Poem

ರವಿ ಕಾಣದ್ದು

ಎದೆಯ ಹಾಳೆಗೆ ಬೆಂಕಿ ತಾಗದಿರಲಿ
ನೆನಪುಗಳು ಕವಿತೆಗಳಾಗಿ ಕಾಡಲಿ

ನೋವು ನಲಿವೆಲ್ಲ ಅಕ್ಷರ ಪ್ರಣತೆಯಾಗಲಿ
ಕವಿಭಾವ ಕಡಲಿಗೆ ಪದನದಿ ಹೊನಲಾಗಲಿ

ಸೃಷ್ಟಿಯ ಸೊಬಗೆಲ್ಲ ನುಡಿ ಹಬ್ಬವಾಗಲಿ
ಒಳಗಣ್ಣ ಹೊರಗಣ್ಣ ದೃಶ್ಯ ಕಾವ್ಯವಾಗಲಿ

ಬಿದ್ದವರ ಸತ್ತವರ ಪಾಲಿಗೆ ವರ ಸಂಜೀವಿನಿಯಾಗಲಿ
ಅನಿಷ್ಟ ಡೊಂಕು ನಾಟಕ ಖಡ್ಗಲೇಖಕೆ ಬಲಿಯಾಗಲಿ

ಚುಚ್ಚಿದವರು, ಅಚ್ಚು ಮೆಚ್ಚಿನವರು,
ಹುಚ್ಚು ಹಿಡಿಸಿ ಎದೆ ಕೊಚ್ಚಿದವರು

ಮರೆಯಾದವರು, ಜೊತೆಯಾದವರು
ಎಲ್ಲರೂ ಕವಿತೆಯಲಿ ಅಕ್ಷರವಾದರು

ಕವಿ ಕಾವ್ಯ ಭಾವಲಹರಿಗೆ ಸ್ಪೂರ್ತಿಯವರು
ಕವಿಯ ನೆನಪಿನಂಗಳದಿ ನೆಲೆಯಾದವರು

ಇದ್ದವರು, ಹೋದವರು, ಬಂದವರು
ಭಾವನೆಗಳ ಜೊತೆ ಆಟವಾಡಿದವರು

ಕವಿ ಮನದ ಒಡಲಲ್ಲಿ ಕವಿತೆಯ ಕಿಚ್ಚು ಹಚ್ಚಿದರು
ಎದೆ ಚುಚ್ಚಿ ಚುಚ್ಚಿ ಕಾವ್ಯ ರುಧಿರವ ಚಿಮ್ಮಿಸಿದರು

ಬೇಕವರು, ಇರಬೇಕಂತಹವರು
ಕವಿಮನಕೆ ಕಸರತ್ತು ಕೊಟ್ಟವರು

ಬೇಕವರು, ಇರಬೇಕವರು
ಭಾವಜೀವಿಗೆ ಬೆಳಕಾದವರು

✍️ ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author