Poem

ಪಿಸುಗುಡುವ ದನಿ ಆಲಿಸಬೇಕಿದೆ

ಸ್ವಲ್ಪವೇ ತಾಣ ಸಿಕ್ಕಿದ್ದರೂ ಸಾಕು ಕೊಂಬೆಗಾತು
ಭದ್ರ ಗೂಡು ಕಟ್ಟುತ್ತದೆ ಹಕ್ಕಿ

ಮಣ್ಣು ಕೊರೆಯುವ ತಾಕತ್ತಿನೊಂದಿಗೆ
ಭೂಮಿಗಿಳಿವ ಇರುವೆ ಗುಂಪು

ಚುಚ್ಚುವ ಪುಟ್ಟದೇ ಕೊಳವೆಯಿಟ್ಟುಕೊಂಡು
ವಾಸ್ತುಶಿಲ್ಪಿಯಾಗುವ ತುಡುಗು ಜೇನು

ಎಳೆ ಕಿರಣಗಳಿಗೆ ಸೋತು ಮೊಗ್ಗು ಮುಂಚಾಚಿ
ಅರಳಿಯೆ ಬಿಡುತ್ತದಲ್ಲ ಹೂವು

ಹನಿದ ಕೆಲವೇ ಹನಿಗಳಿಗೆ ಪರವಶವಾಗಿ
ಪುಳಕಿತವಾಗುತ್ತಾಳೆ ದೇಹದಿಳೆ

ಬೆಳದಿಂಗಳಾಗಿ ಬೆಳಕು ಜಾರುವ ಹೊತ್ತು
ಚಕೋರನಿಗೆ ಚಂದ್ರನದೇ ಕನವರಿಕೆ

ಬೆರಳು ಬೆಸೆದ ಕೈಗಳಲ್ಲಿ ನಿಲುಕುವ ಸ್ಪರ್ಷ
ಅದಮ್ಯ ಒಲುಮೆಯಾಗರ

ಮಂದ್ರದಲ್ಲಿಯೇ ತೇಲಿ ಕಂಠಾಭರಣವಾಗುವ
ದಿವ್ಯಾನುಭೂತಿಯ ಸಂಗೀತ

ನೋಟದಲ್ಲೆ ಮಿಂಚು ಹರಿಸಿ ಜೀವಚೈತನ್ಯಕೆ
ಮರುಳಾಗುವ ಕಣ್ಣುಮಿಟುಕು

ಪ್ರಕೃತಿಗೂ ಪ್ರೇಮಕ್ಕೂ ಇರುವ ಇಂಗಿತದ ಮಾಪನ ಮಾಡಬೇಕಿದೆ

ಬದುಕು ತನ್ನಷ್ಟಕ್ಕೆ ತಾನೆ ಪಿಸುಗುಟ್ಟುವ ವೇಳೆಯ
ನಾದವನ್ನು ಅರಿಯಬೇಕಿದೆ

- ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ

ಬಿ.ಎ. ಮಮತಾ ಅರಸೀಕೆರೆ ಅವರು ಮೂಲತಃ ಹಾಸನ ಜಿಲ್ಲೆಯವರು. 

ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಸಂತೆ ಸರಕು ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದಲ್ಲದೇ ಕಾಲಡಿಯ ಮಣ್ಣು ಎಂಬ ಅನುವಾದಿತ ಕೃತಿಯನ್ನೂ ರಚಿಸಿದ್ದಾರೆ. 

More About Author