Poem

ರಿಪೇರಿ 

 

ದ್ವಿಚರಿಯಾಗಿ ಸಾಗುತ್ತಿದೆ
ಗುರಿಯೇ ಇಲ್ಲದೆ ದಾರಿಗುಂಟ
ಬಹಳ ದೂರವೇನೂ ಬಂದಿರಲಿಲ್ಲ
ಅಷ್ಟರಲ್ಲಿಯೇ ಬಂಡಿ ಉಬ್ಬಸಬಡುತ್ತಾ
ನಿಂತುಬಿಟ್ಟಿತು ಏಕಾಏಕಿ
ಈಗ ಬಂಡಿಗೆ ಒಲವನೊದಗಿಸುತಾ
ತಳ್ಳುವ ಕಾಯಕ ತೋಳಗಳದು

ನೂಕಲಾರದೆ ನೂಕಿ ಮುಂದೆಮುಂದಕೆ
ಸುಸ್ತು ಹೊಡೆಯುವಷ್ಟರಲ್ಲಿ
ಕಣ್ಣಿಗೆ ರಾಚಿತು
ಮುರಿದ ಕಂಬ ಕಮಾನುಗಳ
ಹಳೆಯ ಗ್ಯಾರೇಜ್
ನಿಧಾನವಾಗಿ ಬಿಸಿ ನೆತ್ತರ
ವಾಹಿನಿಯೊಂದು ಚಿಮ್ಮಿದಂತಾಯ್ತು ಮೈಯಲ್ಲಿ

ಉರುಳಿ ನರಳಿಕೊಂಡು ಬಂದ
ಬಂಡಿಯೊಂದಿಗೆ ನನ್ನನ್ನು
ಒಮ್ಮೆಲೇ ಸುಪರ್ದಿಗೆ ಪಡೆದ ರಿಪೇರಿಗಾಗಿ
ದೇಶಾವರಿಯ ನಗುವ ಬೀರುತಾ

ಪರಿಕಿಸಿದ ನಿರುಕಿಸಿದ
ಸವೆದ ಭಾಗ ಯಾವುದೆಂದು
ತಡಮಾಡದೆ ಬಂಡಿಭಾಗಗಳ
ಕಳಚತೊಡಗಿದ ಕೈ ಚಳಕದಿಂದೆ
ಈ ಮಧ್ಯೆ
ನನ್ನ ಅವನ ಮಾತು
ನಿರ್ಲಿಪ್ತನಾಗಿ ಆಲಿಸಿನಲ್ಲ ಎಲ್ಲಾ ಪ್ರವರ
ಕೇಳುವ ತವಕವಿಲ್ಲದಿದ್ದರೂ

ಆಸೆಯೇ ದುಃಖಕ್ಕೆ ಮೂಲವಂತೆ
ಅಂತೆ ಆಸೆಯನು ತೊರೆದು ಬದುಕಿರುವೆ
ಈ ಎಲ್ಲಾ ಗೊಡವೆಗಳನ್ನು ತೊರೆದು
ಮಾತಿನ ಲಹರಿ ಮುಂಬರಿಯುತ್ತಲೇ ಹೋಯಿತು
ಅವನು ಕೇಳುತ್ತಲೇ ಇದ್ದ ಸಾವಧಾನವಾಗಿ

ಅನಿತರಲ್ಲೇ ಬಿಡಿಭಾಗಗಳು ಸಮನಿಸುವಂತೆ
ಒಂದರೊಳಗೆ ಮತ್ತೊಂದನು
ಹೊಂದಿಸತೊಡಗಿದ ಅಚ್ಚುಕಟ್ಟಾಗಿ

ಹೇಳಿದನವನು ಕೊನೆಗೆ ನನ್ನ ನಿಟ್ಟಿಸುತ್ತಾ
ವಿಜಯದ ನಗೆಯ ಸೂಸುತ್ತಾ
ನಿಮ್ಮ ಬಂಡಿ ಹೊಸತಾಯ್ತು ಮರಳಿ
ಈಗ ನೀವು ಹೊಸಬರಾಗಿ
ಬಂಡಿಯನೇರಬೇಕು
ಆಜ್ಞೆಯೋ? ವಿಜ್ಞಾಪನೆಯೋ? ತಿಳಿಯದು
ಕಕ್ಕಾಬಿಕ್ಕಿಯಾಗಿ ನಿಂತವಳಿಗೆ
ಎಸೆದದ್ದು ಒಂದೇ ಪ್ರಶ್ನೆ
ಆಸೆ ತೊರೆದು ಬದುಕು ಉಂಟೇ?

ಮರುಮಾತಾಡದೆ ಕಿಸೆಯ
ಹಣವನ್ನೆಲ್ಲಾ ತೆತ್ತು ಹೊರಬಿದ್ದೆ
ನನ್ನೊಳಗೆ ಇಣುಕುತ್ತಾ, ಹುಡುಕುತ್ತಾ!!

ಚಿತ್ರ : ಪಿ. ಕೆ. ಜೈನ್

ಶಿಲ್ಪ ಬೆಣ್ಣೆಗೆರೆ (ಶಿಲ್ಪ ಬಿ.ಎಂ)

ಕವಿ ಶಿಲ್ಪ ಬೆಣ್ಣೆಗೆರೆ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೆಣ್ಣಿಗೆರೆಯವರು. ಸುಮಾರು ಹತ್ತು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ.  ‘ಕೊಲ್ಲುವವನೇ ದೇವರಾದನಲ್ಲ’ ಕವನ ಸಂಕಲನ ಪ್ರಕಟವಾಗಿದೆ. 

More About Author