Poem

ಒಂದು ಹಳೆಯ ಗಾಯ 

 

ಇದ್ದೇ ಇರುತ್ತದೆ ಯಾವತ್ತಿಗೂ
ಬೆಳೆಯುವ ಗಿಡದ ತಲೆಗೆ ಹೊಡೆದ ಗುರುತಿನಂತೆ

ಚರಿತ್ರೆಯ ಕಾಲಿಗೋ ಗಾಲಿಗೋ
ಮೆತ್ತಿಕೊಂಡ ಅಸಂಖ್ಯ ಹುಣ್ಣುಗಳಲ್ಲಿ
ನನ್ನದು ನನಗೆ ನೋಯುತ್ತಿದೆ.
ಚಿಗುರು ಚಿವುಟಿದ ನಂಜು
ಒಳಗಿಳಿದು ಉರಿಗಟ್ಟಿ
ಕಣ್ಣ ನಿಂಬೆ ಹಣ್ಣಿನಂತೆ ಹಿಂಡಿಕೊಂಡು
ಬಾಯಿ ಕಿಸಿದು ನರಳುವುದು
ಒಂದು ಖಾಸಗಿ ವಿಷಯ.
ಅದು ಅಪ್ರಕಟಿತ ಕವಿತೆಯ ಗುಹಾವಾಸ

ಕೆಮ್ಮಿದರೂ ಕೈಹಿಡಿದು ನಡೆಸುವ
ಹಿಂಬಾಲಕರ ಝಾಡಿಸಿ ಹೊರಟ
ಮುದಿರೋಗಿಯ ಅಳಲು
ಸಂಜೆ ಮೋಡಕೆ ತಗುಲಿ
ನಿಸ್ತೇಜ ನಿರ್ಮೋಹದ ರಾತ್ರಿಯಲಿ
ಎಲ್ಲೋ ಮರಡಿಯಲಿ ನಾಲ್ಕು ಹನಿ
ಎರಡುಲ್ಕಾಪಾತ
ಅದರ ಪಾಡಿಗೆ ಅದು

ನಂಟುಗಳ ನಂಬಿಕೆಗಳ ಆಯಸ್ಸು
ತೀರಾ ಕಡಿಮೆ
ಅಥವಾ
ಸಾವಿನಂಚಿನ ಕೊನೆಯ ಕಂಬನಿಗೆ
ಆಸರೆ ಕೊಟ್ಟ ಹಳೆಯ ಹೊದಿಕೆಯ ಪಯಣ
ಹೆಣದ ಜೊತೆಗೆ.

ಉಳಿದದ್ದಕ್ಕೆ ಉಳಿಸಿ ಹೋಗಲಾದರೂ ಏನಿದೆ?
ನಡೆದಾಡಿ ನರಳುತ್ತಿದ್ದ ಹಳೆಯ ಗಾಯ
ಈಗ ಮಣ್ಣು ಸೇರಿ
ಮತ್ತಷ್ಟು ಕೊಳೆತ.
ಅದನೇ ಉಂಡು ತೇಗಿದ ಕ್ರಿಮಿಗೆ
ದಾಟಬಲ್ಲದೆ ನೋವು?

ಹಸಿರು ಮರದಡಿಗೆ ನೆರಳಿಗೆ ಬಂದವರು
ಚಿಗುರ ತರಿದು
ಹೊಸಕಿ ಸುಮ್ಮನೇ ಹೊರಡುವರು

ಅದಕ್ಕೇ
ಹೊಟ್ಟೆ ನೋವುಣ್ಣುತ್ತಿದ್ದರೂ
ಹೊಟ್ಟೆಗಾಗಿ ಚಿಗುರು
ಹೊಟ್ಟೆಗಾಗಿ ಉದುರು

ಪೂರ್ಣ ವಿರಾಮದ ಹಿಂದಿನದೆಲ್ಲ
ನಿನ್ನದೇ ಎನಿಸಿದರೂ
ಅದು ನಿನಗೆ ಮಾತ್ರ

ಚಿತ್ರ: ಎಸ್‌. ವಿಷ್ಣುಕುಮಾರ್‌

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  'ಶರೀಫನ ಬೊಗಸೆ' ಮತ್ತು 'ತುಂಗಭದ್ರೆಯ ಪಾತ್ರದಲಿ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಕವಿತೆಗಳು ಕನ್ನಡ ಪ್ರಭ, ಅವಧಿ ಮುಂತಾದ ದಿನ ಪ್ರತಿಕೆಗಳಲ್ಲಿ ಪ್ರಕಟವಾಗಿವೆ.

More About Author