Poem

ಶ್ರೀ ಗುರುವಿಗೆ

ಕರ್ಪೂರವು ಕರಗುತ್ತಿರುವಾಗಲೆಲ್ಲಾ
ಮನಸ್ಸು, ಬುದ್ಧಿ, ಹೃದಯವನ್ನು ಆವರಿಸುತ್ತದೆ
ತಾನೇ ಕರಗಿ ಲೋಕವ ಬೆಳಗುವ ಗುಣ
ಅಲ್ಲಿ ತಾವು ವಿರಾಜಮಾನರಾಗುತ್ತೀರಿ
ಉರಿಉಂಡ ಕರ್ಪೂರದ ಧ್ಯಾನದಂತೆ
ಎನ್ನ ಕಂಗಳ ಕಾಂತಿಯ ಬೆಳಗಿದೆ ನಿಮಗೆ
ಶಿರಬಾಗಿ ವಂದಿಸುತ್ತೇನೆ

ಧೈರ್ಯದಿಂದ ಸಾಧಿಸುವುದನ್ನು
ಯುಕ್ತಾಯುಕ್ತ ವಿವೇಚಿಸುವುದನ್ನು
ನಿರಂತರ ಕಲಿತು ಕಲಿಸುವುದನ್ನು
ಶ್ರಮಪಟ್ಟು ದುಡಿಯುವುದನ್ನು
ಕಲಿಸಿರುವ ನಿಮ್ಮ ನಡೆ-ನುಡಿಯಲ್ಲಿ
ಪ್ರಣವನಾದ ಅವತರಿಸಿರುವುದನ್ನು
ನೋಡಿ ವಿಸ್ಮಿತನಾಗಿದ್ದೇನೆ

ಹೂವನ್ನು ಮಾತನಾಡಿಸುವ ವಿನಯವನ್ನು
ಶಬ್ದದೊಳಗಣ ನಿಶಬ್ದದ ಶರೀರವನ್ನು
ಅಂಗೈಲಿ ಹಿಡಿದು ನುಡಿಸುವ ಪಾಂಡಿತ್ಯದ ಕಾಠಿಣ್ಯವನ್ನು
ಹಸಿದವನ ನೋಡಿ ಪ್ರಶ್ನಿಸದೆ ಸಲಹುವ ಕಾರುಣ್ಯವನ್ನು
ದೋಷಗಳ ಹುಡುಕದೆ ಗುಣವನಾಘ್ರಾಣಿಸುವ
ಜೀವ ಪ್ರೀತಿಯನ್ನು ಕಂಡು ಪರವಶನಾಗಿದ್ದೇನೆ

ಎತ್ತರಕೆ ಏರುವುದನ್ನು
ಒಳಮನೆಯ ಶಾಂತಿಯ ಗಹನತೆಗೆ ಪಕ್ಕಾಗುವುದನ್ನು
ಕತ್ತಲೆಗೆ ಹಣತೆ ಹಚ್ಚಿಡುವುದನ್ನು
ಹಣತೆಗಳ ಆತ್ಮಸ್ಥೈರ್ಯವಾಗುವುದನ್ನು
ನೋವುಂಡವನ್ನು ಮೊಗವ ನೋಡಿ
ಮೈದಡವಿ ಸಲಹಿ ನಗುವು ಒಸರಿಸಿದಾಗ
ನಲಿವನು ಕೈಹಿಡಿದು ನಡೆಸಿದ್ದನ್ನುಕಂಡು ಧನ್ಯನಾಗಿದ್ದೇನೆ

ಅಕ್ಷರದ ಗರಡಿಮನೆಯ ಪಾಠಗಳನ್ನು
ಸರಳ ವರಸೆಗಳನ್ನು
ಜಂಟಿ ವರಸೆಗಳನ್ನು
ಗದ್ಯದ ಆಟದ ಪಟ್ಟುಗಳನ್ನು
ನೀನು ಕಲಿಯಬೇಕು ಎಂದು
ಕೂಸಿಗೆ ಉಣಿಸುವ ತಾಯಂತೆ
ತಲೆಯ ನೇವರಿಸಿ ಕಲಿಸಿದಿರಿ
ನೆನೆಯುತ್ತೇನೆ ಮತ್ತೆ ಮತ್ತೆ ತಮ್ಮ ಗುಣಗಳ
ನನ್ನ ಉಸಿರ ಧ್ಯಾನದಂತೆ

ಎಲ್ಲರಿಗೂ ಒಳಿತ ಬಯಸುವ
ಬೀಜ ವೃಕ್ಷದ ನೀತಿಯಂತೆ
ನಿಮ್ಮ ನೋಡುತ್ತಲೇ ಇದ್ದೇನೆ
ಕಣ್ಣು ಕಾಣುವ ದೂರದವರೆಗೆ
ಪುಟ್ಟ ಮಗುವಾಗಿ ನಿಮ್ಮ ನೆರಳಿನಲ್ಲಿ
ಓಡಾಡುವ ಧನ್ಯತೆಗಾಗಿ

- ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.

ಇವರ 'ಯಾರ ಹಂಗಿಲ್ಲ ಬೀಸುವ ಗಾಳಿಗೆ' ಕಾವ್ಯ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ವರ್ಧಮಾನ ಯುವ ಪುರಸ್ಕಾರ ಶಾ ಬಾಲೂರಾವ್ ಯುವ ಪುರಸ್ಕಾರ . ಜಿ.ಎಸ್.ಶಿವರುದ್ರಪ್ಪ ಕಾವ್ಯ ಪುರಸ್ಕಾರ, ಮುಳ್ಳೂರು ನಾಗರಾಜ್ ಕಾವ್ಯ ಪ್ರಶಸ್ತಿ, ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ, ಮೂಡ್ನಾಕೂಡು ಚಿನ್ನಸ್ವಾಮಿ ದತ್ತಿ, ಸೇರಿದಂತೆ ರಾಜ್ಯಮಟ್ಟದ ಒಟ್ಟು 7 ಪ್ರಶಸ್ತಿಗಳು ಒಂದೇ ಕಾವ್ಯ ಕೃತಿಗೆ ಪಡೆದುಕೊಂಡ ಹಿರಿಮೆ ಇವರದು ವಿಶ್ವವಿಖ್ಯಾತ ಮೈಸೂರು ದಸರಾ- 2016 ಹಾಗೂ 2022 ರ ಯುವ ಕವಿಗೋಷ್ಟಿ ಯಲ್ಲಿ ಕವಿಯಾಗಿ ಭಾಗವಹಿಸಿ ಕವನ ವಾಚನ ಮಾಡಿರುತ್ತಾರೆ

 2019 ರಲ್ಲಿ ಲೋಕಾರ್ಪಣೆಯಾದ ಇವರ ನಾಲ್ಕನೇ ಕವನ ಸಂಕಲನ ಪಂಚವರ್ಣದ ಹಂಸ ಕೃತಿಗೆ 2019 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಮ್ಮ ಪ್ರಶಸ್ತಿ ಮತ್ತು ಸಂವಹನ ಸಾಹಿತ್ಯ ಪ್ರಶಸ್ತಿ ಸೇರಿ ಒಟ್ಟು 3 ರಾಜ್ಯಮಟ್ಟದ ಪ್ರಶಸ್ತಿಗಳು ಈ ಕಾವ್ಯಕೃತಿಗೆ ಸಂದಿರುವುದು ಸಾಹಿತ್ಯ ಕೀರ್ತಿಯ ಮುಕುಟಕ್ಕೆ ಮತ್ತೊಂದು ಗರಿ

ಇವರ ಸಾರಸ್ವತ ಸೇವೆಗೆ 2022 ನೇ ಸಾಲಿನ ತುಮಕೂರು ಸಾಹಿತ್ಯ ಪರಿಷತ್ತು ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ದತ್ತಿ "ಸಾಹಿತ್ಯ ಶ್ರೀ" ಪ್ರಶಸ್ತಿ ಸಂದಿರುವುದು ಇವರ ಕಾವ್ಯಕ್ಕೆ ಸಂದ ಗೌರವವಾಗಿದೆ.ಇವರ ಕವಿತೆಗಳು ತೆಲುಗು, ತಮಿಳು , ಹಿಂದಿ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿವೆ

 " ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ " ಎಂಬ ಪ್ರೌಢ ಪ್ರಬಂಧಕ್ಕೆ ಪ್ರತಿಷ್ಟಿತ ರೇವಾ ವಿಶ್ವವಿದ್ಯಾಲಯವು ಪಿಎಚ್.ಡಿ.ಪದವಿ ನೀಡಿದೆ

ಇವರ ಕಾವ್ಯವು  ಬೆಂಗಳೂರು ನಗರ ವಿಶ್ವವಿದ್ಯಾಲಯದ  ಐಚ್ಛಿಕ ಕನ್ನಡ , ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಬಿ.ಎ , ತುಮಕೂರು ವಿಶ್ವವಿದ್ಯಾಲಯದ  ಬಿ.ಎಸ್ಸಿ ವಿದ್ಯಾರ್ಥಿಗಳಿಗೆ  ಪಠ್ಯವಾಗಿದೆ NEP ಪಠ್ಯಕ್ರಮದಲ್ಲಿ ಸೇರಿದ ಕಾವ್ಯವಾಗಿದೆ.

ಪ್ರಸ್ತುತ ಇವರು  ಬೆಂಗಳೂರಿನ ಗಾಂಧೀ ಶಾಂತಿಪ್ರತಿಷ್ಠಾನದ ಕಾರ್ಯದರ್ಶಿಗಳಾಗಿ  ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು  ಬೆಂಗಳೂರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಕೃತಿಗಳು : 

ಕವನಸಂಕಲನಗಳು 

ಭಾವತೀರದ ಹಾದಿಯಲ್ಲಿ
ಹೆಜ್ಜೆ ಮೂಡಿದ ಮೇಲೆ 
ಯಾರ ಹಂಗಿಲ್ಲ ಬೀಸುವ ಗಾಳಿಗೆ 
ಪಂಚವರ್ಣದ ಹಂಸ

 ವಿಮರ್ಶಾ ಕೃತಿಗಳು 
ಗಾಳಿ ಗಂಧ 
ರೆಕ್ಕೆಗಳೊಡೆದಾವೋ ಮುಗಿಲಿಗೆ

ಸಂಪಾದಿತ ಕೃತಿಗಳು 
ಕಣ್ಣ ಕಾಡುಗೆ ಬೆಳಕು 
ಕಿರಿಯರು ಕಂಡ ಗಾಂಧಿ 
ದಲಿತ ಸಾಹಿತ್ಯ ಸಂಪುಟವಿಮರ್ಶೆ 
ಎಚ್ಚ್ ಎಸ್ಕೆ ಕನ್ನಡ ಪ್ರಜ್ಞೆ

 ಸಂಶೋಧನೆ 

ಕಂಗಳ ಬೆಳಗು(ಬೇಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ)

 ವ್ಯಕ್ತಿಚಿತ್ರ

 ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಸೇರಿದಂತೆ ಈ ವರೆಗೆ ಇವರ 12 ಕೃತಿಗಳನ್ನ ರಚಿಸಿದ್ದಾರೆ. 

More About Author