Story

ಸೋನೆ

ಸುಮ ಕೆ.ಎಚ್. ಅವರು ವಿಜಯನಗರ ಜಿಲ್ಲೆಯ ಉಜ್ಜಿನಿಯವರು. ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ ಬರಹಗಾರ್ತಿ. ಕತೆ, ಕವನ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಪ್ರಸ್ತುತ ಅವರ ‘ಸೋನೆ’ ಕತೆ ನಿಮ್ಮ ಓದಿಗಾಗಿ...

"ನಿಮ್ಮ ಟೇಬಲ್ ನಂಬರ್ 6, ಟೈಪಿಂಗ್ ಗೆ ದಿನಕ್ಕೆ ಐದರಿಂದ ಎಂಟು ಫೈಲ್ ಬರುತ್ತೆ ಹೊಸದಾಗಿ ಬೇರೆ ಬಂದಿದ್ದೀರಾ ಗಾಬರಿ ಆಗೋದು ಏನು ಬೇಡ,ಹೋಗ್ತಾ ಹೋಗ್ತಾ ಎಲ್ಲ ಫಾಸ್ಟ್ ಆಗುತ್ತೆ" ಇನ್ನೆಲ್ಲೋ ಚಿತ್ತ ಹರಿಬಿಟ್ಟ ಸುಚಿಸ್ಮಿತಾ ಸಹೋದ್ಯೋಗಿಯ ಮಾತಿಗೆ 'ಹೂಂ' ಅನ್ನುತ್ತಾ ತೋರಿಸಿದ ಟೇಬಲ್ನಲ್ಲಿಟ್ಟಿದ್ದ ಪುಟ್ಟ ಗಣೇಶನನ್ನು ಗಮನಿಸುತ್ತಾ ಕೈಯಲ್ಲಿದ್ದ ಫೈಲ್ ಕೆಳಗಿಟ್ಟು ಚೇರ್ ಎಳೆದು ಕೂತಳು.

ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಒತ್ತುವ ಕೀಬೋರ್ಡ್ ಸದ್ದು,ಜನರ ಗಲಾಟೆ, ತಾಳಲಾರದ ಬಿಸಿಲ ಬೇಗೆ, ಕಿರ್ರ... ಕಿರ್ರ್... ಶಬ್ಧ ಮಾಡುತ್ತಾ ತಿರುಗಲೋ ಬೇಡಾ, ತಿರುಗಲೋ ಬೇಡಾ ಎನ್ನುತ್ತಾ ಕಣಿಕೇಳಿ ತಿರುಗುವ ಫ್ಯಾನಿಂದ ಬರುವ ಗಾಳಿ ಅವಳ ಕೂದಲಿಗೂ ತಲುಪದೇ,ಬಂದ ಜನರ ಬೆವರಿನ ವಾಸನೆ, ಎಲ್ಲರೊಂದಿಗೆ ಸೇರಿ ಮೊದಲ ದಿನವೇ ತಲೆಚಿಟ್ಟು ಹಿಡಿಯುತ್ತಿತ್ತು.ಹೆಸರಿಗೆ ಬ್ಯಾಂಕ್ ಅನ್ನಬೇಕೋ ರೈಲ್ವೆ ಬುಕ್ಕಿಂಗ್ ಕೌಂಟರ್ ಅನ್ನಬೇಕೋ ಅರ್ಥನೇ ಆಗ್ಲಿಲ್ಲ.

" ಗಣೇಶ, ನನ್ನ ನೀನೇ ಕಾಪಾಡಬೇಕು ಪ್ಲೀಸ್ ಪ್ಲೀಸ್ " ಅಂತ ಮನಸಲ್ಲೇ ಕೈಮುಗಿದು ಮುಂದಿರುವ ಮೂರ್ತಿಯ ಮೇಲಿನ ಧೂಳನ್ನು ಒರೆಸಿದಳು.

" ಮೇಡಂ, ಇದೊಂದು ಅರ್ಜೆಂಟ್ ಟೈಪ್ ಮಾಡಿಕೊಡಿ " ಅಂತ ಫೈಲ್ ಟೇಬಲ್ ಮೇಲಿಟ್ಟು ಹೋದ ಅಟೆಂಡರ್.

ಫೈಲ್ ಮೊದಲ ಪುಟದಲ್ಲೇ ವಿದ್ದ ಹೆಸರನ್ನು ನೋಡಿದ ತಕ್ಷಣ ಮನದಲ್ಲೊಂದು ಮಿಂಚು ಸಣ್ಣಕೆ ಗುಡುಗು ಬಂದಂತಾಯ್ತು, ಮಳೆ ಬರೋ ಮುನ್ಸೂಚನೆ ಮನದಲ್ಲೂ, ಸುತ್ತಲೂ, ಅವನ ಹೆಸರೇ ಹಾಗೆ ಮರಳುಗಾಡಿನ ಓಯಸಿಸ್, ಮನಸಿನ ಮರಳನ್ನು ಮರುಳು ಮಾಡಿದವ, ಕಣ್ಣಲ್ಲೇ ಮಾತನಾಡಿಸುವವ,ಕಿರುನಗೆ ಸೂಸಿ ಕಾಡುವ.....

" ಮೇಡಂ,ಇದೇನು ಎಲ್ಲಿದ್ದೀರಾ!? ಬೇಗ ಟೈಪ್ ಮಾಡಿ ಅಂದ್ರೆ ಒಂದೇ ಪೇಜ್ನಲ್ಲಿದ್ದಿರಾ.. ರೀ... ನೀವಾದರೂ ಹೇಳಿ ಬೇಗ ಮಾಡೋಕೆ " ಅಂತ ಪಕ್ಕದ ಪದ್ಮಾವತಿಗೆ ಹೇಳಿ ನಡೆದ ಮ್ಯಾನೇಜರ್.

" ಹಾಯ್ " ಎಂದ ಪದ್ಮಾವತಿ ಪ್ರತಿಯಾಗಿ ಹಾಯ್ ಹೇಳಿ ಮತ್ತದೇ ಹೆಸರನ್ನು ನೋಡುತ್ತಾ ಕುಳಿತವಳಿಗೆ

"ನೀವೇನು ಬೇಜಾರಾಗಬೇಡಿ ಅವರು ಹಾಗೇನೇ ಕೆಲಸ ಬೇಗ ಆಗಬೇಕು ಅದಕ್ಕೆ ಜೋರು ಧ್ವನಿ ಆದರೆ ಮನುಷ್ಯ ತುಂಬಾ ಒಳ್ಳೆಯವರು,ಇವತ್ತೇ ಬಂದಿದ್ದು ನೀವು? " ಎಂದು ದೇಶಾವರಿ ಮಾತನಾಡುತ್ತಾ ಅದನ್ನ ಟೈಪ್ ಮಾಡಿ ಕೊಟ್ಟರು.ಹೋಗಿ ಇದನ್ನು ನೀವೇ ಕೊಟ್ಟುಬನ್ನಿ ಖುಷಿಯಾಗುತ್ತಾರೆ.ಅಂತ ಹೇಳಿ ಕೈಗಿತ್ತರು.

ಮ್ಯಾನೇಜರ್ ಗೆ ಕೊಡೋಕೆ ಅಂತ ಪರ್ಮಿಷನ್ ಕೇಳಿ ಒಳಗೆ ಹೋದವಳಿಗೆ ಕಂಡದ್ದು ಮತ್ತದೇ ನೇಮ್ ಪ್ಲೇಟ್. ಮನದಲ್ಲಿ ಮತ್ತದೇ ನಗಾರಿ ಶಬ್ಧ,ಗುಡುಗು, ಮಿಂಚು, ಮಳೆಯೇ ನಿಧಾನವಾಗಿ ಸುರಿದಂತಾಗುತ್ತಿದೆ. ಮಳೆಯ ಶಬ್ಧಕ್ಕೆ ಮ್ಯಾನೇಜರ್ ಮೆಚ್ಚುಗೆ ಹುಚ್ಚು ಮಳೆಗೆ ಸಿಕ್ಕ ಪೆಚ್ಚು ದೋಣಿಯ ರೀತಿ ಕೇಳಿಯೂ ಕೇಳದಂತೆ, ನೋಡಿದರೂ ನೋಡದಂತೆ ಹೂಂ ಎನ್ನುತ್ತಾ ಹೊರಬಂದಳು.

" ಏನು ಓಕೇ ನಾ " ಎಂದು ತನ್ನತ್ತಾ ತಿರುಗಿದ ಪದ್ಮಕ್ಕನ ಮುಖವನ್ನು ನೋಡಿ ಹೂಂ ಎನ್ನುತ್ತಾ ಕೂತವಳಿಗೆ ಮತ್ತೆ ಮತ್ತದೇ ಗುಂಗು.

ಯಾಕೆ ಮತ್ತೆ ಮತ್ತೆ ಅವನೇ...! ಅವನ ಹೆಸರೇ ..ನೆನಪಿನ ಜಾತ್ರೆ ತೆರೆಯಿತು.
' ಓಯ್ ನಿಮಗೆ ಕಣ್ಣು ಕಾಣಲ್ವಾ?' ಕೇಳಿದವಳ ಧ್ವನಿಯತ್ತ ನೋಡಿದವ
' ಯಾಕೆ ನಿಮ್ಮ ಸ್ಕೂಟಿಗೆ ಹಾರ್ನ್ ಇಲ್ವಾ?' ಎಂದ ತಲೆಯ ಮೇಲಿನ ಕ್ಯಾಪ್ ಸರಿಪಡಿಸುತ್ತಾ
' ಪಾರ್ಕಿಂಗ್ ಜಾಗದಲ್ಲಿ ಹೀಗೇ ಅದ್ದ ನಿಂತ್ರೆ ಎಲ್ಲಿ ಹೋಗಬೇಕು?' ಸಿಟ್ಟಿನಿಂದ ಕೇಳಿದ ಹುಡುಗಿಯ ಕೆಂಪಾದ ಮುಖ ನೋಡುತ್ತಾ ನಿಂತವನ ಪಕ್ಕದವ

' ಸೈಡಿಗೆ ಜಾಗ ಇಲ್ವೇನೋ,ತಮ್ಮ ಗಾಡಿಗೆ ಸಾಕಾಗಲ್ವಾ?' ಎಂದದ್ದು ಕಿರಿಕಿರಿಯಾಗಿ ಅವರೆಲ್ಲ ಜಾಗ ಬಿಡುವಂತೆ ಮಾಡ್ತೀನಿ ಈಗ ಅಂತ ಜೋರಾಗಿ ಹಾರ್ನ್ ಹಾಕಿದಾಗ ನಿಲ್ಲದ ಶಬ್ಧದ ತೀವ್ರತೆಗೆ ಎಲ್ಲರೂ ಇವರತ್ತ ನೋಡಿದಾಗ ಮುಜುಗರವಾದಂತಾಗಿ ಜಾಗಬಿಟ್ಟರು.ವಿಜಯದ ನಗೆಯೊಂದಿಗೆ ಅಣಕಿಸುವಂತೆ ಪುಟ್ಟಬಾಯಿಂದ ಕೊಂಚವೇ ನಾಲಗೆ ಹೊರತಂದಂತೆ ತೋರಿ ಹೋದಳು.

" ಮಗಾ ಇವಳು ಪ್ರೆಷರ್ ಅನ್ಸುತ್ತೋ,ಇಲ್ಲಾಂದ್ರೆ ನಮ್ಮ ಕ್ಲಾಸ್ ಆಗಿದ್ರೆ ನೋಡುತ್ತಿದ್ವಿ " ಎಂದ ಪರಮಿಯ ಮಾತಿಗೆ ತಲೆ ಹಾಕಿದ.

" ಏನೋ!? ದರ್ಶು ಏನಾದ್ರೂ ಏಟಾಯ್ತ ಮಾತೇ ಬರ್ತಿಲ್ಲ"
" ಹೂಂ ಕಣೋ ಲೈಟ್ ಆಗಿ " ಎಂದವನೇ ನಗುತ್ತಾ ಕ್ಯಾಂಟೀನ್ ಕಡೆಗೆ ಹೊರಟರು.

ಸಂಜೆ ಗಾಡಿ ತಗೊಳ್ಳೋಕೆ ಬರ್ತಾಳೇ ಬಾರೋ ಆಗ ಸ್ಟ್ರಾಂಗ್ ಆಗೇ,ಸೌಂಡ್ ಬರೋ ತರ ಏಟು ಹಾಕ್ಸಾನ ಎನ್ನುತ್ತಾ ಹೈ - ಫೈ ಮಾಡುತ್ತಾ ಬಂದವರನ್ನ ನೋಡಿ ದರ್ಶನ್ ಗೆ ಸಿಟ್ಟಾಗಿ

" ಲೇ ಏನ್ರೋ ನೀವು ಇನ್ನೂ ಸರಿಯಾಗಿ ನೋಡೇ ಇಲ್ಲ ಆಗಲೇ ಒದೆ ಬೀಳಿಸೋ ಪ್ಲಾನ್ ಮಾಡ್ತಿದಿರಾ ನೀವೆಲ್ಲಾ ಫ್ರೆಂಡ್ಸ್ ಏನ್ರೋ! "
ರಾಗವಾಗಿ ಹೇಳಿದ್ದು ಕೇಳಿ
" ಇರಲಿ ಬಾ ಮಚ್ಚಾ, ನಾ ಇದೀನಿ ನಿಂಗೆ ಏನು ಅಗದ ಹಾಗೆ ನಾ ನೋಡ್ಕೋತೀನಿ " ಎಂದು ಪರಮಿ ಹೆಗಲ ಮೇಲೆ ಕೈ ಹಾಕುತ್ತಾ.
" ಹೂಂ, ಹೋದವರ್ಷ ಮ್ಯಾಚಲ್ಲಿ ಸೀನಿಯರ್ಸ್ ಜೊತೆ ಜಗಳ ಆದಾಗ ಇದ್ಯಲ್ಲಪ್ಪ ನೀನು ಪುಣ್ಯಾತ್ಮ ನಿನ್ನ ನೆಚ್ಚಿಕೊಂದರೆ ಅಷ್ಟೇ,ನಡಿರೀ ಅಲ್ಲಿ ಲ್ಯಾಬ್ ಗೆ ಲೇಟ್ ಆಗ್ತಿದೆ. ಸರಿಯಾದ ಟೈಮಿಗೆ ಹೋಗಿಲ್ಲ ಅಂದ್ರೆ ಆ ಬಾಂಡ್ಲಿ ನನ್ಮಗ ಹೊರಗೆ ನಿಲ್ಲಿತ್ಸಾನೆ" ಅವಸರಿಸುತ್ತಾ ಲ್ಯಾಬ್ನತ್ತ ಹೊರಟವರಿಗೆ ಮೆಟ್ಟಿಲು ಜೋರಾಗಿ ಹತ್ತುತ್ತಿದ್ದವನ ಎದುರಿಗೆ ಅಷ್ಟೇ ವೇಗವಾಗಿ ಬರುತ್ತಿದ್ದು ಇನ್ನೇನು ತಲೆಗೆ ಡಿಕ್ಕಿ ಹೊಡೆಯುವ ಸಮಯಕ್ಕೆ ಸರಿದು ದೂರ ನಿಂತು ನೋಡುತ್ತಾನೆ ಅವಳೇ ಅದೇ ಸ್ಕೂಟಿ ಹುಡುಗಿ!

ಈಗ ಛಾನ್ಸ್ ನಂದು ಅನ್ನುತ್ತಾ ದರ್ಶನ್ ಪರಮಿಯತ್ತ ನೋಡಿ
" ಲೋ,ಇವತ್ತು ನನ್ನ ರಾಶಿಫಲದಲ್ಲಿ ಅಪಘಾತ ಅಂತ ಏನಾದ್ರೂ ಇದೆ ಏನೋ ಅಲ್ವಾ?"

" ಯಾಕೆ ಮಾಮ? ನಿನ್ನ ರಾಶಿ ಯಾವುದು ಹೇಳು ಕುಂಭನಾ? ಮೀನನಾ? " ಪರಮಿಯ ಪ್ರತ್ಯುತ್ತರಕ್ಕೆ 'ಯಾವುದೋ ಒಂದು ನೀನು ನನನ್ ಫ್ರೆಂಡ್ ನನ್ನ ಬಗ್ಗೆ ಅಷ್ಟು ಗೊತ್ತಿಲ್ವೆನೋ' ಅಂತ ಡ್ರಾಮದವರು ಹೇಳಿದಂತೆ ಹೇಳಿದಂತೆ ಹೇಳಿದ.

" ಇಲ್ಲ ಮಾಮ,ಕುಂಭ ಅಂತ ಗೊತ್ತಿತ್ತು ಕನ್ಫರ್ಮ್ ಮಾಡ್ಕೊಳ್ಳೋಕೆ ಕೇಳಿದೆ" ಎಂದು ತನ್ನ ಹಳದಿ ಹಲ್ಲಿನ ದರ್ಶನ ನೀಡುತ್ತ.

ಇವರ ಮಾತುಗಳನ್ನು ಕೇಳಿ ಸಿಟ್ಟಾಗಿ ಬಯಲು ಬಾಯಿ ತೆರೆಯುತ್ತಿದ್ದಂತೆ ಕೆಮಿಸ್ಟ್ರಿ ಸರ್ ಬಂದರು, ಮಗ ಓಡು ಓಡು ಅಂತ ಅವರ್ಯಾರು ಇಲ್ಲದೆ ಕಂಬಿ ಕಿತ್ತರು. ಬಂದ ಕೆಮಿಸ್ಟ್ರಿ ಸರ್ ಗೆ ಗುಡ್ ಮಾರ್ನಿಂಗ್ ಹೇಳಿದ ಹುಡುಗಿಯನ್ನು ನೋಡಿ " ಓಹ್! ಸುಚಿಸ್ಮಿತಾ ನಿಮ್ಮ ಡ್ಯಾಡಿ ನೆನ್ನೆ ಕಾಲ್ ಮಾಡಿದ್ರು ನಿಮ್ಮ ಕಾಲೇಜ್ಗೆ ಅಡ್ಮಿಶನ್ ಮಾಡಿಸಿದ್ದೀನಿ ಅಂತ ಹೇಳಿದ್ರು. ಡ್ಯಾಡಿ ಬಂದಿದ್ರಾ ಕಾಲೇಜ್ಗೆ ಡ್ರಾಪ್ ಮಾಡೋಕೆ?" ಈ ಎಲ್ಲಾ ಮಾತುಗಳನ್ನು ಅಲ್ಲೇ ಹಿಂದೆ ನಿಂತು ಕೇಳಿಸಿಕೊಂಡವರಿಗೆ ಮುಖದಲ್ಲಿ ನೂರು ವೋಲ್ಟ್ ದೀಪಗಳು ಹಚ್ಚಿದಂತೆ ಬೆಳಕಾದವು.

ಫ್ರೆಶರ್ಸ್ ಪಾರ್ಟಿಗೆ ಆಂಕರಿಂಗ್ ನಾನೇ ಮಾಡ್ತೀನಿ, ನೀನು ಬೇರೆ ಪ್ರೋಗ್ರಾಮ್ ಮಾಡು ನಾ ಮಾಡ್ತೀನಿ ಅಂತ ಪರ್ಮಿ ಮತ್ತೊಂದು ಗುಂಪು ಗಲಾಟೆ ಮಾಡ್ತಿತ್ತು "ಈಗೆಲ್ಲಾ ಸರಿ, ದರ್ಶೂ ಬಂದ್ರೆ ಅವನಿಗೂ ಇದೇ ಬೇಕೆಂದರೆ ಹೆಂಗೆ ಮಗ?"

" ಮಗ ನೀನು ಸರಿ ಕಣೋ ಅವನು ಬರಲಿ ತಡಿ" ಅಂತ ಕಾಯುತ್ತಾ ಕೂತರು.

ಎದುರಿಗೆ ಬಂದವನಿಗೆಲ್ಲ ವಿವರ ಒಪ್ಪಿಸಿ ಆದ್ಮೇಲೆ ಕಾದಂತೆ ನಿಂತರು ಅವನಿಗೆ ಬಂದವರನ್ನು ಬಂದವರನ್ನು ಇಂಪ್ರೆಸ್ ಮಾಡೋಕೆ ಇದೇ ಟೈಮ್ ಅನ್ಕೊಂಡು ನೀವು ಬೇರೆಲ್ಲ ಪಾರ್ಟ್ ಮಾಡ್ಕೊಳ್ಳಿ ನಂಗೆ ಕಾರ್ಯಭಾರ ಹಂಚಿಕೊಂಡು ಸಂಜೆಗೆ ಏನೇನು ಬೇಕಾಗಬಹುದು? ಯಾವ ಹೂವು ,ಬಟ್ಟೆ ಯಾವ ಶೂ ಹಾಕೋದು ಅಂತ ಮಾತಾಡ್ತಾ ಮಾತಲ್ಲೇ ಕರಗಿಹೋದರು. ಎಲ್ಲರೂ ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು.ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ಬಣ್ಣ ಬಣ್ಣದ ಹೂವುಗಳಂತೆ ಸಿಂಗರಿಸಿಕೊಂಡ ಮಲ್ಲಿಗೆ, ಗುಲಾಬಿ, ಸಂಪಿಗೆ, ಸೇವಂತಿಗೆ, ಕೇದಿಗೆ, ಕನಕಾಂಬರ ಫಳಗುಟ್ಟುವರೆಷ್ಟೋ? ಘಮಘಮಿಸುವರೆಷ್ಟೋ? ಚಿಟ್ಟೆಗಳು ತಾವಾಗೆ ಬರಲೆಂದು ಕಾದವರಷ್ಟು? ಯಾವ ಹೂವತ್ತ ಚಲಿಸುವುವುದೆಂದು ಅರಿಯದೆ ಯಾವುದೋ ಬಲಗೆ ಬಿದ್ದವರಂತೆ ಒದ್ದಾಡುತ್ತಿದ್ದವರು, ಕಣ್ಣಲ್ಲೇ ಕಲೆಯ ರಸಾಸ್ವಾದ ಮಾಡುವವರು ಎಲ್ಲರೂ ಅವರವರ ಲೋಕದಲ್ಲಿ ಮುಳುಗಿ ಹೋಗಿದ್ದರು.ಈತನ್ಮಧ್ಯೆ ಮೈಕ್ ಹಿಡಿಡು ಕರ್ಕಶವಾಗಿ ನುಡಿಯುವವನ ಶಬ್ದಕ್ಕೆ ಕಿವಿ ಮುಚ್ಚಿ ನಗುವ ಹೂಗಳಿಗೆ ದುಂಬಿಗಳ ಝೇoಕಾರ. ತಮ್ಮ ಭಾಷಣದ ಸಮಾರಾಧನೆ ಮುಗಿಯುತ್ತಲೇ ಕಲ್ಚರಲ್ ಇವೆಂಟ್ ಎಂಬ ಕೂಗಿಗೆ ಇಡೀ ಕಾಲೇಜು ಸಿನ್ಮಹಾಲಾಗಿ, ಕ್ರಿಕೆಟ್ ಗ್ರೌಂಡಾಗಿ ಹೋಯ್ತು. ಫ್ರೆಶ್ ಮುಖಗಳ ಪರಿಚಯ ಅವರ ಹೆಸರು, ಕಾಂಬಿನೇಷನ್ ,ಹಾಬಿಗಳ ಜೊತೆಗೆ ಒಂದಷ್ಟು ಆಟ ಕೀಟಲೆಗಳು, ನೃತ್ಯಗಳು ಎಲ್ಲರನ್ನ ಎಲ್ಲರಿಗೂ ಪರಿಚಯಿಸಿದವು.

ಮೊದಲ ನೋಟದಲ್ಲೇ ವಿಜಯಿಯಾಗಿದ್ದ ಸುಚಿಸ್ಮಿತಾ,ದರ್ಶನ್ ನ ಕೂಗಿಗೆ ವೇದಿಕೆಯನ್ನು ಕಲಾಮಂಟಪವನ್ನಾಗಿಸಿ ಕಣ್ಣಲ್ಲೇ ಮಾತನಾಡಿಸಿದ್ದಳು. ಅದಾಗಲೇ ಒಮ್ಮೆ ಸೋತವನಿಗೆ ಮತ್ತೊಮ್ಮೆ ಸೋಲುವುದ ಕಲಿಸಿದಳು." ಇರುವುದು ಒಂದೇ ಹೃದಯ ಅದೆಷ್ಟು ಬಾರಿ ಗೆಲ್ಲುವೆ?"ಎಂದವನ ಸ್ವಗತ ಅವಳಿಗೆ ತಲುಪಿತ್ತು.

ಇಲ್ಲಿಂದ ಆರಂಭವಾದ ಗೆಲುವಿನೋಟ ಎಲ್ಲೆಲ್ಲೂ ಸದ್ದಾಗಿಸುತ್ತಾ ಕಾಲೇಜ್, ಲೈಬ್ರರಿ ಲ್ಯಾಬ್ ಹಲವಾರು ಡೇಗಳ ಸೆಲೆಬ್ರೇಶನ್ ರಂಗಿನೊಂದಿಗೆ ಮತ್ತೆ ಕ್ರಿಕೆಟ್ ಗ್ರೌಂಡ್ ಗೆ ಬಂದಿತ್ತು. ಅವನ ಬೌಲಿಂಗ್ ಕೆಟ್ಟದಾಗಿದ್ದರು ಉಳಿದ ಹುಡುಗಿಯರು ಸುಚಿಯ ಹೊಗಳಿಕೆಯ ಪ್ರವಾಹದಲ್ಲಿ ಕೊಚ್ಚಿ ಹೋಗಲೇಬೇಕಿತ್ತು.ಇವಳು ಶಟಲ್ ನಲ್ಲಿ ರನ್ನರ್ ಆದಾಗ ಅಂಪಯರ್ ಜೊತೆ ಜಗಳಕ್ಕೆ ಹೋಗಿದ್ದ, ನೋಡಿದವರೆಲ್ಲ ಇವನನ್ನು ಗುರಾಯಿಸುತ್ತಿದ್ದರು, ಅವಳೆದುರಲ್ಲಿ ಗೆದ್ದದ್ದು ತನ್ನ ಕ್ಲಾಸ್ಮೇಟ್!! ಅದು ಸಹ ಮರೆತಿದ್ದನವ.

ಅವಳೆಂದರೆ ಅವನಿಗೆ ಮತ್ತು ಮುಗಿಲಾರದ ಸಿಹಿಮತ್ತು ನೆನೆದಂತಲ್ಲ ನೆನೆನೆನೆಸಿ ಆವರಿಸುವ ಮೋಹಕತೆ. ಇರುವ ಎರಡೇ ಕಣ್ಣು ಸಾಲದೆಂಬ ಭಾವ ಹಿಂದಿನಿಂದ ನೋಡಲು ಇನ್ನೊಂದಷ್ಟು ಬೆನ್ನಿಗೆ ಅಷ್ಟಾದರೂ ಕಣ್ಣಿರಬೇಕಿತ್ತು ಎಂದು ಹಲುಬುವಿಕೆ ಅವನ ಪಾಲಿಗೆ.ಅವನೆಂದರೆ ಇವಳಿಗೆ ಅಮಾವಾಸ್ಯೆಯಲ್ಲೂ ಬರುವ ಪೂರ್ಣಚಂದ್ರ,ದಿನವೆಲ್ಲಾ ಅವನದೇ ಧ್ಯಾನ, ದರ್ಶನಕ್ಕಾಗಿ ಕಾಯುವ ಭಕ್ತಳಂತೆ,ಪ್ರೀತಿಯ ಪುಷ್ಪ ಅರ್ಪಿಸಲು ನಿಂತ ಅರ್ಚಕಿಯಂತೆ.ಅವಳಿಗೆ ಇವನೆಂದರೆ ಹುಚ್ಚು ಅವನಿಗೆ ಇವಳೆಂದರೆ ಮೆಚ್ಚು ಆದರೆ ದೇವರಿಗೆ ಇವರನ್ನು ನೋಡಿ ಹೊಟ್ಟೆಕಿಚ್ಚು.

ದಿನವುರುಳಿ ಕಾಲೇಜ್ ಮುಗಿದದ್ದು ಕನಸಿನಂತೆ ಅನ್ನುವುದು ಇಬ್ಬರ ಭಾವನೆ.ದೂರವೇನಿಲ್ಲ ಕೂಗಿದರೆ ಶಬ್ಧ ನಿನ್ನ ಮುಟ್ಟುವ ಮೊದಲೇ ನಾನಿರುವೆ,ನಿನ್ನುರುವೆ ನನ್ನುಸಿರು ಕನಸಲ್ಲೂ ನೀನಿಲ್ಲದೆ ಕಣ್ಮುಚ್ಚಲಾರೆ ಎಂದವನು ಮುಂದಿನ ಓದಿಗೆ ದೇಶವನ್ನೇ ತೊರೆದ.ಕಾಯುವಿಕೆಯಲ್ಲೂ, ಕನವರಿಕೆಯಲ್ಲೂ,ಕಣ್ಣಲ್ಲೂ,ಮನದಲ್ಲೂ ನೀನ್ ಎಂದು ದಿನಗಳ ಎನಿಸಿ ಕ್ಯಾಲೆಂಡರಲ್ಲಿ ಅವನು ಬರಲೆಷ್ಟು ದಿನ ಬಾಕಿ ಎಂದು ಎಣಿಸುತ್ತಾ ಎಣಿಸುತ್ತಾ ಕೂತವಳಿಗೆ ಮೂರು ಕ್ಯಾಲೆಂಡರ್ ಮುಗಿದು ಮತ್ತೆರಡು ಮುಗಿದಿದ್ದು ತಿಳಿಯಲಿಲ್ಲ.

ಹೋದ ಮೊದಲೆಲ್ಲಾ ತಪ್ಪದ ಇ- ಮೇಲ್, ವೀಡಿಯೋ ಕಾಲ್ಗಳು ಕಾಲ ಕಳೆದಂತೆ ಕಾಲವಾದವು.ಏನೋ ಕೆಲಸ, ಓದು ಎಲ್ಲದರ ಒತ್ತಡವೆಂದು ಮನ್ನಿಸುವ ಮನಸ್ಸು ಕ್ರಮೇಣ ಭಾರವಾಗುತ್ತ ಬಂದಂತೆ ಇವಳಿಗೆ ಮನೆಯಲ್ಲಿ ಒತ್ತಡಗಳು ಕಾಡುತ್ತಿರಲು ಶುರುಮಾಡಿದವು.ಸ್ಮಿತಾಳ ಮುಖದಲ್ಲಿ ಮೊದಲಿನ ಮಂದಹಾಸವೇ ಸೊರಗಿ ನೆಲಹಾಸಾಗಿ ಹೋಗಿ ನಾಲ್ಕು ವರ್ಷಗಳಾದವು.ಒಂದಷ್ಟು ಭಾವಗಳು ಬದಲಾದವೋ,ಬದುಕಿ ಬದಲಿಸಿತೋ ಮನಸ್ಸಿನ ಭಾರ ಕಡಿಮೆಯಾಗಲು ಹೊಸತನಕ್ಕೊಂದು ಚೈತನ್ಯ ತುಂಬಲು ಊರು ಬದಲಿಸಲೇಬೇಕೇನಿಸಿ ಹೊರಟವಳಿಗೆ ಮನೆಯಲ್ಲಿ ಅಡ್ಡಿಯಾಗಲಿಲ್ಲ.ಆದರೆ ಹಾರಿದವರ ರೆಕ್ಕೆ ಅದಷ್ಟು ಬಡಿಯಲು ಸಾಧ್ಯ? ಆಯಾಸಗೊಂಡ ಹಕ್ಕಿಗೆ ಪುನಃ ತನ್ನ ಗೂಡಿನ ನೆನಪಾಯಿತು.ದರ್ಶನ ನೀಡಲು ಅವನೀಗ ಬಂದನಾದರೂ ಅವಳು ಊರಿನಲ್ಲಿದ್ದರಲ್ಲವೇ?ಹುಡುಕುತ್ತಾ ಹೊರಟವನಿಗೆ ಅವಳನ್ನು ಪುನಃ ಉಳಿಸಿಕೊಳ್ಳಲು ಸಾಧ್ಯವೇ? ಎದುರಿಗೇನು ದಿಗ್ಗೆಂದು ಬಂದು ನಿಲ್ಲಲಿಲ್ಲ; ಕಾಯುವ ಬಸ್ಸಿಗೆ, ತೆಗೆದುಕೊಳ್ಳುವ ಹಾಲಿಗೆ, ತರಕಾರಿಯವರೊಂದಿಗೆ ಚೌಕಾಸಿ ಮಾಡುವಾಗೆಲ್ಲ ಅವಳಿದ್ದ ಮನೆಯವರಿಂದಲೇ ಹೊರನಿಲ್ಲುವ, ಒಣಗಿದ ಮುಖಕ್ಕೊಂದು ನಗೆ ಮೂಡಬಹುದೆಂಬ ಆಸೆಗೆ ದರ್ಶನ ಪುನಃ ಪುನಃ ಆದಂತೆಲ್ಲಾ ಜೀವ ಮರುಗಿದ್ದಂತೂ ಸತ್ಯ.ಆದರೆ ಸೋಲುವ ಮನಸ್ಸಾಗಲಿಲ್ಲ.ಕೆಲಸಕ್ಕೆ ಸೇರಿ ಎರಡು ಮಳೆಗಳನ್ನು ಕಂಡ ಜೀವಕ್ಕೆ ಇದು ಮೂರನೇ ಮಳೆ.ಪ್ರತಿಬಾರಿ ಮೋಡ ಕಟ್ಟುವಾಗ ಗುಡುಗಿದಾಗ,ಮಿಂಚಾಗಿ,ಸದ್ದಾಗಿ,ನೀರಾಗಿ ಹರಿಯುವಾಗ ಸುಚಿಸ್ಮಿತಾ ಕಣ್ಣಲ್ಲೂ ನೀರು.ನೀನಿಲ್ಲದ ನಾನು ನೀರಿಲ್ಲದ ಮೀನು; ಪ್ರತಿ ಮಳೆಗೂ ಬಾಯಿ ತೆರೆದು ಕಾಯುವ ಭೂಮಿ,ಪ್ರತಿ ಮಳೆಯ ಹನಿ ಹನಿಗೂ ನಿನ್ನ ಹೆಸರೇ ಕರೆದಿದ್ದೆ ಕನವರಿಸಿದ್ದೆ.ಇಂದು ಅದೇ ಮಳೆಯ ಸಮಯಕ್ಕೆ ನವವಸಂತದಂತೆ,ಕಡಲು ಸೇರಲು ಅವಸರಿಸುವ ನದಿಯಂತೆ ನಿಂತಿದ್ದಾನೆ; ಸೇರಲು ಗುಪ್ತಗಾಮಿನಿಯೇ ಬತ್ತಿದ್ದಾಳೆ.ಕೊನೆಗೆ ಈ ಕೆಲಸ, ಊರು ಎರಡನ್ನೂ ತೊರೆದು ತನ್ನ ಮನೆಗೆ ಹೋದ ಮನಕೆ ಕೊಂಚ ನೆಮ್ಮದಿ,ಆ ಕ್ಷಣಕ್ಕೆ ಸೀಮಿತ.

******

ಹೊಸತೊಂದು ಉದ್ಯೋಗ ಉದರ ನಿಮಿತ್ತಕ್ಕೆಂದು ಬಯಸದೆ, ಅನಿವಾರ್ಯತೆಗೆ ಎಂದೂ ಎಣಿಸದೆ ಸೇರಿದರೆ ದರ್ಶನ್... ದರ್ಶನ್.. ಬಾರಿ ಬಾರಿಗೂ ಪುನರಾವರ್ತಿಸುತ್ತಿದೆ ಮನವು ಮತ್ತದೇ ಮಳೆಯ ನೀರನ್ನು ಹೀರುವ ಹತ್ತಿಯಂತಾಗಿದೆ.ಕೇಳಲು ಇವಳಿಗೆ ಮುಖವಿಲ್ಲ,ಹೇಳಲು ಅವನಿಗೆ ಬಾಯಿಲ್ಲ,ನೋವಿನಲ್ಲೂ ಇಬ್ಬರದೂ ಒಂದೇ ಮಾತು " ಸೋತಾಗಿದೆ ನಿನಗೆ ಇನ್ನೆಷ್ಟು ಬಾರಿ ಸೋಲಲಿ ಸೋತ ಹೃದಯವಿದು ನಿನ್ನದೇ".

ಆಫೀಸಿನಿಂದ ಸಂಜೆ ಹೋರಾಟ ಸುಚಿಸ್ಮಿತಾಗೆ ಜೋರು ಮಳೆಯ ಸೂಚನೆ ನೋಡಿ ಬ್ಯಾಗಿನಿಂದ ಛತ್ರಿ ತೆಗೆದು ಬಸ್ ಸ್ಟಾಪಿನತ್ತ ಹೊರಟಳು. ಜೋರು ಮಳೆ ಗಾಳಿಗೆ ಛತ್ರಿ ಹಿಡಿತ ತಪ್ಪಿ ಹಾರಿತು ಹಿಡಿಯಲು ಹೊರಟವಳ ಬಸ್ಸೇ ಮಿಸ್ಸಾಯಿತು. ಮಳೆಯೊಂದಿಗೆ ಛತ್ರಿ ಹಿಡಿದು ನಿಂತವನ ನೋಡಿ ಕಣ್ಣೀರಾದರು ಅದು ಮಳೆಹನಿಯೋ...ಮನದನಿಯೋ ತಿಳಿಯದು,ಮಾತಂತೂ ಬಾಯಿಂದ ಹೊರಡಲಿಲ್ಲ.

" ನಂದೇ ತಪ್ಪು ಸುಚಿ ಪ್ಲೀಸ್ ನಾನಾಗಲೇ ಸೋತಿದಿನಿ ಇನ್ನೂ ಸೋಲಲ್ಲ, ಸಾಯುವಷ್ಟು ಸೋತಿದ್ದೇನೆ,ಇನ್ಮುಂದೆ ನಿನಗೆ ತೊಂದರೆ ಕೊಡದೆ,ನಿನ್ನ ಕಾಡದೆ ನಾನು ಪುನಃ ನಿನ್ನ ಕಣ್ಣಿಗೆ ಕಾಣದೆ ಈ ದೇಶ ಬಿಟ್ಟು ಹೋಗ್ತಿದಿನಿ,ನೀನು ಆರಾಮಾಗಿ ಇರು. ತಗೋ ನಿನ್ನ ಛತ್ರಿ ಅವತ್ತು ನಿನಗೆ ಈ ಬಣ್ಣದ್ದೇ ಬೇಕು ಅಂದಾಗ ಇಡೀ ಶಿವಮೊಗ್ಗ ಸುತ್ತಿ ಹುಡುಕಿ ತಂದಿದ್ದು ಇದು,ನಾನಂತೂ ನಿನ್ನ ಜೊತೆ ಇರೋ ಪುಣ್ಯ ಇಲ್ಲ ಕೊನೆಗೆ ಇದಾದ್ರೂ ಇರೋ ಅಷ್ಟು ದಿನ ನಿನ್ನ ಜೊತೆ ಇರಲಿ ಅಟ್ಲೀಸ್ಟ್ ಕಣ್ಣೀರು ಒರೆಸೋಕೆ ಆಗಿಲ್ಲ ಅಂದ್ರು ಬೀಳೋ ಮಳೆಗಾದ್ರು ನೆತ್ತಿ ನೆನಸದೆ ಇರಲಿ, ಜೊತೆಗೆ ನನ್ನನ್ನು ಕೂಡ" ಹೇಳಿದ ಮಾತು ಮುಗಿಸುವ ಮುನ್ನ ಬೆನ್ನು ಹಾಕಿ ಹೊರಟ ಅತೀ ಭಾರದಿಂದ ಬಂದ ಸ್ವರಗಳು ಏನೆಂದು ಅರ್ಥವಾದವೋ ಆ ಗುಡುಗಿನ,ಮಳೆಯ ಸದ್ದಿನಲ್ಲಿ ಗೊತ್ತಿಲ್ಲ ಕೇಳಿಸಿಕೊಂಡವರಿಗೆ ಗೊತ್ತು.ಛತ್ರಿ ಹಿಡಿದು ಹೊರಟವಳಿಗೆ ಏನನ್ನಿಸಿತೋ, ಯಾಕನ್ನಿಸಿತೋ ಅವನ ಹೋದ ಹಾದಿಯಲ್ಲೇ ಹೊರಟಳು ನೆತ್ತಿ ನೆನೆಯದಂತೆ ಛತ್ರಿ ಹಿಡಿದು ಅವನ ಜೊತೆಯಾಗಿ.

- ಸುಮ ಕೆ.ಎಚ್

 

ಸುಮ ಕೆ.ಎಚ್.

ಸುಮ ಕೆ.ಎಚ್. ಅವರು ವಿಜಯನಗರ ಜಿಲ್ಲೆಯ ಉಜ್ಜಿನಿಯವರು. ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ ಬರಹಗಾರ್ತಿ. ಕತೆ, ಕವನ ಅವರ ಆಸಕ್ತಿಯ ಕ್ಷೇತ್ರವಾಗಿದೆ.

More About Author