Poem

ಷರತ್ತು.. ಷರತ್ತು..!

ವರಪರೀಕ್ಷೆಯ ಕಾರ್ಯಕ್ರಮ..
ವಧು-ವರರರಿಗೆ ಮಾತುಕತೆಯ
ಸಲುವಾಗಿ ಏಕಾಂತ ಸಮಾಗಮ..
ವರ ವಿನೀತನಾಗಿ ಕೇಳಿದ
“ಈ ಮದುವೆ ನಿಮಗೊಪ್ಪಿಗೆಯೆ?
ಏನಾದರು ಹೇಳುವುದಿದೆಯೆ.??”

ವಧು ವೈಯ್ಯಾರದಿ ನುಡಿದಳು
“ಸಂಬಂಧವೇನೋ ಇಷ್ಟವಾಯ್ತು
ನಾನಿಮ್ಮ ಮದುವೆಯಾಗಬೇಕೆಂದರೆ
ಒಪ್ಪಬೇಕು ನನ್ನ ಕೆಲವು ಷರತ್ತು.!”

ಹುಡುಗ ಗೋಣಾಡಿಸುತ್ತ ಹೇಳಿದ..
“ಹೇಳಿಬಿಡಿ ನಿಮ್ಮ ಷರತ್ತಿನ ಪಟ್ಟಿ
ಒಪ್ಪಿಗೆಯಾದರೆ ಪತಿಯಾಗುವೆನು
ಮುಂದಿನ ತಿಂಗಳೇ ತಾಳಿ ಕಟ್ಟಿ..”

ಹುಡುಗಿ ಮೆಲ್ಲನೆ ಆರಂಭಿಸಿದಳು..
“ನಿಮ್ಮ ತಂದೆ-ತಾಯಿ ನನಗೆ
ಎಂದಿಗೂ ಅತ್ತೆ-ಮಾವನ ತರಹ
ಅವರೆಂದು ಇರಬಾರದು ಸನಿಹ
ಮಾಡಬೇಕು ಮದುವೆ ನಂತರ
ಅವರಿಂದ ದೂರ ಪ್ರತ್ಯೇಕ ಗೃಹ”

“ನಮ್ಮ ಅಪ್ಪ-ಅಮ್ಮ ನಿಮಗೂ
ಸ್ವಂತದ ಅಪ್ಪ-ಅಮ್ಮನಾ ಹಾಗೆ
ಅವರಿರುವರು ಸದಾ ನಮ್ಮೊಂದಿಗೆ
ನನ್ನ ತಂಗಿಯರೂ ನಿಮಗೆ
ಒಡಹುಟ್ಟಿದಾ ತಂಗಿಯರ ಹಾಗೆ
ಅವರ ಜವಾಬ್ಧಾರಿ ನಿಮ್ಮ ತಲೆಗೆ
ಈ ಷರತ್ತುಗಳಿಗೆ ಇದ್ದರೆ ಒಪ್ಪಿಗೆ
ನಾನು ಸಿದ್ದ ನಿಮ್ಮೊಡನೆ ಮದುವೆಗೆ”

ವರ ನಿಧಾನವಾಗಿ ಮೇಲೆದ್ದು
ವದುವಿನ ತಲೆಮೇಲೆ ಕರವಿಡುತ
ಗಂಭೀರವದನನಾಗಿ ಹೇಳಿದೆ..
“ನಿನ್ನ ಷರತ್ತೆಲ್ಲ ಕೇಳಿದೆ ತಂಗ್ಯವ್ವ
ಅಪ್ಪ-ಅಮ್ಮ ತಂಗಿಯಂದಿರನು
ಕುಶಲವಾಗಿ ನೋಡಿಕೊಂಡಿರವ್ವ
ಬೇರ್ಯಾರೊಂದಿಗಾದರೂ ನಿನ್ನ
ಕಲ್ಯಾಣ ನಿಶ್ಚಯವಾದಾಗ ಹೇಳು
ಅಣ್ಣನಂತೆ ಬಂದು ಮುಂದೆ ನಿಂತು
ಹಾಕಿಹೋಗುವೆ ನಾಲ್ಕು ಅಕ್ಕಿಕಾಳು..”

ಮಿಂಚಿಂಗ್ ವಧು.. SHOCKSSSS
ಪಂಚಿಂಗ್ ವರ..... ROCKSSSSS

“ಇದು ಬರಿಯ ಹಾಸ್ಯಗವಿತೆಯಲ್ಲ.. ವರ್ತಮಾನದ ಕಟು ವಾಸ್ತವದ ಭಾವಗೀತೆ. ವಧು ನೋಡಲು ಹೋದ ನನ್ನ ಸೋದರಮಾವನ ಮಗನ ಸ್ವಾನುಭವವನ್ನೇ ಕವಿತೆಯಾಗಿಸಿದ್ದೇನೆ. ಹಾಗಾಗಿ ಇಲ್ಲಿನ ವ್ಯಂಗ್ಯ, ವಿನೋದ ವಿಡಂಬನೆಗಳ ಹಿಂದೆ ವಾಸ್ತವವೂ ಇದೆ, ವಿಷಾದವೂ ಇದೆ. ಇಂದಿನ ಕೆಲವು ಯುವಕ-ಯುವತಿಯರ ಚಿಂತನೆ, ವೈವಾಹಿಕ ಬಂಧಗಳ ಪರಿಕಲ್ಪನೆ ನಮ್ಮ ಪೀಳಿಗೆಯವರನ್ನು ದಿಗಿಲು ಮೂಡಿಸುವುದಷ್ಟೇ ಅಲ್ಲ, ದಿಗ್ಭ್ರಾಂತರನ್ನಾಗಿಸುತ್ತದೆ. ಏನಂತೀರಾ..?”

- ಎ.ಎನ್.ರಮೇಶ್. ಗುಬ್ಬಿ.

 

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ.

ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ಎಂಬ ಪ್ರಶಂಸೆ ದೊರೆತಿದ್ದು, ‘ಗುಬ್ಬಿಯ ಕಲರವ’ ಕೃತಿಗೆ ‘ಬಿ.ಕೃಷ್ಣ ಪೈ ಬದಿಯಡ್ಕ ಸ್ಮಾರಕ ಪ್ರಶಸ್ತಿ’, 2012ರಲ್ಲಿ ನಡೆದ ಕೇರಳ ರಾಜ್ಯ 5ನೆಯ ಕನ್ನಡ ಸಮ್ಮೇಳನ ಮತ್ತು ಕೇರಳ-ಕರ್ನಾಟಕ ಉತ್ಸವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಕಾವ್ಯ ಪ್ರಶಸ್ತಿ’, ಮಂಡ್ಯದ ‘ಅಡ್ವೈಸರ್’ ಪತ್ರಿಕೆಯ 2012ರ ‘ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸುರ್ವೆ ಪತ್ರಿಕೆಯಿಂದ ‘ಎಡನೀರೊಡೆಯನಿಗೆ ಚುಟುಕು-ಪುಷ್ಪಾರ್ಚನೆ’ ಕೃತಿಗೆ ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮತ್ತು ಬೆಳ್ಳಿಪದಕ ಬಹುಮಾನ ಪಡೆದಿದ್ದಾರೆ. ಬಿಜಾಪುರದ ಬಸವಜಯಂತಿ ಶತಮಾನೋತ್ಸವ ಸಂಭ್ರಮ-2013 ಸಮಾರಂಭದಲ್ಲಿ ಪ್ರತಿಷ್ಠಿತ ‘ಬಸವಜ್ಯೋತಿ’ ಪ್ರಶಸ್ತಿ, ಕೆ.ಆರ್.ನಗರದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ‘ಕೆ.ಎಸ್.ನ. ರಾಜ್ಯಮಟ್ಟದ ಕಾವ್ಯಪುರಸ್ಕಾರ’, ಅಖಿಲ ಭಾರತ ಅಣುಶಕ್ತಿ ನಿಗಮದ ರಾಷ್ಟ್ರಮಟ್ಟದ 2009, 2013, 2016, 2018ರ ಸಾಂಸ್ಕೃತಿಕ ಸ್ಪರ್ಧಾವಳಿಯಲ್ಲಿ ‘ಸ್ವರಚಿತ ಕವನ ವಾಚನ’ದಲ್ಲಿ ಪ್ರಥಮ ಬಹುಮಾನ, ಹುಣಸೂರಿನ ಚುಟುಕು ಸಾಹಿತ್ಯ ಪರಿಷತ್ತಿನಿಂದ 2014ರ ‘ಚುಟುಕು ಮುಕುಟ’ ರಾಜ್ಯ ಪ್ರಶಸ್ತಿ, ಕೈಗಾದ ಸಹ್ಯಾದ್ರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸ್ಪರ್ಧೆ-2012 ರಲ್ಲಿ ಬಹುಮಾನ ಮತ್ತು 2013 ರ ‘ಯುವ ಪ್ರತಿಭಾ ಪುರಸ್ಕಾರ’ ಪಡೆದಿದ್ದಾರೆ. ‘ಶಕ್ತಿ ಮತ್ತು ಅಂತ' ನಾಟಕ ಸಂಕಲನಕ್ಕೆ ಸಂತೃಪ್ತಿ ಸಾಹಿತ್ಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಿಂದ 2017 ನೇ ಸಾಲಿನ `ನೃಪ ಸಾಹಿತ್ಯ ಪ್ರಶಸ್ತಿ', 2019 ರಲ್ಲಿ `ಜನ್ನ’ ಕಾವ್ಯ ಪ್ರಶಸ್ತಿ, ಡಿ.ಎಸ್.ಕರ್ಕಿ ಪ್ರತಿಷ್ಟಾನ ನೀಡುವ 2019 ನೇ ಸಾಲಿನ ಪ್ರತಿಷ್ಟಿತ `ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗಳು ಲಭಿಸಿವೆ.

 

More About Author