Poem

ನೋವಿಗೆಲ್ಲಿದೆ ಇಲಾಜು

ನಗುತ್ತಿದ್ದೇವೆಂದ ಮಾತ್ರಕ್ಕೆ
ನಮ್ಮೊಳಗೆ ದುಃಖವೇ ಇಲ್ಲವೆಂದಲ್ಲ
ಈ ಜಗತ್ತಿನಲ್ಲಿ ನಗುವ ನಟಿಸಿದರೆ
ಮಾತ್ರ ನಮ್ಮ ಪಾತ್ರಕ್ಕೆ ಬೆಲೆ..!

ಹೌದು, ನನಗೆ ಚೆನ್ನಾಗಿ ಗೊತ್ತು
ಇಲ್ಲಿ ಎಲ್ಲರೂ ನಕಲಿ ನಗುವೆಂಬ
ಬಣ್ಣ ಮುಖಕ್ಕೆ ಲೇಪಿಸಿಕೊಂಡೇ
ಬದುಕುತ್ತಿರುವುದು..?!

ದುಃಖದ ಸರಕು ಮಾರುಕಟ್ಟೆಯಲ್ಲಿ
ಸುಲಭಕ್ಕೆ ಬಿಕರಿಯಾಗುವುದಿಲ್ಲ
ಎಲ್ಲರೂ ತಾಜಾ ನಗುವನ್ನೇ
ಹುಡುಕುತ್ತಿರುತ್ತಾರೆ.

ಒಬ್ಬನೇ ಒಬ್ಬನನ್ನು ಕೇಳಿನೋಡಿ
ಸ್ವಲ್ಪ ದುಃಖ ಬೇಕಿತ್ತೆಂದು,
ಹೊರಲಾರದಷ್ಟು ರಾಶಿ ಹಾಕುತ್ತಾರೆ
ಅದೂ ಪುಕ್ಕಟೆಯಾಗಿ.!!

ಎಲ್ಲರಿಗೂ ನಗುವ ಚಂದ್ರನೇ ಬೇಕು
ಮೊಗ್ನನ್ನು ಮುಡಿದವರ
ಎಲ್ಲದರೂ ಕಂಡಿದ್ದೀರಾ ಹೇಳಿ?
ಅರಳಿದ ಹೂವೇ ಆಪ್ಯಾಯಮಾನ

ನಗುವನ್ನೇ ಹುಡುಕುತ್ತಾ ಹೋಗುವುದೇ
ದಡ್ಡತನ, ಅತ್ತು ನಿಸೂರಾಗುವುದೇ ದೊಡ್ಡತನ,
ನಗುವ ನಟಿಸಿ ಬಿಡಿ ನಗುವವರ ಜೊತೆ
ಅಳುವಿಗೊಂದು ಸಣ್ಣ ಪರದೆ ಎಳೆದು

- ಹಂದಿಕುಂಟೆ ನಾಗರಾಜ್

ವಿಡಿಯೋ
ವಿಡಿಯೋ

ಹಂದಿಕುಂಟೆ ನಾಗರಾಜ್

ಹಂದಿಕುಂಟೆ ನಾಗರಾಜ್ ಅವರು ಪ್ರವೃತ್ತಿಯಲ್ಲಿ ಕವಿ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು, ಕವನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author