Poem

ಪಯಣ....

ಸಿಕ್ಕಿಬಿದ್ದೆಯಾ ಜೀವ ತನುವೆಂಬ ಬಲೆಯಲ್ಲಿ
ಮದಮೋಹ ಮತ್ಸರದ ನಡುನೀರ ಸುಳಿಯಲ್ಲಿ
ಬೆನ್ನ ಬಿಡದಂಟಿಹುದು ಹಿಂದಿನಾ ಕರ್ಮವಿಲ್ಲಿ
ಹೇಗೆ ಇರುವೆಯೋ ನೀನು ಜಡದೇಹದಲ್ಲಿ

ಆನಂದವಾನಂದ ಈ ಬಾಲ ಲೀಲೆಯಲಿ
ಸಾಗಿಹುದು ಅಭ್ಯಾಸ ಕಣ್ಸೆಳುವ ಶಾಲೆಯಲಿ
ಬಾಲ್ಯ ಸಂದಲು ನಿಂತೆ ಪ್ರಾಯದ ಹೊಸ್ತಿಲಲಿ
ಬಿದ್ದೆ ನೀನರಿಯದಲೆ ಮೋಹದ ಬಲೆಯಲ್ಲಿ

ಪ್ರಾಯ ಧುಮಿಕ್ಕಿಹುದು ಭೋರ್ಗರೆವ ಕಡಲಂತೆ
ಸರಿಸಮರು ಯಾರೆನೆಗೆ ಈ ಜಗದೆಲೆನುವಂತೆ
ಕಾಮಿನಿ ಕಾಂಚಾಣದಲಿ ಮೈಮರೆತು ನಿಂತೆ
ಮಧಿಸಿ ನಿಂತಿಹೆ ನೀನು ಹೆಮ್ಮಾರಿಯಂತೆ

ಕಾಲ ಉರುಳಿತು ಬೇಗ ರವಿ ಜಾರಿದಂತೆ
ದೇಹ ಬಾಗಿತು ಆಗ ಕಾಲನಾಣತಿಯಂತೆ
ಷಡ್ಡು ಹೊಡೆದಿಹ ಪ್ರಾಯ ಕರಗಿತೋ ಮಂಜಿನಂತೆ
ಕರಗಿದವು ಮಧಮೋಹ ಮಳೆಬಿಲ್ಲನಂತೇ

ಆಗ ನೆನೆಯಿತು ಜೀವ ದೇವನಿಹನೆಂಬ ಇರುವ
ʼಮರೆತು ಹೋದೆನೋ ಅಕಟಕಟ ಜನ್ಮಕೊಟ್ಟ ವಿಭುವ!
ತಿಳಿಯಲಾರದೆ ಹೋದೆ ಇಂದ್ರಿಯಗಳ ಹರವ,
ಕ್ಷಮಿಸಲಾರೆಯ ಎನ್ನ ಕರುಣಾಳು ಓ ದೇವʼ

ಮರೆಯಾಯ್ತು ಜಗದಿಂದ ಪಂಚಭೂತದ ಕಾಯ
ಹಾರಿ ಹೋಯಿತು ಜೀವ ಇದು ದೇವ ನಿರ್ಣಯ
ಸತ್ತು ಹುಟ್ಟುತ ಜೀವ ತಿರುಗುತಿಹುದಿಹಪರಕೆ
ಮುಕ್ತಿ ಇಲ್ಲವೇ ನಿನಗೆ ಈ ನಿನ್ನ ಪಯಣಕ್ಕೆ.

_ಗಾಯತ್ರಿ ರಾಜ್

ವಿಡಿಯೋ
ವಿಡಿಯೋ

ಗಾಯತ್ರಿ ರಾಜ್

ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ.

More About Author