Story

ಒಂದು ಎ ಸರ್ಟಿಫಿಕೇಟ್‌ ಜನಪದ ಕಥೆ

ಪತ್ರಕರ್ತ ಹರೀಶ್‌ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್‌ ಇಂಜಿನಿಯರಿಂಗ್‌. ವೃತ್ತಿಯಲ್ಲಿ ಪತ್ರಕರ್ತರು. ಪ್ರಸ್ತುತ ವಿಸ್ತಾರ ನ್ಯೂಸ್ ಚಾನೆಲ್ ನಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಅವರು ಬರೆದಿರುವ ಒಂದು ಎ ಸರ್ಟಿಫಿಕೇಟ್‌ ಜನಪದ ಕಥೆ ನಿಮ್ಮ ಓದಿಗಾಗಿ.

ಸೀನಪ್ಪನೆಂಬವನಿದ್ದ. ಅವನಿಗೊಬ್ಬಳು ಚೆಂದುಳ್ಳಿ ಹೆಂಡತಿ. ಅಂಥವಳಿದ್ದೂ ಇವನಿಗೆ ಸ್ವಲ್ಪ ಹೊರಚಾಳಿ. ಯಾವಾಗಲೂ ರಾತ್ರಿ ಹೊರಗೆ ಸುತ್ತಾಡುವನು. ಹೆಂಡತಿಗೆ ಸುಖವೂ ಇಲ್ಲ ನೆಮ್ಮದಿಯೂ ಇಲ್ಲ ಎಂಬಂತಾಯಿತು. ನೋಡುವಷ್ಟು ನೋಡಿದಳು. ಕಡೆಗೆ ʼಕಲಿಸುತ್ತೇನೆ ಈ ಮಗನಿಗೆʼ ಎಂದುಕೊಂಡು ಸಮಯ ಕಾಯತೊಡಗಿದಳು.

ಅಷ್ಟರಲ್ಲಿ ಆಕೆಗೆ ಬಾಲ್ಯದ ಗೆಳೆಯನೊಬ್ಬ ಸಿಕ್ಕಿದ. ಹಳೇ ಸಖ್ಯ ಪ್ರಣಯಕ್ಕೆ ತಿರುಗಿತು. ಮನೆಯಲ್ಲಿ ಸೀನಪ್ಪ ಇಲ್ಲದ ಸಮಯದಲ್ಲಿ ಅವನ ಮನೆಯಲ್ಲಿ ಬೇರೆ ರಸಮಯ ಸೀನ್‌ ನಡೆಯತೊಡಗಿತು.

ಇದು ಹೇಗೋ ಕಿವಿಯಿಂದ ಕಿವಿಗೆ ದಾಟಿ ಸೀನಪ್ಪನ ಕಿವಿಗೂ ಬಿತ್ತು. ಅವನಿಗೆ ಬೇಸ್ತುಬಿದ್ದ ಭಾವ ಮತ್ತು ಸಿಟ್ಟು ಏಕಕಾಲಕ್ಕೆ ಉದ್ಭವಿಸಿತು. ಪರೀಕ್ಷಿಸಿಯೇ ಬಿಡೋಣ ಎಂದುಕೊಂಡ. ʼಇವಳೇ, ಕೆಲಸವಿದೆ. ನಾನು ಪಟ್ಟಣಕ್ಕೆ ಹೋಗಿ ನಾಳೆ ಬರುತ್ತೇನೆʼ ಎಂದು ಹೊರಡತೊಡಗಿದ. ಹೆಂಡತಿಗೆ ಒಳಗೊಳಗೇ ಖುಷಿಯಾಗಿ, ಈ ವಿಷಯ ಗೆಣೆಕಾರನಿಗೆ ತಿಳಿಸಿ ಇಂದಿನ ರಾತ್ರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಇಟ್ಟುಕೊಳ್ಳೋಣ ಎಂದು ಭಾವಿಸಿ ಕೊಡಪಾನ ತೆಗೆದುಕೊಂಡು ಬಾವಿಕಟ್ಟೆಗೆ ಹೊರಟಳು. ʼನೀನು ಬರುವಷ್ಟರಲ್ಲಿ ನಾನು ಬಾಗಿಲು ಚಿಲಕ ಹಾಕಿಕೊಂಡು ಹೋಗಿರುತ್ತೇನೆʼ ಎಂದು ಹೇಳಿದ ಸೀನಪ್ಪ.

ಅವಳು ಅತ್ತ ಹೋಗುತ್ತಲೇ ಸೀನಪ್ಪ ಮೆತ್ತಗೆ ಹಿಂದಿನ ಬಾಗಿಲಿನ ಒಳಚಿಲಕ ತೆಗೆದಿಟ್ಟು, ಮುಂದಿನ ಬಾಗಿಲಲ್ಲಿ ಹೊರಬಂದು ಚಿಲಕ ಹಾಕಿಕೊಂಡು, ಹಿಂಬಾಗಿಲಿಂದ ಒಳನುಗ್ಗಿ ಚಿಲಕ ಹಾಕಿಕೊಂಡು ಅಟ್ಟವೇರಿ ಸದ್ದಿಲ್ಲದೆ ಕುಳಿತ.

ಗೆಣೆಕಾರನಿಗೆ ಸಂದೇಶ ತಿಳಿಸಿ ಹೆಂಡತಿ ಮರಳಿ ಬಂದಳು. ಗೆಣೆಯನಿಗಾಗಿ ತಯಾರಿ ಮಾಡಿಕೊಳ್ಳತೊಡಗಿದಳು. ಅಟ್ಟದಲ್ಲಿ ಏನೋ ಸದ್ದಾಯಿತು. ಗಂಡನಿಗೆ ಗುಮಾನಿಯಿದ್ದ ಬಗ್ಗೆ ತಿಳಿದಿದ್ದ ಆಕೆಗೆ ಗಂಡ ಅಲ್ಲೇ ಅಡಗಿದ್ದಾನೆ ಎಂಬುದು ಖಾತ್ರಿಯಾಯ್ತು. ತಲೆ ಓಡಿಸಿದಳು.

ಅಷ್ಟರಲ್ಲಿ ಆಕೆಯ ಗೆಣಕಾರ ಬಂದು, ಮನೆಯೆದುರಿನ ಬೀದಿಯಲ್ಲಿ ಸುಳಿದಾಡತೊಡಗಿದ. ಹೆಂಡತಿ ಕೂಡಲೇ ಜೋರಾದ ದನಿಯಲ್ಲಿ ಹಾಡತೊಡಗಿದಳು:

ಎಲ್ಲಿಂದ ನೀ ಬಂದೆ ನನಗಾಗಿ
ನಾ ಕಾದು ಕುಂತಿರುವೆ ನಿನಗಾಗಿ
ನೀ ಬಾಯಿ ಬಿಚ್ಚಿದರೆ ನನಗಾಗಿ
ಮೇಲೊಬ್ಬ ಕಾದಿರುವ ನಿನಗಾಗಿ

ಇದು ಗೆಣಕಾರನಿಗೆ ಕೇಳಿಸಿತು. ಏನೋ ಅಪಾಯ ಕಾದಿದೆ ಎಂದು ಅರ್ಥವಾಗಿ ಆತ ಅಲ್ಲಿಂದಲೇ ಪೇರಿ ಕಿತ್ತ. ಇದನ್ನೆಲ್ಲ ಕೇಳುತ್ತಿದ್ದ ಸೀನಪ್ಪ ಪೆಚ್ಚಾಗಿ, ಸಿಟ್ಟೂ ಬಂದು, ದಡಬಡಿಸಿ ಕೆಳಗಿಳಿದು ಬಂದ. ʼʼಯಾಕೆ ಅಷ್ಟೊಂದು ಜೋರಾಗಿ ಹಾಡ್ತಾ ಇದ್ದೆ?ʼʼ ಎಂದು ಗದರಿಸಿದ.

ʼʼಅರೆರೇ ಸಂಶಯಕಾರ, ಒಬ್ಬಳಿಗೇ ಬೋರಾಗ್ತಾ ಇತ್ತು. ಅದ್ಕೇ ಹಾಡ್ತಿದ್ದೆ. ಮೊದ್ಲು ನೀನ್ಯಾಕೆ ಅಲ್ಲಿದ್ದೆ ಹೇಳು?ʼʼ ಎಂದು ಹೆಂಡತಿ ದಬಾಯಿಸಿದಳು.

ʼʼನಾನು ಅಟ್ಟದ ಪೆಟ್ಟಿಗೆಯಲ್ಲಿ ಹಳೇ ದಾಖಲೆ ಹುಡುಕ್ತಾ ಇದ್ದೆ. ನಿನ್ನ ಹಾಡಿನ ಅರ್ಥ ಬೊಗಳುʼʼ ಎಂದ.

ʼʼಅದು ಒಗಟಿನ ಹಾಡು. ಒಬ್ಬ ಗಾಳಕ್ಕೆ ಎರೆಹುಳ ಸಿಕ್ಕಿಸಿ ಬೀಸಿರುತ್ತಾನೆ. ಅದನ್ನು ತಿನ್ನಲು ಮೀನು ಬರುತ್ತದೆ. ಆಗ ಎರೆಹುಳು ಹಾಡುತ್ತದೆ- ಎಲ್ಲಿಂದ ನೀ ಬಂದಿರುವೆ, ನಾನು ನಿನಗಾಗಿ ಕಾದು ಕುಳಿತಿರುವೆ ಅಂತ ಮೀನಿಗೆ ಹೇಳ್ತದೆ. ಆದ್ರೆ ನೀನು ಬಾಯಿ ಬಿಟ್ಟು ನನ್ನ ಕಚ್ಚಿದರೆ ಮೇಲೆ ಕಾಯ್ತಾ ಇರುವ ಗಾಳ ಹಾಕುವವ ನಿನ್ನನ್ನು ಎಳೆದುಕೊಳ್ತಾನೆ ಅಂತ ಅದರರ್ಥ. ಹೆಂಡತಿ ಮೇಲೆ ಅನುಮಾನಪಟ್ಟು ಅಟ್ಟ ಹತ್ತಿದ ಶಾಣ್ಯಾ ಗಂಡಸೇ, ಈ ಒಗಟಿನ ಅರ್ಥ ನಿಂಗೆ ಗೊತ್ತಿಲ್ಲವಲ್ಲೋʼʼ ಎಂದು ಹೆಂಡತಿ ಬಾಯಿ ಮಾಡಿದಳು.

ರೆಡ್‌ ಹ್ಯಾಂಡೆಡ್‌ ಆಗಿ ಆಕೆಯನ್ನು ಹಿಡಿಯುವ ಸ್ಕೆಚ್‌ ಹಾಕಿದ್ದ ಸೀನಪ್ಪ ಮೊಣಕೈಗೆ ಚಿಲಕ ಬಡಿಸಿಕೊಂಡವನಂತೆ ಕೂತ.

- ಹರೀಶ್ ಕೇರ

ಹರೀಶ್‌ ಕೇರ

ಪತ್ರಕರ್ತ ಹರೀಶ್‌ ಕೇರ ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ. ಕಲಿತದ್ದು ಸಿವಿಲ್‌ ಇಂಜಿನಿಯರಿಂಗ್‌. ಹೊಸದಿಗಂತ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರದ ಪುರವಣಿಗಳ ಮುಖ್ಯಸ್ಥರಾಗಿ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ವಿಸ್ತಾರ ನ್ಯೂಸ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಪತ್ರಕರ್ತ; ಆದರೆ ಹೃದಯದಲ್ಲಿ ಕತೆ, ಕವಿತೆಗಳಿವೆ. ‘ನಕ್ಷತ್ರ ನೇಯುವ ಹಕ್ಕಿಗಳು’ ಅವರ ಕವನ ಸಂಕಲನ.

More About Author