Poem

ನಿವೇದನೆ

ಸ್ಪರ್ಶ ಸುಖವೆನ್ನುತ್ತೀರಿ
ಅದು ನಿಜವಾದರೆ
ನಮ್ಮನ್ನು ಒಮ್ಮೆ ಸ್ಪರ್ಶಿಸಿ
ಶತಮಾನಗಳ ನಿಮ್ಮ
ಅಸ್ಪೃಶ್ಯತೆಯ ಕಳಂಕ
ಕಳೆದು ಹೋಗಬಹುದು

ಅಪ್ಪುಗೆ ಸುಖವೆನ್ನುತ್ತೀರಿ
ಅದು ನಿಜವಾದರೆ
ನಮ್ಮನ್ನು ಒಮ್ಮೆ ಅಪ್ಪಿಕೊಳ್ಳಿ
ಶತಮಾನಗಳಿಂದ ಕಲ್ಲಾದ
ನಿಮ್ಮೆದೆಯೂ ಹೂವಾಗಬಹುದು

ನೋಟ ಸುಖ ವೆನ್ನುತ್ತೀರಿ
ಅದು ನಿಜವಾದರೆ
ನಮ್ಮ ಕಣ್ಣಲ್ಲಿ ಒಮ್ಮೆ
ಕಣ್ಣಿಟ್ಟು ನೋಡಿ
ಶತಮಾನಗಳಿಂದ ನಿಮ್ಮ
ಕಣ್ಣ ಉರಿಯಲ್ಲಿ ಸುಟ್ಟು
ಕರಕಲಾದ ನಮ್ಮ ಕನಸಗಳೂ
ಜೀವ ಪಡಯಬಹುದು

ಕೂಟ ಸುಖವೆನ್ನುತ್ತೀರಿ
ಅದು ನಿಜವಾದರೆ
ನಿಮ್ಮೊಡನೆ ಒಮ್ಮೆ
ನಮ್ಮನ್ನೂ ಕೂಡಲು ಬಿಡಿ
ಶತಮಾನಗಳಿಂದ ಕೂಡದ
ಕುಲವಳಿದ ನಿಮ್ಮ
ಬಾಳಿನ ಸಂಕರ ಕಳೆದು
ನಮ್ಮ ಬಾಳಲ್ಲೂ
ಸಂಕ್ರಮಣದ ಸೂರ್ಯ
ಹೊಸಬೆಳಕ ಚೆಲ್ಲಬಹುದು.

ಟಿ. ಯಲ್ಲಪ್ಪ

ಟಿ. ಯಲ್ಲಪ್ಪ

ಟಿ. ಯಲ್ಲಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣಪುರದಲ್ಲಿ  02-10-1970 ರಂದು ಜನಿಸಿದರು. ಕೃಷಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದ ಯಲ್ಲಪ್ಪನವರು ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಶಾಲಾ ಕಾಲೇಜುಗಳ ಅನೇಕ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇಪ್ಪತ್ತೆರಡರ ಅಳಲು(ಲಲಿತಾ ಪ್ರಬಂಧ), ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು, ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ, ಕಣ್ಣ ಪಾಪೆಯ ಬೆಳಕು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ವೀಚಿ ಕಾವ್ಯ ಪುರಸ್ಕಾರ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ. 

More About Author