Poem

ಸ್ಕೂಲೇ ಇರ್ಬಾರ್ದು

ಏಕೋ ನಮ್ಗೆ
ಹೀಗನಿಸುತ್ತೆ
ಸ್ಕೂಲೇ ಇರ್ಬಾರ್ದು;
ಸ್ಕೂಲ್ ಇದ್ರೂನು
ತಲೆನೋವಂತ
ಮಿಸ್ಸೇ ಬರ್ಬಾರ್ದು!

ಮಿಸ್ ಬಂದ್ರೂನು
ಆಟಾ ಆಡ್ಸಿ
ಹೇಳ್ಬೇಕಪ್ಪ ಕತಿ;
ದಿನಾ ಇಡೀ
ಪಾಠಾ ಕೊರದ್ರೆ
ಹೇಳಿ ನಮ್ದೇನ್ಗತಿ!

ಮಿಸ್ ಪಾಠಾ
ಮಾಡೋವಾಗ
ಕಿಟ್ಕೀ ಹರ‍್ಗೇ ಮನ್ಸು;
ಕಣ್ಮುಚ್ಚಿ
ತೂಕಡ್ಸಿದ್ರೆ
ಕೊಳ್ಳೀ ದೆವ್ವದ ಕನ್ಸು!

ಸ್ಕೂಲ್ ಬ್ಯಾಗ್
ಹೊತ್ತೂ ಹೊತ್ತೂ
ಬೆನ್ನು ಒಂಟೀ ಡುಬ್ಬ;
ಎಷ್ಟೊಂದ್ ರ‍್ಕು
ಎಷ್ಟೊಂದ್ ಓದು
ರ‍್ತೇಬಿಟ್ವಿ ಹಬ್ಬ!

ಸಿಗೋ ಒಂದ್-
ಸಂಡೇನೂ
ನುಂಗ್ಬಿಡುತ್ತೆ ನಿದ್ದೆ;
ಅಯ್ಯೋ ದೇವ್ರೇ
ಹೇಗೋ ಮಾಡಿ
ತಲೆಗೆ ಹತ್ಸು ವಿದ್ಯೆ!

ಹಗ್ಲೂ-ರಾತ್ರಿ
ಮಾಡಿದ್ರೂನು
ಮುಗೀವಲ್ದು ವರ್ಕು;
ಓದಿ ಮುಂದೆ
ಏನಾಗ್ತೀವೋ
ಸದ್ಯಕ್ಕಂತು ಕ್ಲರ್ಕು!

-ರಾಜಶೇಖರ ಕುಕ್ಕುಂದ

ರಾಜಶೇಖರ ಕುಕ್ಕುಂದಾ

‘ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. 

ಕೃತಿಗಳು:  ಚೆಲುವ ಚಂದಿರ,  ಗೋಲಗುಮ್ಮಟ, ಮತ್ತು ಪುಟಾಣಿ ಪ್ರಾಸಗಳು (ಮಕ್ಕಳ ಕವನ ಸಂಕಲನಗಳು), ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಸಿ. ಬಿ. ಎಸ್. ಇ. ಕನ್ನಡ ಭಾಷೆಯ ಪಠ್ಯದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ. ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ.

ಪುರಸ್ಕಾರಗಳು: ಪ್ರಜಾವಾಣಿ ದಿನಪತ್ರಿಕೆಯ ದೀಪಾವಳಿ ಶಿಶು ಕಾವ್ಯ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ, ಶಿವಮೊಗ್ಗದ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ 2012 ನೇ ಸಾಲಿನ ‘ನಾ ಡಿಸೋಜಾ’ ಪುರಸ್ಕಾರ, 2013 ನೇ ಸಾಲಿನ ‘ಅಮ್ಮ’ ಪುರಸ್ಕಾರ ಪಡೆದಿದ್ದಾರೆ.

More About Author