Poem

ರೆಕ್ಕೆ

ಹಕ್ಕಿಗೆ ರೆಕ್ಕೆಗಳು ಅದ್ಯಾವಾಗ ಮೂಡುವವೋ
ಗೊತ್ತೇ ಆಗುವುದಿಲ್ಲ
ಅಥವಾ ಅವು ಹುಟ್ಟುವಾಗಲೇ ಇರುತ್ತವೋ?
ಪಾರದರ್ಶಕ ರೆಕ್ಕೆಗಳು ಬಹಳ ಮೋಸ

ಹಸಿವೆಂದು ಕೀರುವಾಗ ಗುಟುಕು ಕೊಡುವವರೆಗೆ
ಹರೆಯಲೂ ಬರದ ಅವಸ್ಥೆಯಲಿ ಎತ್ತಿಕೊಂಡಾಡಿಸುವವರೆಗೆ
ಕೂರಲು ನಿಲ್ಲಲು ನಡೆಯಲು ಮೈ ತೊಳೆಸಲು
ಎಲ್ಲಕೂ ತಂದೆತಾಯಿಯೂರುಗೈ ಬೇಕೆಂದಿದ್ದ ಕಾಲವೊಂದಿತ್ತು
ನಿಂತು ನಡೆಯುವಂತಾದರೂ ನೆರವಿಗೊಬ್ಬರು ಬೇಕಿತ್ತು-
ಕತ್ತಲೆ ಕೋಣೆಯೊಳಗೆ ಹೆಜ್ಜೆಯಿಡಲು
ರಾತ್ರಿ ಪಕ್ಕದಲಿ ಮಲಗಲು
ಮನೆಯಿಂದ ಹೊರಗಡಿಯಿಡಲು
ಅಪರಿಚಿತರೆದುರು ಸುಳಿಯಲು
ಗುಮ್ಮನ ಭಯ ಕಳೆಯಲು

ಆದರೆ ಅವೆಲ್ಲ ಹೇಗೆ ಯಾವಾಗ ಹಾರಿ ಹೋದವು?
ಒಂದು ದಿನ ಎದ್ದು ತಾನೇ ಶುಭ್ರವಾಗಿ
ತಾನೇ ಬಟ್ಟೆ ಧರಿಸಿ ತಾನೇ ಅಲಂಕರಿಸಿಕೊಂಡು
ಬಿರಬಿರನೆ ನಡೆದು ಬಂದು ಜಗಲಿಗೆ ದಿಟ್ಟವಾಗಿ ನಿಂತು
ಒಬ್ಬಳೇ ಗೂಡಿನಿಂದ ಹೊರಹೋಗುವ ಚಿತ್ತ-
ಪಕ್ಕದಮನೆ ಗೆಳೆಯರೊಡನೆ ಆಡಲು
ಶಾಲೆಗೂ ಒಬ್ಬಳೇ ನಡೆಯಲು
ಟೆರೇಸಿನಲ್ಲಿ ಸ್ವತಃ ಸೈಕಲ್ ಬ್ಯಾಲೆನ್ಸ್ ಮಾಡಲು
ಅಂಗಡಿಯವರಲಿ ತನಗೆ ಬೇಕಿದ್ದ ಕೇಳಲು

ಮರಿಗೆ ರೆಕ್ಕೆ ಬಲಿತದ್ದು ಗೊತ್ತೇ ಆಗುವುದಿಲ್ಲ
ಅಪ್ಪ-ಅಮ್ಮ ಇನ್ನೂ ಗುಟುಕು ಕೊಡುವ ನೆಪದಲ್ಲಿ
ತಟ್ಟೆಗೆ ಮೊಸರನ್ನ ಹಾಕಿಕೊಂಡು ಬಂದು
ಗೂಡಿನ ಬಾಗಿಲಲ್ಲಿ ನಿಂತು ಕೂಗಿ ಕೂಗಿ ಕರೆದರೆ

ಮರಿ ವೀಡಿಯೋಕಾಲ್ ಮಾಡಿ
ನಾನು ಚಿಕ್ಕಮ್ಮನ ಮನೇಲಿದೀನಮ್ಮಾ
ಇಲ್ಲೇ ತಂಗಿಯ ಜೊತೆ ಆಡುವೆ
ಇಲ್ಲೇ ಊಟ ಮಾಡುವೆ
ಇಲ್ಲೇ ರಾತ್ರಿಯ ಕಳೆಯುವೆ
ಇಲ್ಲೇ...
ಉಲಿಯುತ್ತಿದೆ ವಿಶ್ವಾಸದ ನಗೆಯ ಜತೆ

ತಟ್ಟೆ ಹಿಡಿದ ಅಪ್ಪ-ಅಮ್ಮ
ಈ ಹಕ್ಕಿಗೆ ರೆಕ್ಕೆ ಮೂಡಿದ್ದು ಯಾವಾಗ ಅಂತ
ಹುಡುಕುತ್ತಲೇ ಇದ್ದಾರೆ
ಮೊಬೈಲು ಸೂಸುವ ಬೆಳಕಲ್ಲಿ.

- ಸುಶ್ರತ ದೊಡ್ಡೇರಿ

ಸುಶ್ರತ ದೊಡ್ಡೇರಿ

ಸುಶ್ರತ ದೊಡ್ಡೇರಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬರೆಯುವುದು, ಓದುವುದು ಅವರ ಹವ್ಯಾಸ. ವೃತ್ತಿಯಲ್ಲಿ ವಕೀಲರು.

ಕೃತಿಗಳು : ಹೊಳೆ ಬಾಗಿಲು

More About Author