Poem

ರಕ್ಷಿಸು ಕರ್ನಾಟಕ ದೇವಿ

ರಕ್ಷಿಸು ಕರ್ನಾಟಕದೇವೀ ಸಂ
ರಕ್ಷಿಸು ಕರ್ನಾಟಕ ದೇವೀ | ಪಲ್ಲ |

ಕದಂಬಾದಿ ಸಂಪೂಜಿತ ಚರಣೆ
ಗಂಗಾರಾಧಿತ ಪದನಖ ಸರಣೆ
ಚಲುಕ್ಯರುತ್ತಮ ಕಾಂಚೀ ಕಿರಣೆ
ರಾಷ್ಟ್ರಕೂಟ ಮಣಿ ಕಂಠಾಭರಣೆ
ಚಾಲುಕ್ಯಾಂಶುಕ ಶೋಭಾವರಣೆ,

ಯಾದವಮಣಿ ಕಂಕಣಾಂಶು ಸುಂದರಿ
ಬಲ್ಲಾಳರ ಭುಜಭೂಷಣ ಬಂಧುರೆ
ವಿಜಯನಗರ ಮಂಗಲಮಣಿಕಂಧರೆ
ಮೈಸೂರೊಡೆಯರ ಸುಕೀರ್ತಿಮಂದಿರೆ
ಮಾಂಡಲಿಕಾವನ ಭಾರಧುರಂಧರೆ.

ಮತ ಸಂಸ್ಥಾಪಕ ಸ್ಥಾಪಿತಪ್ರಾಣೆ
ಶಿಲ್ಪ ಕಲಾಮಂಟಪ ಸುಮ್ಮಾನೆ
ಕವಿಜನ ಕೀರ್ತಿತ ಸುಯಶಸ್ತ್ರಾಣೆ
ಸಾಧು ಸತ್ಕಥಾ ಭೇರೀಧ್ವಾನೆ
ಸ್ವೇತಿಹಾಸನೀರಾಜನ ರಾಣಿ,

- ಶಾಂತಕವಿ

ವಿಡಿಯೋ
ವಿಡಿಯೋ

ಶಾಂತಕವಿ

ಆಧುನಿಕ ಕರ್ನಾಟಕ ನಾಟಕ ಪಿತಾಮಹ-ಶಾಂತಕವಿ ಎಂದೇ ಖ್ಯಾತಿಯ ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಅವರು ನಾಟಕಕಾರರು, ಕವಿಗಳು. 1856ರ ಜನೆವರಿ 15ರಂದು ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಹುಟ್ಟಿದರು. ಈ ಮನೆತನದ ಶ್ರೀನಿವಾಸಾಚಾರ್ಯ ಎನ್ನುವವರು “ಶರ್ಕರಾ” (ಸಂಸ್ಕೃತದಲ್ಲಿ ಸಕ್ಕರೆ) ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ಬಂದಿತು.

ಬಾಲ್ಯದಲ್ಲೇ ಜೈಮಿನಿ ಭಾರತ, ಮಹಾಭಾರತ ಪಠಣ ಹಾಗೂ ತಾಯಿಯಿಂದ ಕಲಿತ ದಾಸರ ಪದಗಳು. ಧಾರ್ಮಿಕ ಕಾವ್ಯ, ದಾಸರ ಪದಗಳಿಂದ ಬಂದ ಸಾಹಿತ್ಯ ಪ್ರಜ್ಞೆ. ಕೇವಲ 14 ರ ಹರೆಯದಲ್ಲೇ ರಾಣಿಬೆನ್ನೂರಿನಲ್ಲಿ ಶಾಲಾ ಶಿಕ್ಷಕರಾದರು. ಆಗಲೇ, ಮೊದಲ ನಾಟಕ ‘ಉಷಾಹರಣ’ ಬರೆದದ್ದು, 17ರ ಹರೆಯದಲ್ಲೇ  63ಕ್ಕೂ ಹೆಚ್ಚು ನಾಟಕ, ಕಾವ್ಯ ರಚನೆ ಮಾಡಿದ್ದರು. ‘ಮುಕುಂದ ದಾನಾಮೃತ’ ಕನ್ನಡದ ಕೃತಿ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1874 ಕರ್ನಾಟಕದಲ್ಲಿ ನಾಟಕ ಕಂಪನಿ ಕಟ್ಟಿದರು.’ವತ್ಸಲಾಹರಣ, ಸುಧನ್ವವಧೆ, ಕೀಚಕವಧೆ, ಸುಂದರೋಪಸುಂದವಧೆ, ವಾಸಪ್ಪ ನಾಯಕನ ಫಾರ್ಸು ಮುಂತಾದ ನಾಟಕಗಳ ರಚನೆ. ಹಳೆ ಕಾವ್ಯ ಪರಂಪರೆಯ ಜೊತೆಗೆ ಆಧುನಿಕ ಭಾವಗೀತೆ ರಚಿಸಿದರು. ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟಿಗಾಗಿ ಕನ್ನಡದ ದಾಸಯ್ಯ (ಬೇಡಲು ಬಂದಿರುವೆ ದಾಸಯ್ಯ) ಹಾಡು ಕಟ್ಟಿ, ಅದನ್ನು  ಹಾಡಿ-ಬೇಡಿ ಹಣ ಸಂಗ್ರಹಿಸಿದ್ದರು. ‘ರಕ್ಷಿಸು ಕರ್ನಾಟಕದೇವಿ’ ಮುಂಬೈ ಕರ್ನಾಟಕದ ನಾಡಗೀತೆಯಾಗಿ ಪ್ರಸಿದ್ಧಿ ಪಡೆದಿದೆ.

ಜಯದೇವ ಕವಿಯ ಗೀತಗೋವಿಂದ ಆಧಾರಿತ ವಿರಹತರಂಗ, ಕಾಳಿದಾಸನ ಮೇಘದೂತ ಮತ್ತು ಪಾರ್ವತಿ ಪರಿಣಯದ ಭಾಷಾಂತರದ ಕೃತಿಗಳು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಚನಾಲಯಕ್ಕೆ ಶಾಂತಕವಿಗಳ ಗೌರವದಲ್ಲಿ “ಶಾಂತೇಶ ವಾಚನಾಲಯ” ಎಂದು ಹೆಸರಿಸಲಾಗಿದೆ.

ಒಟ್ಟು 27 ನಾಟಕಗಳನ್ನು ರಚಿಸಿದ್ದಾರೆ. ಅಲಂಕಾರ ಶಾಸ್ತ್ರ, ಲಘು ಕವಿತಾ ಪದ್ಧತಿ (ಟಿಪ್ಪಣಿ), ಋತುಸಂಹಾರ, ಆನಂದ ಲಹರಿ ಸೇರಿದಂತೆ 9 ಕವನ ಸಂಕಲನಗಳು, ಗಜೇಂದ್ರ ಮೋಕ್ಷ, ರಾವಣ ವೇದಾವತಿ ಸೇರಿದಂತೆ 4 ಕೀರ್ತನೆಗಳನ್ನು ಬರೆದಿದ್ದಾರೆ. 1920ರಲ್ಲಿ ಹುಬ್ಬಳ್ಳಿಯಲ್ಲಿ ನಿಧನಾದರು.

More About Author