Poem

ಒಲವು-ಮತ್ತು

ಆ ಮೂರು ಚುಕ್ಕಿಗಳ ಮೇಲೆ
ಸರಿಯಾಗಿ ಎಣಿಸಿ ಇರಿಸಿದ್ದು
ಒಂದಲ್ಲ ಎರಡಲ್ಲ
ಮೂರಲ್ಲ ನೂರೂ ಅಲ್ಲ
ಸಹಸ್ರ ಸಹಸ್ರ ಮಧುಯುಕ್ತ ಮುತ್ತುಗಳು..
ಎಣಿಕೆ ಇರಿಸಿಲ್ಲವೇನೋ!!
ಮತ್ತಿನಲ್ಲೇ ಕಳೆದ ಹೊತ್ತು
ಸ್ಮೃತಿಯಲ್ಲಿ ಆವರಿಸಿದ್ದು ಮಬ್ಬು ಮಬ್ಬು
ನೆನಪಿನಲ್ಲಿ ಉಳಿಯುವುದುಂಟೆ
ಬೇರೆ ಏನಾದರೂ!!
ಒಲವಿನ ಮತ್ತೇ ಗಮ್ಮತ್ತು
ಯಾವ ಮಾದಕಪೇಯ-ಪದಾರ್ಥಗಳಲ್ಲೂ
ಆ ತರಹದ ಗುಂಗು ಇರುವುದಿಲ್ಲ ಬಿಡು..!!
ಅದರ ಸೊಗಸೇ ಸೊಗಸು
ಅದೊಂದು ಮಿಲನ ಮಹಾಸಮಾಗಮ..
ಇಬ್ಬರ ನಡುವೆ ನಡೆವ ಪ್ರೇಮೋತ್ಸವ..
ಮುತ್ತಿನ ನಶೆಗೆ ಮುತ್ತಿಕ್ಕುವ
ನಿನ್ನ ಮುಂಗುರುಳೋ..
ಅದು ಅಮಲುಪೇಯದ ಮೇಲಿನ ನೊರೆ ತೆರೆ..
ಹೀಗೆಯೇ ಆಗುತ್ತದೆ ನಾವು ಬೆರೆತಾಗಲೊಮ್ಮೆ
ಇಹವನ್ನೇ ಮರೆತು
ಅಹಂ ಕಳೆದುಕೊಂಡು ಬಿಡುತ್ತೇವೆ
ಎರಡುಭಾವವಳಿದು ಒಂದಾಗಿ..
ಸಾಕಾಗದು ಇದೊಂದೇ ಜನುಮ
ಬೇಕು ನೂರಾದರೂ..!!
ಹಿಂದೆ ಕಳೆದವುಗಳಲ್ಲಿನ ಉತ್ಸವದ ಉಳಿಕೆಗಳೆಲ್ಲ
ಇಂದಿನ ಸಂಭ್ರಮೋತ್ಸವಗಳು..
ಈ ಜನುಮದ್ದು ಬಾಕಿ ಬಡ್ಡಿ ಸಹಿತ
ಮುಂದಿನ ಜನುಮಕ್ಕೆ...
ವಾಗ್ದಾನ ಮಾಡು ದೇವಿ
ನೂರು ನೂರು ಜನುಮ
ನನ್ನೊಂದಿಗೆ ಇರುವೆ ಎಂದು!!

- ಡಾ. ಲಕ್ಷ್ಮಣ ಕೌಂಟೆ

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ.

More About Author