Poem

ಪ್ರಾಣ ಬಿಟ್ಟರೂ ದೇಶ ಬಿಡಲಾರೆವು !

ದಲಿತರು ಬಂದ್ರು ದಾರಿ ಬಿಡಿ
ಎಂದು ದಲಿತ ಕವಿ ಗರ್ಜಿಸಿದಾಗ
ನಿಮ್ಮ ಉದರದಲ್ಲೊಂದು
ಸಣ್ಣ ತಳಮಳ ಅನಾಯಾಸವಾಗಿ
ಕಟ್ಟಿಕೊಂಡ ಸಾಮ್ರಾಜ್ಯದಲ್ಲಿ ತಲ್ಲಣ

ಒಡಹುಟ್ಟಿದವರನ್ನೆ ತಿರಸ್ಕರಿಸಿ
ಅಸ್ಪೃಶ್ಯರೆಂದು ಶೋಷಿಸಿ ಶೋಧಿಸಿ
ಕತ್ತಲೆಗೆ ದೂಡಿ ಒಡೆದು ಆಳುವ
ತಂತ್ರ ಮಂತ್ರ ನಡೆದಾಗಲೆಲ್ಲ
ಹೊಸತೊಂದು ಸೂರ್ಯೋದಯ
ನವ್ಯ ಮನ್ವಂತರಕ್ಕೆ ಸಾಹಿತ್ಯವೇ ಸಾಕ್ಷಿ

ಈಗ ಇವೆಲ್ಲಕ್ಕಿಂತ ಭಿನ್ನ
ಸ್ವಂತ ತಾಯಿ ಮಕ್ಕಳ ಕರುಳು ಬಳ್ಳಿ
ಸಂಬಂಧವನ್ನೆ ಕತ್ತರಿಸುವ ಕತ್ತರಿ ಪ್ರಯೋಗ !
ಮಮತೆ ಮಡಿಲಿನಲ್ಲಿ ಹಸು ಗೂಸುಗಳನ್ನು
ಚಿವಟಿ ಹೊಸಕುವ ಕರುಣೆಯಿಲ್ಲದ ಕೈಗಳು !!

ಇಷ್ಟಾದರೂ ಮುಸ್ಲಿಂರು ಬಂದ್ರು ದಾರಿ ಬಿಡಿ
ಎಂದು ಸಿದ್ಧಲಿಂಗಯ್ಯನವರಂತೆ
ಎದೆ ಸೆಟಿಸಿ ಹಾಡಲಾಗದ ಅಸಹಾಯಕತೆ
ಹಾಡಿದರೆ ತಥಾಗತಿತ ಲೋಕದಲಿ
ಅದೆಂತಹ ಭೂಕಂಪನ
ಸಂಚಲನ ಸೃಷ್ಟಿಯಾಗುವುದೋ !!

ಸಂವಿಧಾನ ಬದಲಿಸ ಹೊರಟವರಿಗೆ
ಸಂವಿಧಾನ ಕೊಟ್ಟ ಹಕ್ಕು ಹತ್ತಿಕ್ಕುವುದು
ದೊಡ್ಡ ವಿಷಯವೆನಲ್ಲ ಬಿಡಿ..

ಕಾಡಿದಷ್ಟು ಛಲ ಇಮ್ಮಡಿಯಾಗಿದೆ
ಹಿಂಸಿಸಿದಷ್ಟು ತಾಳ್ಮೆ ಗರಿಗೆದರಿದೆ
ತಮ್ಮದೇ ನೆಲದಲ್ಲಿ ಅನಾಥರಂತೆ ಬದುಕಿ
ಜೀವ ಉಳಿಸಿಕೊಳ್ಳಲು ಹೆಣಗುತ್ತಿರು
ಜೀವಂತ ಹೆಣಗಳು ತುಳಿದಷ್ಟು ಚಿಗರುತ್ತವೆ
ತೊಲಗಿಸಲು ಪ್ರಯತ್ನಿಸಿದಷ್ಡು ಹೆಜ್ಜೆಗಳು
ಈ ನೆಲಕೆ ಅಂಟಿಕೊಳ್ಳುತ್ತವೆ, ನೆನಪಿರಲಿ!
ಪ್ರಾಣ ಬಿಟ್ಟರೂ ದೇಶ ಬಿಡಲಾರೆವು !

- ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author