Story

ಪುಷ್ಯರಾಗ

ಕತೆಗಾರ ಎ.ಬಿ ಪಚ್ಚು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರ ಹಲವಾರು ಕತೆಗಳು ಪ್ರತಿಲಿಪಿಯಲ್ಲಿ ಪ್ರಕಟಗೊಂಡಿದೆ. ಎ.ಬಿ ಪಚ್ಚು ಅವರ ‘ಪುಷ್ಯರಾಗ’ ಕತೆ ನಿಮ್ಮ ಓದಿಗಾಗಿ…

(ಅವಳೆಂದರೆ ಅವಳೇ...)

ಅದು ಮದುವೆಯ ಹಾಲ್.ಜನ ವಧು ವರರಿಗೆ ಶುಭಾಶಯ ಕೋರಲು ಸರತಿ ಸಾಲಿನಲ್ಲಿ ನಿಂತಿದ್ದರು.ನಾನು ಮಾತ್ರ ಆ ಹಾಲ್ ನಲ್ಲಿ ಇರದೇ ಊಟದ ಹಾಲ್ ನಲ್ಲಿ ಹಾಕಿದ್ದ ಸಾಲು ಎಲೆಗಳಲ್ಲಿ ಒಂದು ಎಲೆಯ ಮುಂದೆ ಆಗಷ್ಟೇ ಬಂದು ಕುಳಿತಿದ್ದೆ.ನನ್ನ ಪಕ್ಕದ ಒಂದು ಕುರ್ಚಿ ಖಾಲಿ ಇತ್ತು.ಯಾರಾದರೂ ಬಂದು ಕುಳಿತುಕೊಳ್ಳುತ್ತಾರೆ ಎಂದು ಗೊತ್ತಿತ್ತು,ಆದರೆ ಅವಳೇ ಬಂದು ಕುಳಿತುಕೊಳ್ಳುತ್ತಾಳೆ ಎಂದು ಗೊತ್ತಿರಲಿಲ್ಲ.

ಅವಳು ಯಾರು ಎಂದು ನನಗೆ ಗೊತ್ತಿಲ್ಲ,ನಾನು ಯಾರೆಂದು ಅವಳಿಗೂ ಗೊತ್ತಿಲ್ಲ. ಊಟ ಆರಂಭವಾಯಿತು. ಉತ್ಸಾಹಿ ಯುವಕರು ಎಲೆಯ ಮೇಲೆ ಒಂದೊಂದಾಗಿ ತರಹೇವಾರಿ ಪಲ್ಯ,ಪದಾರ್ಥ,ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಾ ಹೋದರು.ನಾನು ಹಾಗೇ ತಿನ್ನುತ್ತಾ ಹೋದೆ.ನಡು ನಡುವೆ ಟೇಬಲ್ ಮೇಲೆ ಇಟ್ಟಿದ್ದ ನೀರಿನ ಬಾಟಲಿಯಿಂದ ನೀರನ್ನು ಕೂಡ ಕುಡಿಯತೊಡಗಿದೆ.ನಾನು ಅವಳತ್ತ ನೋಡಲಿಲ್ಲ,ಅವಳು ನನ್ನತ್ತ ನೋಡಲಿಲ್ಲ.ಊಟ ಮುಂದುವರಿದಿತ್ತು.

ಅವಳು ಎಷ್ಟು ಚೆನ್ನಾಗಿದ್ದಾಳೆ ಎಂದು ಮೆಲ್ಲಗೆ ಕಳ್ಳರಂತೆ ಅವಳತ್ತ ತಿರುಗಿ ನೋಡುವ ಯಾವುದೇ ದೊಡ್ಡ ಕುತೂಹಲ ನಿಜವಾಗಿಯೂ ನನ್ನಲ್ಲಿರಲಿಲ್ಲ.ನನ್ನೊಂದಿಗೆ ಹಾಗೇ ಸುಮ್ಮನೆ ಮಾತು ಬೆಳೆಸಬೇಕೆಂಬ ಸಣ್ಣ ಆಸಕ್ತಿ ಕೂಡ ಅವಳಲ್ಲಿಯೂ ಕಂಡು ಬರಲಿಲ್ಲ. ಎಲೆಯ ಮೇಲೆ ಹಪ್ಪಳ ಬಂತು.ನನ್ನ ಸುತ್ತ ಮುತ್ತ ಇದ್ದ ನಾಲ್ಕು ಜನರಿಗೆ ಗೊತ್ತಾಗುವಂತೆಯೇ ಪಟ ಪಟ ಎಂದು ಎಂದು ಹಪ್ಪಳವನ್ನು ಕೈಯಲ್ಲಿ ಹುಡಿ ಮಾಡಿಕೊಂಡೆ.
ಅಯ್ಯೋ ಎಷ್ಟೊಂದು ಗಟ್ಟಿ... ಅಂದಳು.
ಉದ್ದಿನಲ್ಲಿ ಮಾಡಿದ್ದ ಈ ಹುರಿದ ಹಪ್ಪಳ ಅದು ಹೇಗೆ ಗಟ್ಟಿ ಇರಲು ಸಾಧ್ಯ?.ಕೈಯಲ್ಲಿದ್ದ ತುಂಡು ಹಪ್ಪಳವನ್ನು ಹಾಗೇ ಹಿಡಿದುಕೊಂಡು ಮೆಲ್ಲಗೆ ಅವಳತ್ತ ತಿರುಗಿ ನೋಡಿದೆ.

ಹುಡುಗಿ ಅವಳೆದುರು ಇಟ್ಟಿದ್ದ ನೀರಿನ ಬಾಟಲಿಯ ಮುಚ್ಚಳ ತೆಗೆಯಲು ಹರಸಾಹಸ ಪಡುತ್ತಿದ್ದಳು.

ಅವಳನ್ನೇ ಸರಿಯಾಗಿ ನೋಡಿದೆ.ನೋಡಲು ತುಂಬಾ ಚಂದದ ಹುಡುಗಿಯೇ ಹೌದು.ಅದಕ್ಕಾಗಿಯೇ ನಾನು ಅವಳಿಗೆ ಸಹಾಯ ಮಾಡಬೇಕೆಂದು ನನಗೆ ಅನಿಸಲಿಲ್ಲ.ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದಿಂದ ಅವರಿಗೂ ಒಳ್ಳೆಯದಾಗುತ್ತದೆ, ನಮಗೂ ಒಳ್ಳೆಯದಾಗುತ್ತದೆ ಮಾತ್ರವಲ್ಲ ಮುಂದೊಂದು ದಿನ ಭಯಂಕರ ಕಷ್ಟ ಕಾಲದಲ್ಲಿ ದೇವರು ಕೂಡ ನಮ್ಮ ಕೈ ಹಿಡಿದೆತ್ತಿ ನಮಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಾನೆ ಎಂಬ ಕಾರಣಕ್ಕಾಗಿಯೇ ನಾನವಳಿಗೆ ಸಹಾಯ ಮಾಡಲು ನಿರ್ಧರಿಸಿದೆ.

ಇಲ್ಲಿ ಕೊಡಿ ಅದನ್ನು ನಾನು ತೆಗೆದು ಕೊಡುತ್ತೇನೆ.. ಎಂದು ಹೇಳಿ ಸಣ್ಣ ಮಕ್ಕಳೆದರು ಮನೆಯಲ್ಲಿ ಮ್ಯಾಜಿಕ್ ಮಾಡಿ ತೋರಿಸುವಂತೆ ಗಟ್ಟಿಯಾಗಿ ಕಚ್ಚಿಕೊಂಡಿದ್ದ ಅವಳ ನೀರಿನ ಬಾಟಲಿಯ ಕ್ಯಾಪ್ ಅನ್ನು ಬಹಳ ಸಲೀಸಾಗಿ ತಿರುಗಿಸಿ ತೆಗೆದು ತೋರಿಸುತ್ತಾ...ಇದೆಲ್ಲಾ ಏನಿಲ್ಲ,ನೋಡಿ ಜಸ್ಟ್ ಇಷ್ಟೇ ಇದು..ಎಂದು ಗತ್ತಿನಿಂದ ಭುಜ ಕುಣಿಸಿ ಹೇಳಿಯೇ,ಮತ್ತೆ ಅವಳೆದುರು ನೀರಿನ ಬಾಟಲ್ ಇಟ್ಟೆ.ಆ ನಂತರ ನಾನು ನನ್ನ ಕೈಯಲ್ಲಿದ್ದ ತುಂಡು ಹಪ್ಪಳವನ್ನು ಕಚ್ಚಿ ತಿನ್ನುವುದರಲ್ಲಿ ಮಗ್ನನಾದೆ.ನನ್ನದೊಂದು ವಿಶಿಷ್ಟ ಸಹಾಯ ಮನೋಭಾವಕ್ಕೆ ಅವಳು ಥ್ಯಾಂಕ್ಸ್ ಹೇಳಲಿಲ್ಲ,ಬೆಸ್ಟ್ ಜನ ಎಂದು ಬಾಯಿ ತುಂಬಾ ಹೊಗಳಲೂ ಇಲ್ಲ,ಕೊನೆಯ ಪಕ್ಷ ನನ್ನತ್ತ ತಿರುಗಿ ಚಂದದೊಂದು ನಗುವನ್ನು ಸಹ ಅವಳು ಚೆಲ್ಲಲಿಲ್ಲ.ನಾನು ಕೂಡ ಮತ್ತೆ ಅವಳನ್ನೇ ನೋಡುತ್ತಾ ಉಳಿಯಲಿಲ್ಲ.ಇಬ್ಬರ ಊಟವೂ ಅವರವರ ಎಲೆ ನೋಡಿಕೊಂಡೇ ಮುಂದುವರಿದಿತ್ತು.

ಅನ್ನದ ನಂತರ ಊಟದ ಎಲೆಗೆ ಪಾಯಸ ಬಂತು.ಶ್ಯಾವಿಗೆಯದ್ದೇ ಪಾಯಸ ಅದು.

ನಾನು ಮೂರು ಸೌಟು ಪಾಯಸ ಬಡಿಸಿಕೊಂಡೆ.ನನಗೆ ಬೇಕಿತ್ತು, ಹಾಗಾಗಿ ಬಡಿಸಿಕೊಂಡೆ.ಪಕ್ಕದಲ್ಲಿದ್ದ ಅವಳು ಮಾತ್ರ ಪಾಯಸ ಬಡಿಸಿಕೊಳ್ಳಲಿಲ್ಲ.ಬೇಡ.. ಬೇಡಾ.. ಎಂದು ತನ್ನ ಎರಡೂ ಕೈಗಳನ್ನು ಎಲೆ ಮೇಲೆ,ಎಲೆಗೆ ಪೂರ್ತಿ ಅಡ್ಡವಾಗುವಂತೆ ಹಿಡಿದು,ಪಾಯಸ ಬಡಿಸಿದರೆ ಅವಳ ಮೇಲೆ ಆಗುತ್ತಿದ್ದ ಅತೀ ದೊಡ್ಡ ದೌರ್ಜನ್ಯವನ್ನು ಸ್ವತಃ ಅವಳೇ ತಪ್ಪಿಸಿ ಬಿಟ್ಟಿದ್ದಳು.

ನಾನು ನನ್ನಷ್ಟಕ್ಕೆ ನನ್ನಿಷ್ಟದ ಶ್ಯಾವಿಗೆ ಪಾಯಸ ತಿನ್ನುವುದನ್ನು ಮುಂದುವರಿಸಿದೆ. ನೀವು ಪಾಯಸ ಎಲ್ಲಾ ತಿನ್ನುತ್ತೀರಾ..? ಅವಳು ಅವಳ ಬಾಟಲಿಯ ನೀರು ಕುಡಿಯುತ್ತಾ ಕೇಳಿದಳು. ನನ್ನತ್ತ ತಿರುಗಿ ಅವಳು ಕೇಳಲಿಲ್ಲ,ಹಾಗಾಗಿ ನಾನೂ ಕೂಡ ಅವಳತ್ತ ನೋಡದೆಯೇ ಉತ್ತರಿಸಿದ್ದೆ.
ಹೌದು.. ಪಾಯಸ ತಿಂದರೆ ಸಾವು ಸಂಭವಿಸುವುದಿಲ್ಲ,ಅದನ್ನು ತಿನ್ನಲೆಂದೇ ಬಡಿಸುತ್ತಾರೆ. ಇದು ಮುಗಿದ ನಂತರ ಇನ್ನೊಂದು ರೌಂಡು ಪಾಯಸ ತಿನ್ನಲು ಬಾಕಿ ಉಂಟು.. ಅಂದೆ.
ನೀವು ಇಷ್ಟು ದೊಡ್ಡದಾಗಿ ಗಡ್ಡ ಬಿಟ್ಟುಕೊಂಡಿದ್ದೀರಿ ಅಲ್ಲವೇ,ಅದಕ್ಕೆ ಕೇಳಿದೆ.. ಅವಳು ಅಂದಳು. ಗಡ್ಡ ಬಿಟ್ಟವರು ಪಾಯಸ ಬಿಡಬೇಕು ಎಂದು ಎಲ್ಲೂ ನಿಯಮವಿಲ್ಲವಲ್ಲ.. ಪಾಯಸ ತಿನ್ನುತ್ತಲೇ ನಾನೂ ಅಂದೆ.

ಈ ದೊಡ್ಡ ಗಡ್ಡ ಇದ್ದರೆ ಪಾಯಸ ತಿನ್ನಲು ಎಷ್ಟೊಂದು ಕಷ್ಟ ..ಅದು ಮೀಸೆಗೂ ಅಂಟುತ್ತದೆ,ಗಡ್ಡಕ್ಕೂ ಅಂಟುತ್ತದೆ.. ನನಗೆ ಏಕೋ ಈ ಗಡ್ಡ ಬಿಟ್ಟಿರುವ ಹುಡುಗರು ಪಾಯಸ ತಿನ್ನುವ ದೃಶ್ಯವೇ ಅಷ್ಟು ಇಷ್ಟ ಆಗುವುದಿಲ್ಲ... ಎಂದು ಹೇಳಿ ಮಾತು ಮುಗಿಸಿದಳು ಅವಳು.

ನನಗೆ ಅವಳು ವಿಚಿತ್ರವಾಗಿ ಕಾಣಲಿಲ್ಲ.ಹಾಗಂತ ತುಂಬಾ ವಿಶೇಷವಾಗಿಯೂ ಕಾಣಲಿಲ್ಲ. ಊಟ ಮುಗಿದ ಮೇಲೆ,ಮೊದಲ ಬಾರಿಗೆ ಪರಿಚಯ ಆದ ಎಲ್ಲರೂ ಮಾಡುವಂತೆ ನನಗೆ ಅವಳೊಂದು ಟಾಟಾ..ಬಾ ಬಾಯ್...ಎಂದು ಕೂಡ ಹೇಳಲಿಲ್ಲ.ನಾನೂ ಸಹ ಅವಳನ್ನು ಹುಡುಕಿಕೊಂಡು ಆ ಮದುವೆ ಮನೆಯಲ್ಲಿ ಅಲೆಯಲಿಲ್ಲ.

ಅದೊಂದು ದಿನ ರಥಬೀದಿಯಲ್ಲಿ ಓಕುಳಿಯ ಸಂಭ್ರಮ.ಬಣ್ಣದ ನೀರು ಹಾಗೂ ಬಣ್ಣದ ಹುಡಿಯೊಂದಿಗೆ ಎಲ್ಲರಿಗೂ ಬಣ್ಣವಾಗುವ ಹಂಬಲ. ಕೈಯಲ್ಲಿ ಬಣ್ಣದ ಹುಡಿ ಹಿಡಿದುಕೊಂಡು ಯಾರಿಗೆ ಬಣ್ಣ ಬಳಿಯಲಿ ಎಂದು ನಾನು ಸಹ ಅಲ್ಲಿಯೇ ಬಕಪಕ್ಷಿಯಂತೆ ಕಾಯುತ್ತಿದ್ದೆ.

ದೂರದಲ್ಲಿ ಅವಳು ಮತ್ತೆ ಕಂಡಳು.ಕೈಯಲ್ಲಿ ಬಣ್ಣದ ಹುಡಿ ಹಿಡಿದುಕೊಂಡು ಮೀನಾ ಮೇಷಾ ಎಣಿಸುತ್ತಿದ್ದಳು. ತನಗೂ ಒಂದಿಷ್ಟು ಬಣ್ಣ ಬೀಳಲಿ ಎಂದು ಬಿಳಿಯ ಬಟ್ಟೆಯನ್ನೇ ಅವಳು ಅಂದು ಧರಿಸಿದ್ದಳು. ಅಲ್ಲಿಯವರೆಗೆ ನನ್ನ ಮುಖಕ್ಕೂ ಬಣ್ಣ ಬಿದ್ದಿರಲಿಲ್ಲ,ಹ್ಞೂಂ.. ಅವಳ ಮುಖಕ್ಕೂ ಬಣ್ಣ ಬಿದ್ದಿರಲಿಲ್ಲ. ಎರಡೂ ಕೈಯಲ್ಲಿ ಬಣ್ಣ ಹಿಡಿದುಕೊಂಡು ನೇರವಾಗಿ ಅವಳ ಮುಂದೆಯೇ ಹೋಗಿ ನಿಂತೆ ನೀವು ಊಟದ ಹಾಲಿನಲ್ಲಿ ಸಿಕ್ಕವರಲ್ಲವೇ..? ಎಂದು ಅವಳು ನನಗೆ ಕೇಳಲಿಲ್ಲ. ಗಡ್ಡ ಮತ್ತು ಪಾಯಸದ ಬಗ್ಗೆ ಅದ್ಭುತ ಉಪನ್ಯಾಸ ನೀಡಿದ್ದು ನೀವೇ ಅಲ್ಲವೇ...? ಎಂದು ನಾನು ಸಹ ಅವಳಲ್ಲಿ ಕೇಳಲಿಲ್ಲ.
ನನ್ನ ಕೈಯಲ್ಲಿರುವ ಬಣ್ಣದ ಹುಡಿಯನ್ನು ನೋಡಿ,ಈಗೇನು ನನ್ನ ಮುಖಕ್ಕೆ ನೀವು ಬಣ್ಣ ಬಳಿಯುತ್ತೀರಾ..? ಎಂದು ಅವಳೇ ಕೇಳಿದಳು.
ಅದು ಪ್ರಶ್ನೆಯೋ ಆಹ್ವಾನವೋ ಎಂದು ನನಗೆ ಗೊತ್ತಾಗಲಿಲ್ಲ.
ನಾನು ಇಲ್ಲ ಅಂದೆ..
ನನ್ನನ್ನೇ ಮತ್ತೆ ನೋಡಿದಳು.
ನಾನು ಬಣ್ಣ ಬಳಿದರಷ್ಟೇ ನೀವು ನನಗೆ ಬಣ್ಣ ಬಳಿಯುವುದೇ...?ಎಂದು ನಾನು ಅವಳಲ್ಲಿಯೇ ಕೇಳಿದೆ.

ಹಾಗೇನು ಇಲ್ಲ... ಅಂದಳು.
ಹಾಗೆಂದರೆ ಮತ್ತೆ ಹೇಗೆ...? ಕೇಳಿದೆ
ಹಾಗೆಂದರೆ....ಹಾಗೆಂದರೆ ಹೀಗೆಯೇ... ಅಂದಳು.

ಹೀಗೆಯೇ ಅಂದವಳು ಬಹಳ ಹತ್ತಿರಕ್ಕೆ ಬಂದು ಬಣ್ಣದ ಹುಡಿಯನ್ನು ಎರಡೂ ಕೈಗಳಿಂದ ನನ್ನ ಮುಖಕ್ಕೆ ಮೆತ್ತಿದಳು,ನಾನು ಕೂಡ ಅದೇ ರೀತಿ ಅವಳಿಗೂ ಬಣ್ಣ ಹಾಕಿದೆ.ಇಬ್ಬರೂ ಬಣ್ಣವಾದೆವು.ಆಮೇಲೆ ಅವಳು ಸುತ್ತಲೂ ಎದ್ದಿದ್ದ ಆ ಬಣ್ಣಗಳ ಧೂಳಿನ ನಡುವೆಯೇ ಎಲ್ಲೋ ಮರೆಯಾಗಿ ಹೋದಳು,ನಾನೂ ಆ ದಿನವಂತು ಬಹಳಷ್ಟು ಬಣ್ಣವಾಗಿಯೇ ನನ್ನ ಗೂಡು ಸೇರಿದ್ದೆ.

ಆ ನಂತರ ಅವಳು ನನಗೆ ಅಲ್ಲಲ್ಲಿ ಸಿಕ್ಕಳು.ಅವಳಿಗೂ ನಾನು ಎಲ್ಲೊಲ್ಲೋ ಸಿಗುತ್ತಿದೆ.ಅವಳ ಹೆಸರು ನಾನು ಕೇಳಲಿಲ್ಲ,ನನ್ನ ಹೆಸರು ಅವಳೂ ಕೇಳಲಿಲ್ಲ.ಅವಳು ನಾನು ಪರಸ್ಪರ ಪರಿಚಯ ಇಲ್ಲದಂತೆಯೇ ಇದ್ದೆವು.ಆದರೂ ಮತ್ತೆ ಮತ್ತೆ ಸಿಗುತ್ತಿದ್ದೆವು.ಇಬ್ಬರೂ ಅಲ್ಲೇ ಎಲ್ಲೋ ನೋಡಿಕೊಂಡು ಹೀಗೆ ಹಾಗೆ ಮಾತಾಡುತ್ತಿದ್ದೆವು,ಮಾತು ಮುಗಿದ ನಂತರ ಹೇಳದೆ ಕೇಳದೆ ಮಾತಿನ ಕೊನೆಗೊಂದು ಸರಿಯಾಗಿ ವಿದಾಯವನ್ನು ಸೇರಿಸದೆ ಹೊರಟು ಹೋಗುತ್ತಿದ್ದೆವು.

ಅವಳ ನಂಬರ್ ನಾನು ಕೇಳಲಿಲ್ಲ.ನನ್ನ ನಂಬರ್ ಅವಳೂ ಕೇಳಲಿಲ್ಲ.ಫೇಸ್ಬುಕ್ ನಲ್ಲಿ ನನ್ನ ನಂಬರ್ ಮುಕ್ತವಾಗಿ ಎಲ್ಲರಿಗೆ ಕಾಣುವಂತೆ ಹಾಕಿಕೊಂಡಿದ್ದರೂ ಅವಳು ನನಗೆ ಫೇಸ್ಬುಕ್ ಫ್ರೆಂಡ್ ಅಲ್ಲ.ನಾನು ಸಹ ಅವಳನ್ನು ಹುಡುಕಿ ಹುಡುಕಿ ಅವಳಿಗೊಂದು ಫ್ರೆಂಡ್ ರಿಕ್ವೆಷ್ಟ್ ಕಳುಹಿಸಲಿಲ್ಲ,ಅವಳಿಂದಲೇ ಫ್ರೆಂಡ್ ರಿಕ್ವೆಷ್ಟ್ ಬರುವ ಯಾವುದೇ ಸೂಚನೆ, ಮುನ್ಸೂಚನೆ,ನಿರೀಕ್ಷೆಗಳು ನನ್ನಲ್ಲೂ ಇರಲಿಲ್ಲ.

ನವರಾತ್ರಿಯ ದಿನ ಒಂದು ಅಂಗಡಿ ಪಕ್ಕ ಹುಲಿ ಕುಣಿತ ನಡೆಯುತ್ತಿತ್ತು.ಅವಳೂ ಅಲ್ಲೇ ಇದ್ದಳು.ಅಲ್ಲಿಯೇ ಸ್ವಲ್ಪ ಎತ್ತರದ ಜಾಗದಲ್ಲಿ ನಿಂತುಕೊಂಡು ಹುಲಿ ಕುಣಿತವನ್ನು ಅವಳಷ್ಟಕ್ಕೆ ನೋಡುತ್ತಿದ್ದಳು.ನಾನು ಅವಳನ್ನು ನೋಡಿದೆ.ಅವಳು ನನ್ನನ್ನು ನೋಡಿಯೂ ನೋಡದಂತೆ ಇದ್ದಳು.

ಜನರ ನಡುವೆ ದಾರಿ ಮಾಡಿಕೊಂಡು ಹೋಗಿ ನಾನು ಅವಳ ಪಕ್ಕವೇ ನಿಂತೆ.ಇಬ್ಬರೂ ಒಬ್ಬರನ್ನೊಬ್ಬರು ನೋಡದೆ ಹುಲಿ ಕುಣಿತವನ್ನೇ ನೋಡುವುದನ್ನು ಮುಂದುವರಿಸಿದೆವು.. ನಿಮಗೆ ಹುಲಿ ಕುಣಿಯಲು ಬರುತ್ತದೆಯೇ..? ನನ್ನತ್ತ ತಿರುಗದೆಯೇ ಅವಳು ಕೇಳಿದಳು.

ಹುಲಿ ಕುಣಿಯಲು ಬರುವುದಿಲ್ಲ,ಸಿಂಹ,ಕರಡಿ ಆದರೆ ನೆಲದಲ್ಲಿ ಉರುಳಾಡಿಕೊಂಡು ಹೇಗೋ ಮೈಂಟೆನ್ ಮಾಡಬಹುದು.. ಅಂದೆ.

ಅವಳು ಈ ಬಾರಿ ನನ್ನತ್ತಲೇ ತಿರುಗಿ ನೋಡಿದಳು.ಆದರೆ ನನ್ನನ್ನು ಅವಳು ವಿಚಿತ್ರವಾಗಿ ನೋಡಲಿಲ್ಲ,ಬಹಳ ವಿಶೇಷವಾಗಿಯೂ ಕೂಡ ನೋಡಲಿಲ್ಲ. ಅವಳ ನೋಟ ಎಂದಿನಂತೆ ಸಹಜವಾಗಿತ್ತು.

ಆ ನಂತರ ಅವಳು ನಿಂತಲ್ಲಿಂದ ಹಾಗೇ ಕೆಳಗಿಳಿದಳು.ಬಣ್ಣ ಹಾಕಿಕೊಂಡು ತಾಸೆಯ ಪೆಟ್ಟಿಗೆ ಕುಣಿಯುತ್ತಿದ್ದ ಹುಲಿಗಳೊಂದಿಗೆ ತಾನೂ ಸೇರಿಕೊಂಡು ಭರ್ಜರಿಯಾಗಿ ಹುಲಿಯಂತೆ ಕುಣಿದು ಬಿಟ್ಟಳು.ನಾನು ಅವಳ ಹುಲಿಕುಣಿತ ನೋಡುತ್ತಿದ್ದೇನೆ ಎನ್ನುವುದನ್ನೇ ಅವಳು ಗಮನಿಸಿಸಲಿಲ್ಲ.ಹೇಗಿತ್ತು ನನ್ನ ಹುಲಿಕುಣಿತ..? ಎನ್ನುವುದನ್ನು ಸಹ ಅವಳು ನನ್ನ ಬಳಿ ಬಂದು ಕೇಳಲಿಲ್ಲ.ಕುಣಿಯುತ್ತಾ ಕುಣಿಯುತ್ತಾ ಹೇಗೆ ನನ್ನದೊಂದು ಹುಲಿ ? ಎನ್ನುವುದನ್ನು ಹುಬ್ಬೇರಿಸಿ ಕಣ್ಣಲ್ಲಿಯೂ ಕೂಡ ಅವಳು ಪ್ರಶ್ನಿಸಲಿಲ್ಲ.ಕೇಳುತ್ತಿದ್ದರೂ ನಾನೂ ಅವಳಿಗೆ ಏನನ್ನೂ ಹೇಳುತ್ತಿರಲಿಲ್ಲ.ಆಮೇಲೆ ಅವಳು ಹೇಳದೆ ಕೇಳದೆ ಅಲ್ಲಿಂದಲೇ ಎಲ್ಲಿಗೋ ಅವಳಷ್ಟಕ್ಕೆ ಹೊರಟು ಹೋದಳು.ಆಮೇಲೆ ನಾನು ಸಹ ನನಗೆ ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆಯೇ ಹೋಗಿಬಿಟ್ಟೆ.

ಒಂದು ದಿನ ಮತ್ತೆ ಬಸ್ ಸ್ಟ್ಯಾಂಡ್ ನಲ್ಲಿ ಅವಳು ಸಿಕ್ಕಳು.ಈ ಬಾರಿ ಚಂದವಾಗಿ ಸೀರೆ ಉಟ್ಟಿದ್ದಳು ಜೊತೆಗೆ ಆಗಷ್ಟೇ ಬಂದ ಮಳೆಗೆ ಹದವಾಗಿ ನೆಂದಿದ್ದಳು. ನಾನು ಅವಳ ಬಳಿಗೆ ಹೋಗಲಿಲ್ಲ.ನಾನು ನೋಡಿಯೂ ನೋಡದಂತೆ ಇದ್ದೆ.ಆದರೆ ಈ ಬಾರಿ ಅವಳೇ ನನ್ನ ಬಳಿಗೆ ಬಂದಳು.

ಯಾವಾಗಲೂ ಜೀನ್ಸ್ ತೊಟ್ಟು ತಿರುಗುತ್ತಿದ್ದ ಅವಳನ್ನು ನಾನು ಈ ರೀತಿ ಸೀರೆಯಲ್ಲಿ ಮೊದಲ ಬಾರಿಗೆ ನೋಡಿದ್ದು.ನಿಜವಾಗಿಯೂ ಅವಳು ಸೀರೆಯಲ್ಲಿ ಇನ್ನಷ್ಟು ಅಂದವಾಗಿ ಮುದ್ದಾಗಿ ಕಾಣುತ್ತಿದ್ದಳು.

ನಾನು ಏನು? ಎಂದು ಅವಳಲ್ಲಿ ಕೇಳಲಿಲ್ಲ,ತೀರಾ ಹತ್ತಿರ ಬಂದು ನಿಂತರೂ ಬೇಕೆಂದೇ ಅವಳತ್ತ ತಿರುಗಿಯೂ ನೋಡಲಿಲ್ಲ.

ನನ್ನ ಕೈಗೊಂದು ಕಾರ್ಡ್ ಕೊಡುತ್ತಾ ಅವಳೇ ಹೇಳಿದಳು.. ಮುಂದಿನ ಶುಕ್ರವಾರ ನನ್ನ ಮದುವೆ.ಬರಲೇ ಬೇಕು ಎಂದು ನಾನು ಹೇಳುವುದಿಲ್ಲ.ಬಂದರೂ ಅಂತಹ ತುಂಬಾ ಖುಷಿ ಏನು ಆಗುವುದಿಲ್ಲ.. ಹೇಳಿ,ಕಾರ್ಡ್ ನಲ್ಲಿ ಏನೆಂದು ನಿಮ್ಮದೊಂದು ಗುಡ್ ನೇಮ್ ಬರೆಯಲಿ..?

ಪುಷ್ಯರಾಗ... ಅಂದೆ.

ಅವಳ ಬಳಿ ಪೆನ್ ಇರಲಿಲ್ಲ.ನನ್ನ ಜೇಬಿನಲ್ಲಿ ಎಂದಿನಂತೆ ಅಂದು ಕೂಡ ಪೆನ್ ಇತ್ತು.ಇಷ್ಟ ಪಟ್ಟುಕೊಂಡು ತೆಗೆದುಕೊಂಡಿದ್ದೆ ಸ್ವಲ್ಪ ದುಬಾರಿ ಬೆಲೆಯ ಪೆನ್ನೇ ಅದು. ಅವಳು ಪೆನ್ ಇದೆಯೇ..? ಎಂದು ನನ್ನಲ್ಲಿ ಕೇಳಲಿಲ್ಲ.ನನ್ನ ಜೇಬಿನಿಂದ ಅವಳೇ ಕೈ ಹಾಕಿ ಪೆನ್ ಕೈಗೆ ತೆಗೆದುಕೊಂಡು ವೆಡ್ಡಿಂಗ್ ಕಾರ್ಡ್ ನ ಮೇಲೆ ನನ್ನ ಹೆಸರು ಗೀಚಿ,ಕಾರ್ಡ್ ನನ್ನ ಕೈಗಿತ್ತಳು.

ಮದುವೆಯ ಊಟದಲ್ಲಿ ಪಾಯಸವೂ ಇದ್ದರೆ ನಾನಂತು ನಿಮ್ಮ ಮದುವೆಗೆ ಬರುವುದಿಲ್ಲ.ಗಡ್ಡಕ್ಕೆ ಪಾಯಸ ತಾಗುವುದನ್ನು ನೋಡಲು ಕೆಲವು ಹುಡುಗಿಯರಿಗೆ ಇಷ್ಟ ಆಗುವುದಿಲ್ಲ, ಮಗುವಿನಂತೆ ಬೆಳೆಸಿದ ಗಡ್ಡ ತೆಗೆಯುವುದು ನನಗಿಷ್ಟವಿಲ್ಲ.. ಎಂದು ನಾನು ಹೇಳಿದೆ.

ಅವಳು ಕೇಳಿಯೂ ಏನೂ ಕೇಳದಂತೆ ಅಲ್ಲಿಂದ ಹೊರಟು ಹೋಗಿದ್ದಳು.ವೆಡ್ಡಿಂಗ್ ಕಾರ್ಡ್ ನಲ್ಲಿ ಮಾತ್ರ ಪುಷ್ಯರಾಗ ಎಂದು ನನ್ನ ಹೆಸರು ಬರೆಯುವ ಬದಲು "ಪುರು" ಎಂದೇ ಬರೆದಿದ್ದಳು.

ಅವಳು ಕೊನೆಯಲ್ಲಿ ನನಗೆ ನನ್ನ ಪೆನ್ ಹಿಂದಿರುಗಿಸುತ್ತಾಳೆ ಎಂಬ ಬಲವಾದ ನಂಬಿಕೆ ನನಗಿತ್ತು.ಆದರೆ ಅವಳು ಏನಕ್ಕೋ ಪೆನ್ ಹಿಂದಿರುಗಿಸಲಿಲ್ಲ,ಬಹುಶಃ ಮರೆತು ಹೋಗಿರಬಹುದೆಂದು ನನ್ನೊಳಗೆ ನಾನು ಅಂದುಕೊಂಡೆ ಅಷ್ಟೇ.

ಅವಳು ಹೋದ ಮೇಲೆ ಅವಳ ಮದುವೆ ಕಾರ್ಡ್ ತೆರೆದು ನೋಡಿದೆ. "ಪುನರ್ವಸು" .. ಕಾರ್ಡ್ ನಲ್ಲಿ ಬಂಗಾರ ಬಣ್ಣದಲ್ಲಿ ಬರೆದಿದ್ದ ಅವಳ ಹೆಸರು ದೊಡ್ಡದಾಗಿಯೇ ಹೊಳೆಯುತ್ತಿತ್ತು.ಅವಳ ಹೆಸರಿನ ಪಕ್ಕದಲ್ಲಿಯೇ ಕಣ್ಣಿಗೆ ಕಾಣುವಂತೆ ದಪ್ಪ ಅಕ್ಷರದಲ್ಲಿ ಬರೆದಿದ್ದ ಗಂಡಿನ ಹೆಸರನ್ನು ನೋಡುವ ಯಾವುದೇ ಆಸಕ್ತಿ, ಕುತೂಹಲ ನನ್ನಲ್ಲಿ ಇರಲಿಲ್ಲ.

ಅವಳ ಮದುವೆಗೆ ಹೋಗಬೇಕು ಎಂದು ನಾನು ಅಂದುಕೊಂಡೆ, ಆದರೆ ಯಾಕೋ ಹೋಗಲಿಲ್ಲ. ಹೀಗೆ ಅವಳು ಎಲ್ಲಿಂದಲೋ ಬಂದಳೋ,ಮತ್ತೆಲ್ಲಿಗೋ ಹೋದಳು.

ನನಗೇನು ಅವಳು ಆಮೇಲೆ ಅಷ್ಟು ನೆನಪಾಗಲಿಲ್ಲ.ಆವಳಿಗೂ ನನ್ನ ನೆನಪು ಆಗಬಹುದು ಎಂಬ ನಿರೀಕ್ಷೆ ಎಂದಿನಂತೆ ನನಗೂ ಇರಲಿಲ್ಲ. ಹಾಗೇ ಒಂದು ವರ್ಷ ಕಳೆಯಿತು.

ಒಂದು ನಡುರಾತ್ರಿ ಅವಳೇ ನನಗೆ ಕಾಲ್ ಮಾಡಿದ್ದಳು.
ಕಾಲ್ ಮಾಡಿದವಳೇ... ಪುರು ಅಂದಳು.

ಅವಳ ಧ್ವನಿಯ ಪರಿಚಯ ನನಗೆ ಬಹಳ ಚೆನ್ನಾಗಿಯೇ ಇತ್ತು. ಹಾಗಾಗಿ ಅದು ಅವಳೇ ಎಂದು ನನಗೂ ಗೊತ್ತಾಗಿ ಬಿಟ್ಟಿತ್ತು.

ಆದರೂ ಏನೂ ಗೊತ್ತಾಗದಂತೆ ಕೇಳಿದೆ…
ಯಾರು..?
ವಸು... ಅಂದಳು
ಯಾವ ವಸು? ನಾನು ಮತ್ತೆ ಕೇಳಿದೆ.
ನಾನು ವಸು... ಪುನರ್ವಸು.. ಅಂದಳು.
ನಾನೇನು ಅಷ್ಟೇನು ಆಸಕ್ತಿ ಇಲ್ಲದವನಂತೆ... ಏನು....? ಎಂದು ಕೇಳಿದೆ.
ಗಂಡ ನನಗೆ ಹೊಡೆಯುತ್ತಾನೆ...ಅಂದಳು.
ಎಷ್ಟು...? ಕೇಳಿದೆ.
ಸಿಕ್ಕಾಪಟ್ಟೆ... ಅಂದಳು.
ತಿರುಗಿಸಿ ಹೊಡೆಯಬೇಕಿತ್ತು.. ಅಂದೆ.
ಅದನ್ನೇ ಮಾಡಿದೆ... ಅಂದಳು.
ಈಗ ಹೇಗಿದ್ದಾನೆ.. ? ಕೇಳಿದೆ.
ಇನ್ನೂ ಸತ್ತಿಲ್ಲ.... ಅಂದಳು.
ಸಾಯುವ ಮುನ್ಸೂಚನೆ ಏನಾದರೂ...? ಕೇಳಿದೆ.

ಸ್ಪಷ್ಟವಾಗಿಯೇ ಇದೆ.ತಲೆ ಒಡೆದು ಹಾಕಿದ್ದೇನೆ..ಸ್ವಲ್ಪ ಹೊತ್ತಲ್ಲಿಯೇ ಅವನು ಅವಶ್ಯವಾಗಿ ಸತ್ತು ಹೋಗುತ್ತಾನೆ.. ಅಂದಳು ಯಾವುದೇ ಉದ್ವೇಗವಿಲ್ಲದೆ..ಚಿಂತೆಯಿಲ್ಲದೆ. ನನಗೆ ಅದು ವಿಚಿತ್ರವೂ ಅನಿಸಲಿಲ್ಲ,ವಿಶೇಷವೂ ಅನಿಸಲಿಲ್ಲ.ಬದಲಿಗೆ ಸಹಜ ಅನಿಸಿತು.

ಏಕೆ ಕಾಲ್ ಮಾಡಿದೆ..? ಕೇಳಿದೆ.
ಬಾಯ್... ಹೇಳಲು ಅಂದಳು.
ಹೇಳು.. ಅಂದೆ.
ಬಾಯ್ ಪುರು.. ಅಂದಳು.
ನಾನು ಏನೂ ಹೇಳಲಿಲ್ಲ.

ಅವಳು ಸ್ವಲ್ಪ ಹೊತ್ತು ಅಲ್ಲ,ಬಹಳ ಹೊತ್ತಿನವರೆಗೂ ನನ್ನದೊಂದು ಪ್ರತಿಕ್ರಿಯೆಗಾಗಿ ಪೋನ್ ನ ಮತ್ತೊಂದು ತುದಿಯಲ್ಲಿ ಹಾಗೇ ಕಾದಿದ್ದಳು. ನನ್ನಿಂದ ಏನೂ ಉತ್ತರ ಬರದೇ ಇದ್ದಾಗ ಆಮೇಲೆ ಅವಳೇ ಕಾಲ್ ಕಟ್ ಮಾಡಿ ಬಿಟ್ಟಿದ್ದಳು. ಎರಡು ದಿನ ಬಿಟ್ಟು ಅವಳ ಸುದ್ದಿ ಪೋಟೋ ಸಹಿತ ಬಂದಿತ್ತು. ಆ ದಿನದಿಂದ ನಾನು ಗಡ್ಡ ಬೆಳೆಸಲೇ ಇಲ್ಲ!

ಅವತ್ತೇ ನನ್ನ ಬಹಳ ಇಷ್ಟದ ಗಡ್ಡ ಬೋಳಿಸಿ ಬಿಟ್ಟಿದ್ದೆ ನಾನು..!!

- ಎ.ಬಿ ಪಚ್ಚು

ಎ.ಬಿ ಪಚ್ಚು

ಎ.ಬಿ ಪಚ್ಚು ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಇವರ ಹಲವಾರು ಕತೆಗಳು ಪ್ರತಿಲಿಪಿಯಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಡಿಜಿಟಲ್‌ ಕ್ರಿಯೆಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author