಬೆಂಕಿ
ಆಸೆಗಳೂ ಬದುಕುಳಿಯದ ಅಂಟುಮಣ್ಣಲ್ಲಿ
ಇದೋ ಒಂದೇ ಒಂದು ಕಡುಹಸಿರು ಗರಿಕೆ

ಚಿತ್ರ : ಕಂದನ್‌

ಕಮಲಾಕರ ಕಡವೆ

ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರಾದ  ಕಮಲಾಕರ ಕಡವೆ, ಅವರು ಸದ್ಯ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರೆಯುವ ಅವರು ಅನುವಾದದಲ್ಲಿಯೂ ಆಸಕ್ತರಾಗಿದ್ದಾರೆ. ಮೂರು ಕವನ ಸಂಕಲನ ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ) ಮತ್ತು ಮುಗಿಯದ ಮಧ್ಯಾಹ್ನ (ಅಕ್ಷರ, 2010), ಜಗದ ಜತೆ ಮಾತುಕತೆ (ಅಕ್ಷರ, 2017).

More About Author